ಚೌರದವನ ಕಷ್ಟ ಸುಖ

ಚೌರದವನ ಕಷ್ಟ ಸುಖ

ಮೊನ್ನೆ ಚೌರ (ಕ್ಷೌರ)ಕ್ಕೆ ಹೋಗಿದ್ದೆ. ಅನೇಕ ವರ್ಷಗಳಿಂದ ಅಲ್ಲೇ ಹೋಗುತ್ತಿರುವುದರಿಂದ ಗುರುತಿದೆ.

ಚೌರದಂಗಡಿಯಲ್ಲಿ ಯಾರೂ ಗಿರಾಕಿ ಇರದೆ ಖಾಲಿ ಹೊಡೆಯುತ್ತಿತ್ತು. ಚೌರದವ ತನ್ನ ಅಸಿಸ್ಟೆಂಟ್ ,ಬಿಹಾರಿ, ಜೊತೆಗೆ ಹರಟೆ ಹೊಡೀತಾ ಕೂತಿದ್ದ.

ನಾನು ಹೋಗುತ್ತಿದ್ದಂತೆ, "ಬನ್ನಿ ಸಾರ್‍" ಎಂದು ಕರೆದು ಕುರ್ಚೀಲಿ ಕೂರಿಸಿದ.

ಬಿಹಾರಿಯೊಂದಿಗೆ ಹರಟೆ ಮುಂದುವರಿಸಿದ. “ಅಯ್ಯೋ ಏನು ಹೇಳ್ತೀಯಾ ನೀನು. ಒಂದಾನೊಂದು ಕಾಲದಲ್ಲಿ ಇಲ್ಲಿ ಹತ್ತು ಕುರ್ಚಿ ಇತ್ತು. ತಿಂಗಳಿಗೆ ನಲವತ್ತು ಸಾವಿರ ಸಂಪಾದನೆ ಆಗುತ್ತಿತ್ತು ಗೊತ್ತಾ.ಈಗ ಹತ್ತು ಸಾವಿರ ಆಗೋದೂ ಕಷ್ಟ". ನಾನು ಕುತೂಹಲದಿಂದ ಈಗೆಷ್ಟು ಕುರ್ಚಿ ಇವೆ ಎಂದು ಕಣ್ಣಲ್ಲೇ ಎಣಿಸಿದೆ. ಐದಿದ್ದವು.

“ಯಾಕೆ, ಜನಸಂಖ್ಯೆ ಇಷ್ಟೆಲ್ಲಾ ಜಾಸ್ತಿಯಾಗ್ತಾ ಇದೆ. ಮುಂಬಯೀಲಿ ಕಂಡಲ್ಲೆಲ್ಲಾ ಜನವೋಜನ. ಅಂದಮೇಲೆ ನಿಮ್ಮ ಬಿಸಿನೆಸ್ ಚೆನ್ನಾಗೇ ನಡೀಬೇಕಾಗಿತ್ತಲ್ಲ." ಅಂದೆ.

“ಸರಿ ಸಾರ್‍ , ನೋಡಿ ಒಂದೇ ರಸ್ತೆ ಇದೆ ಅಂತಿಟ್ಟುಕೊಳ್ಳಿ. ಎಲ್ಲಾ ವೆಹಿಕಲ್ಗಳೂ ಅದೇ ರಸ್ತೆ ಉಪಯೋಗಿಸಬೇಕು. ಆವಾಗ ಟ್ರಾಫಿಕ್ ಜಾಮ್ ಆಗತ್ತೆ. ಅದೇ ನಾಕು ನಾಕು ರಸ್ತೆ ಇದ್ರೆ , ವೆಹಿಕಲ್ ಎಲ್ಲಾ ಚದುರಿಹೋಗಲ್ವೇ , ಹಂಗೇ ನಮ್ಮದೂ ಸಾರ್‍. ಎಂಥೆಂಥವರೆಲ್ಲಾ ಹಜಾಮರ ಅಂಗಡಿ ತೆಗೀತಿದಾರೆ. ನಮ್ಮ ಬಿಸಿನೆಸ್ ಡೌನ್, ಸಾಕಾಗಿ ಹೋಗಿದೆ ಸಾರ್‍, ಬಿಟ್ಟು ಊರಿಗೆ ಹೋಗಿಬಿಡಣ ಅಂತಿದೀನಿ" ಅಂದ.

ಬಿಹಾರಿ ಕೇಳಿದ " ಯಾವೂರು ನಿಮ್ದು?”

" ಹೈದರಾಬಾದ್ ಕೇಳಿದೀಯ, ಅದೇ ನಮ್ಮೂರು. ಕಮ್ಮಿ ಅಂತ ಅಂದುಕೋಬೇಡ. ಅಲ್ಲೊಂದು ಕಾಲೇಜಿದೆ. ಅದಕ್ಕೆ ವರ್ಷಕ್ಕೆ ಫೀಸು ೧೬ ಲಕ್ಷ ಗೊತ್ತಾ" ಅಂದ ಚೌರದವ. ಬಹುಷಃ Indian School Of Business ಬಗ್ಯೆ ಹೇಳ್ತಿರಬೇಕು ಅಂದುಕೊಂಡೆ.

“ಹದಿನಾರು ಲಕ್ಷ !, ನನಗೆಲ್ಲಾದರೂ ಅಷ್ಟು ದುಡ್ಡು ಸಿಕ್ಕಿದ್ದರೆ ಜುಂ ಅಂತ ನಮ್ಮೂರಲ್ಲಿ ಒಂದು ಬಂಗಲೆ ತಗಂಡು ಕಾರು ತಗಂಡು ಆರಾಮಾಗಿರ್ತಿದ್ದೆ.” ಅಂದ ಬಿಹಾರಿ.

ಇಷ್ಟೊತ್ತಿಗೆ ಒಬ್ಬ ಪಡ್ಡೆ ವಯಸ್ಸಿನ ಸರ್ದಾರ್ಜೀ ಗಿರಾಕಿ ಗಡ್ಡ ಟ್ರಿಮ್ ಮಾಡಿಸಿಕೊಳ್ಳೋಕೇ ಬಂದು ಪಕ್ಕದ ಕುರ್ಚಿ ಹಿಡಿದಿದ್ದ( ಹೌದು ಸರ್ದಾರ್ಜೀ , ಗಡ್ಡ ಟ್ರಿಮ್ಮಿಗೆ ಬಂದಿದ್ದ). ಅವನು ಬಾಯಿ ಹಾಕಿದ "ಗಾಡಿ ಏನೋ ತಗೋತೀಯಾ. ಪೆಟ್ರೋಲಿಗೇನು ಮಾಡ್ತೀಯಾ. ಪೆಟ್ರೋಲ್ ಎಷ್ಟು ದುಬಾರಿ ಗೊತ್ತಾ. ನಿಂದು ದುಡ್ಡೆಲ್ಲಾ ಪೆಟ್ರೋಲಿಗೇ ಹೋಗತ್ತೆ"

ಅಷ್ಟೊತ್ತಿಗೆ ಚೌರದವ ನನ್ನ ಕೇಳಿದ " ಏನ್ಸಾರ್‍ , ಕಂಪ್ಯೂಟರ್‍ ನವರಿಗೆ ಈಗೆಲ್ಲಾ ಕಷ್ಟ ಅಂತೆ ಹೌದಾ ಸಾರ್‍"

“ಹೂಂ ಕಣ್ರೀ, ಅಮೆರಿಕಾದಲ್ಲಿ ಯದ್ವಾ ತದ್ವಾ ಬ್ಯಾಂಕುಗಳೆಲ್ಲಾ ಎಕ್ಕ್ಕುಟ್ಟಿ ಹೋಗ್ತಾ ಇವೆ. ಇಂಡಿಯಾದ ಕಂಪ್ಯೂಟರಿನವರ ಗಿರಾಕಿಗಳು ಇವರೂ ಆದ್ದರಿಂದ ಸ್ವಲ್ಪ ಡೌನ್ ಆಗೋ ಛಾನ್ಸ್ ಇದೆ " ಅಂದೆ.

“ನನ್ನ ಮಗ ಕಂಪ್ಯೂಟರ್‍ ಇಂಜಿನೀಯರೇ ಆಗ್ಬೇಕೂ ಅಂತ ಹಟ ಹಿಡ್ದಿದಾನೆ ಸಾರ್‍. ಅವನಿಗೆ ಬೇರೇನೂ ಬ್ಯಾಡವಂತೆ. ಈಗ ಕಾಲೇಜಲ್ಲಿ ಕಂಪ್ಯೂಟರೇ ಓದ್ತಿದಾನೆ. “ ಅಂದ.

“ಎಷ್ಟು ಜನ ಮಕ್ಕಳು, ಎಲ್ಲಾ ಏನು ಮಾಡ್ತಾರೆ?" ಅಂದೆ.

“ಇಬ್ರು . ಇನ್ನೊಬ್ಬಳು ಮಗಳು. ಅಮೆರಿಕಾದಲ್ಲಿದ್ದಾಳೆ. ಅವಳದ್ದು ಮೆಡಿಕಲ್ ಲೈನು "ಅಂದ.

"ಮತ್ತೇನು, ನೀವೂ ಹೋಗಿ ಮಗಳ ಮನೇಲಿದ್ದು ಅಮೆರಿಕಾ ನೋಡಿಕೊಂಡು ಬನ್ನಿ" ಅಂದೆ.

“ಅಯ್ಯೋ, ಆಗಲ್ಲ ಸಾರ್‍ ಮಗಳ ದುಡ್ಡಲ್ಲಿ ಹೋಗಬಾರದು. ನನ್ನ ಅಳಿಯ ಟಿಕೆಟು ಕಳಿಸ್ತೀನಿ ಬನ್ನಿ ಅಂತ ಒತ್ತಾಯ ಮಾಡ್ತಿದಾನೆ. ಬ್ಯಾಡ ಸಾರ್‍ ಮಗಳು, ಅಳಿಯನ ದುಡ್ಡಲ್ಲಿ ಹೋಗಬಾರದು ಸಾರ್‍.ನಾಳೆ ನನ್ನ ಮಗ ಇಂಜಿನಿಯರ್‍ ಆಗಿ ಅಮೆರಿಕಾಕ್ಕೆ ಹೋದರೆ ಅವನ ಮನೆಗೆ ಹೋಗಬೋದು”
“ಮಗಳು ಅಳಿಯ ಆಗಾಗ ಬರ್ತಿರ್ತಾರೆಯೇ?” ಕೇಳಿದೆ

“ ಬರ್‍ತಾರೆ ಸಾರ್‍. ಮಗಳು ಬಂದು ಹೈದರಾಬಾದಿನ ಮನೇಲಿ , ಓ ಇಟ್ ಈಸ್ ಸೋ ಹಾಟ್ , ಸೋ ಹಾಟ್" ಅಂತ ಹೊಡಕೋತಾಳೆ ಸಾರ್‍" ಅಮೆರಿಕನ್ ಇಂಗ್ಲೀಷಿನ accentನಲ್ಲಿ ಅಣಕವಾಡುತ್ತಾ. “ಅದಕ್ಕೆ ನಾನೇನಂದೆ ಗೊತ್ತಾ?, ಮಗಳೆ, ಇದೇ ಮಣ್ಣಲ್ಲಿ ಹುಟ್ಟಿ ದೊಡ್ಡವಳಾಗಿದೀಯಾ. ಆವಾಗಿಲ್ಲದ ಸೋ ಹಾಟ್ ಈಗ ಬಂತಾ ಅಂದೆ"

ಇಷ್ಟೊತ್ತಿಗೆ ನನ್ನ ಚೌರ ಮುಗಿದಿತ್ತು ಎದ್ದು ಬಂದೆ.

Rating
No votes yet

Comments