ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ

ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ

- ತಾಲೂಕನ್ನು ಬರ ಮುಕ್ತ- ಜಲಸಂಪದ್ಭರಿತವಾಗಿಸುವ ಉದ್ದೇಶ
- ತಾಲೂಕಿನ ೪೫ ಸಾವಿರ ಮನೆಯವರಿಗೆ ನೀರಿನ ಬಗ್ಗೆ ಜಾಗೃತಿ

ಇಡೀ ತಾಲೂಕಿನ ಜನರಲ್ಲಿ ನೀರಿನ ಬಗ್ಗೆ ತಿಳಿವಳಿಕೆ ನೀಡಿ, ಜಲ ಸಾಕ್ಷರರನ್ನಾಗಿ ಮಾಡಿ ತಾಲೂಕನ್ನು ಜಲಸಂಪದ್ಭರಿತ ತಾಲೂಕು ಮಾಡುವ ಹೊಸ ಪ್ರಯತ್ನವೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ.
ಈ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿ ಈ ರೀತಿಯ ಪ್ರಯತ್ನವೊಂದು ಸಾಗಿದೆ.
ಸಾಗರ ಮಲೆನಾಡಿನ ಕೇಂದ್ರ ಬಿಂದು. ಇಲ್ಲಿ ಸರಾಸರಿ ೨೦೦ ಇಂಚು ಮಳೆಯಾಗುತ್ತದೆ. ಆದರೆ, ಈ ತಾಲೂಕಿನ ಬಹುತೇಕ ಭಾಗ ಏಪ್ರಿಲ್ ಮೇನಲ್ಲಿ ನೀರಿಗೆ ಹಪಹಪಿಸುತ್ತದೆ. ಜನರು ನೀರಿಗಾಗಿ ಅಲೆಯುತ್ತಾರೆ. ಟ್ಯಾಂಕರ್ ಮೂಲಕ ನೀರಿನ ಸೌಲಭ್ಯ ಪಡೆಯುವ ಸ್ಥಿತಿ ತಲುಪಿದೆ. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಈಗ ಪ್ರಯತ್ನ ಸಾಗಿದೆ.
ತೀರ್ಥಹಳ್ಳಿ ಕೃಷಿ ಪ್ರಯೋಗ ಪರಿವಾರ ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮ ಹಾಕಿಕೊಂಡಿದ್ದು, ಈಗ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ.
ಸಾಗರ ತಾಲೂಕನ್ನು ಬರಮುಕ್ತ ಮತ್ತು ಜಲಸಂಪದ್ಭರಿತ ತಾಲೂಕನ್ನಾಗಿ ಮಾಡುವುದು ಪರಿವಾರದ ಉದ್ದೇಶ. ಅದಕ್ಕಾಗಿ ಯೋಜನೆ ಸಿದ್ಧವಾಗಿದ್ದು ‘ತಿಳಿ’ನೀರ ಮೂಲ- ಜಲ ಶಿಕ್ಷಣ ಅಭಿಯಾನ.
ಇದು ಆರಂಭಗೊಂಡು ಎರಡು ವರ್ಷಗಳೇ ಕಳೆದಿದ್ದು, ಸಾಕಷ್ಟು ಕೆಲಸ ಮಾಡಿದೆ. ಇದಕ್ಕೆ ಉತ್ತಮ ಉದಾಹರಣೆ ತಾಲೂಕಿನ ಹುಳೇಗಾರು- ಇದು ಸಂಪೂರ್ಣ ಜಲ ಸಾಕ್ಷರ ಗ್ರಾಮ.
ತಾಲೂಕಿನಲ್ಲಿ ನಡೆಯುವ ಅಭಿಯಾನದಲ್ಲಿ ೧೨೦ ಕಾರ್ಯಕರ್ತರು ೧೦೦ ದಿನಗಳ ತಾಲೂಕಿನಲ್ಲಿ ಅಂದಾಜು ೪೫ ಸಾವಿರ ಮನೆಯ ೨ ಲಕ್ಷ ಮಂದಿಯಲ್ಲಿ ನೀರಿನ ಬಗ್ಗೆ ತಿಳಿವಳಿಕೆ ಮೂಡಿಸುತ್ತಾರೆ. ಕಡೇ ಪಕ್ಷ ೫ ಸಾವಿರ ಮನೆಯವರು ಜಲ ಸಾಕ್ಷರರನ್ನಾಗಿ ಮಾಡುವ ಮಹೋದ್ದೇಶ ಇದೆ.
ತಾಲೂಕಿನಾದ್ಯಂತ ನಡೆಯುವ ಆಂದೋಲನಕ್ಕೆ ಶೀಘ್ರವೇ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ತಾಲೂಕಿನಲ್ಲಿ ಈಗಾಗಲೇ ಬಹಳಷ್ಟು ಮಂದಿ ಜಲ ಸಾಕ್ಷರರಿದ್ದಾರೆ ಅವರೇ ಅಭಿಯಾನದ ಕಾರ್ಯಕರ್ತರು ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರವೂ ಇದೆ. ಸುಮಾರು ೧೫೦ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಕೈಜೋಡಿಸಿದ್ದಾರೆ. ಅತಿ ದೊಡ್ಡದಾದ ಆಂದೋಲನ ಈಗ ಆರಂಭವಾಗಿದೆ.
ಬೇಸಿಗೆಯಲ್ಲಿ ನೀರಿಗಾಗಿ ಪರದಾಡುತ್ತಾರೆ, ಮಳೆ ಬಂದ ಕೂಡಲೇ ನೀರಿನ ಬಗ್ಗೆ ಜನರು ಕಾಳಜಿ ವಹಿಸುವುದಿಲ್ಲ. ಈ ಬಗ್ಗೆ ಜಾಗೃತಿ ಮಾಡಿಸಲಾಗುತ್ತದೆ ಎನ್ನುತ್ತಾರೆ ಕೃಷಿ ಪ್ರಯೋಗ ಪರಿವಾರದ ಆ.ಶ್ರೀ. ಆನಂದ.
ಮಳೆಗಾಲದಲ್ಲಿ ನೀರಿನ ಬಗ್ಗೆ ಕಾಳಜಿ ವಹಿಸಿದರೆ ಮುಂದೆ ತೊಂದರೆಯಾಗದು ಎಂಬುದು ಅವರ ಅಂಬೋಣ.

ಟಿ ಸಾಧನೆ ಮಾಡಿದ ಹುಳೇಗಾರು
ಈ ಗ್ರಾಮ ಸಂಪೂರ್ಣ ಜಲ ಸಾಕ್ಷರ ಗ್ರಾಮ. ಇಲ್ಲಿರುವ ಶೇ. ೯೯ ಭಾಗ ಮಕ್ಕಳು, ಪುರುಷರು, ಮಹಿಳೆಯರು ಜಲಸಾಕ್ಷರರು. ನೀರಿನ ಬಳಕೆ, ನೀರಿನ ಸಂಗ್ರಹ, ಸರಿಯಾದ ಬಳಕೆ ಬಗ್ಗೆ ಮಾಹಿತಿ ಇದೆ. ಅದನ್ನು ಯಶಸ್ವಿಯಾಗಿ ಕಾರ್ಯ ರೂಪಕ್ಕೆ ತಂದಿದ್ದಾರೆ.
ಭೂಮಿಗೆ ಬಿದ್ದು ಓಡುವ ನೀರನ್ನು ನಿಲ್ಲಿಸಲು, ನಿಂತ ನೀರನ್ನು ಇಂಗಿಸಲು ಗ್ರಾಮದಲ್ಲಿ ಇಂಗು ಗುಂಡಿ ತೋಡಲಾಯಿತು. ಈವರೆಗೆ ಒಟ್ಟು ೪೦೦೦ ಇಂಗು ಗುಂಡಿ ತೋಡಲಾಗಿದ್ದು, ಒಂದು ಸಲ ಗುಂಡಿ ತುಂಬಿದರೆ ಅಂದಾಜು ೨೫ ಲಕ್ಷ ಲೀಟರ್ ನೀರಿಂಗುತ್ತದೆ.
ಇಲ್ಲಿರುವ ಶಾಲೆಯ ೪ಎಕರೆ ಪ್ರದೇಶ ಹೊಂದಿರುವ ಶಾಲೆಯ ಆವರಣದಲ್ಲೂ ಮಕ್ಕಳು, ಪೋಷಕರ ಸಹಾಯದಿಂದ ೨೦೦ ಇಂಗು ಗುಂಡಿ ತೋಡಿ ನೀರಿಂಗಿಸುವ ಕಾರ್ಯಕ್ಕೆ ಕಳೆದ ಮಳೆಗಾಲದಲ್ಲೇ ಕೈಹಾಕಿದ್ದಾರೆ.
ಶಾಲೆಯ ಸೂರಿನ ನೀರು ಹಿಡಿದು ಬಳಕೆ ಮಾಡಲು ಪ್ರಾರಂಭ ಮಾಡಲಾಯಿತು. ಮಕ್ಕಳು ಶಾಲೆಯಲ್ಲಾದ ಕ್ರಾಂತಿಯನ್ನು ಮನೆಯಲ್ಲೂ ಜಾರಿಗೆ ತರಲು ಪ್ರಯತ್ನಿಸಿದರು. ಪೋಷಕರಲ್ಲೂ ಜಲ ಜಾಗೃತಿ ಉಂಟಾಯಿತು.
ಗುಡ್ಡಗಳ ಮಧ್ಯೆ ಗ್ರಾಮ ಇದ್ದು, ಮನೆಗಳಿಗೆ ನೀರು ನುಗ್ಗಬಾರದೆಂಬ ಕಾರಣಕ್ಕೆ ಅಗಳ (ದೊಡ್ಡ ಟ್ರಂಚ್) ಹೊಡೆಯಲಾಗಿದೆ. ಆ ಅಗಳಲ್ಲಿ ಸಣ್ಣ ಒಡ್ಡು ನಿರ್‍ಮಿಸಿ ಓಡುವ ನೀರಿಗೆ ಸಣ್ಣ ಪ್ರಮಾಣದಲ್ಲಿ ತಡೆಯೊಡ್ಡಿ ಇಂಗಿಸಲಾಗುತ್ತಿದೆ.
ಕೃತಕ ಕೆರೆ ನಿರ್‍ಮಿಸಲಾಗಿದ್ದು, ಅದು ೬ ಲಕ್ಷ ಲೀಟರ್ ನೀರನ್ನು ಹಿಡಿದಿಡುತ್ತದೆ. ಗುಡ್ಡದಿಂದ ಹರಿದು ಬರುವ ನೀರನ್ನು ಇಲ್ಲಿಗೆ ಹರಿಸಲಾಗುತ್ತದೆ. ಅಲ್ಲಿ ಇಂಗಿಸುವ ಪ್ರಯತ್ನ ನಡೆದಿದೆ.
ಮನೆಯ ಅಂಗಳದಲ್ಲಿ ಇಂಗು ಗುಂಡಿ ಮೂಲಕ ನೀರಿಂಗಿಸಿದರೆ, ಸೂರಿನ ನೀರನ್ನು ತಿಳಿಗೊಳಿಸಿ ಬಾವಿಗೆ ಬಿಡುತ್ತಾರೆ. ಅಲ್ಲದೇ ಸೂರಿನಿಂದ ಡ್ರಂ, ಬಾನಿಗಳಿಗೆ ನೀರು ಬರುವಂತೆ ವ್ಯವಸ್ಥೆ ಮಾಡಿ ಪಾತ್ರೆ, ಸ್ನಾನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಹೀಗೆ ಮಳೆಗಾಲದಲ್ಲಿ ಹಿಡಿದಿಟ್ಟ ನೀರು ಬೇಸಿಗೆಯಲ್ಲಿ ಈ ಹಳ್ಳಿಗರಿಗೆ ಸಹಕಾರವಾಗುತ್ತದೆ. ಬರದಿಂದ ಗ್ರಾಮ ದೂರ.
ಈ ಸಣ್ಣ ಗ್ರಾಮ ಈಗ ಇಡೀ ತಾಲೂಕಿಗೆ ಮಾದರಿ.

- ಶ್ರೀಕಾಂತ್ ಭಟ್

Rating
No votes yet

Comments