ಗಣಪನಿಗೇಕೆ ಇಪ್ಪತ್ತೊಂದು
ಹಿಂಬಾಗಿಲಲ್ಲಿ ದೊಡ್ಡದೊಂದು ಗುಂಪು ನೆರೆದಿತ್ತು. "ಅಂಕಲ್, ಗಣಪತಿ. ಆಂಟಿ, ಗಣಪತಿ" ಎನ್ನುತ್ತ ಕಾಣಿಕೆ ಡಬ್ಬವೊಂದನ್ನು ಹಿಡಿದು ಜೋರು ಗಲಾಟೆ ಮಾಡಿಕೊಂಡು ಓಡಾಡುತ್ತಿದ್ದ ಸಣ್ಣ ಹುಡುಗರ ಸೈನ್ಯವೊಂದು ಬಾಗಿಲನ್ನಡ್ಡಗಟ್ಟಿತ್ತು. ಅತ್ತಿಗೆ ಒಳ ಹೋಗಿ ಒಂದಷ್ಟು ಹಣ ತಂದು ಹುಡುಗರಲ್ಲಿ ಡಬ್ಬ ಹಿಡಿದಿದ್ದವನಿಗೆ ಕೊಟ್ಟರು.
ಮುಂದಿದ್ದ ಸಣ್ಣ ಹುಡುಗನೊಬ್ಬ
"ಆಂಟಿ, ಐವತ್ತು ಬೇಡ, ನೂರು ರೂಪಾಯಿ ಕೊಡಿ! ನಾವು ಇದೇ ರಸ್ತೇಲಿ ಇಡ್ತಿರೋದು... ಅಲ್ ನೋಡಿ - ಆ ಐರನ್ ಅಂಗಡಿ ಎದುರ್ಗೆ" ಎಂದು ಕೂಗಿದ.
"ಸಾಕು, ಇಟ್ಕೊಳಿ. ಬೆಳಿಗ್ಗೆಯಿಂದ ನಿಮ್ಮದು ನಾಲ್ಕನೇ ಸೈನ್ಯ" ಎಂದರು ಅತ್ತಿಗೆ.
"ಆಂಟಿ, ನೀವು ನೂರು ರುಪಾಯಿ ಕೊಟ್ರೆ ಮೆರವಣಿಗೆ ನಿಮ್ಮ ಮನೆ ಮುಂದೆ ನಿಲ್ಲಿಸ್ತೀವಿ"
"ಏನು ಬೇಡ, ಇಪ್ಪತ್ತೊಂದು ರುಪಾಯಿ ಇಟ್ಕೊಳಿ ಸಾಕು. ಉಳಿದ ಚೇಂಜು ಕೊಡಿ"
"ಥ್ಯಾಂಕ್ಸ್, ಆಂಟಿ" - ಆ ಹುಡುಗ ಚೀಟಿಯೊಂದರಲ್ಲಿ "೨೧ ರೂ/-" ಎಂದು ಗೀಚಿ ಹರಿದು ಕೊಟ್ಟ.
ಪಕ್ಕದಲ್ಲಿದ್ದ ಹುಡುಗ (ಬಹುಶಃ ಇವರ ಗುಂಪಿನ unofficial treasurer ಇರಬೇಕು), "ಆಂಟಿ, ಇಲ್ಲ ಇಪ್ಪತ್ತು ಕೊಡಿ, ಇಲ್ಲ ಐವತ್ತು ಕೊಡಿ. ಇಪ್ಪತ್ತೊಂದಕ್ಕೆ ಚೇಂಜ್ ಇಲ್ಲ"
"ಅರೆರೆ! ಇಪ್ಪತ್ತೊಂದು ಯಾಕೆ ಕೊಟ್ಟದ್ದು ಹೇಳು?" ಅತ್ತಿಗೆ ಕೇಳಿದರು.
"ದೇವ್ರು ಒಳ್ಳೇದ್ ಮಾಡ್ಲಿ ಅಂತ!" ಎಂದು ಬಂದಿತು ಉತ್ತರ!
*ಇಲ್ಲಿರುವ humour ತಿಳಿಯದ ಓದುಗರಿಗಾಗಿ - ಗಣೇಶನಿಗೆ ೨೧ ಮೋದಕಗಳು, ೨೧ ಖಡುಬುಗಳಿಡುವಂತೆ, ಗಣಪತಿ ಪೆಂಡಾಲುಗಳಿಗೂ ೨೧, ೨೧೦, ೨೧೦೦ - ಹೀಗೆ ದೇಣಿಗೆ ನೀಡುವುದು ಹೆಚ್ಚು - ಒಟ್ಟಾರೆ, ಗಣಪನಿಗೆ ಪ್ರಿಯ ಆ ಸಂಖ್ಯೆ ಎಂಬಂತೆ. ಆದರೆ ಹಲವರಿಗೆ ಈ ವಿಚಾರ ಗೊತ್ತಿದ್ದಂತಿಲ್ಲ.