ಜಾಯ್ ಆಫ್ ಗಿವಿಂಗ್ - ಲಕ್ಷ್ಮೀಕಾಂತ ಇಟ್ನಾಳ
ಜಾಯ್ ಆಫ್ ಗಿವಿಂಗ್
-ಲಕ್ಷ್ಮೀಕಾಂತ ಇಟ್ನಾಳ
ನಾವು ಚಿಕ್ಕವರಿದ್ದಾಗ ಹುಡುಗರೆಲ್ಲ ಯಾವುದಾದರೂ ತಿಸಿಸು ಇಲ್ಲವೆ ಹಣ್ಣು ತಿನ್ನುವಾಗ, ಅಮ್ಮ ಗದರಿ ‘ಎಲ್ಲರಿಗೂ ಹಂಚಿ ತಿನ್ರೀ’ ಎನ್ನುತ್ತಿದ್ದ ಮಾತು ನಿಜಕ್ಕೂ ಬದುಕಿನ ಎಷ್ಟೋ ಆಯಾಮಗಳಿಗೆ ಪ್ರತಿಸ್ಪಂದಿಯಾಗಿ ಹೇಳಿದಂತೆನಿಸುತ್ತದೆ. ‘ಜಾಯ್ ಆಫ್ ಗಿವಿಂಗ್’ (ನೀಡುವಲ್ಲಿನ ಸಂತೋಷ)ವೆಂದರೆ, ಅದು ಹಣದ ರೂಪ, ಹಣ್ಣಿನ ರೂಪದಲ್ಲಿಯೇ ಇರಬೇಕೆಂದಿಲ್ಲವಲ್ಲ. ನಾವು ಮಾಡುವ ಒಂದೊಂದು ಸಣ್ಣ ಕ್ಷಣದ ಸಹಾಯವೂ ಕೂಡ, ಇನ್ನೊಬ್ಬರ ಪಾಲಿನ ಮರೆಯಲಾರದ ನೆನಪಾಗಿ ಪರ್ಮನೆಂಟಾಗಿ ಕುಳಿತುಕೊಳ್ಳುವಂತೆ, ಅವರಿಗೊಂದು ಮಾದರಿಯಂತೆ ಕೆಲಸ ಮಾಡೀತು. ಪ್ರತಿದಿನ ಪ್ರತಿಕ್ಷಣ ನಾವೇನೂ ಪರೋಪಕಾರವನ್ನೇ ಮಾಡುತ್ತ ಕುಳಿತಿರಬೇಕಿಲ್ಲ, ನಮ್ಮ ದೈನಂದಿನ ಬದುಕಿನಲ್ಲಿ ಆಗುವ, ನಮ್ಮ ಕಣ್ಮುಂದೆ ನಡೆಯುವ ಸಹಜ ಕ್ರಿಯೆಗಳಲ್ಲಿ ಹಾಗೆ ಸುಮ್ಮನೆ , ಸಹಜವಾಗಿ ಸ್ಪಂದಿಸಿದರೂ ಸಾಕು, ಮನದ ಮೂಲೆಯಲ್ಲೊಂದು ‘ಸುಕೂನಸಾ’ ನೆಮ್ಮದಿಯ ಅನುಭವವಾದೀತು. ರೈಲಿನಲ್ಲಿ ತನ್ನ ಮನೆಯಲ್ಲಿ ತುಂಬಿಕೊಟ್ಟ ಬ್ಯಾಗನ್ನು ಎತ್ತಿ ಒಳತರುವಲ್ಲಿಯೋ, ಹೊರತರುವಲ್ಲಿಯೋ ಒದ್ದಾಡುವ ಹಿರಿಯ ಜೀವಗಳಿಗೆ ಆ ಬ್ಯಾಗನ್ನು ಸಾಗಿಸುವಲ್ಲಿ ನೀಡುವ ಕ್ಷಣದ ಸಹಕಾರ, ಅವರ ಕಣ್ಣುಗಳಲ್ಲಿ ಮಿಂಚುವ, ಕೃvಜ್ಞತೆಯ ಕಣ್ಣಮಿಂಚು ಗಮನಿಸಿ. ಬ್ಯಾಂಕಿನಲ್ಲಿ ಹೋದಾಗ, ಫಾರ್ಮ ತುಂಬುವ, ನಮ್ಮ ಕೆಲಸವಾದ ಮೇಲೆ ಫಾರ್ಮ ಹಿಡಿದು ಕೈಚಾಚಿ ನಿಲ್ಲುವ ಆ ವಿಧವೆಯರ ಕಣ್ಣುಗಳ ಯಾಚನಾ ನೋಟ, ಮುಗ್ಧ ಜನ ಸಹಾಯ ಕೋರುವಾಗ, ಕಣ್ಣು ಮಂಜಾದ ನಿಶ್ಯಕ್ತ ದೇಹಗಳ ವ್ಯಕ್ತಿಗಳಿಗೆ ಆ ಕ್ಷಣದಲ್ಲಿ ಮಾಡುವ ಸಹಾಯ , ರಸ್ತೆ ದಾಟುವಾಗ ಯಾವುದೋ ಜೀವಕ್ಕೆ ಸರಿಯಾದ ಟೈಮಲ್ಲಿ ಕೈನೀಡಿ ದಾಟಿಸಿದಾಗ ಅವನಿಂದ ಹೊರಟ ಆ ಧನ್ಯತಾ ಭಾವ, ಯಾವುದೋ ವಿಳಾಸ, ರಸ್ತೆಯ ದಿಕ್ಕು ದೆಶೆಗಳನ್ನು ಕೇಳುತ್ತ, ಸಂದೇಹ ಪರಿಹರಿಸಿಕೊಳ್ಳುವ ದಾರಿಹೋಕರಿಗೆ ನೀಡುವ ಸಲಹೆ, ಸ್ಕೂಲಿಗೆ ಹೋಗುವ ಆ ಪುಟ್ಟ ಬಾಲಕ, ಶಾಲೆಗೆ ಹೋಗುವ ದಿಕ್ಕಿನಲ್ಲಿ ಕೈ ಮಾಡುತ್ತ, ಕೇಳುವ ಲಿಫ್ಟನ್ನೊಮ್ಮೆ ಕೊಟ್ಟುನೋಡಿ, ಅಂದು ಅವ ಮನೆಗೆ ಹೋದೊಡನೆ ಅವನ ಬದುಕಿನ ಅಂದಿನ ‘ಒಳ್ಳೆಯ ಅಂಕಲ್’, ಅವರಮ್ಮನ ಮುಂದೆ ಒಪ್ಪಿಸುವ ಪಾಠದ ಮೊದಲ ಸಾಲು ನಾವಾಗಬಹುದು, ನಮ್ಮ ಸಹಾಯ ಪಡೆಯುತ್ತಲೇ, ‘ಪುಣ್ಯ ಹತ್ತಲೆಪ್ಪ’ ಎನ್ನುವ ಆ ಜೀವಗಳ ಹಾರೈಕೆ ನಮ್ಮನ್ನೊಂದು ದಿನ ಕಾಯ್ದೀತು. ಅದೇನು ಮಹದುಪಕಾರವಲ್ಲ, ಆದರೂ ಎಲ್ಲೊ ಗಡಿಬಿಡಿಯ ಬದುಕಿನಲ್ಲಿ , ‘ನೀನಾರಿಗಾದೆಯೋ ಎಲೆ ಮಾನವ’ ಹಾಡಿನ ಕ್ಷಣದ ‘ಗೋವು’ ನಾವಾಗಬಹುದು,. ಇವ್ಯಾವುದಕ್ಕೂ ದುಡ್ಡು ಬೇಡ, ಆದರೆ ಸಹಾಯ ನೀಡುವ ಮನದಿಂಗಿತ ಬೇಕಲ್ಲವೇ! ಮತ್ತೊಬ್ಬರಿಗಾಗಿಯೂ ಕೊಂಚ ಸಮಯ ವಿನಿಯೋಗಿಸುವ ಮನಸ್ಸತ್ವ, ಮನುಷ್ಯತ್ವ ನಮ್ಮದಾಗಬೇಕು.
ಅಯ್ಯೋ ತೀರಿತು, ಇಂತಹುದಕ್ಕೆಲ್ಲ ಸಮಯ ವ್ಯಯಿಸುತ್ತ ಹೋದರೆ, ಮನೆಗೆ, ಕೆಲಸಕ್ಕೆ ತೆರಳಲು ಸಂಜೆಯೇ ಆದೀತು. ಯಾವನು ಮಾಡಿಕೋತ ಕೂಡುತ್ತಾನೆ ಅದನ್ನೆಲ್ಲ. ಅನ್ನುವ ಸಿನಿಕತೆಯೂ ಬರಬಹುದು. ಇಂದಿನ ಗಡಿಬಿಡಿಯ ಬದುಕಿನಲ್ಲಿ, ಬರುವುದು ಸಹಜವೇ, ಆದರೂ ಮನಷ್ಯರಾಗಿ, ಆ ಕ್ಷಣದಲ್ಲಿ ಮಾನವೀಯತೆ ,ಕನಿಷ್ಟ ಸೌಜನ್ಯವನ್ನಾದರೂ ನಾವು ತೋರಬೇಡವೇ. ಅಷ್ಟು ಸಮಯ ನಮಗೆ ಇದ್ದೇ ಇರುತ್ತೆ. ಸಹಾಯ ಹಸ್ತ ನೀಡುವ ಸಹಜ ‘ಮೂಡ’ ಅಥವಾ ಆಸಕ್ತಿ ಇರುವುದಿಲ್ಲ, ಆದಾಗ್ಯೂ ಮನಸ್ಸಿನ ಮುಖಕ್ಕೊಮ್ಮೆ ಮುದ್ದಿಸಿ, ಸಾಂತ್ವನಿಸಿ, ಆ ಕೆಲಸ ಮಾಡಿ ಬಂದರೆ ದಿನವಿಡೀ, ನಮಗೊಂದು ಎಲ್ಲೋ, ಏನೋ ನೆಮ್ಮದಿಯ ತುಣುಕೊಂದು ಜೇಬಿನಲ್ಲಿದ್ದಂತೆನಿಸುತ್ತದೆ.
ಧಾರವಾಡದ ರೈಲ್ವೆ ಸ್ಟೇಶನ್ ರಸ್ತೆಯ ಅಕ್ಕ ಪಕ್ಕದ ರಸ್ತೆಯ ಗಲ್ಲಿಯಲ್ಲಿ ವಾಸವಾದ ನನ್ನ ಗೆಳೆಯರೊಬ್ಬರು, ಮದ್ಯಾಹ್ನದ ಸಮಯದಲ್ಲಿ , ಭೋಜನಕ್ಕೆ ಹೊರಟಾಗ, ದಾರಿಯಲ್ಲಿ ಮೆಣಸಿನಕಾಯಿ ಭಜಿ ಮಾಡುತ್ತಿದ್ದುದನ್ನು ನೋಡಿ, ರಿಟೈರಾದ ಅಪ್ಪನಿಗೆ ಭಜಿ ಎಂದರೆ ತುಂಬ ಪ್ರೀತಿ ಎಂದು ಅವುಗಳನ್ನು ಕಟ್ಟಿಸಿಕೊಂಡು, ಮನೆಗೆ ಹೊರಳುವ ತಿರುವಿನಲ್ಲಿ ಆದ ಆಕ್ಷಿಡೆಂಟನಲ್ಲಿ ಬೋಳುತಲೆಯ ವೃದ್ಧರೊಬ್ಬರು ರಸ್ತೆಯಲ್ಲಿ ಬಿದ್ದು, ರಕ್ತಸಿಕ್ತವಾಗಿ, ಹೊರಳಾಡುತ್ತಿದ್ದುದನ್ನು ನೋಡುತ್ತ, ಎಲ್ಲರೂ ನೋಡುತ್ತ ಹೋಗುವವರೆ, ಯಾರೂ ಸಹಾಯ ಮಾಡುತ್ತಿಲ್ಲ ನೋಡಿ, ತನಗಾದರೋ ತನ್ನ ಅಪ್ಪನಿಗೆ ಬಿಸಿ ಭಜಿ ಒಯ್ಯುವ ಕೆಲಸ, ಬೇರೆ ಯಾರೂ ತುರ್ತು ಸಹಾಯಕ್ಕೆ ಧಾವಿಸದೇ ಇದ್ದುದು ಇವರ ಗಮನಕ್ಕೆ ಬಂದು ಯಾರಾದರೂ ಸಹಾಯ ಮಾಡಬಾರದೇ ಎಂದು ಮನದಲ್ಲಿಯೇ ಹಾರೈಸುತ್ತ, ಜನರ ನಿಲುವನ್ನು ಶಪಿಸುತ್ತ, ಮನೆಗೆ ಹೋದ ಗೆಳೆಯನಿಗೆ, ಅಪ್ಪ ಇನ್ನೊಬ್ಬ ಗೆಳೆಯನ ಮನೆಗೆ ಭೋಜನಕ್ಕೆ ಹೋಗಿದ್ದು, ಗೊತ್ತಾಗಿ, ಬೇಗ ಬೇಗ ಊಟ ಮುಗಿಸಿ, ಕಚೇರಿಗೆ ತಡವಾಗುತ್ತದೆಂದು ಮರಳುವಾಗ ಕೂಡ ಆ ವೃದ್ಧರನ್ನು ಅದೇ ತಾನೆ ಒಂದು ಆಟೋದಲ್ಲಿ ಸಾಗಿಸಿದ್ದುದನ್ನು ಯಾರೋ ಹೇಳಿದ್ದನ್ನು ಕೇಳಿಸಿಕೊಂಡ ಸಮಾಧಾನ.
ಕೊನೆಗೆ ಚಿಕಿತ್ಸೆ ದೊರೆಯುವಲ್ಲಿ ವಿಳಂಬವಾದ ಕಾರಣ, ಆಸ್ಪತ್ರೆಯ ಶವಾಗಾರದಲ್ಲಿ ತಣ್ಣನೆ ಮಲಗಿದ್ದುದು ತನ್ನ ಅಪ್ಪನೇ ಎಂದು ಅರಿಯಲು ಬಹು ಹೊತ್ತು ಬೇಕಾಗಲಿಲ್ಲ, ಅಪ್ಪ ಇತ್ತೀಚೆಗೆ ದೇವರಿಗೆ ಹರಕೆಯಾಗಿ ತಲೆಗೂದಲು ಅರ್ಪಿಸಿ, ಬೋಳುತಲೆ ಮಾಡಿಕೊಂಡದ್ದು, ಆ ಕ್ಷಣದಲ್ಲಿ ನೆನಪಾಗದೇ, ‘ಆ ಕ್ಷಣದಲ್ಲಿ ‘ಯಾರೋ ಮುದುಕ’ ಎಂದು ಭ್ರಮಿಸಿದ್ದಾರೆ, ಆದರೆ ಅದೇ, ಕ್ಷಣ ಸಹಾಯ ಹಸ್ತ ಚಾಚುವ ಗುಣ ರೂಢಿಸಿಕೊಂಡಿದ್ದಲ್ಲಿ, ಮತ್ತೊಬ್ಬರ ಸ್ಥಿತಿಗೆ ಸ್ಪಂದಿಸುವ ಗುಣ ನಮ್ಮದಾಗಿದ್ದರೆ, ಅಷ್ಟೊಂದು ರಕ್ತಸ್ರಾವವಾಗಿ ಆ ವೃದ್ಧರು ಸಾಯುತ್ತಿರಲಿಲ್ಲವೇನೋ, ಸಮಯಕ್ಕೆ ಸರಿಯಾದ ಸಹಾಯ ನೀಡುವಲ್ಲಿ ಇರುವ ‘ಜಾಯ್ ಆಫ್ ಗಿವಿಂಗ್’ ಗುಣಸ್ವಭಾವ ಅಳವಡಿಸಿಕೊಂಡಿದ್ದರೆ! ಬಹುಶ: ಆ ದುರ್ಘಟನೆ ತಪ್ಪಬಹುದಿತ್ತು ಎಂದೇ ತರ್ಕಿಸಬೇಕಾಗುತ್ತದೆ. ಮಾಡುವ ಪ್ರಯತ್ನವನ್ನಾದರೂ ಇನ್ ಟೈಮ್ ಮಾಡಬಹುದಿತ್ತಲ್ಲವೇ? ಆ ಗಳಿಗೆಯಲ್ಲಿ ತಾನು ಹಾಗೆ ವರ್ತಿಸಿದ್ದಕ್ಕೆ ಇಂದಿಗೂ ಮರುಗುತ್ತ, ವಿಷಾಧಿಸುವ ಅವರು ಇಂದು ಬದಲಾಗಿದ್ದಾರೆ. ಇಂತಹ ಸಂದರ್ಭಗಳು ಎದುರಾದರೆ , ತಕ್ಷಣ ಕಾರ್ಯತತ್ಪರರಾಗುತ್ತಾರೆ. ಇಂತಹ ಘಟನೆಗಳು ನಮ್ಮ ಮನೆಯಲ್ಲಿ ಆದಾಗಲೇ ನಾವು ಎಚ್ಚತ್ತುಕೊಳ್ಳುವುದಾದರೆ, ಇನ್ನೆಷ್ಟು ಆಕ್ಷಿಡೆಂಟ್ಗಳು ಇನ್ನೂ ಕಾದಿವೆಯೋ! ಈ ಸೂಕ್ಷ್ಮ ನಮ್ಮೆಲ್ಲರಿಗೆ ಅರಿವಿಕೆ ಬರುವ ಅಗತ್ಯವಿದೆ.
ಜಾಯ್ ಆಫ್ ಗಿವಿಂಗ್ ಯಾವುದೇ ರೀತಿಯಲ್ಲಿರಬಹುದು, ಕ್ಷಣದ ಸಹಾಯವಿರಬಹುದು, ದೀರ್ಘ ಕಾಲದ ಸಹಾಯವಾಗಿರಬಹುದು, ಹೆಚ್ಚಿನ ಅವಧಿಯ ಸಹಾಯ ಇನ್ನೂ ಹೆಚ್ಚು ಪರಿಣಾಮಕಾರಿಯಾಗಬಹುದು. ಒಂದು ಗಳಿಗೆಯ ಸಾಂತ್ವನವೂ ಜಾಯ್ ಆಫ್ ಗಿವಿಂಗ್ ನ ರೂಪವೇ! ಅದು ನಾವು ನಮ್ಮ ಅಂತ:ಕರಣದ ಮಾತುಗಳನ್ನು ವಿನಿಮಿಯ ಮಾಡುತ್ತ, ಮತ್ತೊಂದು ಹೃದಯವನ್ನು ಸ್ಪರ್ಶಿಸುವ ಕ್ರಿಯಾರೂಪದಲ್ಲಿರುತ್ತೆ. ಕೆಲ ಸಂದರ್ಭಗಳಲ್ಲಿ ಒಂದು ಸಾಂತ್ವನದ ಮಾತು, ಅದನ್ನು ಪಡೆದ ವ್ಯಕ್ತಿಗೆ ಜೀವಮಾನದುದ್ದಕ್ಕೂ ನೆನಪಿಡುವಂತಾಗುತ್ತದೆ.
ಮತ್ತೊಂದು ದೇಶದ ಸೈನಿಕನೊಬ್ಬ ಗಾಯಗೊಂಡು, ಬಾಯಾರಿ ನೀರು ಕೇಳಿದಾಗ, ಒಂದು ಲೋಟ ಹಾಲು ನೀಡಿದ ಆ ಯುವತಿಗೆ ಮುಂದೊಂದು ದಿನ ವಾಸಿಯಾಗದ ಖಾಯಲೆಯಾದಾಗ, ಪರದೇಶಕ್ಕೆ ಚಿಕಿತ್ಸೆಗೆಂದು ಹೋದಾಗ, ಆ ದೇಶದಲ್ಲಿಯೇ ಅಂತಹ ರೋಗವನ್ನು ವಾಸಿಮಾಡಬಲ್ಲ ಏಕೈಕ ಡಾಕ್ಟರರಾಗಿದ್ದ ಆ ಸಹೃದಯರು, ಅವಳ ಹೆಸರು, ವಿಳಾಸ ನೋಡಿ, ಅವಳನ್ನು ಗುರುತಿಸಿ, ಆಪರೇಶನ್ನು ನಿರ್ವಹಿಸಿ, ಒಂದು ಲೋಟ ಹಾಲಿನ ಋಣವಿಂದು ತೀರಿಸಿದೆ, ಎಂದು ಚೀಟಿ ಬರೆದಿದ್ದ ಕಥೆ ನಮಗೆಲ್ಲ ಗೊತ್ತು, ಎಂತಹ ಅಗಾಧ ಸಂದೇಶ!
ನಿನ್ನೆ ಮನೆಗೆ ಪೋಸ್ಟಮನ್ ಒಂದು ಲಕೋಟೆ ತಂದು ಕೊಟ್ಟಾಗ, ಅದನ್ನು ಬಿಚ್ಚಿ ನೋಡಿದಾಗ, ಒಬ್ಬ ಬಡ ವಿದ್ಯಾರ್ಥಿಯೊಬ್ಬ ತನ್ನ ಪಿ.ಯು.ಸಿ ಪರೀಕ್ಷೆಯ ಫಲಿತಾಂಶದ ವಿವರವನ್ನು ನೀಡಿ, ಮುಂದಿನ ಸಾರಿ ಇನ್ನೂ ಚನ್ನಾಗಿ ಓದುತ್ತೇನೆ ಎಂದು, ತಿಳಿಸಿ ಬರೆದ ಪತ್ರವಿದು. ನನಗೆ ಯಾವ ರೀತಿಯೂ ಸಂಬಂಧಿಯಲ್ಲದ, ಕೇವಲ ಮಾನವೀಯತೆಯ, ಮನುಷ್ಯ ಸಂಬಂಧವಿರುವ ನಮ್ಮಿಬ್ಬರನ್ನು ಹೆಣೆದದ್ದು, ಧಾರವಾಡದಲ್ಲಿ ಕೇಂದ್ರಸ್ಥಾನ ಹೊಂದಿಕ ‘ವಿದ್ಯಾಪೋಷಕ’ ಎಂಬ ಸಂಸ್ಥೆ. ಈ ಸಂಸ್ಥೆಗೆ ನೀಡಿದ ಧನಸಹಾಯವೊಂದು ಈ ರೀತಿ ಆ ಮಗುವಿನ ಬದುಕು ಕಟ್ಟಲು ಸಹಾಯಕವಾಗಿತ್ತು, ಆ ಸಂಸ್ಥೆಯ ಸ್ವಯಂಸೇವಕನಾದ ನನಗೆ ಆಗಾಗ ಕೆಲ ಮಕ್ಕಳನ್ನು ಪೇರೆಂಟಿಂಗ್ ಮಾಡುವ ಅವಕಾಶವೂ ಸಿಗುತ್ತಿರುವುದು ನನ್ನ ಅದೃಷ್ಟ. ಅದಕ್ಕೆ ತುಸು ನಮ್ಮ ಸಮಯ ವ್ಯಯಿಸಬೇಕಷ್ಟೇ. ಅವನೇನು ಬಹುದೊಡ್ಡ ಪಂಡಿತ ಆಗದಿದ್ದರೂ ಈ ದೇಶದ ಒಬ್ಬ ಜವಾಬ್ದಾರಿಯುತ ಪ್ರಜೆಯಾದರೂ ನನಗೆ ಸಂತೋಷವೇ. ನಾವೆಂದೂ ಮುಖತ: ನೋಡದ ಆ ಮಕ್ಕಳು ಇಂದು ತುಸುವಾದರೂ ನೆಮ್ಮದಿ ಹೊಂದಿ, ಶಿಕ್ಷಣ ಪಡೆಯುತ್ತಿರುವುದು, ಮನದ ಮೂಲೆಯಲ್ಲಿ ಎಲ್ಲೋ ಒಂದು ರೀತಿ ‘ಸುಕೂನಸಾ’ ಫೀಲಿಂಗ್ ಅನಿಸುತ್ತದೆ. ನೂರು ಮಾತನಾಡುವುದಕ್ಕಿಂತ, ಒಂದು ಕೆಲಸ ಹೆಚ್ಚು ಮಹತ್ವ ಪಡೆಯುವುದು, ಇಂತಹ ಕ್ಷಣಗಳಿಂದಲೇ ಅಲ್ಲವೇ? ಇಂತಹ ಆರೆಂಟು ವಿದ್ಯಾರ್ಥಿಗಳಿಗೆ ತುಸುವಾದರೂ ಬೇರೆ ಬೇರೆ ಆಯಾಮಗಳಲ್ಲಿ ಸಹಾಯ ಮಾಡುತ್ತಿರುವ ಸದವಕಾಶ ನನಗೆ ಒದಗಿದ್ದು, ನನ್ನ ಅದೃಷ್ಟವೂ ಅಲ್ಲವೇ? ಈ ಸಂದರ್ಭಗಳಲ್ಲಿ ಇಂದಿಗೂ ತನ್ನ ಎಂಭತ್ತು ದಾಟಿದ ಗಟ್ಟಿಗಿತ್ತಿ ನನ್ನ ಅಮ್ಮನನ್ನು ನೆನೆಯುತ್ತೇನೆ. ಖುಷಿಯಿಂದ ಊರಕಡೆಗಿರುವ ಅವಳೊಂದಿಗೆ ಇದನ್ನೆಲ್ಲ ಹಂಚಿಕೊಳ್ಳುತ್ತೇನೆ. ಇದೆಲ್ಲ ನೀನು ನೀರೆರೆದು ಕಲಿಸಿದ ಪಾಠ ಎಂದು ಹೇಳುತ್ತಿರುತ್ತೇನೆ.
ಪರೋಪಕಾರ ಗುಣದ ಮಹತ್ವ ತಿಳಿಸುತ್ತ, ಮತ್ತೊಬ್ಬರ ತೊಂದರೆಯಲ್ಲಿ ಸ್ಪಂದಿಸುವಂತೆ ಕಿವಿಮಾತು ಕೇಳುತ್ತಲೇ ಬೆಳದ ಮಕ್ಕಳು, ಈಗ ನೆಟ್ಟ ಮರ ಫಲ ನೀಡುವಂತೆ, ಒಂದೆರಡು ವರ್ಷಗಳ ಹಿಂದೆ, ಮಗರಾಯ, ತನ್ನ ಪ್ರಾಣಿ ಪ್ರೇಮ ಮೆರೆದು, ಮೈಸೂರು ಝೂದಲ್ಲಿ ‘ಕಿಂಗ್ ಕೋಬ್ರಾ’ ದತ್ತು ತೆಗೆದುಕೊಂಡಿದ್ದು ನನಗೆ ಗೊತ್ತಾದಾಗ ತುಂಬ ಖುಷಿಯಾಗಿತ್ತು.. ನಂತರ ತನ್ನ ಪಾಕೆಟ್ ಮನಿಯಿಂದಲೇ, ಮತ್ತೊಂದು ವರ್ಷ ಮತ್ತೊಂದು ‘ಕಿಂಗ್ ಕೋಬ್ರಾ’ ವನ್ನು ಮತ್ತೊಮ್ಮೆ ದತ್ತು ಪಡೆದು ತನ್ನ ಪ್ರಾಣಿ ಪ್ರೀತಿ ಮೆರೆದವಳು ಇನ್ನೂ ಕಾಲೇಜು ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಮುದ್ದಿನ ಮಗಳು. (ಮತ್ತೊಮ್ಮೆ ಕಿಂಗ್ ಕೋಬ್ರಾವನ್ನೇ ಆರಿಸಲು ಸ್ವಾರಸ್ಯಕರ ಕಾರಣವಿದೆ, ಇದು ಬಹಳ ಜನಕ್ಕೆ ನಂಬಿಕೆಯಾಗಲಿಕ್ಕಿಲ್ಲವಾದರೂ, ಹಿಂದಿನ ವರ್ಷದ ದತ್ತು ಸ್ವೀಕಾರದ ಅವಧಿ ಮುಗಿದು, ಬೇರೆ ಪ್ರಾಣಿ ದತ್ತು ತೆಗೆದುಕೊಳ್ಳುವ ವಿಚಾರ ಬಂದು, ಆ ನಿರ್ಧಾರ ಕೈಗೊಳ್ಳುವ ರಾತ್ರಿ ಕನಸಿನಲ್ಲಿ, ಪದೇ ಪದೇ ಬಂದು ಮನೆಯಲ್ಲಿ ಕುಳಿತು ಎಲ್ಲಿ ಬೇಕಾದಲ್ಲಿ ಅಂದರೆ ನಮ್ಮ ಬೆಡ್ ನಲ್ಲಿ ಕೂಡ ನವ್ಮೊಂದಿಗೆ ಏನೂ ತೊಂದರೆ ಮಾಡದೇ, ಮನೆತುಂಬ ಇರಲು ಶುರುವಿಟ್ಟುಕೊಂಡ, ಕೋಬ್ರಾ ಮಹಾರಾಜ, ದತ್ತು ತೆಗೆದುಕೊಳ್ಳುತ್ತಲೇ ಕನಸಿನಿಂದಲೇ ಮಾಯ!) ಅಂತಹ ತರ್ಕಕ್ಕೆ ನಿಲುಕದ ಸಂಗತಿ ಘಟಿಸಿದ್ದಕ್ಕೆ ಮಗಳು ಆ ನಿರ್ಧಾರ ತೆಗೆದುಕೊಂಡಳು.
ಇತ್ತೀಚೆಗೆ ಜಗತ್ತಿನ ಶ್ರೀಮಂತದೊರೆಗಳಲ್ಲಿ ಒಬ್ಬರಾದ ವಾರೆನ್ ಬಫೇಟ್ ರು ತಮ್ಮ ಸಂಪತ್ತಿನ ಬಹುಪಾಲು. ಅಂದರೆ, ಒಂದು ಲಕ್ಷದ ಎಪ್ಪತೈದು ಲಕ್ಷ ಕೋಟಿಗಳ ಹಮ್ಮಿಣಿಯನ್ನು ಬಿಲ್ ಗೇಟ್ಸ್ ಸಂಸ್ಥೆಗೆ ದಾನವಾಗಿ ನೀಡಿದ್ದು ‘ಜಾಯ್ ಆಫ್ ಗಿವಿಂಗ್’ ನ ಪರಾಕಾಷ್ಠೆ ಎಂದೇ ಹೇಳಬಹುದು. ನಮ್ಮ ದೇಶದ ಶ್ರೀಮಂತ ಭಕ್ತರ, ತಮ್ಮ ತಮ್ಮ ನಂಬಿಕೆಯ ದೇವರಿಗೆ ಹರಕೆ ರೂಪದ ಕಾಣಿಕೆಯೂ ಜಾಯ್ ಆಫ್ ಗಿವಿಂಗ್ ಆದರೂ, ಅದು ಸದ್ಭಳಕೆ ಯಾದಲ್ಲಿ ಮಾತ್ರ ಅದಕ್ಕೊಂದು ಅರ್ಥ ಬರುತ್ತದಲ್ಲವೇ?
ಒಂದು ಸಮುದ್ರ ದಂಡೆಯ ಮೇಲೆ ಯಾವುದೋ ಕಾರಣಕ್ಕೆ ದಂಡೆಯ ಮೇಲೆ ಸಾಯುವ ಸ್ಥಿತಿಯಲ್ಲಿ ಚಡಪಡಿಸುತ್ತ ಇರುವ ಸಾವಿರಾರು ಮೀನುಗಳಲ್ಲಿ ತನ್ನ ಕೈಗೆ ಸಿಗುವ ಕೆಲ ಮೀನುಗಳನ್ನು ಎತ್ತಿ ಆ ಸಮುದ್ರದಲ್ಲಿ ಮರು ಎಸೆಯುತ್ತಿದ್ದ ಒಬ್ಬರನ್ನು ‘ಅಷ್ಟೊಂದು ಮೀನುಗಳು ಸಾಯುತ್ತಿವೆಯಲ್ಲಾ, ನೀವು ಕೆಲವೊಂದು ಮೀನುಗಳನ್ನು ಸಮುದ್ರದಲ್ಲಿ ಮರು ಎಸೆದರೆ, ಅದರಿಂದ ಆಗುವ ಬದಲಾವಣೆಯಾದರೂ ಏನು? ವ್ಯರ್ಥ ಪ್ರಯತ್ನವೆಂದು ಅಂದಾಗ, ‘……….ಏನು ಬದಲಾವಣೆಯಾಗುತ್ತದೆಂದು ಮರುನೀರಿನಲ್ಲಿ ಈಜುತ್ತಿರುವ ಆ ಮೀನುಗಳನ್ನು ಕೇಳಿನೋಡಿ, ಅರ್ಥವಾದೀತು ಎಂದನಂತೆ! ಅದೊಂದು ಅಗಾಧ ಜೀವದಾನವೆಂಬುದು ಇನ್ನೊಬ್ಬರಿಗೆ ತಕ್ಷಣ ತಿಳಿದು ತಾವೂ ಆ ಕೆಲಸದಲ್ಲಿ ಕೈಗೂಡಿದರೆನ್ನಿ! ಈ ಕಥೆ ಎಲ್ಲರಿಗೂ ಗೊತ್ತಿದ್ದದ್ದೇ, ಆದರೂ ಸಂದರ್ಭೋಚಿತವಾಗಿ ಬಳಸಿದೆ ಅಷ್ಟೆ.
‘ಜಾಯ್ ಆಫ್ ಗಿವಿಂಗ್’ ಕ್ಷಣದ ಮಟ್ಟಿಗಾದರೂ ನೀಡುವವರಿಗೆ ನೆಮ್ಮದಿಯನ್ನು ತರುವಲ್ಲಿ, ಮನಷ್ಯತ್ವವನ್ನು ಬಡಿದೆಬ್ಬಿಸುವ, ಮಾನವೀಯತೆಯ ಸಂಕೇತವೆಂದು ಹೇಳಬಹುದಲ್ಲವೇ!ಸೊ, ಗೆಳೆಯರೇ, ಇಂದಿನಿಂದಿಲೇ 'ಲೆಟ್ಸ್ ಲರ್ನ ಆಂಡ್ ಲವ್ ದಿ ಆರ್ಟ ಆಫ್ 'ಜಾಯ್ ಆಫ್ ಗಿವಿಂಗ್!'.ಎಂದು ಹೇಳ್ತಾ.....ಇಂತೀ.....
Comments
ಚೆನ್ನಾಗಿದೆ ಇಟ್ನಾಳ್ ಅವರೆ, ನಾನು
ಚೆನ್ನಾಗಿದೆ ಇಟ್ನಾಳ್ ಅವರೆ, ನಾನು ಇದನ್ನು ಪೂರ್ತಿ ಒಪ್ಪುತ್ತೇನೆ. ನನ್ನ ಅಕ್ಶ್ಹಯ ಪಾತ್ರ ಲೇಖನ ವನ್ನೂ ಓದಿ. ಕೊಡುವ ಪ್ರಘ್ನೆಯನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು!
ಮೀನಾ
In reply to ಚೆನ್ನಾಗಿದೆ ಇಟ್ನಾಳ್ ಅವರೆ, ನಾನು by rasikathe
ಡಾ; ಮೀನಾ ರವರೇ, ತಮ್ಮ ಸ್ಪಂದನೆಗೆ
ಡಾ; ಮೀನಾ ರವರೇ, ತಮ್ಮ ಸ್ಪಂದನೆಗೆ ವಂದನೆಗಳು. ಹಾಗೆಯೇ ಅಕ್ಷಯ ಪಾತ್ರ ದ ಬರಹ ಓದಿದೆ. ತುಂಬ ಮಾಹಿತಿಪೂರ್ಣ ಹಾಗೂ ಕಳಕಳಿಯಿಂದ ಕೂಡಿದೆ, ಕಾಗದದ ಕುರಿತು ಓದಿದೆ. ತುಂಬ ಹೃದಯಸ್ಪರ್ಶಿ, ಬರಹಗಳು, ಪ್ರತಿಕ್ರಿಯೆಗೆ ಧನ್ಯವಾದ ಮೇಡಂ.
ಕೊಡುವದರಲ್ಲಿ ಇರುವ ಸ0ತಸದ
ಕೊಡುವದರಲ್ಲಿ ಇರುವ ಸ0ತಸದ ವರ್ಣನೆ ಚೆನ್ನಾಗಿದೆ, ಹಾಗೆ ಅದನ್ನು ಕೆರೆಯ ನೀರನು ಕೆರೆಗೆ ಚೆಲ್ಲಿ ಎ0ಗು ಭಾವಿಸುವಾಗ ಮತ್ತಷ್ಟು ಸ0ತಸ ತ0ದೀತು
ಉತ್ತಮ ವಿಚಾರವುಳ್ಳ ಲೇಖನ.
ಉತ್ತಮ ವಿಚಾರವುಳ್ಳ ಲೇಖನ. ವಿವೇಕಾನಂದರ ವಿಚಾರ ಹೀಗಿದೆ:
ಯಾವಾಗಲೂ ಹೆಚ್ಚಿನ ಸಂತೋಷಕ್ಕಾಗಿ ಕಡಿಮೆಯದನ್ನು ಬಿಡುತ್ತೇವೆ. ಇದು ವ್ಯಾವಹಾರಿಕ ಧರ್ಮ - ಸ್ವಾತಂತ್ರ್ಯ ಮತ್ತು ಮೋಕ್ಷ ಗಳಿಸುವುದು. ಕಡಿಮೆಯದನ್ನು ತ್ಯಜಿಸಿ, ನೀವು ಹೆಚ್ಚಿನದನ್ನು ಪಡೆಯಬಹುದು. ತ್ಯಜಿಸಿ, ತ್ಯಜಿಸಿ, ತ್ಯಾಗ ಮಾಡಿ, ಬಿಟ್ಟು ಬಿಡಿ. ಯಾವುದನ್ನೂ ಪಡೆಯದಿರಲು ಅಲ್ಲ, ಸೊನ್ನೆಗಾಗಿ ಅಲ್ಲ, ಆದರೆ ಹೆಚ್ಚಿನದನ್ನು ಪಡೆಯುವ ಸಲುವಾಗಿ!
It is always for greater joy that you give up the lesser. This is practical religion—the attainment of freedom, renunciation. Renounce the lower so that you may get the higher. Renounce! Renounce! Sacrifice! Give up! Not for zero. Not for nothing, but to get the higher.
-ಸ್ವಾಮಿ ವಿವೇಕಾನಂದ.
ಕೊಡುವುದರಲ್ಲಿ ಸುಖ ಕಂಡ, ಕಾಣುತ್ತಿರುವ ವ್ಯಕ್ತಿಯ ಲೇಖನವಿದು: ಪಾಲಮ್ ಕಲ್ಯಾಣ ಸುಂದರಮ್. http://sampada.net/%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%AE%E0%B2%BE%E0%B2%A8%E0%B2%A6-%E0%B2%B5%E0%B3%8D%E0%B2%AF%E0%B2%95%E0%B3%8D%E0%B2%A4%E0%B2%BF-%E0%B2%AA%E0%B2%BE%E0%B2%B2%E0%B2%AE%E0%B3%8D-%E0%B2%95%E0%B2%B2%E0%B3%8D%E0%B2%AF%E0%B2%BE%E0%B2%A3%E0%B2%B8%E0%B3%81%E0%B2%82%E0%B2%A6%E0%B2%B0%E0%B2%AE%E0%B3%8D
In reply to ಉತ್ತಮ ವಿಚಾರವುಳ್ಳ ಲೇಖನ. by kavinagaraj
ಹಿರಿಯರಾದ ಕವಿ ನಾಗರಾಜ ರವರೇ,
ಹಿರಿಯರಾದ ಕವಿ ನಾಗರಾಜ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ನಮಸ್ಕಾರಗಳು. ಬರಹಕ್ಕೆ ಮೆಚ್ಚುಗೆ ಸೂಚಿಸಿ, ಪಾಲಂ ಕಲ್ಯಾಣ ಸುಂದರಮ್ ಬಗ್ಗೆ ಓದುಲು ತಿಳಿಸಿ ಕೊಂಡಿ ನೀಡಿದ್ದು ಉಪಯುಕ್ತವಾಯಿತು. ಅವರನ್ನು ಅರಿಯಲು ಸಹಾಯಕವಾಯಿತು. ಎಂತಹ ನಿಷ್ಪೃಹ ಜೀವ ಅವರು. ತಮ್ಮ ಲೇಖನ ಸುಲಲಿತ ವಾಗಿ ಚನ್ನಾಗಿ ಮೂಡಿಬಂದಿದೆ. ತಮ್ಮ ಪ್ರತಿಕ್ರಿಯೆ ಹಾಗೂ ಮೇಲಿನ ಉಪಯುಕ್ತ ಮಾಹಿತಿಗೆ ಧನ್ವವಾದಗಳು.........
ಗೆಳೆಯ ಪಾರ್ಥರೇ, ತಮ್ಮ
ಗೆಳೆಯ ಪಾರ್ಥರೇ, ತಮ್ಮ ಕಾಳಜಿಪೂರ್ವ ಪ್ರತಿಕ್ರಿಯೆಗೆ ಧನ್ಯವಾದಗಳು.
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು
' ಜಾಯ್ ಆಫ್ ಗಿವಿಂಗ್ ' ಒಂದು ಅರ್ಥಪೂರ್ಣ ಲೇಖನ, ವೃದ್ಧರನ್ನು ತೀರ ನಿಕೃಷ್ಟವಾಗಿ ಕಂಡು ಮಾತನಾಡುವ ಕೆಲವು ಬಸ್ ಕಂಡಕ್ಟರ್ ಗಳು, ಆಟೋದಲ್ಲಿ ವೃದ್ಧರ ಲಗೇಜನ್ನು ಇಟ್ಟುಕೊಳ್ಳುವಲ್ಲಿ ಮತ್ತು ಇಳಿಸಿ ಕೊಡುವಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಅವರ ವೃದ್ಧಾಪ್ಯದ ಸ್ಥಿತಿಯನ್ನು ಅವಮಾನಿಸಿ ಗೇಲಿ ಮಾಡುವ, ಬಸ್ ಗಳಲ್ಲಿ ಹಿರಿಯನಾಗರಿಕರು ಮತ್ತು ಅಂಗವಿಕಲರು ತಮ್ಮ ಪಕ್ಕದಲ್ಲಿ ನಿಂತಿದ್ದರೂ ಹಿರಿಯ ನಾಗರಿಕರ ಮತ್ತು ಅಂಗವಿಕಲರ್ ಶೀಟಿನಲ್ಲಿ ನಿರ್ಲಜ್ಜತನದಿಂದ ಏನೂ ಅನಿಸಿರದ ರೀತಿಯಲ್ಲಿ ಕುಲಿತು ಕೊಂಡು ಪಯಣಿಸುವವರ ಚಿತ್ರಗಳು ಕಣ್ಮುಂದೆ ತೇಲಿ ಬಂದವು. ತಮ್ಮ ಲೇಖನ ಸಕಾಲಿಕ ಮತ್ತು ಅರ್ಥಪೂರ್ಣ, ಧನ್ಯವಾದಗಳು.
In reply to ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ by H A Patil
ಹಿರಿಯರಾದ ಪಾಟೀಲರವರೆ,
ಹಿರಿಯರಾದ ಪಾಟೀಲರವರೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಾವು ಈ ಬರಹ ನೋಡಿ, ಇನ್ನೂ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ, ಅವೆಲ್ಲ ಕಣ್ಣ ಮುಂದೆ ತೇಲಿ ಬಂದವು. ಎಂದಿದ್ದು, ತಮಗೆ ಈ ಭಾವಗಳು ಮೂಡಿ, ಹಂಚಿಕೊಂಡಿದ್ದಕ್ಕಾಗಿ ವಂದನೆಗಳು.
ಸರ್ ತಮ್ಮ ಲೇಖನ ಚೆನ್ನಾಗಿ
ಸರ್ ತಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ, ಅಲ್ಲದೆ ಇದು ನನಗೆ ಸ್ಪೂತಿ ಕೂಡ, ಇದೇ ರೀತಿ ಇನ್ನಷ್ಠು ಲೇಖನ ಬರೆಯಿರಿ
In reply to ಸರ್ ತಮ್ಮ ಲೇಖನ ಚೆನ್ನಾಗಿ by siddharudh_kattimani
ಗೆಳೆಯ ಸಿದ್ಧಾರೂಢರೇ, ಬರಹ ತಮಗೆ
ಗೆಳೆಯ ಸಿದ್ಧಾರೂಢರೇ, ಬರಹ ತಮಗೆ ಸ್ಫೂರ್ತಿ ನೀಡಿದ್ದು ತಿಳಿದು ಸಂತೋಷ. ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.