ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿಮೂರು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿಮೂರು

ಇಬ್ಬರು ಹೊಸಬರು ನಮ್ಮ ಬೋಗಿಗೆ ಹತ್ತಿದರು. ತೀರ ಆ ಕಡೆಯ ತುದಿಗೆ ಹೋಗಿ ಕುಳಿತರು. ಅವರು ಕೂರುವವರೆಗೆ ಅವನು ಸುಮ್ಮನೆ ಇದ್ದ. ಆಮೇಲೆ ಮತ್ತೆ ಶುರುಮಾಡಿದ. ಅವನ ಆಲೋಚನೆಯ ಎಳೆ ತುಂಡಾಗಿರಲಿಲ್ಲ.
“ಬದುಕಿನಲ್ಲಿ ನಡುವೆ ಮೂಡುವ ಕಾಮವನ್ನೇ ಪ್ರೀತಿ ಎಂದು ಕರೆಯುತ್ತಾ ಬೆಳೆಯುತ್ತೇವೆ. ಪ್ರೀತಿಯು ಉದಾತ್ತ, ಉನ್ನತ ಅನ್ನುವ ತತ್ತ್ವ ಕೇಳುತ್ತೇವೆ. ಆದರೆ ನಿಜವಾಗಿ ಪ್ರೀತಿಮಾಡುವುದಿದೆಯಲ್ಲ ಅದರ ಬಗ್ಗೆ ಮಾತಾಡುವುದು, ನೆನೆಯುವುದು ಎರಡೂ ಹಾರಿಬಲ್, ಮತ್ತೆ ಅಸಹ್ಯ. ನಿಸರ್ಗವು ಇದನ್ನು ನಾಚಿಕೆಯ, ಕೆಟ್ಟಕೆಲಸವೆಂಬಂತೆ ಮಾಡಿರುವುದಕ್ಕೆ ಕಾರಣವಿದೆ. ಆದರೆ ಜನ ಮಾತ್ರ ನಾಚಿಕೆಗೇಡಿನ ಕೆಲಸವನ್ನು ಸೌಂದರ್ಯವೆನ್ನುತ್ತಾರೆ, ಕೆಟ್ಟದ್ದನ್ನು ಉದಾತ್ತವೆನ್ನುತ್ತಾರೆ. ನನ್ನಲ್ಲಿ ಈ ಪ್ರೀತಿ ಮೂಡಿದ ಲಕ್ಷಣಗಳು ಯಾವುದು? ನಯವಿಲ್ಲದೆ, ನಾಜೂಕಿಲ್ಲದೆ ನನ್ನನ್ನೇ ನಾನು ಮೃಗೀಯ ಅತಿರೇಕಕ್ಕೆ ಒಪ್ಪಿಸಿಕೊಂಡುಬಿಟ್ಟೆ. ಹಾಗೆ ಮಾಡಿದ್ದಕ್ಕೆ ನಾಚಿಕೆಯಾಗುವ ಬದಲು ಹೆಮ್ಮೆ ಅನ್ನಿಸಿತ್ತು. ನನ್ನ ಹೆಂಡತಿಯ ಮನಸ್ಸಿಗೆ ಯಾವ ಬೆಲೆಯನ್ನೂ ಕೊಡಲಿಲ್ಲ. ಅವಳ ಮನಸ್ಸು ಹೋಗಲಿ ಮೈಗೆ ಏನಾದೀತು ಎಂದೂ ಯೋಚಿಸಲಿಲ್ಲ.
“ನಮ್ಮಿಬ್ಬರ ನಡುವೆ ದ್ವೇಷ ಯಾಕೆ ಹುಟ್ಟಿತು ಎಂದು ಆಶ್ಚರ್ಯಪಡುತ್ತಿದ್ದೆ. ಅದರ ಕಾರಣ ಈಗ ಸ್ಪಷ್ಟವಾಗಿ ತಿಳಿದಿದೆ. ಮನುಷ್ಯಸ್ವಭಾವವು ಮೃಗೀಯತೆಯ ವಿರುದ್ಧ ಪ್ರತಿಭಟಿಸುವುದಕ್ಕಾಗಿಯೇ ಹೀಗೆ ದ್ವೇಷವನ್ನು ತೋರಿಸಿತ್ತು. ಬೇರೆ ಯಾವ ಕಾರಣವೂ ಇರುವುದಕ್ಕೆ ಸಾಧ್ಯವಿಲ್ಲ. ಅಪರಾಧಮಾಡಲು ಪ್ರಚೋದಿಸಿದವರು ಮತ್ತು ಅಪರಾಧ ಮಾಡಿದವರು ಪರಸ್ಪರ ದ್ವೇಷ ತೋರಿಸುವ ಹಾಗೆಯೇ ಇದೂ ಕೂಡ. ಆ ಬಡಪಾಯಿ ಹೆಂಡತಿ ಮದುವೆಯಾದ ಮೊದಲ ತಿಂಗಳಲ್ಲೇ ಬಸುರಿಯಾದರೂ ನಮ್ಮ ಮೃಗೀಯ ಮೈಸುಖ ಮುಂದುವರೆದೇ ಇತ್ತಲ್ಲವೆ?
“ನನ್ನ ಕಥೆಯನ್ನು ಹೇಳುವುದು ಬಿಟ್ಟು ಏನೇನೋ ಹೇಳುತ್ತಿದ್ದೇನೆ ಅನ್ನಿಸಬಹುದು. ಹಾಗೇನಿಲ್ಲ. ನನ್ನ ಹೆಂಡತಿಯನ್ನು ಕೊಲ್ಲುವುದಕ್ಕೆ ಕಾರಣವಾದ ಘಟನೆಗಳನ್ನು ಹೇಳುತ್ತಿದ್ದೇನೆ. ನನ್ನ ವಿಚಾರಣೆ ಮಾಡುತ್ತಾ ಹೆಂಡತಿಯನ್ನು ಹೇಗೆ, ಯಾವುದರಿಂದ ಕೊಂದೆ ಎಂದು ಕೇಳಿದರು. ಮೂರ್ಖರು! ನನ್ನ ಹೆಂಡತಿಯನ್ನು ಅಕ್ಟೋಬರ್ ೫ನೆಯ ತಾರೀಖು, ಚಾಕುವಿನಿಂದ ಇರಿದು ಕೊಂದೆ ಅಂದುಕೊಂಡಿದ್ದಾರೆ. ಅದಕ್ಕೂ ಬಹಳ ಮೊದಲೇ ಅವಳನ್ನು ಸಾಯಿಸಿ ಸುಟ್ಟುಬಿಟ್ಟಿದ್ದೆ. ಮಿಕ್ಕವರೆಲ್ಲ, ಎಲ್ಲರೂ, ಅವರವರ ಹೆಂಡತಿಯರನ್ನು ಇನ್ನೂ ಕೊಲ್ಲುತ್ತಲೇ ಇದ್ದಾರಲ್ಲ ಹಾಗೆಯೇ!”
“ಅಂದರೆ?”
“ಹೆಂಗಸರು ಇರುವುದೇ ಗಂಡಸರಿಗೆ ಖುಷಿ ಕೊಡುವುದಕ್ಕೆ ಅನ್ನುವ ಐಡಿಯಾವನ್ನು ನಮ್ಮ ಸಮಾಜ ಒಪ್ಪಿಕೊಂಡುಬಿಟ್ಟಿದೆ. (ಗಂಡಸು ಇರುವುದೇ ಹೆಂಗಸಿಗೆ ಸುಖಕೊಡುವುದಕ್ಕೆ ಅನ್ನುವುದೂ ನಿಜ ಇದ್ದೀತು, ನನಗೆ ಗೊತ್ತಿಲ್ಲ. ನನ್ನ ಕಥೆ ಮಾತ್ರ ಗೊತ್ತು ಅಷ್ಟೆ.) Wein, Weiber und Gesang. ಮತ್ತೆ ಕವಿಗಳ ಕಾವ್ಯ-ಮದ್ಯ, ಮಾನಿನಿ, ಸಂಗೀತ!
“ಕೇವಲ ಅಷ್ಟೇ ಆಗಿದ್ದಿದ್ದರೆ! ಕಾವ್ಯ ನೋಡಿ, ಚಿತ್ರಕಲೆ ನೋಡಿ, ಶಿಲ್ಪವನ್ನೂ ನೋಡಿ. ಹೆಣ್ಣು ಇರುವುದೇ ಗಂಡು ಸಂತೋಷಪಡುವುದಕ್ಕಾಗಿ ಅಂತಲೇ ಹೇಳುತ್ತವೆ ಎಲ್ಲವೂ. ಮಾಸ್ಕೊದ ಟ್ರೌಬಾ ಎಕ್ಸ್‌ಟೆನ್ಷನ್ ಇರಬಹುದು, ಗ್ರಾಚೆವ್ಕಾ ಊರು ಇರಬಹುದು ಅಥವಾ ಆಸ್ಥಾನದ ಬಾಲ್ ರೂಮೇ ಆಗಬಹುದು. ಹೆಣ್ಣನ್ನು ಕಾಣುವುದು ಮಾತ್ರ ಹಾಗೆಯೇ. ಆದರೆ ಈ ದೆವ್ವದಂಥ ಟ್ರಿಕ್ಕನ್ನು ನೋಡಿ. ಹೆಣ್ಣಿಗೆ ನೈತಿಕ ಮೌಲ್ಯಗಳು ಯಾವುವೂ ಇರದಿದ್ದರೆ ಅವಳು ಗಂಡಿಗೆ ಒದಗುವ ರುಚಿಕಟ್ಟಾದ ತುತ್ತು ಅನ್ನಬಹುದಿತ್ತು. ಆದರೆ ಕಥಾನಾಯಕರುಗಳೆಲ್ಲ ತಾವು ಹೆಣ್ಣನ್ನು ಆರಾಧಿಸುವುದಾಗಿ ಹೇಳುತ್ತಾರೆ. (ಅವರು ಆರಾಧಿಸುವುದು ಆಕೆ ಸುಖಕೊಡುವ ವಸ್ತು ಅಂತಲೇನೆ.) ಹೆಣ್ಣಿನ ಬಗ್ಗೆ ಅಪಾರವಾದ ಗೌರವವಿದೆ ಅನ್ನುತ್ತಾರೆ. ಹೆಂಗಸರು ಬಂದಾಗ ಎದ್ದು ನಿಂತು ಕೂರುವುದಕ್ಕೆ ಜಾಗ ಬಿಟ್ಟುಕೊಡುತ್ತಾರೆ, ಆಕೆ ಕರ್ಚೀಫು ಬೀಳಿಸಿಕೊಂಡರೆ ಎತ್ತಿಕೊಡುತ್ತಾರೆ, ಇನ್ನು ಕೆಲವರು ಹೆಣ್ಣಿಗೆ ಸರ್ಕಾರದಲ್ಲೂ ಅಧಿಕಾರದ ಸ್ಥಾನಮಾನ ದೊರೆಯಬೇಕೆಂದು ವಾದಮಾಡುತ್ತಾರೆ. ಆದರೂ ಅವಳು ಗಂಡಸಿನ ಮೈಯಾಸೆಯ ವಸ್ತುವಾಗಿಯೇ ಉಳಿದಿದ್ದಾಳೆ. ಅದು ಹೆಂಗಸಿಗೂ ಗೊತ್ತು. ಇದು ಗುಲಾಮಗಿರಿ. ಗುಲಾಮಗಿರಿ ಅಂದರೆ ಒಬ್ಬರ ಸಂತೋಷಕ್ಕಾಗಿ ಇನ್ನೊಬ್ಬರ ಶ್ರಮವನ್ನು ಬಳಸಿಕೊಳ್ಳುವುದು. ಗುಲಾಮಗಿರಿ ಇರಬಾರದೆಂದರೆ ಜನ ತಮ್ಮ ಸಂತೋಷಕ್ಕೆ ಮತ್ತೊಬ್ಬರ ಶ್ರಮವನ್ನು ಬಳಸಿಕೊಳ್ಳುವುದಿಲ್ಲ ಎಂದು ತಿರಸ್ಕಾರ ತೋರಬೇಕು. ಗುಲಾಮಗಿರಿಯು ನಾಚಿಕೆಗೇಡಿನ ಕೆಲಸ, ಪಾಪದ ಕೆಲಸ ಎಂದು ತಿಳಿಯಬೇಕು.
“ಆದರೆ ನಿಜವಾಗಿ ಆಗುವುದು ಇದು-ಗುಲಾಮಗಿರಿಯ ಹೊರ ರೂಪಗಳನ್ನು ಬಹಿಷ್ಕರಿಸುತ್ತಾರೆ, ಗುಲಾಮರ ಮಾರಾಟವನ್ನು ನಿಲ್ಲಿಸುತ್ತಾರೆ, ಗುಲಾಮಗಿರಿ ಇಲ್ಲವಾಯಿತು ಎಂದು ಕಲ್ಪಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ ಮೊದಲಿನ ಹಾಗೆಯೇ ಬೇರೊಬ್ಬರ ಶ್ರಮದಿಂದ ಲಾಭ ಪಡೆಯುತ್ತಿದ್ದೇವೆ ಅನ್ನುವುದನ್ನು ಕಾಣಲು ಬಯಸುವುದೇ ಇಲ್ಲ. ತಾವು ಮಾಡುತ್ತಿರುವುದು ಒಳ್ಳೆಯದು, ನ್ಯಾಯವಾದದ್ದು ಎಂದೇ ತಿಳಿಯುತ್ತಾರೆ. ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಆಗುವುದೂ ಇದೇ. ಮೂಲದಲ್ಲಿ ಹೆಣ್ಣಿನ ಗುಲಾಮಗಿರಿ ಎಂದರೆ ಅವಳು ಕೂಡ ತಾನು ಸುಖಕೊಡುವ ವಸ್ತು ಎಂಬ ಸಂಗತಿಯನ್ನು ಅರಗಿಸಿಕೊಂಡುಬಿಟ್ಟಿರುವುದು. ಹೆಣ್ಣನ್ನು ಕೆರಳಿಸುತ್ತಾರೆ, ಗಂಡಸರಿಗೆ ಸಮಾನವಾದ ಎಲ್ಲ ಹಕ್ಕುಗಳನ್ನೂ ಕೊಡುತ್ತಾರೆ, ಆದರೆ ಮಾತ್ರ ಆಕೆ ಮೈಸುಖ ಕೊಡುವ ವಸ್ತು ಎಂದೇ ಕಾಣುತ್ತಿರುತ್ತಾರೆ. ಚಿಕ್ಕಂದಿನಿಂದಲೂ ಅವಳಲ್ಲಿ ಇದೇ ಅಭಿಪ್ರಾಯ ಹುಟ್ಟುವ ಹಾಗೆ ಬೆಳೆಸುತ್ತಾರೆ.
“ಹೆಣ್ಣು ಸದಾ ಅವಮಾನಕ್ಕೆ ಗುರಿಯಾಗುವ ಭ್ರಷ್ಟ ಗುಲಾಮಳು, ಗಂಡು ಯಾವಾಗಲೂ ಲಂಪಟ ಯಜಮಾನ. ಹೌದು. ಗುಲಾಮಗಿರಿ ಹೋಗಬೇಕಾದರೆ ಬೇರೊಬ್ಬರನ್ನು ಶೋಷಣೆಮಾಡಿ ಸುಖಪಡುವುದು ತಪ್ಪು ಎಂದು ಜನವೆಲ್ಲ ತಿಳಿಯಬೇಕು. ಹೆಣ್ಣನ್ನು ಸ್ವತಂತ್ರಗೊಳಿಸಬೇಕಾದರೆ ಹೆಣ್ಣು ಸುಖದ ಉಪಕರಣ ಎಂದು ತಿಳಿಯುವುದು ನಾಚಿಕೆಗೇಡು ಅನ್ನುವ ತಿಳಿವಳಿಕೆ ಜನಕ್ಕೆ ಬರಬೇಕು.
“ಹೆಣ್ಣಿನ ಸ್ವಾತಂತ್ರ್ಯ ಜಾರಿಗೆ ಬರಬೇಕಾದದ್ದು ನ್ಯಾಯಾಲಯಗಳಲ್ಲಿ, ಸಮಿತಿಯ ಕೋಣೆಗಳಲ್ಲಿ ಅಲ್ಲ, ಮನೆ ಮನೆಯ ಮಲಗುವ ಕೋಣೆಗಳಲ್ಲಿ. ಸೂಳೆಗಾರಿಕೆಯನ್ನು ವಿರೋಧಿಸಿ ಹೋರಾಟ ಶುರುಮಾಡಬೇಕಾದದ್ದು ಸೂಳೆಮನೆಗಳಲ್ಲಿ ಅಲ್ಲ, ಒಂದೊಂದೂ ಕುಟುಂಬದಲ್ಲಿ. ಕೋರ್ಟುಗಳಲ್ಲಿ ಹೆಣ್ಣನ್ನು ಬಿಡುಗಡೆ ಮಾಡಿಸುತ್ತಾರೆ, ಸಮಿತಿಯ ಸಭೆಗಳಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಕೊಡುತ್ತಾರೆ, ಆದರೆ ಮಲಗುವ ಕೋಣೆಯಲ್ಲಿ ಮಾತ್ರ ಅವಳು ಸುಖದ ಉಪಕರಣವಾಗಿಯಷ್ಟೇ ಉಳಿಯುತ್ತಾಳೆ. ನಾವೀಗ ಹೆಣ್ಣಿಗೆ ಕಲಿಸಿರುವ ಹಾಗೆ ಕಲಿಸಿದರೆ ಅವಳು ತನ್ನನ್ನು ತಾನು ಸುಖದ ವಸ್ತುವೆಂದೇ ನಂಬಿಕೊಂಡು ಕೀಳಾದ ಜೀವಿಯಾಗಿಯೇ ಉಳಿಯುತ್ತಾಳೆ. ದುಷ್ಟ ಡಾಕ್ಟರುಗಳ ಸಹಾಯದಿಂದ ಬಸಿರಾಗುವುದನ್ನು ತಪ್ಪಿಸಿಕೊಂಡು, ಪ್ರಾಣಿಯ ಮಟ್ಟಕ್ಕೆ ಅಲ್ಲ, ನಿರ್ಜೀವವಸ್ತುವಿನ ಮಟ್ಟಕ್ಕೆ ಇಳಿಯುತ್ತಾಳೆ. ಅಥವಾ ಯಾವುದೇ ಬಗೆಯ ಆಧ್ಯಾತ್ಮಿಕ ಉನ್ನತಿಯ ಅವಕಾಶವೂ ಇಲ್ಲದೆ ಹಿಸ್ಟೀರಿಕಲ್ ಆಗಿ, ಕಂಗಾಲಾಗಿ ಉಳಿಯುತ್ತಾಳೆ.
“ಯಾಕೆ ಹಾಗೆ?” ಕೇಳಿದೆ.
“ಇದು ಯಾರಿಗೂ ಯಾಕೆ ಕಾಣುವುದಿಲ್ಲವೋ ಅದು ಆಶ್ಚರ್ಯ. ಕೊನೆಯ ಪಕ್ಷ ಡಾಕ್ಟರುಗಳಿಗಾದರೂ ತಿಳಿಯಬೇಕಿತ್ತು. ಅವರೂ ತಿಳಿದುಕೊಳ್ಳುವ ಆಸೆ ಇಲ್ಲ. ಗಂಡು ಅಷ್ಟೆ, ಹೆಣ್ಣೂ ಅಷ್ಟೆ. ಪ್ರಾಣಿಗಳು. ಪ್ರಾಣಿಗಳ ಹಾಗೆ ಮೈಸುಖ ಪಡುತ್ತಾರೆ, ಅದರಿಂದ ಹೆಣ್ಣು ಬಸಿರಾಗುತ್ತಾಳೆ. ಆದರೆ ಬಸಿರಾದರೆ ಸುಖಕ್ಕೆ ಖೋತಾ ಆಗುತ್ತದಲ್ಲ. ನಾವಿನ್ನೂ ಯೂರೋಪಿನ ಮಟ್ಟಕ್ಕೆ ಇಳಿದಿಲ್ಲ, ಅಥವಾ ಮೊಹಮ್ಮದ್ ನ ಎರಡು ಮಕ್ಕಳ ವ್ಯವಸ್ಥೆಯೂ ನಮ್ಮಲ್ಲಿ ಬಂದಿಲ್ಲ. ನಾವು ಈ ಬಗ್ಗೆ ಯೋಚನೆ ಮಾಡಿಯೇ ಇಲ್ಲ. ನಮಗೆ ಕುಟುಂಬವನ್ನು ಉಳಿಸಿಕೊಳ್ಳುವ ಆಸೆಯೂ ಇದೆ. ಹೆಂಗಸರ ಪಾಡಂತೂ ಇನ್ನೂ ಭಯಂಕರ.
“ಹೆಣ್ಣು ತಾಯಿ ಆಗುವುದನ್ನು ಬಿಟ್ಟು, ಹೆಣ್ಣುತನವನ್ನೇ ನೀಗಿಕೊಂಡು, ಗಂಡ ತನಗೆ ಬೇಕಾದಾಗ ಸುಖ ಪಡುವುದಕ್ಕೆ ಅವಕಾಶ ಕೊಡಬೇಕು, ಅಥವಾ ನಮ್ಮ ಮರ್ಯಾದಸ್ಥ, ಗೌರವಸ್ಥ ಕುಟುಂಬಗಳಲ್ಲಿ ನಡೆಯುತ್ತದಲ್ಲ, ಹಾಗೆಯೇ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಸಾಗುತ್ತ ಬದುಕಬೇಕು. ಏಕಕಾಲದಲ್ಲಿ ಹುಟ್ಟಲಿರುವ ಮಗುವನ್ನು ನಿರೀಕ್ಷಿಸುವ ತಾಯಿ, ಇರುವ ಮಗುವಿಗೆ ಹಾಲೂಡಿಸುವ ಅಮ್ಮ, ಮತ್ತೆ ಗಂಡನ ಸುಖಕ್ಕೆ ಒದಗುವ ರಂಭೆ ಎಲ್ಲವೂ ಆಗಬೇಕು. ಯಾವ ಪ್ರಾಣಿಗೂ ಇವನ್ನೆಲ್ಲ ಸಹಿಸಿಕೊಳ್ಳುವ ಶಕ್ತಿ ಇಲ್ಲ. ಅದಕ್ಕೇ ಹೆಂಗಸರು ಹಿಸ್ಟೀರಿಯಾಗೆ ಗುರಿಯಾಗುತ್ತಾರೆ. ಸನ್ನಿ ಹಿಡಿಯುತ್ತದೆ ಅವರಿಗೆ. ರೈತರ ಹೆಂಗಸರಾದರೆ ಯಾರೋ ಮಾಟಮಾಡಿಸಿದರು ಅಂದುಕೊಳ್ಳುತ್ತಾರೆ. ಮದುವೆಯಾಗದ ಹುಡುಗಿಯರು ಹಿಸ್ಟೀರಿಕಲ್ ಆಗುವುದಿಲ್ಲ, ಮದುವೆಯಾಗಿ ಗಂಡನೊಡನೆ ಇರುವ ಹೆಂಗಸರು ಮಾತ್ರ ಸನ್ನಿಯಿಂದ ನರಳುತ್ತಾರೆ. ಕಾರಣ ಸ್ಪಷ್ಟ. ಹೆಣ್ಣು ನೈತಿಕವಾಗಿ, ಬೌದ್ಧಿಕವಾಗಿ ಹಳ್ಳಕ್ಕೆ ಬಿದ್ದುಹೋಗಿದ್ದಾಳೆ.
“ಬಸಿರೆಂಬುದು ಎಂಥ ಅದ್ಭುತವೆಂಬುದನ್ನು ಗಂಡಸು ಕೊಂಚ ತಿಳಿದರೆ ಆದೀತು. ನಮ್ಮ ಜೀವಕ್ಕೇ ರೂಪಕೊಡುತ್ತಾ, ನಮ್ಮ ಮನೆಯನ್ನು ಬೆಳೆಸುವ ಜೀವ ಹೊತ್ತಿರುತ್ತಾಳೆ. ಅಂಥ ಪವಿತ್ರ ಕಾರ್ಯಕ್ಕೆ ಅಡ್ಡ ಬರುವುದು...ಯಾವುದರಿಂದ? ನೆನೆಸಿಕೊಂಡರೇ ಭಯವಾಗುತ್ತದೆ. ಇಷ್ಟೆಲ್ಲ ಆದರೂ ಹೆಣ್ಣಿನ ಸ್ವಾತಂತ್ರ್ಯ, ಹಕ್ಕುಗಳ ಬಗ್ಗೆ ಮಾತಾಡುತ್ತಾರೆ! ಇನ್ನೇನು ತಿಂದು ತೇಗಲಿರುವ ಮನುಷ್ಯರಿಗೆ ನಾವು ನಿಮ್ಮ ಸ್ವಾತಂತ್ರ್ಯವನ್ನೂ ಹಕ್ಕುಗಳನ್ನೂ ಕಾಪಾಡುತ್ತೇವೆ ಅಂತ ನರಭಕ್ಷಕರು ಹೇಳಿದ ಹಾಗೆಯೇ ಇದೂ ಕೂಡ!”
ನನಗೆ ಇದೆಲ್ಲವೂ ಹೊಸತಾಗಿತ್ತು, ಆಶ್ಚರ್ಯವಾಗಿತ್ತು.
“ಹಾಗಾದರೆ ಗಂಡನಾದವನು ಹೆಂಡತಿಯೊಡನೆ ಎರಡು ವರ್ಷಕ್ಕೆ ಒಂದು ಬಾರಿಯಷ್ಟೇ ಕೂಡಬೇಕಾಗುತ್ತದೆ. ಗಂಡಸಾಗಿ...”
“ಗಂಡಸಾಗಿ ಹೆಣ್ಣಿನ ಸಂಗ ಇಲ್ಲದೆ ಬದುಕಲಾರ ಎಂದು ಹೇಳುತ್ತೀರಿ. ಬಸುರಿಯಾಗಿದ್ದರೂ ಗಂಡನೊಡನೆ ಕೂಡಬಹುದು ಎಂದು ಹಾಡುವ ವಿಜ್ಞಾನದ ಪೂಜಾರಿಗಳು ತಾವೇ ಸ್ವತಃ ಹೆಣ್ಣಿನ ಅಂಥ ಸ್ಥಿತಿಯನ್ನು ಅನುಭವಿಸಬೇಕಾಗಿ ಬಂದರೆ ಯಾವ ರಾಗದಲ್ಲಿ ಹಾಡುತ್ತಾರೋ ನೋಡಬೇಕು. ಗಂಡಸಿಗೆ ಹೆಂಡ ಬೇಕು, ತಂಬಾಕು ಬೇಕು, ಅಫೀಮು ಬೇಕು ಎಂದು ನಂಬುವಂತೆ ಮಾಡಿದರೆ ಸಾಕು. ಈ ವಿಷಗಳೆಲ್ಲ ತೀರ ಅಗತ್ಯವೆಂದೇ ತಿಳಿಯುತ್ತಾನೆ. ದೇವರಿಗೆ ಬುದ್ಧಿ ಇರಲಿಲ್ಲ, ಅದಕ್ಕೇ ಈ ವಿಜ್ಞಾನಿಪೂಜಾರಿಗಳ ಸಲಹೆ ಕೇಳದೆ ಹೀಗೆ ಮಾಡಿಟ್ಟುಬಿಟ್ಟ. ಗಂಡಸು ತನ್ನ ಮೈಯಾಸೆ ತೀರಿಸಿಕೊಳ್ಳುವುದು ಮುಖ್ಯ, ಆದ್ದರಿಂದಲೇ ಈ ಬಸಿರು, ಬಾಣಂತನ ಇವೆಲ್ಲ ಗಂಡಸಿನ ಸುಖಕ್ಕೆ ಅಡ್ಡಿ ಅನ್ನತೊಡಗಿದ್ದಾರೆ.
“ಹಾಗಾದರೆ ಏನು ಮಾಡಬೇಕು? ಗೊತ್ತಾಗಲಿಲ್ಲವೇ? ಪೂಜಾರಿಗಳನ್ನ ಕೇಳಿ, ಎಲ್ಲಕ್ಕೂ ವ್ಯವಸ್ಥೆಮಾಡಿಕೊಡುತ್ತಾರೆ. ಮಾಡಿದ್ದಾರೆ ಕೂಡ. ಈ ಡಾಕ್ಟರುಗಳು ಹೇಳುವ ಸುಳ್ಳನ್ನು ಬಯಲುಮಾಡುವುದು ಯಾವಾಗ? ಅವರ ಮಾತು ಕೇಳಿದ್ದು ಸಾಕು. ಅದನ್ನ ಕೇಳಿ ಕೇಳಿಯೇ ಜನ ಹುಚ್ಚರಾಗಿದ್ದಾರೆ, ಬಂದೂಕು ಹಿಡಿದು ಒಬ್ಬರನ್ನೊಬ್ಬರು ಕೊಂದುಕೊಂಡಿದ್ದಾರೆ. ಬೇರೆ ಇನ್ನೇನಾಗಲು ಸಾಧ್ಯ?
“ಪ್ರಾಣಿಗಳಿಗೆ ಗೊತ್ತು. ಹುಟ್ಟುವ ಮರಿಗಳು ತಮ್ಮ ಕುಲವನ್ನು ಬೆಳೆಸುತ್ತವೆ ಎಂದು. ಹಾಗಾಗಿ ಕೆಲವು ನಿಯಮಗಳನ್ನು ಪಾಲಿಸುತ್ತವೆ. ಮನುಷ್ಯನಿಗೆ ಗೊತ್ತಿಲ್ಲ. ಗೊತ್ತುಮಾಡಿಕೊಳ್ಳುವ ಆಸೆಯೂ ಇಲ್ಲ. ಎಷ್ಟು ಸಾಧ್ಯವೋ ಅಷ್ಟೂ ಮೈಸುಖ ಪಡೆಯುವುದೇ ಮನುಷ್ಯನ ಗುರಿ. ಮನುಷ್ಯ-ನಿಸರ್ಗದ ಚಕ್ರವರ್ತಿ! ಯಾವಾಗ ಬೇಕೋ ಆವಾಗ, ಎಲ್ಲಿ ಬೇಕೋ ಅಲ್ಲಿ ಮೈ ಸುಖ ಪಡೆಯುವುದೇ ಗುರಿ. ಪಾಪ, ಪ್ರಾಣಿಗಳು ಸಂತಾನ ಪಡೆಯುವುದಕ್ಕಷ್ಟೇ ಕೂಡುತ್ತವೆ. ಈ ಸುಖಕ್ಕೆ ಮನುಷ್ಯ ಪ್ರೀತಿ ಎಂದು ಹೆಸರಿಟ್ಟು, ಪ್ರೀತಿಯ ಹೆಸರಲ್ಲಿ ಅರ್ಧ ಮನುಷ್ಯಕುಲವನ್ನೇ ಹಿಂಸೆಮಾಡುತ್ತಾನೆ. ಮನುಷ್ಯ ಕುಲವನ್ನು ಸ್ವಾತಂತ್ರ್ಯದೆಡೆಗೆ ಒಯ್ಯುವಲ್ಲಿ ಗಂಡಸಿಗೆ ಸಹಕಾರ ನೀಡಬೇಕಾದ ಹೆಣ್ಣನ್ನು ತನ್ನ ಸುಖದ ಹೆಸರಿನಲ್ಲಿ ಶತ್ರುವಾಗಿಸಿಕೊಂಡಿದ್ದಾನೆ. ಮನುಷ್ಯ ಕುಲ ಮುಂದುವರೆಯದಂತೆ ತಡೆದಿರುವವರು ಯಾರು? ಹೆಂಗಸರು. ಯಾಕೆ? ಇದುವರೆಗೆ ನಾನು ಹೇಳಿದೆನಲ್ಲಾ, ಅದೇ ಕಾರಣಕ್ಕೆ. ಹೌದು, ಹೌದು ಅದೇ ಕಾರಣಕ್ಕೆ ಅನ್ನುತ್ತಾ ಮನಸ್ಸಿಗೆ ಸಮಾಧಾನ ತಂದುಕೊಳ್ಳಲೋ ಎಂಬಂತೆ ಸಿಗರೇಟು ಸೇದತೊಡಗಿದ.
(ಮುಂದುವರೆಯುವುದು)

Rating
No votes yet