ಗಿರ್ಗಟ್ಲೆ

ಗಿರ್ಗಟ್ಲೆ

ಕೈನಲ್ಲಿ ಇದನ್ನು ಹಿಡಿದುಕೊಂಡು ಓಡಿಹೋದವರಿಗೆ ಇದರ ನೆನಪೂ ಸಹ ಓಡಿಹೋಗಿರಬಹುದು! ನನಗೂ ಸಹ ಇಂತಹ ಒಂದು ಆಟದ ಸಾಮಾನಿತ್ತೆಂದು ನೆನಪಿಗೆ ಬಂದದ್ದು ಮೊನ್ನೆ ಅದನ್ನು ನೋಡಿದಾಗಲೇ. ಬೆಂಗಳೂರಿನಲ್ಲಿ ನನ್ನ ಅಕ್ಕನ ಮಗ ಗಿರ್ಗಟ್ಲೆಯನ್ನು ಹಿಡಿದುಕೊಂಡು ಓಡುತ್ತಿದ್ದಾಗ.

 

ಬೆಂಗಳೂರು, ಗಿರ್ಗಟ್ಲೆ, ಅದನ್ನ ೪ ವರ್ಷದ ಹುಡುಗ ಆಡುತ್ತಿರುವುದು, ಒಂದಕ್ಕೊಂದು ಲಿಂಕ್ ಆಗುತ್ತಿಲ್ಲ, ಅಲ್ಲವೇ?  ಬಹುಶಃ ಮೊದಲಾಗುತ್ತಿತ್ತೇನೋ ಆದರೆ ಈಗಂತೂ ಊಹಿಸುವುದು ಕಷ್ಟವೇ.

ಯಲಹಂಕದ ಬಳಿ ನನ್ನ ಹೆಂಡತಿಯ ಮನೆಯ ಹತ್ತಿರವಿರುವ ಗಣೇಶ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋಗಿ ದರ್ಶನ ಮಾಡಿ ಹಿಂದಿರುಗುವಾಗ ದೇವಸ್ಥಾನದ ಭಟ್ಟರು ಅವನಿಗೆ ಒಂದು ಗಿರ್ಗಟ್ಲೆ ಮಾಡಿಕೊಟ್ಟಿದ್ದರು, ಅವನು ಅದನ್ನು ಹಿಡಿದು ಓಡಿ ನನ್ನ ಬಳಿ ಬಂದಾಗಲೇ ಅದು ಗಿರ್ಗಟ್ಲೆಯೆಂದು ಗೊತ್ತಾಗಿದ್ದು. ಮೊದಲು ತಿರುಗುತ್ತಿದ್ದ ಅದು ಆಮೇಲೆ ತಿರುಗುತ್ತಿರಲಿಲ್ಲ, ಅವನಿಗೆ ಏನು ಮಾಡಬೇಕೆಂದು ಗೊತ್ತಾಗುತ್ತಿರಲಿಲ್ಲ. ಎಷ್ಟು ಓಡಿದರೂ ನಿಂತ ಹಾಗೇ ಇತ್ತು. ಆಮೇಲೆ ಅವನು ಗಾಳಿಗೆ ವಿರುದ್ಧವಾಗಿ ಹೋಗದಿದ್ದುದರಿಂದ ಅದು ತಿರುಗುತ್ತಿರಲಿಲ್ಲ, ನಾನವನಿಗೆ ಉಲ್ಟಾ ಓಡು ಎಂದೆ, ಆಮೇಲೆ ಅದು ತಿರುಗಿದ್ದು ನೋಡಿ ಅವನ ಸಂಭ್ರಮ ಹೇಳತೀರದು. ಹೋದಲ್ಲೆಲ್ಲಾ ಅವನಿಗೆ ಅದೇ ಆಟ.

ಊರಲ್ಲಿ ಆಗ ಆಟ ಆಡುವುದಕ್ಕೆ ಇದ್ದದ್ದು ಗೋಲಿ, ಬುಗುರಿ, ಚಿನ್ನಿದಾಂಡು, ಮರಕೋತಿಯಾಟ....ಜೊತೆಗೆ ಗಿರ್ಗಟ್ಲೆ. ನನಗೆ ಅದನ್ನು ಮಾಡುವುದು ಗೊತ್ತಿರಲಿಲ್ಲ, ಅಕ್ಕ ಪೇಪರ್ ಹರಿದು ಎಲ್ಲಾ ಜೋಡಿಸಿ ಗಿರ್ಗಟ್ಲೆ ಮಾಡುತ್ತಿದ್ದಳು, ನಾನದನ್ನು ತೆಗೆದುಕೊಂಡು ಅದಕ್ಕೆ ಒಂದು ಕಡ್ಡಿಯನ್ನು ಸಿಕ್ಕಿಸಿ ಓಡುತ್ತಿದ್ದೆ, ಜೊತೆಗೆ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳೂ ಸೇರುತ್ತಿದ್ದರು ಅವರ ಗಿರ್ಗಟ್ಲೆಯೊಂದಿಗೆ. ಅದನ್ನು ಹಾಗೇ ಹಿಡಿದುಕೊಂಡು ಎಷ್ಟೋ ದೂರ ಓಡಿಹೋಗುತ್ತಿದ್ದೆವು, ಹಾಗೆ ಓಡುವಾಗ ತುಂಬಾ ಸಲ ಎಡವಿ ಬೀಳುತ್ತಿದ್ದು ಕೈ ಕಾಲು ತರಚಿ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೆ ಗಿರ್ಗಟ್ಲೆ ಹರಿಯಿತೇನೋ ಎಂದು ನೋಡುತ್ತಿದ್ದೆವು.

ಈಗ ಎಲ್ಲಾಮಕ್ಕಳ ಬಳಿ ಲ್ಯಾಪ್ಟಾಪ್, ಮೊಬೈಲ್, ಚೈನೀಸ್ ಟಾಯ್ಸ್ ಬಂದು ಕುಳಿತಿವೆ, ಗೋಲಿ, ಬುಗುರಿ, ಚಿನ್ನಿದಾಂಡು, ಮರಕೋತಿಯಾಟ ಎಲ್ಲಾ ಮರೆತುಹೋಗಿವೆ, ಗಿರ್ಗಟ್ಲೆಯೂ ಅದೇ ಗುಂಪಿಗೆ ಸೇರಿದೆ. ನಿನಗೆ ಹೇಗೂ ಗೊತ್ತಿದೆಯಲ್ಲಾ ಅವನಿಗೆ ಮಾಡಿಕೊಡು ಎಂದು ಅಕ್ಕನಿಗೆ ಹೇಳಿದೆ, ಮರೆತುಹೋಗಿದೆ ಪ್ರಯತ್ನಿಸುತ್ತೇನೆ ಅಂದಳು. ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಗಿರ್ಗಟ್ಲೆ ಮಾಡಿಕೊಟ್ಟು ನೋಡಿ ನಿಮಗೆ ಗೊತ್ತಿದ್ದರೆ!!

 

Rating
No votes yet

Comments