ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹನ್ನೆರಡು
“ಆದರೆ, ನಮ್ಮ ಸಮಾಜದಲ್ಲಿರುವ ಹಾಗೆ, ಮನುಷ್ಯ ಕೇವಲ ದೈಹಿಕ ಪ್ರೀತಿಯನ್ನು ಮಾತ್ರ ಬಯಸುತ್ತಿದ್ದರೆ, ಅದಕ್ಕೆ ಮದುವೆಯ ಎಂಥದೇ ಸುಳ್ಳುರೂಪಗಳ ಡ್ರೆಸ್ಸು ತೊಡಿಸಿದರೂ ಅದು ಕೇವಲ ಅನುಮತಿ ಪಡೆದುಕೊಂಡ ಲಂಪಟತನ ಅಷ್ಟೇ. ನಾನು ಅನೈತಿಕವಾಗಿ ಬದುಕಿದೆ, ಹೆಂಡತಿಯನ್ನೂ ಆ ಬದುಕಿಗೆ ಎಳೆದೆ, ಮತ್ತೆ ಇದನ್ನೇ ನಾವು ಪ್ರಾಮಾಣಿಕ ಕೌಟುಂಬಿಕ ಜೀವನ ಎಂದು ಕರೆಯುತ್ತೇವೆ. ಸ್ವಾತಂತ್ರ್ಯ, ಪಾವಿತ್ರ್ಯ ಇವು ಮನುಷ್ಯನ ಅತ್ಯಂತ ಆನಂದದ ಸ್ಥಿತಿಯಾಗಿದ್ದರೆ ಅವನ್ನು ಹಾಸ್ಯಾಸ್ಪದವೆಂದೋ ಅಸಹನೀಯವೆಂದೋ ಕರೆಯುವುದು ಎಂಥ ವಿಕೃತಿಯಲ್ಲವೆ. ಶುದ್ಧವಾಗಿ ಉಳಿಯುವುದು ಅತಿ ಉನ್ನತ ಆದರ್ಶವಾಗಿದ್ದರೆ, ಹೆಣ್ಣು ಕನ್ಯೆಯಾಗಿಯೇ ಉಳಿಯುವುದು ನಮ್ಮ ಸಮಾಜದಲ್ಲಿ ಯಾಕೆ ಲೇವಡಿಗೆ ಒಳಗಾಗುತ್ತದೆ, ನಗೆಗೀಡಾಗುತ್ತದೆ? ಎಷ್ಟು ಜನ, ಇನ್ನೂ ಎಷ್ಟು ಜನ ಹೆಣ್ಣುಮಕ್ಕಳು ತಾವು ಕನ್ಯೆಯರಾಗಿಯೇ ಉಳಿದುಬಿಟ್ಟೇವೆಂಬ ಭಯದಿಂದ ರಾಸ್ಕಲ್ಲುಗಳನ್ನು ಮದುವೆಯಾಗುತ್ತಿರಬೇಕು, ಅಂಥ ಗಂಡ ತಮಗಿಂತ ಉತ್ತಮನೆಂದು ಒಪ್ಪಿಕೊಳ್ಳುತ್ತಿರಬೇಕು. ಆ ಆದರ್ಶಸ್ಥಿತಿಯಲ್ಲಿರುವುದಕ್ಕೆ ಭಯಪಟ್ಟು ತಮ್ಮನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ ಹೆಂಗಸರು.
“ಮೊದಲು ನನಗಿದು ಗೊತ್ತಾಗಿರಲಿಲ್ಲ. ಬೈಬಲ್ಲಿನಲ್ಲಿ ಹೇಳುವ ಮಾತು ‘ಯಾರು ಹೆಂಗಸನ್ನು ಕಾಮದ ಕಣ್ಣಿಂದ ನೋಡುತ್ತಾನೋ ಅವನು ಆಗಲೇ ಹಾದರ ಮಾಡಿರುತ್ತಾನೆ’ ಅನ್ನುವ ಮಾತು ಅರ್ಥವಾಗಿರಲಿಲ್ಲ. ಅದು ಬೇರೆಯವರ ಹೆಂಡಿರಿಗೆ ಅನ್ವಯವಾಗುವ ಮಾತಲ್ಲ, ನಮ್ಮ ನಮ್ಮ ಹೆಂಡಂದಿರಿಗೇ ಅಪ್ಲೈ ಆಗುವ ಮಾತು. ನನಗೆ ಅರ್ಥವಾಗಿರಲಿಲ್ಲ ಇದು. ಹನಿಮೂನು, ಆ ಸಂದರ್ಭದ ಎಲ್ಲ ಕ್ರಿಯೆಗಳು, ಅಂದರೆ ಹೆಂಡತಿಯೊಡನೆ ತನ್ನ ಎಲ್ಲ ಆಸೆಗಳನ್ನು ತೀರಿಸಿಕೊಳ್ಳುವುದು ಪವಿತ್ರವಾದ, ಪರಿಶುದ್ಧವಾದ, ಒಳ್ಳೆಯ ಕೆಲಸವೆಂದೇ ತಿಳಿದಿದ್ದೆ. ಈಗ ಗೊತ್ತಾಗಿದೆ, ಮದುವೆಯಾದ ಯುವ ದಂಪತಿ ಅಪ್ಪ ಅಮ್ಮಂದಿರ ಅನುಮತಿಯನ್ನು ಪಡೆದು ಏಕಾಂತದಲ್ಲಿ ಕಾಲಕಳೆಯುವುದೆಂದರೆ ಅನುಮತಿ ಪಡೆದ ಲಂಪಟತನದಲ್ಲಿ ಮುಳುಗುವುದೆಂದೇ ಅರ್ಥ.
“ನಾನು ಮಾಡುತ್ತಿದ್ದ ಕೆಲಸದಲ್ಲಿ ಕೆಟ್ಟದ್ದು, ನಾಚಿಕೆಪಡುವಂಥದ್ದು ಏನೂ ಇಲ್ಲವೆಂದು, ಮಹಾ ಆನಂದ ದೊರೆಯುವುದೆಂದು ನಿರೀಕ್ಷಿಸುತ್ತಾ ಹನಿಮೂನು ಆರಂಭಿಸಿದೆ. ಅಂಥ ಯಾವ ಆನಂದಗಳೂ ದೊರೆಯಲಿಲ್ಲ. ಏನಾದರೂ ಆಗಲಿ ಅಂಥ ಆನಂದ ಪಡೆಯಲೇಬೇಕೆಂದು ದೃಢನಿರ್ಧಾರಮಾಡಿದ್ದೆ. ಆನಂದವನ್ನು ಪಡೆಯಲು ಪ್ರಯತ್ನಿಸಿದಷ್ಟೂ ವಿಫಲನಾಗುತ್ತಿದ್ದೆ. ಮನಸಿನ ತುಂಬ ಎಂಥದೋ ಕಳವಳ, ನಾಚಿಕೆ, ಆಯಾಸ. ಸುಮ್ಮನೆ ನರಳತೊಡಗಿದೆ. ಮೂರನೆಯ ದಿನವೊ ನಾಲ್ಕನೆಯ ದಿನವೋ ನಾನು ದುಃಖಿಯಾಗಿರುವುದನ್ನು ಕಂಡು ಹೆಂಡತಿ ಕಾರಣವೇನೆಂದು ಕೇಳಿದಳು. ಅವಳನ್ನು ಅಪ್ಪಿಕೊಳ್ಳಲು ಹೋದೆ, ಅವಳಿಗೆ ಇರುವ ಆಸೆ ಅದೊಂದೇ ಅನ್ನುವ ಅಭಿಪ್ರಾಯ ನನ್ನಲ್ಲಿತ್ತು. ಅವಳು ನನ್ನ ಕೈಯನ್ನು ದೂರತಳ್ಳಿ ಅಳುವುದಕ್ಕೆ ಶುರುಮಾಡಿದಳು. ಬಹುಶಃ ಅವಳ ಸುಸ್ತಾಗಿದ್ದಳು. ನಮ್ಮ ಸಂಬಂಧದ ಕೊಳಕುತನ ಅವಳಿಗೆ ಗೊತ್ತಾಗಿತ್ತೋ ಏನೋ. ಹೇಗೆ ಹೇಳಬೇಕೆಂದು ಅವಳಿಗೆ ತಿಳಿಯದೆ ಹೋಗಿರಬಹುದು. ಮಂಕಾಗಿದ್ದಳು.
“ಯಾಕೆ? ಯಾಕೆಂದು ಹೇಳಲು ಆಗಲಿಲ್ಲ ಅವಳಿಗೆ. ಅಮ್ಮ ಇಲ್ಲವಲ್ಲ ಅದಕ್ಕೆ ಅಂದಳು. ನಿಜ ಹೇಳುತ್ತಿಲ್ಲ ಅನ್ನಿಸಿತು. ಅವಳ ಅಮ್ಮನ ಬಗ್ಗೆ ಮಾತು ತೆಗೆಯದೆ ಮೌನವಾಗಿದ್ದು ಅವಳಿಗೆ ಸಮಾಧಾನ ಕೊಡಲು ಟ್ರೈಮಾಡಿದೆ. ಅಮ್ಮನ ಬಗ್ಗೆ ಮಾತಾಡಲಿಲ್ಲ ಎಂದು ಕೋಪಗೊಂಡಳು. ಯಾಕೋ ಬೇಜಾರಾಗಿದ್ದಾಳೆ, ಅಮ್ಮ ಅನ್ನುವುದು ನೆಪ ಅಂದುಕೊಂಡೆ. ನೀವು ನನ್ನನ್ನು ಪ್ರೀತಿಸುತ್ತಾ ಇಲ್ಲ ಅಂದಳು. ಕಳ್ಳಾಟ ಆಡುತ್ತಿದ್ದೀಯೆ ಅಂದೆ. ಅವಳನ್ನು ನೋಡಿ ನಕ್ಕೆ. ದುಃಖ ಮರೆಯಾಗಿ ರೇಗಿಕೊಂಡು ಬಯ್ದಳು. ಗಾಯವಾಗುವಂಥ ಮೊನಚು ಮಾತಾಡಿದಳು. ನನ್ನನ್ನು ಸ್ವಾರ್ಥಿ ಅಂದಳು, ಕ್ರೂರಿ ಅಂದಳು.
“ಅವಳ ಮುಖ ನೋಡಿದೆ. ತುಂಬ ತಣ್ಣಗಿದ್ದಳು. ನನ್ನ ಕಂಡರೆ ಆಗುವುದಿಲ್ಲ ಅನ್ನುವಹಾಗೆ, ನನ್ನ ಬಗ್ಗೆ ದ್ವೇಷ ಇದ್ದಹಾಗೆ ಇತ್ತು. ತುಂಬ ಭಯವಾಯಿರು. ‘ಯಾಕೆ? ಹೇಗೆ? ಪ್ರೀತಿಯು ಆತ್ಮಗಳನ್ನು ಒಂದುಗೂಡಿಸಬೇಕು. ಇವಳು ನನ್ನನ್ನು ದ್ವೇಷಮಾಡುತ್ತಿದ್ದಾಳೆಯೆ? ನನ್ನನ್ನು? ಯಾಕೆ? ಇಂಪಾಸಿಬಲ್! ಇದು ಅವಳಲ್ಲವೇ ಅಲ್ಲ!’ ಅನ್ನಿಸಿತು.
“ಸಮಾಧಾನ ಮಾಡಲು ಟ್ರೈಮಾಡಿದೆ. ಅಚಲವಾದ ದ್ವೇಷದ ಬಂಡೆ ಎದುರಾದಂತಾಯಿತು. ಆ ಬಂಡೆಗೆ ಬೆನ್ನುತಿರುಗಿಸುವ ಮೊದಲೇ ನನ್ನೊಳಗೂ ಕೋಪ ಹುಟ್ಟಿತು. ಕಿರಿಕಿರಿಯಾಯಿತು. ಬಾಯಿಗೆ ಬಂದಹಾಗೆ ಬೈದೆ. ಅವಳೂ ಬೈದಳು. ಮೊದಲ ಜಗಳದ ಈ ನೆನಪು ಭಯಂಕರ. ಜಗಳ ಅಂದೆ. ಜಗಳ ಅನ್ನುವ ಮಾತು ಸರಿಯಲ್ಲ. ನಮ್ಮ ನಡುವೆ ಇದ್ದಕ್ಕಿದ್ದಂತೆ ತೋಡಿಕೊಂಡಿದ್ದ ಆಳವಾದ ಕಮರಿ ನಮಗೆ ತಟ್ಟನೆ ಕಂಡುಬಿಟ್ಟಿತ್ತು. ಮೈಯ ಆಸೆ ತೀರದ ಮೇಲೆ ಪ್ರೀತಿ ಸತ್ತು ಹೋಗಿತ್ತು. ನಮ್ಮ ನಮ್ಮ ನಿಜದ ಬೆಳಕಿನಲ್ಲಿ ನಿಂತಿದ್ದೆವು. ಸಾಧ್ಯವಾದಷ್ಟೂ ಹೆಚ್ಚು ಖುಷಿಯನ್ನು ಗೆಬರಿಕೊಳ್ಳಲು ಹಪಹಪಿಸುತ್ತಿರುವ ಇಬ್ಬರು ಅಪರಿಚಿತ ಅಹಂಕಾರಿಗಳು, ಪರಸ್ಪರರನ್ನು ಶೋಷಿಸಲು ಸಿದ್ಧರಾಗಿದ್ದವರು ನಾವು.
“ನಾನು ಜಗಳವೆಂದು ಕರೆದದ್ದು ತಪ್ಪು. ದೇಹದ ಆಸೆ ತೀರಿದ ಮೇಲೆ ನಾವು ಇದ್ದ ವಾಸ್ತವ ಪರಿಸ್ಥಿತಿ ಅದು. ಈ ದ್ವೇಷವೇ ನಮ್ಮ ನಾರ್ಮಲ್ ಸ್ಥಿತಿಯೆಂದೂ ಈ ಜಗಳವನ್ನು ತೀವ್ರವಾದ ಕಾಮುಕತೆಯ ಪ್ರವಾಹದಲ್ಲಿ ಮುಳುಗಿಸಿಬಿಡುತ್ತೇವೆಂದೂ ನನಗೆ ಆಗ ಗೊತ್ತಿರಲಿಲ್ಲ. ಜಗಳ ಆಡಿದೆವು, ರಾಜಿ ಮಾಡಿಕೊಂಡೆವು, ಮತ್ತೆ ಹೀಗೆ ಆಗದು ಅಂದುಕೊಂಡಿದ್ದೆ. ಆದರೆ ಹನಿಮೂನಿನ ಸಮಯದಲ್ಲೇ ದೇಹಗಳು ತಣಿದ ಅವಧಿಯೂ ಬಂದಿತು. ಆಗ ನಾವು ಒಬ್ಬರಿಗೊಬ್ಬರು ಅಗತ್ಯವಾಗಿಯೇ ಇರಲಿಲ್ಲ. ಹೊಸದೊಂದು ಜಗಳ ಶುರುವಾಯಿತು.
“ಮೊದಲು ಆದ ಜಗಳ ಆಕಸ್ಮಿಕವಾದ್ದಲ್ಲ, ಅನಿವಾರ್ಯವಾಗಿತ್ತು, ಮತ್ತೆ ಜಗಳ ಆಗುತ್ತಲೇ ಇರುತ್ತದೆ ಅಂದುಕೊಂಡೆ. ಎರಡನೆಯ ಜಗಳದಿಂದ ದಿಗ್ಭ್ರಾಂತನಾದೆ. ಯಾಕೆಂದರೆ ಅದು ಪೂರಾ ನಿಷ್ಕಾರಣವಾದ ಜಗಳ. ತೀರ ಕುಂಟುನೆಪಕ್ಕೆ, ದುಡ್ಡಿನ ಪ್ರಶ್ನೆಯಿಂದ ಹುಟ್ಟಿಕೊಂಡಿತು. ದುಡ್ಡಿನ ವಿಚಾರದಲ್ಲಿ ಎಂದೂ ಕೊಸರಾಡಿದವನೇ ಅಲ್ಲ ನಾನು. ಅವಳ ಮಟ್ಟಿಗಂತೂ ಜಿಪುಣತನ ತೋರಿಸುವ ಪ್ರಶ್ನೆಯೇ ಇರಲಿಲ್ಲ. ಈಗ ನೆನಪಿರುವುದು ಇಷ್ಟೇ, ನಾನು ಹೇಳಿದ ಯಾವುದೋ ಮಾತಿಗೆ ‘ದುಡ್ಡಿನಿಂದ ನನ್ನನ್ನು ಆಳಲು ನೋಡುತ್ತಿದ್ದೀರಿ, ನೀವು ಶ್ರೀಮಂತರು ಎಂದು ನನ್ನ ಮೇಲೆ ಹಕ್ಕು ಸ್ಥಾಪಿಸುತ್ತಾ ಇದ್ದೀರಿ’ ಅಂದಳು. ಮೂರ್ಖತನದ ಕೀಳು ಆಪಾದನೆ. ಹೀಗೆ ಆಡುವ ಸ್ವಭಾವ ನನಗೂ ಇರಲಿಲ್ಲ, ಅವಳಿಗೂ ಇರಲಿಲ್ಲ.
“ಕೋಪ ಬಂತು ನನಗೆ. ‘ನಿನಗೆ ಸೂಕ್ಷ್ಮವಿಲ್ಲ’ ಅಂದೆ. ಅವಳೂ ನನಗೆ ಅದನ್ನೇ ತಿರುಗಿಸಿ ಅಂದಳು. ಜಗಳ ಶುರುವಾಯಿತು. ಅವಳ ಮುಖಭಾವದಲ್ಲಿ, ಕಣ್ಣಿನ ನೋಟದಲ್ಲಿ ಹಿಂದೆ ಕಂಡಂಥದೇ ದ್ವೇಷ ಕಂಡು ಆಶ್ಚರ್ಯವಾಯಿತು. ನಾನು ಆಗಾಗ ಅಣ್ಣನ ಜೊತೆ, ಗೆಳೆಯರೊಡನೆ,ಅಪ್ಪನೊಡನೆ ಜಗಳವಾಡಿದ್ದು ಉಂಟು. ಆದರೆ ಇಷ್ಟು ಜೋರಾದ, ಬಿರುಸಾದ, ವಿಷ ತುಂಬಿದ ಜಗಳ ಅಲ್ಲ ಅವು ಯಾವುದೂ. ಕೆಲವು ಕಾಲ ಕಳೆಯಿತು. ನಮ್ಮ ದ್ವೇಷವನ್ನು ಮೈಸುಖದ ಹಿಂದೆ ಬಚ್ಚಿಟ್ಟೆವು. ಇವೆಲ್ಲ ರಿಪೇರಿಯಾಗಬಹುದಾದ ತಪ್ಪುಗಳು ಎಂದು ನನಗೇ ಸಮಾಧಾನ ಮಾಡಿಕೊಂಡೆ.
“ಮೂರನೆಯ ಬಾರಿ, ನಾಲ್ಕನೆಯ ಬಾರಿ ಜಗಳ ಮತ್ತೆ ಹುಟ್ಟಿದ್ದರಿಂದ ಇದು ನಮ್ಮ ದೋಷವಲ್ಲ, ನಮ್ಮ ವಿಧಿ ಅನ್ನಿಸಿಬಿಟ್ಟಿತು. ಭಯ ಹೊರಟುಹೋಯಿತು. ಬದುಕನ್ನೆಲ್ಲಾ ಹೀಗೇ ಕಳೆಯುವುದು ಹೇಗೆ ಎಂಬ ಚಿಂತೆಯಾಯಿತು. ನಾನೊಬ್ಬನೇ ಹೀಗೆ ಹೆಂಡತಿಯೊಡನೆ ಜಗಳವಾಡಿಕೊಂಡು ಬದುಕಿರುವುದು, ಸಂಸಾರ ಹೀಗೆ ಇರುತ್ತದೆ ಎಂದು ಊಹಿಸಿಯೇ ಇರಲಿಲ್ಲ, ಮಿಕ್ಕ ಮನೆಗಳಲ್ಲಿ ಹೀಗಿಲ್ಲ, ಎಲ್ಲರೂ ಸುಖವಾಗಿದ್ದಾರಲ್ಲ ಎಂದು ಆಶ್ಚರ್ಯಪಡತೊಡಗಿದೆ. ಎಲ್ಲ ಮನೆಗಳಲ್ಲೂ ಇಂಥ ಜಗಳ ಇದ್ದಕ್ಕಿದ್ದಂತೆ ಹುಟ್ಟುತ್ತದೆಂದೂ, ಅವರೂ ನನ್ನ ಹಾಗೆಯೇ ‘ನನಗೆ ಮಾತ್ರವೇ ಇಂಥ ಹಣೆಬರಹ’ ಎಂದುಕೊಂಡು, ಇದನ್ನು ಬಯಲು ಮಾಡಿದರೆ ನಾಚಿಕೆಗೇಡಾಗುತ್ತದೆಂದು, ಕೆಟ್ಟ ಕಾಯಿಲೆಯನ್ನು ಬಚ್ಚಿಟ್ಟುಕೊಳ್ಳುವ ಹಾಗೆಯೇ ಬೇರೆಯವರಿಗೆ ಗೊತ್ತಾಗದಹಾಗೆ ಮಾತ್ರವಲ್ಲ, ತಮ್ಮ ಅರಿವಿಗೂ ಬಾರದಂತೆ ಬಚ್ಚಿಟ್ಟುಕೊಳ್ಳುತ್ತಿದ್ದರೆಂದೂ ಗೊತ್ತಿರಲಿಲ್ಲ.
“ನನಗೆ ಆಗಿದ್ದೂ ಅದೇ. ಮದುವೆಯ ಹೊಸದರಲ್ಲೆ ಶುರುವಾದ ಜಗಳ ಮುಂದುವರೆಯಿತು. ಕೋಪ, ಹಠಮಾರಿತನ ಹೆಚ್ಚಿದವು. ಮದುವೆಯಾದ ಕೆಲವೇ ವಾರಗಳಲ್ಲಿ ಮದುವೆಯೆಂದರೆ ಆನಂದವಲ್ಲ,ಮನಸ್ಸನ್ನು ದಣಿಸುವ ಭಾರ ಎಂದು ನನ್ನ ಆತ್ಮಕ್ಕೆ ತಿಳಿದುಬಿಟ್ಟಿತ್ತು. ಆದರೂ, ಮಿಕ್ಕವರಂತೆಯೇ ನಾನೂ ಅದನ್ನು ಒಪ್ಪಿಕೊಳ್ಳಲಿಲ್ಲ. ಈಗ ಏನು ನಡೆಯಿತೋ ಅದು ನಡೆಯದಿದ್ದರೆ ಈಗಲೂ ಒಪ್ಪಿಕೊಳ್ಳುತ್ತಿರಲಿಲ್ಲ. ನನಗೂ ತಿಳಿಯಲಾಗದಂತೆ ಈ ತಿಳಿವಳಿಕೆಯನ್ನು ಬಚ್ಚಿಟ್ಟುಕೊಂಡುಬಿದುತ್ತಿದ್ದೆ ಈಗ ನೆನಪೇ ಉಳಿದಿರದಂಥ ಕ್ಷುಲ್ಲಕ ಕಾರಣಗಳಿಗಾಗಿ ನಡೆಯುತ್ತಿದ್ದ ಆ ಜಗಳಗಳು! ನಮ್ಮಿಬ್ಬರಲ್ಲಿ ಇದ್ದ ದ್ವೇಷವನ್ನು ಮರೆಮಾಡಿಕೊಳ್ಳುವುದಕ್ಕೆ ನಮ್ಮ ಬುದ್ಧಿ ಕೂಡಲೆ ಒಂದಲ್ಲ ಒಂದು ಕಾರಣ ಹುಡುಕಿಕೊಟ್ಟು, ಸಮಾಧಾನಮಾಡಿಕೊಳ್ಳುತ್ತಿದ್ದೆವು.
“ಖುಷಿಯಾಗಿರುವ ಯುವಕರು ಎಷ್ಟೋಬಾರಿ ನಗಬೇಕೆಂದು ಸುಮ್ಮನೆ ನಿಷ್ಕಾರಣವಾಗಿ ನಗುವಂತೆಯೇ ನಾವೂ ನಿಷ್ಕಾರಣವಾಗಿ ದ್ವೇಷಿಸತೊಡಗಿದ್ದೆವು. ದ್ವೇಷ ನಮ್ಮೊಳಗೆ ಸಹಜವಾಗಿಯೇ ಕುದಿಯುತ್ತಿದ್ದುದರಿಂದ ದ್ವೇಷಿಸುತ್ತಿದ್ದೆವು. ಇನ್ನೂ ವಿಶೇಷವೆಂದರೆ ರಾಜಿಯಾಗುವುದಕ್ಕೂ ನಿಜವಾದ ಕಾರಣಗಳೇ ಇರುತ್ತಿರಲಿಲ್ಲ.
“ಕೆಲವೊಮ್ಮೆ ಮಾತು, ಕೆಲವೊಮ್ಮೆ ವಿವರಣೆಗಳು, ಅಥವಾ ಕಣ್ಣೀರು, ಮತ್ತೆ ಕೆಲವೊಮ್ಮೆ ತೀರ ಅವಮಾನವಾಗುವಂಥ ಮಾತಾಡಿದಮೇಲೆ ಸುಮ್ಮನೆ ಅಪ್ಪಿಕೊಂಡು, ಕಿಸ್ಸುಕೊಟ್ಟುಕೊಂಡು ಪ್ರೀತಿಯನ್ನು ಡಿಕ್ಲೇರುಮಾಡಿಕೊಳ್ಳುವುದು. ಅಸಹ್ಯ! ಈ ಕೀಳ್ತನ ನನಗೇಕೆ ಆಗಲೇ ಕಾಣಲಿಲ್ಲವೋ?”
(ಮುಂದುವರೆಯುವುದು)