ಗೆಳೆಯನ ಫ್ರೆಂಡ್ಸ್

ಗೆಳೆಯನ ಫ್ರೆಂಡ್ಸ್

ಒಂದು ದಿನ ಅನಿರೀಕ್ಷಿತವಾಗಿ ಈತನನ್ನು ಭೇಟಿಯಾಗಬೇಕಾಯಿತು. ಭೇಟಿಯಾದ ಅಂದಿನಿಂದ ಇಂದಿನವರೆಗೂ ನಾವಿಬ್ಬರು ಮಾತನಾಡದ ದಿನಗಳಿಲ್ಲ. ಈತ ಕೇರಳದವ, ನಾನು ಅಪ್ಪಟ ಕನ್ನಡಿಗ ಇಬ್ಬರಿಗೂ ಮಲೆಯಾಳಂ ಭಾಷೆ ಚೆನ್ನಾಗಿ ಗೊತ್ತು.
ನಮ್ಮ ಜೀವನದಲ್ಲಿ ಅದೆಷ್ಟೋ ಜನರು ಬಂದು ಹೋಗುತ್ತಾರೆ. ಕೆಲವರು ಬಹುಬೇಗ ಹತ್ತಿರವಾದರೆ ಕೆಲವರು ಅಷ್ಟೇಬೇಗ ದೂರ ಸರಿದಿರುತ್ತಾರೆ. ಇನ್ನು ಕೆಲವರು ಹತ್ತಿರದಲ್ಲಿದ್ದರೂ ದೂರದವರಾಗಿರುತ್ತಾರೆ. ನಾವು ಎಲ್ಲರನ್ನೂ ಎಲ್ಲ ಸಮಯದಲ್ಲೂ ನೆನಪಿಸಿಕೊಳ್ಳುವುದಿಲ್ಲ. ಕೆಲವು ಸಂದರ್ಭಗಳು ಕೆಲವರನ್ನು ನೆನಪಿಗೆ ತರುತ್ತದೆ. ನಾನು ಇಲ್ಲಿಗೆ (ದುಬೈಗೆ) ಬರುವಾಗ ನನ್ನ ಮಿತ್ರರು, ನೆಂಟರು ನನ್ನಲ್ಲಿ ಹೇಳುತ್ತಿದ್ದರು "ದುಬೈಗೆ ಹೋದ ಮೇಲೆ ನಮ್ಮ ನೆನಪು ಎಲ್ಲಿ ಇರುತ್ತೆ ನಿನಗೆ?" ಹೌದು! ಇಲ್ಲಿಯ ಜೀವನ ಒಂದು ರೀತಿ ಹಾಗೆ. (ಆದರೆ ಎಲ್ಲರೂ ಸಂಪರ್ಕ ಇಟ್ಟು ಕೊಳ್ಳುವುದಿಲ್ಲವೆಂದಲ್ಲ) ಬಿಡುವಿಲ್ಲದ ಕೆಲಸ, ಬಿಡುವಾದರೆ ಕೂಡಲೆ ರೂಮಿಗೆ ಹೋಗುವುದು, ಮಲಗುವುದು, ಅದೆಷ್ಟೋ ನನ್ನ ಗೆಳೆಯರು ರಜಾ ದಿನದಲ್ಲಿ ಪೂರ್ತಿ ದಿನ ನಿದ್ರೆ ಮಾಡಿ ಕಾಲ ಕಳೆದಿದ್ದಾರೆ.
ಅಂದ ಹಾಗೆ ಈತನಲ್ಲಿ ನಾನು ಕಂಡ ಒಂದು ವಿಶೇಷತೆ ಎಂದರೆ, ಈತ ನನ್ನನ್ನು ಪರಿಚಯಿಸುವ ರೀತಿ ಅದ್ಭುತವಾಗಿತ್ತು. ತನ್ನ ಮಿತ್ರರನ್ನು ನನಗೆ ಪರಿಚಯಿಸುವಾಗ ಇವರು ನನ್ನ ಫ್ರೆಂಡ್ ಅಂತಾರೆ ಆದರೆ ನನ್ನನ್ನು ಅವರಿಗೆ ಪರಿಚಯಿಸುವಾಗ ಇವರು ನನ್ನ ಗೆಳೆಯ ಅಂಥ ಪರಿಚಯಿಸುತ್ತಾರೆ. ಒಂದು ದಿನ ಅವರಲ್ಲಿ ನಾನು ಕೇಳ್ದೆ. ಅಲ್ಲ! ನೀನು ನನ್ನ ಗೆಳೆಯ, ಅವನು ನಿನ್ನ ಫ್ರೆಂಡ್ ಅದೇಗೆ? ಅದಕ್ಕೆ ಈತ ನೀಡಿದ ಉತ್ತರ ನನಗೆ ಸುಮಾರು ಫ್ರೆಂಡ್ಸ್ ಇದ್ದಾರೆ, ಆದರೆ ಗೆಳೆಯರು ಮಾತ್ರ ಬೆರಳೆಣಿಕೆಯಷ್ಟು! ಅಂದರೆ ನನ್ನನ್ನು ಅರ್ಥ ಮಾಡಿಕೊಂಡು, ನಾನು ಅರ್ಥಮಾಡಿಕೊಂಡಂಥಹ ಗೆಳೆಯರು. ಈ ಕಡಲಾಚೆಯ ಊರಿನಲ್ಲಿ ನನಗೊಬ್ಬ ಫ್ರೆಂಡ್, ಅಲ್ಲ! ಗೆಳೆಯ ಸಿಕ್ಕಿದ್ದಾನೆ.

ನಮ್ಮ ಗೆಳೆತನ ಎಂದೆಂದಿಗೂ ಶಾಶ್ವತವಾಗಿರಲಿ.

ಬಶೀರ್ ಕೊಡಗು

Rating
No votes yet

Comments