ಗೆಪ್ತಿ ಅಪ್ಪನ ನೆನಪುಗಳು

ಗೆಪ್ತಿ ಅಪ್ಪನ ನೆನಪುಗಳು

ನೆನಪಿನಂಗಳದಲ್ಲಿ

ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಅಯ್ಯಂಗಾರ್‍ರವರದ್ದು (೧೯೦೬ - ೧೯೯೪) ಬಹಳ ವರ್ಣರಂಜಿತ ಬದುಕು. ಜೀವನದುದ್ದಕ್ಕೂ ಹೋರಾಟದ ಬದುಕನ್ನು ಸಾಗಿಸಿದವರು ಅವರು. ಒಬ್ಬ ಬಡ ಶಾಲಾಮಾಸ್ತರನ ಎರಡನೇ ಮಗನಾಗಿ ಜನಿಸಿ, ಆಗಿನ ಮೆಟ್ರುಕ್ಯುಲೇಷನ್ ವ್ಯಾಸಂಗ ಮಾಡಿದರು. ಇದರ ಜತೆಗೆ, ವಂಶಪಾರಂಪರ್ಯವಾಗಿ ಬಂದ ವೇದ ವಿದ್ಯೆ ಮತ್ತು ಪೌರೋಹಿತ್ಯವನ್ನು ತಮ್ಮ ತಂದೆಯವರಿಂದ ಕಲಿತರು. ಮೇಲುಕೋಟೆಯ  ಸಂಸ್ಕೃತಪಾಠ ಶಾಲೆಯಲ್ಲಿ  ಸಂಸ್ಕೃತ ವ್ಯಾಸಂಗ ಮಾಡಿದರು. ಅವರು ಆಜಾನು ಬಾಹು. ಚಿಕ್ಕಂದಿನಿಂದಲೇ ಗರಡಿ ಸಾಮು ಮಾಡಿ ದೇಹವನ್ನು ದಂಡಿಸಿ ಅತ್ಯಂತ ಆಕರ್ಷಕವಾದ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ಬಾಹ್ಯ ವೇಷವು ಆಗಿನ ಕಾಲಕ್ಕೆ ತಕ್ಕಂತೆ ಒಬ್ಬ ಸಂಪ್ರದಾಯಸ್ಥ ಬ್ರಾಹ್ಮಣನಂತೆ, ಜುಟ್ಟು, ಹಣೆಯಲ್ಲಿ ನಾಮ ಮತ್ತು ಕಚ್ಚೆಪಂಚೆಗಳಿಂದ ಕೂಡಿತ್ತು. ಆದರೆ ಬಾಹ್ಯದಲ್ಲಿ ಸಂಪ್ರದಾಯಸ್ಥರಂತೆ ಕಂಡರೂ ಅವರ ನಡೆ, ನುಡಿ, ಆಚಾರ, ವಿಚಾರ, ಆಲೋಚನೆ ಇವೆಲ್ಲ ಬಹಳ ಕ್ರಾಂತಿಕಾರಿಯಾಗಿತ್ತು.

ಈಗಿನಂತೆ ಆಕಾಲದಲ್ಲಿ ಆರ್ಥಿಕವ್ಯವಸ್ಥೆಯು ಜಾಗತೀಕರಣಗೊಂಡು, ಹಲವು ರೀತಿಯ ಉದ್ಯೋಗಾವಕಾಶಗಳನ್ನು ಉಂಟು ಮಾಡಿರಲಿಲ್ಲ. ಬಡ ಬ್ರಾಹ್ಮಣಕುಟುಂಬದವರು ಹೆಚ್ಚೆಂದರೆ ಒಂದು ಶಾಲಾ ಮಾಸ್ತರಿಕೆಯ ಕೆಲಸವನ್ನು ಹುಡುಕಬೇಕಾದ ಪರಿಸ್ಥಿತಿ. ಅದು ಸಿಗದಿದ್ದಲ್ಲಿ ಪೌರೋಹಿತ್ಯದಿಂದ ಜೀವನ ನಿರ್ವಹಣೆ ಮಾಡಬೇಕಿತ್ತು.

ನನ್ನ ತೀರ್ಥರೂಪರು ಮಾಸ್ತರಿಕೆ ಕೆಲಸಕ್ಕೆ ಸೇರಿದ್ದೇ ಒಂದು ವಿಲಕ್ಷಣವಾದ ಸಂದರ್ಭದಲ್ಲಿ. ಅವರು ಆಗತಾನೇ ತಮ್ಮ ಓದನ್ನು ಮುಗಿಸಿ, ಮುಂದಕ್ಕೆ ವಿದ್ಯಾಭ್ಯಾಸ ಮಾಡಲಾಗದೆ ಮನೆಯಲ್ಲಿದ್ದ ಸಮಯ. ನನ್ನ ತಾತ ಸಹ ಒಬ್ಬ ಶಾಲಾ ಮಾಸ್ತರು. ಆಗೆಲ್ಲಾ ಶಾಲೆಯ ವಿದ್ಯಮಾನಗಳನ್ನು ಪರೀಕ್ಷಿಸಲು ಸ್ಕೂಲ್ ಇನ್ಸ್‌ಪೆಕ್ಟರ್‌ ಬರುತ್ತಿದ್ದರು. ಅವರು ಶಾಲೆಯ ವೀಕ್ಷಣೆಗೆ ಬರುತ್ತಾರೆ ಎಂದರೆ ಇಡೀ ಶಾಲೆಗೆ ಶಾಲೆಯೇ ಗರಿಗೆದರಿ ವಿಶೇಷವಾಗಿ ಸಜ್ಜಾಗುತ್ತಿತ್ತು. ಅಂದಿನ ದಿನಗಳಲ್ಲಿ ಶಾಲೆ ಇನ್ಸ್‌ಪೆಕ್ಟರ್‌ ಸಹ ಅನೇಕವಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೇ ಆಗಿರುತ್ತಿದ್ದರು. ಈಗಿನಂತೆ ಊಟ ಫಲಹಾರಗಳಿಗೆ ಹಳ್ಳಿಗಳಲ್ಲಿ ಹೋಟೆಲ್‍ಗಳು ಇರುತ್ತಿರಲಿಲ್ಲ. ಅದಲ್ಲದೆ ಸಂಪ್ರದಾಯಸ್ಥ ಕುಟುಂಬದಿಂದ ಬಂದ ಇನ್ಸ್‌ಪೆಕ್ಟರ್‌ ಸಹ, ದಿನ ಸ್ನಾನ, ಸಂಧ್ಯಾವಂದನೆ ಮುಂತಾದ ನಿತ್ಯಾನುಷ್ಠಾನಗಳನ್ನು ಮುಗಿಸದೇ ಊಟ ಫಲಹಾರ ಮಾಡುತ್ತಿರಲಿಲ್ಲ.

ಈ ಘಟನೆ ನಡೆದದ್ದು ಸುಮಾರು ೧೯೨೨ ರಲ್ಲಿ. ಆಗ ನನ್ನ ತಂದೆಗೆ ೧೬ ವರ್ಷ ವಯಸ್ಸು. ತಾಳವಾಡಿ ಎಂಬ ಗ್ರಾಮದಲ್ಲಿ ಪ್ರಾಥಮಿಕ ಶಾಲಾಮಾಸ್ತರಾಗಿದ್ದ ನನ್ನ ತಾತನ ಶಾಲೆಗೆ ಇನ್‌ಸ್ಪೆಕ್ಷನ್‌ಗಾಗಿ ಒಬ್ಬ ಇನ್ಸ್‌ಪೆಕ್ಟರ್‌  ಬಂದರು. ಆ ಊರಿನಲ್ಲಿ ಇದ್ದದ್ದೇ ಒಂದೆರಡು ಬ್ರಾಹ್ಮಣರ ಮನೆಗಳು. ಈ ಶಾಲಾ ಇನ್ಸ್‌ಪೆಕ್ಟರ್‌ ತಾಳವಾಡಿಗೆ ಹಿಂದಿನ ದಿನವೇ ಬಂದು ನನ್ನ ತಾತನ ಮನೆಯಲ್ಲಿಯೇ ಬಿಡಾರ ಹೂಡಿದರು. ಮಾರನೆ ದಿನ ಬೆಳಿಗ್ಗೆ ಎದ್ದು ಹತ್ತಿರದಲ್ಲಿ ಹರಿಯುತ್ತಿದ್ದ ಚಿಕ್ಕ ಹೊಳೆಯಲ್ಲಿ (ಈಗ ಹರಿಯುವ ಹೊಳೆಯೆಂದರೆ, ಸಿನಿಮಾ ಅಥವಾ ಅಂತರ್ಜಾಲದಲ್ಲಿ ಮಾತ್ರ ನೋಡಲು ಸಾಧ್ಯ. ಎಲ್ಲಾ ಹೊಳೆಗಳೂ ಕೆರೆಗಳೂ ಈಗ ಸರ್ಕಾರದ ಆವಾಸ ಯೋಜನೆಯಡಿ ನಿವೇಶನಗಳಾಗಿವೆ) ಸ್ನಾನ ಮಾಡಿ ಮನೆಗೆ ಬಂದು ದೇವರ ಪೂಜೆ ಮಾಡಲು ಅಣಿಯಾಗುತ್ತಿದ್ದರು. ಆ ಸಮಯದಲ್ಲಿ ಎಲ್ಲೋ ಹೊರಗೆ ಹೋಗಿದ್ದ ನನ್ನ ತಂದೆ ಮನೆಯ ಒಳಕ್ಕೆ ಬಂದರು. ದೇವರ ಪೂಜೆಗೆ ಅಣಿಯಾಗುತ್ತಿದ್ದ ಆ ಇನ್ಸ್‌ಪೆಕ್ಟರ್‌ ಧಿಡೀರಂದು ತನ್ನ ಮುಂದೆ ಹಾದು ಮನೆ ಒಳಕ್ಕೆ ಹೋದ ಈ ಹುಡುಗ ಯಾರು ಎಂದು ತಿಳಿಯುವ ಕುತೂಹಲದಿಂದ, ನನ್ನ ತಾತನನ್ನು “ಈ ಹುಡುಗ ಯಾರು?” ಎಂದು ಕೇಳಿದರು.

ಅದಕ್ಕೆ ನನ್ನ ತಾತ, “ಇವನಾ, ಇವನು ನನ್ನ ಎರಡನೆ ಮಗ” ಎಂದರು. ಅದಕ್ಕೆ ಆ  ಇನ್ಸ್‌ಪೆಕ್ಟರು,

“ಏನು ಅಯ್ಯಂಗಾರರೇ, ಇವನು ಏನು ಓದಿದ್ದಾನೆ? ಈಗೇನು ಮಾಡುತ್ತಿದ್ದಾನೆ?” ಎಂದು ಪ್ರಶ್ನಿಸಿದರು. ಅದಕ್ಕೆ ನನ್ನ ತಾತ “ಇವನಾ, ಮೆಟ್ರುಕ್ಯುಲೇಷನ್ ಓದಿದ್ದಾನೆ, ಕೆಲಸವಿಲ್ಲ, ಮಾಸ್ತರ ಕೆಲಸ ಸಿಕ್ಕಿದರೆ ಪರವಾಗಿಲ್ಲ, ನೋಡೋಣ ದೈವೇಚ್ಛೆ” ಎಂದರು.

ಇನ್ಸ್‌ಪೆಕ್ಟರ್‌ “ಅಯ್ಯಂಗಾರರೇ, ನನ್ನ ಡಿವಿಜನ್‍ನಲ್ಲಿ ವೇಕೆನ್ಸಿ ಇಲ್ಲವಲ್ಲಾ, ಇದ್ದಿದ್ದರೆ ಇವನನ್ನು ಈಗಲೇ ಮಾಸ್ತರಾಗಿ ನೇಮಿಸಿಬಿಡುತ್ತಿದ್ದೆ” ಅಂದರು. 

ಇದನ್ನು ಕೇಳಿದ ನನ್ನ ತಾತ ಏನೆಂದರು ಗೊತ್ತೆ?

“ಅದಕ್ಕೇನಂತೆ, ಹೇಗಿದ್ದರೂ ನಾನು ನಿಮ್ಮ ಡಿವಿಜನ್‍ಗಳಲ್ಲಿ ಮಾಸ್ತರನಾಗಿದ್ದೇನೆ. ನನ್ನ ಕೆಲಸಕ್ಕೆ ಈಗಲೇ ರಾಜೀನಾಮೆ ಕೊಟ್ಟು ಬಿಡುತ್ತೇನೆ. ಅದನ್ನು ನೀವು ಸ್ವೀಕರಿಸಿದ ಕ್ಷಣದಲ್ಲೇ ವೇಕೆನ್ಸಿ ಬಂದುಬಿಡುತ್ತದೆ. ತಕ್ಷಣ ನೀವು ನನ್ನ ಮಗನನ್ನು ನೇಮಿಸಿಕೊಳ್ಳಬಹುದು” ಅಂದರಂತೆ.

ಇದರಿಂದ ಆಶ್ಚರ್ಯಚಕಿತರಾದ ಇನ್ಸ್‌ಪೆಕ್ಟರ್‌, “ಓಹೋ ಧಾರಾಳವಾಗಿ, ನಿಮಗೆ ಅಭ್ಯಂತರ ಇಲ್ಲದಿದ್ದರೆ ನನಗೆ ಯಾವ ಅಭ್ಯಂತರವೂ ಇಲ್ಲ” ಅಂದರು.

ತಕ್ಷಣವೇ ನಮ್ಮ ತಾತ ಒಂದು ಕಾಗದ ತರಿಸಿ ಅಲ್ಲಿಯೇ ತಮ್ಮ ಕೆಲಸಕ್ಕೆ ರಾಜೀನಾಮೆ ಬರೆದು ಕೊಟ್ಟರು. ಅದನ್ನೂ ಅಂಗೀಕರಿಸಿದ ಇನ್ಸ್‌ಪೆಕ್ಟರ್‌, ನನ್ನ ತಂದೆಯವರನ್ನು ಕರೆಸಿ “ನೋಡಪ್ಪಾ ನಿನ್ನ ತಂದೆಯವರ ರಾಜೀನಾಮೆ ಅಂಗೀಕರಿಸಿದ್ದೇನೆ. ನಿನ್ನನ್ನು ಹತ್ತಿರದಲ್ಲಿರುವ ಗುಮಟಾಪುರದ ಶಾಲೆಯ ಮಾಸ್ತರನ್ನಾಗಿ ನೇಮಿಸಿದ್ದೇನೆ. ನಾಳೆಯಿಂದಲೇ ಕೆಲಸಕ್ಕೆ ಬರುವುದು” ಎಂದು ನಿರ್ದೇಶಿಸಿದರು. ಇದನ್ನು ಓದಿದವರಿಗೆ ಈಗಿನ ಸಂದರ್ಭದಲ್ಲಿ ಇದು ಕಪೋಲ ಕಲ್ಪಿತ ಎಂದು ತೋರುತ್ತದೆ. ಆದರೆ ಆಗಿನ ಸಂದರ್ಭದಲ್ಲಿ ಇದು ಸಾಧ್ಯವಾಗಿತ್ತು. ಈಗಿನಂತೆ ಅಂತರ್ಜಾಲದ ಮೂಲಕ, ಅಂಚೆಯ ಮೂಲಕ, ಭಾವಚಿತ್ರ ಸಹಿತ, ಅಭ್ಯರ್ಥಿಯು ಅರ್ಜಿ ಸಲ್ಲಿಸಿ ಅದಾದ ಒಂದು ತಿಂಗಳಲ್ಲಿ ಸುಮಾರು ೫೦೦ ರಿಂದ ೧೦೦೦ ಅಭ್ಯರ್ಥಿಗಳಲ್ಲಿ ಒಬ್ಬನಾಗಿ, ರಾಜಕೀಯ ನಾಯಕರ ವಶೀಲಿ, ಲಂಚ ಎಷ್ಟು ಮೊತ್ತ, ಯಾವ ಜಾತಿ ಹೀಗೆ ನಾನಾತರಹದ ಹುನ್ನಾರಗಳನ್ನು ಮಾಡಬೇಕಾಗಿರಲಿಲ್ಲ.

ಆದರೆ ಎಲ್ಲಾ ಹುದ್ದೆಗಳೂ ಇದೇ ರೀತಿ ಮೇಲ್ವರ್ಗದವರ ಪಾಲಾಗುತ್ತಿತ್ತು. ಕೆಳವರ್ಗದವರು ಇದರಿಂದ ವಂಚಿತರಾಗುತ್ತಿದ್ದರು. ಈ ಕಾರಣದಿಂದಲೇ ಸಾಮಾಜಿಕ ಅಸಮಾನತೆ ಎಲ್ಲೆಲ್ಲೂ ತಾಂಡವವಾಡುತ್ತಿತ್ತು ಎಂದು ವೈಚಾರಿಕತೆಯ ರೂವಾರಿಗಳು ಕೂಗೆಬ್ಬಿಸಲು ಈ ಘಟನೆ ಕಾರಣವಾದರೂ ಆಶ್ಚರ್ಯಪಡಬೇಕಿಲ್ಲ. ಅದೇನೇ ಇದ್ದರೂ ಅಂದು ನಡೆದ ಒಂದು ಘಟನೆಯ ನೇರ ಸರಳ ನಿರೂಪಣೆಯನ್ನು ಇಲ್ಲಿ ಕೊಟ್ಟಿದೆ. ಮಿಕ್ಕಿದ್ದು ಪ್ರಾಜ್ಞರ ಅರಿವಿಗೆ ತಿಳಿವಿಗೆ ಬಿಟ್ಟಿದ್ದು.

Rating
No votes yet

Comments