ಚಾರ್ ಧಾಮ್ ಪ್ರವಾಸ- ಯಮುನೋತ್ರಿ ೧

ಚಾರ್ ಧಾಮ್ ಪ್ರವಾಸ- ಯಮುನೋತ್ರಿ ೧

http://www.sampada.net/blog/shamala/24/05/2009/20635

ನಾವು ಧರಾಸು, ಬಾರ್ ಕೋಟ್ ಮೂಲಕ ಸಯಾನ್ ಚೆಟ್ಟಿಯಲ್ಲಿದ್ದೆವು. ಸಯಾನ್ ಚೆಟ್ಟಿ ೬,೬೦೯ ಅಡಿ ಎತ್ತರದಲ್ಲಿದೆ ಮತ್ತು ಬಾರ್ ಕೋಟ್ ನಿಂದ ೨೮ ಕಿ.ಮೀ, ಋಷಿಕೇಶದಿಂದ ೧೯೯ ಕಿ.ಮೀ ದೂರದಲ್ಲಿದೆ. ಇದು ಮರಗಳ ಮಧ್ಯದಲ್ಲಿರುವ ಯಮುನೆಯ ದಡದಲ್ಲಿರುವ ಒಂದು ಪುಟ್ಟ ಗ್ರಾಮ. ಇದನ್ನು ಎಸ್ ಟಿ ಡಿ ಚೆಟ್ಟಿಯೆಂದೂ ಕರೆಯುತ್ತಾರೆ, ಏಕೆಂದರೆ ಇಲ್ಲಿಂದ ಮುಂದೆ ಯಾವುದೇ ದೂರವಾಣಿಯ ಸಂಪರ್ಕವೂ ಸಿಗುವುದಿಲ್ಲ. ಯಮುನೋತ್ರಿಯಿಂದ, ದೂರವಾಣಿಗಾಗಿ ಜನರು ಇಲ್ಲಿಗೆ ಬರುವುದರಿಂದ ಕೂಡ ಈ ಹೆಸರು ಬಂದಿದೆ. ಇಲ್ಲಿಯ ತಂಗುವ ವ್ಯವಸ್ಥೆ, ಇಲ್ಲಿಂದ ಮುಂದಿರುವ ಹನುಮಾನ್ ಚೆಟ್ಟಿ ಮತ್ತು ಜಾನಕಿ ಚೆಟ್ಟಿಗಿಂತ ಸೌಲಭ್ಯವುಳ್ಳದ್ದಾಗಿದೆ. ನಾವು ಬೆಳಿಗ್ಗೆ ಬೇಗ ಎದ್ದು, ಎದುರುಗಡೆಯ ಚಾಯ್ ಅಂಗಡಿಯಲ್ಲಿ ಆಲೂ ಪರಾಠಗಳನ್ನು ತಿಂದು ಯಮುನೋತ್ರಿಯ ಕಡೆ ಹೊರಟೆವು. ನಮ್ಮ ಇನೋವಾದ ಸಾರಥಿ ನಮ್ಮನ್ನು ಜಾನಕಿ ಚೆಟ್ಟಿಯವರೆಗೂ ತಲುಪಿಸುವುದಾಗಿ ಹೇಳಿದಾಗ, ನಮಗೆ ತುಂಬಾ ಸಂತೋಷವಾಗಿತ್ತು. ಏಕೆಂದರೆ ಈ ಮೊದಲು ಸ್ಯಾನ್ ಚೆಟ್ಟಿಯಿಂದ ಹನುಮಾನ್ ಚೆಟ್ಟಿಯವರೆಗೆ ಮಾತ್ರ ನಮ್ಮ ಗಾಡಿಗಳನ್ನು ಬಿಡುತ್ತಿದ್ದರು. ಅಲ್ಲಿಂದ ಮುಂದೆ ಅಲ್ಲಿಯ ಯೂನಿಯನ್ನವರು ಓಡಿಸುತ್ತಿದ್ದ ಜೀಪುಗಳಲ್ಲೇ ಹೋಗಬೇಕಾಗಿತ್ತು. ನಾವು ನಮ್ಮ ಗಾಡಿಯನ್ನು ಹನುಮಾನ್ ಚೆಟ್ಟಿಯಲ್ಲೇ ನಿಲ್ಲಿಸಬೇಕಾಗಿತ್ತು. ಆದರೆ ಈಗ ಸರ್ಕಾರ ರಸ್ತೆ ಮಾಡುತ್ತಿರುವುದರಿಂದ, ನಾವು ನಮ್ಮ ಗಾಡಿಯಲ್ಲೇ ಜಾನಕಿ ಚೆಟ್ಟಿಯವರೆಗೂ ಹೋಗಬಹುದು.

ನಾವು ಸ್ಯಾನ್ ಚೆಟ್ಟಿಯಿಂದ ಯಮುನೋತ್ರಿಯ ಕಡೆ ಹೊರಟರೆ ನಮ್ಮ ಜೊತೆ ಉದ್ದಕ್ಕೂ ಯಮುನೆ ಹರಿಯುತ್ತಾಳೆ. ಅವಳ ಪಾತ್ರದ ಗಾತ್ರ ನೋಡಿದರೆ ಭಯವಾಗತ್ತೆ, ಆದರೆ ಈಗ ಯಮುನೆಯ ಒಡಲು ಬರೀ ಖಾಲಿ. ಬಿಳಿಯ ಕಲ್ಲುಗಳಿಂದ ತುಂಬಿರುವ ಒಡಲಿನಲ್ಲಿ, ಅಲ್ಲಲ್ಲಿ ಸಣ್ಣಗೆ ಜುಳು ಜುಳು ಎಂದು ಹರಿಯುತ್ತಾಳೆ. ನನಗೆ ಅದು ಒಡಲು ಬರಿದಾದ ಯಮುನೆಯ ಕಣ್ಣೀರಿನಂತೆ ಕಂಡಿತು. ಆ ಪುಟ್ಟ ಝ್ಹರಿಯಂತೆ ಇದ್ದರೂ, ಯಮುನೆಯ ನೀರು ಬರೀ ಶುಭ್ರ ಶುಭ್ರ. ಕೆಲವು ಕಡೆ ಚಿಕ್ಕ ಚಿಕ್ಕ ಧಾರೆಯಾಗಿ ಬೀಳುವ ಕಡೆ ನೊರೆನೊರೆಯಾಗಿ, ಒಳ್ಳೆಯ ಹಾಲು ಸುರಿದಂತಿರತ್ತೆ. ಸುತ್ತಲೂ ಕಂದು ಬಣ್ಣದ ಬೆಟ್ಟಗಳಲ್ಲಿ ಹಸಿರು ಹಸಿರು ಮರಗಳ ಗುಂಪು, ಕೆಳಗೆ ಯಮುನೆಯ ಒಡಲ ಬಿಳಿ ಕಲ್ಲುಗಳ ಜೊತೆ ಹರಿಯುವ ಶುಭ್ರ ನೊರೆಯ ನೀರು ಒಂಥರಾ ನಮ್ಮನ್ನು ನಿಜವಾಗಲೂ ಯಾವುದೋ ಬೇರೆಯದೇ ಲೋಕದಲ್ಲಿರುವಂತೆ ಮಾಡತ್ತೆ. ಹಾಗೇ ಪ್ರಕೃತಿ ಮಾತೆಯನ್ನು ಆರಾಧಿಸುತ್ತಾ ಮುಂದೆ ಸಾಗುವಾಗ ಒಂದೆರಡು ಚಿಕ್ಕ ಚಿಕ್ಕ ಗುಹೆಗಳೇನೋ ಎನ್ನುವಂತೆ ಕಾಣುವ ಬಂಡೆಗಳು ನಮ್ಮನ್ನು ಅಚ್ಚರಿಗೊಳಿಸತ್ತೆ. ಚಿಕ್ಕ ಚಿಕ್ಕ ಸೇತುವೆಗಳು ಎಲ್ಲವನ್ನೂ ನಾವು ಬೆರಗುಗಣ್ಣುಗಳಿಂದ ದಿಟ್ಟಿಸುತ್ತಿರುವಾಗ, ನಮಗೆ ಹಠಾತ್ತಾಗಿ, ಕಂದು ಬೆಟ್ಟಗಳ ನಡುವೆ ಹಿಮಾಚ್ಛಾದಿತ ಶಿಖರಗಳ ತುದಿಗಳು ಕಾಣಸಿಗತ್ತೆ. ಹಿಂದುಗಡೆ ಸ್ವಚ್ಛವಾದ ನೀಲಿ ಬಿಳಿಯ ಆಕಾಶದ ಜೊತೆ, ಈ ಹಿಮಾಚ್ಛಾದಿತ ಶಿಖರಗಳು, ಕ್ಯಾಮೆರಾ ಕನ್ನಡಿಯಲ್ಲಿ ಕಾಣುವುದೇ ಇಲ್ಲ. ಈ ಒಂದು ದೃಶ್ಯ ಮಾತ್ರ ಬರೀ ಕಣ್ಣಿಗೇ ಆನಂದ ಅಷ್ಟೆ. ನಮ್ಮ ಅದೃಷ್ಟವೋ ಎಂಬಂತೆ ಈ ದಿನ ಸೂರ್ಯದೇವ ಬೆಳಗಿನ ೫.೧೫ಕ್ಕೇ ದರ್ಶನ ಕೊಟ್ಟಿದ್ದ. ನಿನ್ನೆ ರಾತ್ರಿ ಸುರಿದ ಮಳೆಗೆ, ನಾವು ತುಂಬಾ ಹೆದರಿದ್ದೆವು. ಆದರೆ ಬೆಳಿಗ್ಗೆ ಎದ್ದಾಗ ಯಾವ ಕಪ್ಪು ಮೋಡದ ಛಾಯೆಯೂ ಇಲ್ಲದೆ, ಆಕಾಶ ಶುಭ್ರವಾಗಿತ್ತು.

ಸ್ಯಾನ್ ಚೆಟ್ಟಿ ಬಿಟ್ಟ ನಂತರ, ನಾವು ೭ ಕಿ.ಮೀ. ದೂರದ ಹನುಮಾನ್ ಚೆಟ್ಟಿ ತಲುಪುತ್ತೇವೆ. ಇದು ಋಷಿಕೇಶದಿಂದ ೨೦೬ ಕಿ.ಮೀ ದೂರದಲ್ಲಿ ೭,೮೭೨ ಅಡಿ ಎತ್ತರದಲ್ಲಿದೆ. ಹಿಂದಿನ ಕಾಲದಲ್ಲಿ, ಈ ಮುಖ್ಯವಾದ ಜಾಗಗಳಿಗೆ ಸಂಪರ್ಕ ಕಲ್ಪಿಸುವ ಚಿಕ್ಕ ಚಿಕ್ಕ ಗ್ರಾಮಗಳಿಗೆ "ಚೆಟ್ಟಿ" ಎಂದು ಕರೆಯುತ್ತಿದ್ದರು. ಹನುಮಾನ್ ಚೆಟ್ಟಿ, ತನ್ನ ಅದೇ ಹಳೆಯ ಹೆಸರನ್ನೇ ಇನ್ನೂ ಹೊಂದಿದೆ. ಇಲ್ಲಿ ಯಮುನೆ ಆಂಗ್ಲ ಅಕ್ಷರ ’ಯು’ ಆಕಾರದಲ್ಲಿ ಹರಿಯುತ್ತಾಳೆ ಮತ್ತು ಯಮುನೆಯ ಆರ್ಭಟ ಗಾಳಿಯಲ್ಲಿ ಬೆರೆತು ವಾತಾವರಣಕ್ಕೆ ಸಂಭ್ರಮ ತಂದಿದೆ. ಇಲ್ಲಿಂದ ಮುಂದೆ ನಾವು ೯ ಕಿ.ಮೀ ಕ್ರಮಿಸಿದನಂತರ ತಲುಪುವುದು ಜಾನಕಿ ಚೆಟ್ಟಿ. ಯಮುನೋತ್ರಿ ತಲುಪುವ ಮೊದಲು ನಾವು ಮುಟ್ಟುವ ಕಡೆಯ ಗ್ರಾಮ, ಜಾನಕಿ ಚೆಟ್ಟಿ. ಇದು ೮,೬೯೨ ಅಡಿಗಳ ಎತ್ತರದಲ್ಲಿದೆ. ಹನುಮಾನ್ ಚೆಟ್ಟಿಯಿಂದ ಕಚ್ಚಾ ಮಣ್ಣಿನ ರಸ್ತೆ, ಜಾನಕಿ ಚೆಟ್ಟಿಯನ್ನು ತಲುಪಿಸುತ್ತದೆ. ಇಲ್ಲಿಂದ ೫ ಕಿ. ಮೀನ ನಡಿಗೆ ಯಮುನೋತ್ರಿಗೆ. ಇಲ್ಲಿ ನಮಗೆ ನಮ್ಮ ಚಾರಣಕ್ಕೆ ಬೇಕಾದ ಊರುಗೋಲು, ಮಳೆಗೆ ಪ್ಲಾಸ್ಟಿಕ್ ಹೊದಿಕೆ, ಹತ್ತಲಾಗದವರಿಗೆ ಡೋಲಿ, ಕುದುರೆ, ಎಲ್ಲಾ ಸಿಕ್ಕತ್ತೆ. ಇಲ್ಲಿ ಒಂದು ಚಿಕ್ಕ ನಾರಾಯಣನ ದೇವಸ್ಥಾನ ಕೂಡ ಇದೆ.

http://www.sampada.net/blog/shamala/03/06/2009/21063
ಮುಂದುವರೆಯುವುದು

Rating
No votes yet

Comments