ಜಾತಿ ಬಿಟ್ಟ ಜೋಕುಮಾರನೆ....
ಹಾಯ್ ಪೆದ್ದು,
ನೀನು ಬರೆದ ಪತ್ರ ಕುಂಠುತ್ತಾ, ತೆವಳುತ್ತಾ ಬಂದು ನನ್ನ ಕೈ ಸೇರಿತು ಮಾರಾಯ! ನಿನಗೆ ನಾನು ಪೆದ್ದು ಅನ್ನೋದು ಅದಕ್ಕೆ ನೋಡು ಮಾಡೋದೆಲ್ಲಾ ಅನಾಹುತಗಳೇ, ಅಲ್ವೋ ಜೋಯ್ಸರನ್ನ ರಾಜಾರೋಷವಾಗಿ ಬೈದಿದ್ದೀಯಲ್ಲಾ? ಆ ಪತ್ರ ಮೊದ್ಲು ಸೇರಿದ್ದು ಜೋಯ್ಸರ ಕೈಯನ್ನೇ ಗೊತ್ತಾ! ಯಾವಾಗ್ಲೂ ಮಂತ್ರ ಹೇಳೋ, ಜ್ಯೋತಿಷ್ಯ ನೋಡೋ ಜೋಯ್ಸ ಅಂತಾ ನಮ್ಮಪ್ಪನ್ನ ಅಣಗಿಸುತ್ತಾ ಇದ್ದೆಯಲ್ವಾ? ನೋಡು ನಮ್ಮಪ್ಪ ಓದೋಕೇ ಅಂತಾ ಇಸ್ಕೂಲಿಗೆ ಹೋಗದೇ ಮಂತ್ರ ಕಲಿತಿದ್ದು ಇವತ್ತು ಹೆಲ್ಪ್ ಆಯಿತು. ನಮ್ಮಪ್ಪನಿಗೇನಾದ್ರೂ ಓದ್ಲಿಕ್ಕೆ ಬಂದಿದ್ದರೆ, ನೀನು ಬರೆದ ಕಾಗದವನ್ನು ಓದಿ ಬಿಟ್ಟಿದ್ದರೆ, ನನ್ನ ನಿನ್ನ ಒಟ್ಟಿಗೆ ಯಾವ್ಯಾದೋ ಮಂತ್ರ ಹೇಳಿ ಬೇರೆ ಗ್ರಹಕ್ಕೆ ಪಾರ್ಸೆಲ್ ಮಾಡಿ ಬಿಡುತ್ತಿದ್ದರು! ನೀನು ಮಾಡೋ ಕಪಿಚೇಷ್ಟೆಗೆ ಇದ್ದವರನ್ನೆಲ್ಲಾ ಬಲಿ ಕೊಡ್ತಿಯ ಮಾರಾಯ! ಮತ್ತೆ ಪೆದ್ದು ಅಂದ್ರೆ ಜಗಳಕ್ಕೆ ಬೇರೆ ಬರ್ತಿಯಾ!
ಇಲ್ಲಿ ಮಳೆ ಅಂದ್ರೆ ಮಳೆ ಕಣೋ. ಕರೆಂಟ್ ಇಲ್ಲದೆ ೧೫ದಿನ ಆಯಿತು. ಪೋನಿನ ಜೀವ ಹೋಗಿ ಎರಡು ವಾರಗಳ ಮೇಲಾಯಿತು. ಇನ್ನೂ ಆ ಅಂಚೆಯವನೋ...! ಸಂಬಂಧಿಕರ ಮನೇಲಿ, ಹೆಂಡ್ತಿ ಮನೆಲಿ ಎಲ್ಲೂ ಕಾರ್ಯಕ್ರಮಗಳು ಇಲ್ಲದೇ ಹೋದರೆ, ತಾನು ಅಂಚೆಯವ ಅನ್ನೋದು ನೆನಪಾದರೆ ಜೋಯ್ಸ್ರ ಮನೇಲಿ ಒಂದು ಲೋಟ ಕಾಫಿ ಕುಡಿದು, ಒಂದು ಕವಳ ಹಾಕಿ ಜೋಯ್ಸರ ಹತ್ತಿರ ಒಂದು ಗಡದ್ದಾದ ಹರಟೆಹೊಡೆದು ಹೋಗುವ ಮನಸಾದರೆ ಅಮ್ಮವ್ರೆ ನಿಮಗೊಂದು ಪತ್ರ ಬಂದೈತಿ ಅಂತಾ ಮನೆ ಕಡೆ ಬರ್ತಾನೆ. ಮೊದ್ಲೆಲ್ಲಾ ಕಾಲೇಜಿನಿಂದ ಬರೋವಾಗ ನಾನೇ ಹೋಗಿ ನಿನ್ನ ಪತ್ರ ಕಲೆಕ್ಟ್ ಮಾಡಿಕೊಂಡು ಬರ್ತಿದ್ದೆ. ಈಗ ಆ ಅಂಚೆಯವ ಬರೋವರೆಗೂ ಕಾಯಬೇಕು. ಇದನೆಲ್ಲಾ ನೆನಸಿಕೊಂಡರೆ ನಂಗಂತೂ ಈ ಊರು ತುಂಬಾ ಬೋರ್ ಅನ್ನಿಸ್ತಾ ಇದೆ. ನಿನ್ನನ್ನ ಯಾವಾಗ ಸೇರಿಕೊಳ್ಳುತ್ತೀನೋ ಅನ್ನಿಸ್ತಾ ಇದೆ!
ಏ ಈ ಸರಿ ಹಳೆ ಮಳೆ ಸಖತ್ತಾಗಿ ಹೊಯ್ತಾ ಇದೆ ಕಣೋ. ತುಂಗೆ ತುಂಬಿ ಹರಿತಾ ಇದೆ. ಹೋದ ವರ್ಷ ನೀನು ಇದೇ ಟೈಂನಲ್ಲೇ ನಮ್ಮ ಮನೆಗೆ ಬಂದಿದ್ದೆ ಅಲ್ವಾ? ನಾನು ನೀನು ದೊಪ್ಪನೆ ಬೀಳುತಿದ್ದ ಮಳೆಯಲ್ಲಿ ತುಂಗೆ ತೀರಕ್ಕೆ ಹೋಗಿ ಕುಣಿದು ಕುಪ್ಪಳಿಸಿದ್ವಲ್ಲಾ? ಮಳೆ ಬಂತ್ ಗಿಳಿ ಪೋಪೋಪೋ ಅಂತಾ ಚಿಕ್ಕ ಮಕ್ಕಳ ತರಹ ಹಾಡಿ ಆಟ ಆಡಿದ್ವಲ್ಲಾ? ಆ ಮೇಲೆ ಅಮ್ಮನ ಹತ್ರಾ ಬೈಸಿಕೊಂಡು ಹಲಸಿನ ಹಪ್ಪಳ ಸುಟ್ಟು ಅದನ್ನ ಪಾಲು ಮಾಡೋವಾಗ ನಂಗೆ ಜಾಸ್ತಿ ನಿಂಗೆ ಜಾಸ್ತಿ ಅಂತಾ ಕಿತ್ತಾಡಿಕೊಂಡಿದ್ವಲ್ಲಾ? ಈ ಮಳೆ ನೋಡೋವಾಗ ಅದೆಲ್ಲಾ ನೆನಪಾಗುತ್ತಿದೇಯೋ ಪೆದ್ದೆಶ!
ನಿಂಗೆ ಇವೆಲ್ಲಾ ಎಲ್ಲಿ ನೆನಪಾಗತ್ತೆ ಹೇಳು? ಹೋಗ್ಲಿ ನನ್ನ ನೆನಪಾದರೂ ಇದೆಯಲ್ವಾ ಅಷ್ಟೆ ಸಮಾಧಾನ ನಂಗೆ. ಮತ್ತೆ ಹೇಗೆ ನಡಿತಾ ಇದೆ ಕೆಲ್ಸಾ? ನಮ್ಮೂರ ಕಡೆ ಯಾವಾಗ ಬರ್ತಿಯಾ? ಅಲ್ವೋ ನಾನು ಜಾತಿ ಬಿಟ್ಟವನು ಅಂತಾ ಉದ್ದುದ್ದಾ ಭಾಷಣ ಬಿಗಿತೀಯಾ ಮತ್ತೆ ನನ್ನನ್ನು ಜ್ಯೋಯ್ಸರ ಮಗಳು ಅಂತಾ ಜಾತಿ ಹೆಸರಿನಲ್ಲೇ ಅಣಗಿಸುತ್ತೀಯಲ್ವೋ? ಸಾಹಿತಿಯಾಗ್ಲಿಕ್ಕೆ ಪೂರ್ವಭಾವಿಯಾಗಿ ತಯಾರಿನಾ ಇದು?! ಹೇಳೋದೊಂದು, ತಿನ್ನೊದೊಂದು ಅಂತಾರಲ್ಲಾ ಹಾಗೆ ಆಯಿತು ನೋಡು ನಿನ್ನ ಕಥೆ! ನಮ್ಮ ಅಪ್ಪಾ ನಿನ್ನ ತರಹ ಅಲ್ಲಾ, ಇಸ್ಕೂಲಿಗೆ ಹೋಗದೆ ಹೋದ್ರು ಆಡಿದ ಮಾತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೊದು ಅವರಿಗೆ ಚೆನ್ನಾಗಿ ಗೊತ್ತು. ಅಂದಹಾಗೆ ಮಾರ್ಕೇಟ್ನ ಗಯ್ಯಾಳಿಗಳು ನಂಗೆ ಮಾವನ ಮನೆ ಕಡೆಯಿಂದ ಸಂಬಂಧಿಗಳಾಗಲ್ಲಿಕ್ಕೆ ಇರುವವರು! ಹಾಗೆ ಹೇಳು ಅಂತಾ ನಮ್ಮ ಅಮ್ಮ ನಂಗೆ ಹೇಳಿಕೊಟ್ಟರು! ಖಂಡಿತವಾಗಿಯೂ ಇದು ನನ್ನ ಮಾತಲ್ಲ ಕಣೋ, ಅಮ್ಮನದ್ದೆ.
ಅದೇನೋ ಬ್ಲಾಗ್ ಬರಹ ಅಂದ್ರೆ ಅದು ನಂಗೊಂಚೂರು ಅರ್ಥವಾಗ್ಲಿಲ್ಲ. ಬ್ಯಾಗ್ ಕುರಿತಾಗಿ ಬರೆಯೋದಾ? ಅದೇನೇನು ಕುರಿತಾಗಿ ಬರಿತೀಯೋ ನೀನು. ಒಟ್ಟಲ್ಲಿ ಬರೆದು ಬರೆದೇ ನನ್ನಂತಹವಳನ್ನ ಕುರಿಮಾಡ್ತಿಯಾ ನೋಡು ನೀನು. ಇನ್ನೂ ಏನೇನೋ ಬರಿಬೇಕು ಅಂದ್ಕೊಂಡಿದ್ದೆ. ಈಗ ಒಂದು ನೆನಪಾಗ್ತಾ ಇಲ್ಲ ನೋಡು. ನೆನಪಾದರೆ ಇನ್ನೊಂದು ಪತ್ರ ಹಾಕ್ತಿನಿ. ಅಂದಹಾಗೆ ಬೆಂಗಳೂರಲ್ಲಿ ಹಾಳುಮೂಳು ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಡ. ಹಾಗೆನೆ ಕಂಡ ಕಂಡ ಚೆಂದದ ಹುಡ್ಗಿಯರಿಗೆಲ್ಲಾ ಲೈನ್ ಹಾಕಿ ಕಣ್ಣು ನೋವು ಬರಿಸಿಕೊಳ್ಳಬೇಡ! ಬಾಯ್......www.aksharavihaara.wordpress.com ಇದು ನನ್ನ ಬ್ಲಾಗ್ ವಿಳಾಸ
ಇಂತಿ ನಿನ್ನ
ಪುಟ್ಟಿ