ಚಾರ್ವಾಕ ದರ್ಶನ-ಒಂದು ಚಿಂತನೆ

ಚಾರ್ವಾಕ ದರ್ಶನ-ಒಂದು ಚಿಂತನೆ

ನಾನಾರೆಂಬುದಕ್ಕೆ ಉತ್ತರವನ್ನು ಹುಡುಕಲೆತ್ನಿಸಿದವರು ಅನೇಕ. ಭೌತವಾದದ ಹಿನ್ನಲೆಯಲ್ಲಿ ಚಾರ್ವಾಕರ ದರ್ಶನದ ಸ್ವರೂಪವನ್ನು ನೋಡುವುದಾದರೆ, ದೇವರು, ಆತ್ಮದ ಅಸ್ತಿತ್ವ ನಿರಾಕರಿಸಿದ ಇವರು ಭೂಮಿ, ಜಲ, ಅಗ್ನಿ,ವಾಯು ಎಂಬ ನಾಲ್ಕು ಭೌತಿಕ ಅಂಶಗಳೇ ಜಗತ್ತಿನ ಮೂಲದ್ರವ್ಯವೆಂದರು. ಇವುಗಳ ಸಂಯೋಗದಿಂದಲೇ ಜ್ಞಾನವೆಂಬ ಚೈತನ್ಯ ಶಕ್ತಿ, ಮಿಕ್ಕ ಆಧ್ಯಾತ್ಮಿಕ ವಿದ್ಯಮಾನಗಳು ಮೊದಲಾಗುತ್ತವೆ. ಸಚೇತನವಾದ ಆತ್ಮವೆಂಬುದು, ನಿರ್ದಿಷ್ಟ ಸ್ಥಿತಿ, ಸನ್ನಿವೇಶದಲ್ಲಿ ಅಚೇತನ ಅಂಶಗಳ ತಾತ್ಕಾಲಿಕ ಸಂಯೋಜನೆಯಾಗಿ ಮೂಡಿಬರುತ್ತದೆ ಎಂದರು. ಈ ಪ್ರಮೇಯವನ್ನು ಪುಷ್ಟೀಕರಿಸುತ್ತಾ, ಚಾರ್ವಾಕಪಂಥದ ಭೀಷಣನೆಂಬುವನು ಹೀಗೆನ್ನುತ್ತಾನೆ...ಒಂದಿಷ್ಟು ಅಕ್ಕಿಯನ್ನೂ, ವಿಶೇಷವಾಗಿ ತಯಾರಿಸಲಾದ ಬೆಲ್ಲವನ್ನೂ ತಿನ್ನುವುದರಿಂದ ವ್ಯಕ್ತಿ ಮದೋನ್ಮತ್ತನಾಗಲಾರ. ಆದರೆ, ಅಕ್ಕಿ ಮತ್ತು ಬೆಲ್ಲದ ಮಿಶ್ರಣವನ್ನು ಬೆರೆಸಿ ತಯಾರಿಸಲಾದ ಮದ್ಯವನ್ನು ಕುಡಿದರೆ, ವ್ಯಕ್ತಿ ಖಂಡಿತವಾಗಿ ಮದೋನ್ಮತ್ತ ಆಗುತ್ತಾನೆ. ಹೀಗೆಯೇ ಚೇತನವೆಂಬುದು ಭೌತಿಕ ಅಂಶಗಳ ಸಂಯೋಜನೆಯ ಒಂದು ನಿರ್ದಿಷ್ಟ ಪ್ರಕ್ರಿಯೆಯ ಫಲಿತಾಂಶವಲ್ಲದೆ ಬೇರಲ್ಲವೆಂಬುದು ಇವರ ದೃಷ್ಟಿ.
ಆರೋಗ್ಯದಿಂದಿದ್ದು, ಐಶ್ವರ್ಯವಂತರಾಗಿ ಬಾಳುವುದೇ ಸ್ವರ್ಗಾನುಭವ. ರೋಗ, ದಾರಿದ್ರ್ಯ ಮೊದಲಾದ ಉಪದ್ರವಗಳೇ ನರಕ. ವ್ರತ, ಉಪವಾಸಗಳೇ ಮೊದಲಾದ ನಿಯಮಗಳನ್ನು ಪಾಲಿಸುವವರು ಮೂರ್ಖರು. ಕೃಷಿ, ವಾಣಿಜ್ಯ, ದಂಡನೀತ್ಯಾದಿಗಳ ಶಿಕ್ಷೆಯಿಂದ ಅರ್ಥಕಾಮಗಳನ್ನು ಸಂಪಾದಿಸಿ ತಾನು ಸುಖವಾಗಿದ್ದು, ಇತರರನ್ನೂ ಸುಖವಾಗಿರಿಸುವುದೇ ಮನುಷ್ಯಜನ್ಮದ ಮುಖ್ಯಪ್ರಯೋಜನ. ಈ ರೀತಿಯಾದ ವಿಚಾರವನ್ನು ಚಾರ್ವಾಕರು ನಮ್ಮಮುಂದಿಡುತ್ತಾರೆ.
ಮಹಾಭಾರತದ ಕಥೆಯೊಂದು ಇಂತಿದೆ....
ಪಟ್ಟಾಭಿಷಿಕ್ತನಾಗಿ ಧರ್ಮರಾಯ ಒಮ್ಮೆ ಸಭೆಯಲ್ಲಿರುವಾಗ ದುರ್ಯೋಧನನ ಮಿತ್ರ ಚಾರ್ವಾಕನೆಂಬ ರಾಕ್ಷಸನು ಧರ್ಮರಾಜನನ್ನು ತೆಗಳುತ್ತಾ,....ಯುದ್ಧದಲ್ಲಿ ಸತ್ತವರಿಗೆ ಸ್ವರ್ಗ ಬರುವುದೆಂದು ಪ್ರೋತ್ಸಾಹಮಾಡಿ ಪ್ರಪಂಚವನ್ನೇ ವಿನಾಶಮಾಡಿದೆ...ಎಂದು ಬಹುವಿಧವಾಗಿ ದೂಷಣೆಮಾಡಿದನು. ಅನಂತರ ಅಲ್ಲಿದ್ದ ಬ್ರಾಹ್ಮಣರು ಶಾಪದಿಂದ ಈ ರಾಕ್ಷಸನನ್ನು ಕೊಂದುಬಿಟ್ಟರು. ಈ ಕಥೆ ಏನೆಲ್ಲಾ ನೀತಿಯನ್ನು ಧ್ವನಿಸಿದರೂ ಮುಖ್ಯವಾಗಿ ತಾವು ಸುಖವಾಗಿದ್ದು, ಪ್ರಪಂಚವನ್ನೂ ಸುಖವಾಗಿಟ್ಟಿರಬೇಕೆಂಬ ಪ್ರಪಂಚಾನುಗ್ರಹ ದೃಷ್ಟಿಯನ್ನು ನಾವಿಲ್ಲಿ ಕಾಣಬಹುದು.
ಇಂತಹ ಚಾರ್ವಾಕಮತದ ದರ್ಶನ ಗ್ರಂಥಗಳನ್ನು ಅದರ ವಿರೋಧಿಗಳು ಸುಟ್ಟುಹಾಕಿದ ಪರಿಣಾಮ ಚಾರ್ವಾಕ ಸಾಹಿತ್ಯ ಇಂದು ನಮಗೆ ಅಲಭ್ಯವಾಗಿದೆ. ಪ್ರಮುಖ ಮಾರ್ಕ್ಸ್ವಾದಿ ವಿದ್ವಾಂಸ ದೇವೀಪ್ರಸಾದ್ ಚಟ್ಟೋಪಾಧ್ಯಾಯರು ಈ ಬಗೆಗೆ ಹೀಗೆ ನುಡಿದಿದ್ದಾರೆ.....ನಷ್ಟವಾಗಿ ಬಿಟ್ಟಿರುವ ಇಂಥ ಗ್ರಂಥಗಳ ಬಗೆಗಿನ ಉಲ್ಲೇಖಗಳು ಮಾತ್ರವಲ್ಲದೆ, ನಮಗೆ ಇಂದು ಮೂರ್ತರೂಪದಲ್ಲಿ ಲಭ್ಯವಾಗಿರುವುದೆಂದರೆ ಲೋಕಾಯತ ಸಿದ್ಧಾಂತವನ್ನು ಅವಹೇಳನಮಾಡಬಯಸಿದ ಹಾಗೂ ಖಂಡಿಸಬಯಸಿದ ವ್ಯಕ್ತಿಗಳ ಬರಹಗಳಲ್ಲಿ ಉಳಿದುಬಂದಿರುವ ಲೋಕಾಯತ ದೃಷ್ಟಿಕೋನದ ಬಗೆಗಿನ ಅಥವಾ ಲೋಕಾಯತರೆಂದು ಕರೆಯಲಾಗಿರುವ ಆ ಸಿದ್ಧಾಂತದ ಅನುಯಾಯಿಗಳ ಬಗೆಗಿನ ಕೆಲವೊಂದು ಬಿಡಿಬಿಡಿಯಾದ ಉಲ್ಲೇಖಗಳು. ತನ್ನ ವಿರೋಧಿಗಳ ಬರಹಗಳಿಂದಲೇ ತಿಳಿದುಬರುವ ದೌರ್ಭಾಗ್ಯ ಈ ತತ್ವಶಾಸ್ತ್ರದ್ದಾಗಿತ್ತು.....
(D.Chattopadhyaya : Lokayata - A study in Ancient Indian Materialism. Peoples Publishing House, NewDelhi,1959, P.71). ಹಾಗಾಗಿ ಚಾರ್ವಾಕದರ್ಶನದ ಸಂಪೂರ್ಣ ದೃಷ್ಟಿಯ ಅಲಭ್ಯತೆಯಿಂದ ನಮಗೆ ಹಲವು ವಿಷಯಗಳು ಸ್ಪಷ್ಟವಾಗದೇ ಇರಬಹುದು.
ಸ್ವಭಾವವಾದಿಗಳಾದ ಇವರು ಕಾರ್ಯಕಾರಣ ಸಂಬಂಧವನ್ನು ಒಪ್ಪುವುದಿಲ್ಲ. (ಬೀಜ ಮೊಳಕೆಯೊಡೆಯಲು ಯಾವುದೇ ನಿಮಿತ್ತಕಾರಣವು ಬೇಕಿಲ್ಲವೆಂಬುದು ಸ್ವಭಾವವಾದಕ್ಕೊಂದು ಉದಾಹರಣೆ). ಹಾಗಾಗಿ ಇವರ ಪ್ರಕಾರ ಸುಖದುಃಖಾದಿಗಳು ವಸ್ತುಸ್ವಭಾವದಿಂದ ಉಂಟಾಗುವುದೇ ವಿನಾ ಪುರುಷಪ್ರಯತ್ನದಿಂದಲ್ಲ. ಹೀಗಿರುವಾಗ ಪರರಲ್ಲಿ ದ್ವೇಷವೆಂಬುದೇ ಇರುವುದಿಲ್ಲ. ಪರರಲ್ಲಿ ರಾಗದ್ವೇಷಗಳನ್ನು ಅಡಗಿಸುವ ಈ ಚಾರ್ವಾಕ ದರ್ಶನ, ಅನೇಕ ದೂಷಣೆಗಳ ಹೊರತಾಗಿಯೂ ಆಪ್ತವಾಗುತ್ತದೆ.
ಚಾರ್ವಾಕ ದರ್ಶನದ ಹಿನ್ನಡೆ ಅದರ ಅಭಾವವಾದದಲ್ಲಿದೆ. ಇಂದ್ರಿಯವ್ಯಾಪ್ತಿಗೆ ಬರದ ಎಲ್ಲವನ್ನು ಇವರು ನಿರಾಕರಿಸಿದರು. ನಾಸ್ತಿಕತೆ ಎಂದರೆ ನಿರಾಕರಣೆ. ಇದು ಆತಂಕಕಾರಿಯಾದುದುದೆನಿಸುತ್ತದೆ. ಮಹಾಭಾರತದ ಒಂದು ಶ್ಲೋಕದ ತಾತ್ಪರ್ಯ ಹೀಗೆ ಹೇಳುತ್ತದೆ...ಇಲ್ಲವೆನ್ನುವುದು ನಿಜವಾಗಿಯೂ ಇಲ್ಲವಾದಲ್ಲಿ ಯಾವುದೇ ಆತಂಕವಿಲ್ಲ. ಆದರೆ ಇಲ್ಲವೆನ್ನುವುದು ಒಂದುವೇಳೆ ಅಸ್ತಿತ್ವದಲ್ಲಿದ್ದರೆ ಅದಕ್ಕಿಂತ ಆತಂಕಕಾರಿಯಾದುದು ಬೇರೊಂದಿಲ್ಲ. ಹಾಗಾಗಿ ಈ ಅಭಾವವಾದದಿಂದ ಚಾರ್ವಾಕ ಸಿದ್ಧಾಂತವು ಹಿನ್ನಡೆಯನ್ನನುಭವಿಸುತ್ತದೆ.

Rating
Average: 5 (1 vote)