ಜೀವ ಹೂವಾಗಿದೆ - ಭಾಗ - ೧

ಜೀವ ಹೂವಾಗಿದೆ - ಭಾಗ - ೧

ಮುಂಜಾನೆ ಆರು ಗಂಟೆಯ ಸಮಯ...ರಾತ್ರಿ ಬಿದ್ದಿದ್ದ ಮಳೆಯಿಂದ ರಸ್ತೆಗಳೆಲ್ಲ ಒದ್ದೆ ಆಗಿತ್ತು. ಸುತ್ತಲಿನ ಹವೆ ಅದ್ಭುತವಾಗಿತ್ತು. ತಣ್ಣನೆಯ ಗಾಳಿ...ಚಿಟಪಟ ಬೀಳುತ್ತಿದ್ದ ಮಳೆಹನಿ.. ಸುತ್ತಲೂ ಆವರಿಸಿದ್ದ ಮಂಜನ್ನು ಭೇದಿಸಿಕೊಂಡು ಸೃಜನ್ ನ ಕಾರು ಕೊಡೈಕೆನಾಲ್ ಬೆಟ್ಟವನ್ನು ಏರುತ್ತಿತ್ತು. ಪಕ್ಕದಲ್ಲಿ ಕುಳಿತಿದ್ದ ಮಡದಿ ಸಿಂಧು ಸುತ್ತಲಿನ ವಾತಾವರಣವನ್ನು ಸವಿಯುತ್ತ ಕ್ಯಾಮೆರಾದಲ್ಲಿ ಅದನ್ನು ಸೆರೆಹಿಡಿಯುತ್ತಿದ್ದಳು.
 
ಎರಡು ದಿನದ ಹಿಂದೆಯಷ್ಟೇ ಮದುವೆ ಆಗಿದ್ದ ಸೃಜನ್ ಮತ್ತು ಸಿಂಧು ಮಧುಚಂದ್ರಕ್ಕೆಂದು ಕೊಡೈಕೆನಾಲ್ ಗೆ ಆಗಮಿಸಿದ್ದರು. ಮುಂಚಿತವಾಗಿಯೇ ರೂಮನ್ನು ಕಾಯ್ದಿರಿಸಿದ್ದ ಸೃಜನ್, ನಿಗದಿಪಡಿಸಿದ್ದ ಹೋಟೆಲ್ ಗೆ ಬಂದು ವಿಶ್ರಾಂತಿ ಪಡೆದು ನಂತರ ಸುತ್ತಾಡಲು ಹೋಗೋಣ ಎಂದು ನಿರ್ಧರಿಸಿದ್ದರು. ನವಜೋಡಿಗಳಿಗೆ ಕೊಡೈ ನ ಹವಾಮಾನ ಹೇಳಿ ಮಾಡಿಸಿದಂತಿತ್ತು. ಇಬ್ಬರೂ ಪ್ರೇಮಲೋಕದಲ್ಲಿ ತೇಲುತ್ತಿದ್ದರು.
 
ಮಧ್ಯಾಹ್ನದ ಹೊತ್ತಿಗೆ ಇಬ್ಬರೂ ಎದ್ದು ಸ್ನಾನ ಮಾಡಿ ಸಿದ್ಧರಾಗಿ ಸುತ್ತಾಡಲು ಹೊರ ಹೋದರು. ಮೊದಲು ಕೊಡೈ ಲೇಕ್ ಬಳಿ ಬಂದು ಸ್ವಲ್ಪ ಹೊತ್ತು ಓಡಾಡಿ, ಬೋಟಿಂಗ್ ತೆರಳಿ, ಅಲ್ಲಿಂದ ಆಚೆ ಬಂದು ಅಲ್ಲೇ ಪಕ್ಕದಲ್ಲಿದ್ದ ಬ್ರಯಾಂಟ್ ಪಾರ್ಕ್ ಗೆ ಹೋಗಿ ಅಲ್ಲೊಂದು ತಾಸು ಕಳೆದು, ನಂತರ ಕೋಕರ್ಸ್ ವಾಕ್ ನಲ್ಲಿ ನಡೆದು ಬರುವಾಗ ಹೋಂ ಮೇಡ್ ಚಾಕಲೇಟ್ ಸವಿದು ಮನೆಗೂ ಪಾರ್ಸಲ್ ತೆಗೆದುಕೊಂಡು ಬರುವ ವೇಳೆಗೆ ಸಂಜೆ ಆಗಿತ್ತು.
 
ಸಿಂಧು ಕೊಡೈ ನ ಜಾಗಗಳನ್ನು ಬಹಳಷ್ಟು ಇಷ್ಟ ಪಟ್ಟಿದ್ದಳು. ಅವಳ ಉತ್ಸುಕತೆ, ಸಂತೋಷವನ್ನು ಕಂಡ ಸೃಜನ್ ಮರುದಿನ ಇನ್ನೂ ಅದ್ಭುತವಾದ ಜಾಗಗಳನ್ನು ತೋರಿಸುವುದಾಗಿ ಭರವಸೆ ತೋರಿಸಿದ್ದ. ಹೋಟೆಲ್ ಗೆ ಬಂದು ಊಟ ಮಾಡಿ ರೂಮಿಗೆ ಬರುವ ವೇಳೆಗೆ ಇಬ್ಬರೂ ಸುಸ್ತಾಗಿ ಹೋಗಿದ್ದರು.
 
ಹಿಂದಿನ ದಿನದ ಓಡಾಟ, ರಾತ್ರಿ ತಡವಾಗಿ ಮಲಗಿದ್ದರಿಂದ ಇಬ್ಬರೂ ಏಳುವ ಹೊತ್ತಿಗೆ ಸಮಯ ಹನ್ನೊಂದಾಗಿತ್ತು. ಕೊಡೈ ಗೆ ಬಂದು ಆಗಲೇ ಒಂದೂವರೆ ದಿನವಾಗಿತ್ತು, ಇನ್ನೂ ಮನೆಗೆ ಫೋನ್ ಮಾಡಿಲ್ಲ ಎಂದು ಇಬ್ಬರೂ ತಮ್ಮ ತಮ್ಮ ಮನೆಗೆ ಫೋನ್ ಮಾಡಿ ಸ್ವಲ್ಪ ಹೊತ್ತು ಮಾತಾಡಿ, ನಂತರ ಸ್ನಾನ ಮಾಡಿ ತಿಂಡಿ ತಿಂದು ಹೊರಬರುವ ವೇಳೆಗೆ ಸಮಯ ಎರಡಾಗಿತ್ತು.
 
ಮೊದಲು ವಟಕನಲ್ ಫಾಲ್ಸ್ ನೋಡಿಕೊಂಡು, ಅಲ್ಲಿಂದ ಪೈನ್ ಫಾರೆಸ್ಟ್ ನೋಡಿಕೊಂಡು ಅಲ್ಲೊಂದಷ್ಟು ಫೋಟೋ ತೆಗೆಸಿಕೊಂಡು ಡಾಲ್ಫಿನ್ ನೋಸ್ ಬಳಿ ಬರುವ ಹೊತ್ತಿಗೆ ಸಂಜೆ ಐದು ಆಗಿತ್ತು. ಇವರು ಆ ಜಾಗಕ್ಕೆ ಹೋಗುವ ಹೊತ್ತಿಗೆ ಎಲ್ಲರೂ ಅಲ್ಲಿಂದ ವಾಪಸ್ ಬರುತ್ತಿದ್ದರು. ಸಿಂಧು ಸೃಜನ್ ಗೆ ಹೇಳಿದಳು. ಸೃಜು ಈಗ ಲೇಟ್ ಆಗಿದೆ ನಾವು ಅಲ್ಲಿ ಹೋಗಿ ವಾಪಸ್ ಬರುವ ಹೊತ್ತಿಗೆ ಕತ್ತಲಾಗಿ ಬಿಡುತ್ತದೆ. ಬಾ ವಾಪಸ್ ಹೋಗಿ ನಾಳೆ ಬರೋಣ.
 
ಇಲ್ಲ ಸಿಂಧು ನಾಳೆ ನಾವು ಬೆರಿಜಾಮ್ ಲೇಕ್ ನೋಡಲು ಹೋಗಬೇಕು. ಅಲ್ಲಿ ಹೋಗಿ ವಾಪಸ್ ಬರುವ ಹೊತ್ತಿಗೆ ಸಂಜೆ ಆಗಿ ಬಿಡುತ್ತದೆ. ಇನ್ನು ಬಂದ ಮೇಲೆ ನಾವು ವಾಪಸ್ ಊರಿಗೆ ಹೊರಡಬೇಕು. ಹೇಗಿದ್ದರೂ ಇನ್ನೂ ಬೆಳಕಿದೆಯಲ್ಲ ಬಾ ಹೋಗಿ ಬರೋಣ. ಅದೂ ಅಲ್ಲದೆ ಯಾರೂ ಇಲ್ಲದಿದ್ದರೆ ನಮಗಿನ್ನೂ ಒಳ್ಳೆಯದೇ ತಾನೇ...ನಮಗೂ ಅದೇ ತಾನೇ ಬೇಕಾಗಿರುವುದು ಎಂದು ಕಣ್ಣು ಹೊಡೆದು ಒಂದು ತುಂಟ ನಗೆ ಬೀರಿದ.
 
ಅವಳು ಅವನ ಬೆನ್ನಿಗೊಂದು ಗುದ್ದಿ, ಸದಾಶಿವನಿಗೆ ಅದೇ ಧ್ಯಾನ ಸುಮ್ಮನೆ ನಡಿ ಎಂದು ಮುಂದೆ ಸಾಗಿದರು. ಡಾಲ್ಫಿನ್ ನೋಸ್ ಬಳಿ ಬರುವ ಹೊತ್ತಿಗೆ ಆ ಜಾಗದಲ್ಲಿ ಯಾರೂ ಇರಲಿಲ್ಲ. ಹಕ್ಕಿಗಳು ತಮ್ಮ ಗೂಡುಗಳನ್ನು ಸೇರಲು ಹಾರಿ ಹೋಗುತ್ತಿದ್ದವು. ಇವರಿಬ್ಬರೂ ಆ ಗುಡ್ಡದ ಮೇಲೆ ನಿಂತು ಫೋಟೋಗಳನ್ನು ತೆಗೆದು ಇನ್ನೇನು ವಾಪಸ್ ಹೊರಡಬೇಕು ಎನ್ನುವಷ್ಟರಲ್ಲಿ....ಸಿಂಧು, ಲಾಸ್ಟ್ ಒಂದೇ ಒಂದು ಫೋಟೋ ತೆಗಿ ಎಂದು ಅವಳ ಕೈಗೆ ಕ್ಯಾಮೆರಾ ಕೊಟ್ಟು ಗುಡ್ಡದ ಮೇಲೆ ಹತ್ತಿದನು.
 
ಸಿಂಧು ಕಡೆ ನೋಡಿಕೊಂಡು ಏನನ್ನೋ ತಮಾಷೆ ಮಾಡುತ್ತಿದ್ದ ಸೃಜನ್ ಇದ್ದಕ್ಕಿದ್ದಂತೆ ಜಾರಿ ಕೆಳಕ್ಕೆ ಬಿದ್ದುಬಿಟ್ಟ. ತಕ್ಷಣ ಸಿಂಧು ಗಾಭರಿಯಿಂದ ಓಡಿ ಬಂದು ನೋಡಿದರೆ ಸೃಜನ್ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿದ್ದ. ಸಿಂಧು ಅವನನ್ನು ಎಬ್ಬಿಸಲು ಪ್ರಯತ್ನಿಸಿದರೆ ಅವಳ ಕೈಯೆಲ್ಲ ಒದ್ದೆಯಾಗಿತ್ತು. ಏನೆಂದು ನೋಡಿದರೆ ಕೈಯೆಲ್ಲ ರಕ್ತವಾಗಿತ್ತು. ಅವನ ತಲೆಗೆ ಏಟು ಬಿದ್ದು ರಕ್ತ ಹೋಗುತ್ತಿತ್ತು. ಸಿಂಧು ಗೆ ತಕ್ಷಣ ಏನು ಮಾಡಬೇಕೋ ಗೊತ್ತಾಗಲಿಲ್ಲ. ಸುತ್ತಲೂ ಬೇರೆ ಯಾರೂ ಇಲ್ಲ. ಕತ್ತಲು ಬೇರೆ ಆವರಿಸುತ್ತಿತ್ತು. ತಕ್ಷಣ ತನ್ನ ಬ್ಯಾಗಿಗೆ ಕೈ ಹಾಕಿ ಅದರಲ್ಲಿದ್ದ ಕರವಸ್ತ್ರವನ್ನು ತೆಗೆದು ಅವನ ತಲೆಗೆ ಕಟ್ಟಿದಳು. ಅವನನ್ನು ಅಲ್ಲಿಂದ ಪಕ್ಕಕ್ಕೆ ಎಳೆದು ಮಲಗಿಸಿ, ದಾರಿಯಲ್ಲಿ ಬರುವಾಗ ಕಂಡ ಮನೆಯೊಂದರ ನೆನಪಾಗಿ ಅದರ ಕಡೆ ಓಡಲು ಶುರುಮಾಡಿದಳು.
 
ಏರಿನ ದಾರಿಯಾದ್ದರಿಂದ ಬಹಳ ಕಷ್ಟಪಟ್ಟು ಓಡಿ ಮನೆಯ ಬಳಿ ಬಂದಳು. ಮನೆಯಾಚೆ ಕುಳಿತಿದ್ದ ಮನೆಯ ಯಜಮಾನನಿಗೆ ನಡೆದ ವಿಷಯ ತಿಳಿಸಿ ಅವನು ಇನ್ನೊಂದಿಬ್ಬರಿಗೆ ತಿಳಿಸಿ ಅವಳನ್ನು ಕರೆದುಕೊಂಡು ಸ್ಥಳಕ್ಕೆ ಹೋದನು. ಇವರಿಬ್ಬರೂ ಬರುವ ವೇಳೆಗೂ ಸೃಜನ್ ಗೆ ಇನ್ನೂ ಪ್ರಜ್ಞೆ ಬಂದಿರಲಿಲ್ಲ. ಕಾಲು ಗಂಟೆಯ ನಂತರ ಮತ್ತಿಬ್ಬರು ಸ್ಥಳಕ್ಕೆ ಬಂದು ಮೂವರು ಸೇರಿ ಸೃಜನ್ ನನ್ನು ಮೇಲಕ್ಕೆ ಹೊತ್ತುಕೊಂಡು ಬಂದು ಗಾಡಿ ಮಾಡಿ ಹಾಸ್ಪಿಟಲ್ ಗೆ ಸೇರಿಸಿದರು. ಸಿಂಧು ಅವರಿಗೆ ಕಾಸು ಕೊಡಲು ಹೋದಾಗ ಅವರು ಅದನ್ನು ನಿರಾಕರಿಸಿ ನಮಗೆ ಇದೆಲ್ಲ ಮಾಮೂಲಿ...ಅವರು ಹುಶಾರಾದರೆ ಬಂದು ತಿಳಿಸಿ ಎಂದು ಹೊರಟು ಹೋದರು.
 
ಸಿಂಧುಗೆ ಅಲ್ಲಿಯವರೆಗೂ ನಡೆದಿದ್ದೆಲ್ಲ ಒಂದು ಕನಸೆನ್ನುವಂತೆ ಭಾಸವಾಗುತ್ತಿತ್ತು. ಅವಳಿನ್ನೂ ಅದೇ ಗಾಭರಿಯಲ್ಲಿ ಇದ್ದಳು. ರಿಸೆಪ್ಶನ್ ನಲ್ಲಿ ಕುಳಿತುಕೊಂಡು ಫೋನ್ ತೆಗೆದುಕೊಂಡು ಇಬ್ಬರ ಮನೆಗೂ ಫೋನ್ ಮಾಡಿ ವಿಷಯ ತಿಳಿಸಿದಳು. ಪ್ರಾಣಾಪಾಯ ಏನೂ ಇಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ನೀವು ಆದಷ್ಟು ಬೇಗ ಬನ್ನಿ ಎಂದು ತಿಳಿಸಿ ಫೋನ್ ಕಟ್ ಮಾಡಿದಳು.
 
ಅಲ್ಲಿದ್ದ ಗಣಪತಿಯ ವಿಗ್ರಹಕ್ಕೆ ಕೈ ಮುಗಿದು ದೇವರೇ ಸೃಜನ್ ಗೆ ಏನೂ ಆಗದಂತೆ ಕಾಪಾಡು ಎಂದು ಪ್ರಾರ್ಥಿಸಿದಳು. ತನ್ನ ಸೃಜನ್ ನ ಪರಿಚಯವಾಗಿ ಕೇವಲ ಐದು ತಿಂಗಳಾಗಿತ್ತು. ಐದು ತಿಂಗಳಲ್ಲಿ ಎಷ್ಟೆಲ್ಲಾ ಹಚ್ಚಿಕೊಂಡಿದ್ದೆವು ಎಂದು ನೆನಪಿನ ಸುರಳಿ ಬಿಚ್ಚಿಕೊಂಡಿತ್ತು.
 
ಐದು ತಿಂಗಳ ಹಿಂದೆ ಯಾರೋ ಬಂಧುಗಳ ಮದುವೆಗೆಂದು ಹೋಗಿದ್ದಾಗ ಸೃಜನ್ ನ ಭೇಟಿ ಆಗಿತ್ತು. ಇಬ್ಬರದೂ ದೂರದ ಸಂಬಂಧ ಎಂದು ಹತ್ತಿರದ ಸಂಬಂಧಿಕರಿಂದ ತಿಳಿದು ಬಂದಿತ್ತು. ಮೊದಲ ನೋಟದಲ್ಲೇ ಸೃಜನ್ ಬಹಳವಾಗಿ ಹಿಡಿಸಿಬಿಟ್ಟಿದ್ದ. ಅದೇ ಸಂದರ್ಭದಲ್ಲಿ ಮಗಳಿಗೆ ಗಂಡು ಹುಡುಕುತ್ತಿರುವುದಾಗಿ ಸಿಂಧುವಿನ ಅಪ್ಪ ಅಮ್ಮ ಸೃಜನ್ ಅಪ್ಪ ಅಮ್ಮನ ಬಳಿ ತಿಳಿಸಿದಾಗ ತಾವೂ ಸಹ ತಮ್ಮ ಮಗನಿಗೆ ಹುಡುಗಿ ಹುಡುಕುತ್ತಿರುವುದಾಗಿ ತಿಳಿಸಿ ಅಲ್ಲೇ ಸಣ್ಣದಾಗಿ ಮಾತುಕತೆ ಮುಗಿಸಿಬಿಟ್ಟಿದ್ದರು.
 
ನಂತರದಲ್ಲಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿ ಎಲ್ಲವೂ ಬೇಗ ಬೇಗನೆ ಮುಗಿಸಿ ಬಿಟ್ಟಿದ್ದರು. ಲಗ್ನಪತ್ರಿಕೆ ಆದ ಎರಡೇ ತಿಂಗಳಲ್ಲಿ ಮದುವೆ ಕೂಡ ಮಾಡಿ ಮುಗಿಸಿದ್ದರು.
 
ಅಷ್ಟರಲ್ಲಿ ಸಿಂಧು...ಸಿಂಧು ಎಂದು ಕೂಗಿದ ಸದ್ದಿಗೆ ಮತ್ತೆ ವಾಸ್ತವಕ್ಕೆ ಬಂದಳು. ಎದುರುಗಡೆ ನರ್ಸ್ ನಿಂತಿದ್ದಳು. ಸಿಂಧು ಕಾತುರದಿಂದ ಎದ್ದು ಅವರಿಗೆ ಪ್ರಜ್ಞೆ ಬಂತಾ ಎಂದು ಕೇಳಿದಳು. ಇನ್ನೂ ಇಲ್ಲ....ಅಲ್ಲಿ ಕೆಳಗೆ ಬ್ಲಡ್ ಬ್ಯಾಂಕ್ ಇದೆ ಅಲ್ಲಿ ಹೋಗಿ AB - ಬ್ಲಡ್ ತೆಗೆದುಕೊಂಡು ಬನ್ನಿ ಎಂದು ಹೇಳಿದಳು.
 
ಈ ಎಲ್ಲ ಗಡಿಬಿಡಿಯಲ್ಲಿ ಸಮಯದ ಅರಿವೇ ಇರಲಿಲ್ಲ ಸಿಂಧು ಗೆ..ಅಲ್ಲೇ ಇದ್ದ ಗಡಿಯಾರದ ಕಡೆ ನೋಡಿದರೆ ಸಮಯ ರಾತ್ರಿ 9.30 ಆಗಿತ್ತು. ಅಂದರೆ ನಾವು ಇಲ್ಲಿಗೆ ಬಂದು ಆಗಲೇ ಮೂರು ಗಂಟೆಗಳು ಆಗಿ ಹೋಗಿದೆ. ಅಂದರೆ ಸೃಜನ್ ಗೆ ಹೆಚ್ಚೂ ಕಡಿಮೆ ನಾಲ್ಕು ಗಂಟೆಯಿಂದ ಪ್ರಜ್ಞೆ ಇಲ್ಲ..ಆ ವಿಷಯ ಮನವರಿಕೆ ಆಗುತ್ತಲೇ ಸಿಂಧು ಗೆ ಭಯ ಶುರುವಾಯಿತು. ಯಾಕೋ ಕಾಲುಗಳಲ್ಲಿ ಶಕ್ತಿ ಕಮ್ಮಿ ಆದಂತಾಗಿ ಅಲ್ಲೇ ಕುಳಿತಳು. ಮತ್ತೆ ಸಾವರಿಸಿಕೊಂಡು ಕೆಳಗೆ ಹೋಗಿ ಬ್ಲಡ್ ತೆಗೆದುಕೊಂಡು ಬಂದು ಕೊಟ್ಟು ಕುಳಿತಳು.
 
ಅಲ್ಲಿಯವರೆಗೂ ಒಳಗೆ ದುಃಖ ಆಗುತ್ತಿದ್ದರೂ ಅದನ್ನು ಆಚೆ ಹಾಕದೆ ಸಹಿಸಿಕೊಂಡಿದ್ದ ಸಿಂಧುಗೆ ಯಾಕೋ ಒಮ್ಮಿಂದೊಮ್ಮೆಲೆ ದುಃಖ ಉಮ್ಮಳಿಸಿ ಬಂದು ಬಿಕ್ಕಲು ಶುರು ಮಾಡಿದಳು. ಅಲ್ಲೇ ರಿಸೆಪ್ಶನ್ ನಲ್ಲಿ ಕುಳಿತಿದ್ದ ಹೆಂಗಸೊಬ್ಬರು ಬಂದು ಅವಳನ್ನು ಸಮಾಧಾನ ಮಾಡಿದರು.


ಸುಮಾರು ಹನ್ನೊಂದು ಗಂಟೆಯ ಸಮಯಕ್ಕೆ ಸಿಂಧು ಹಾಗೂ ಸೃಜನ್ ಕುಟುಂಬದವರು ಇಬ್ಬರೂ ಒಟ್ಟಿಗೆ ಹಾಸ್ಪಿಟಲ್ ಬಳಿ ಬಂದರು. ಸಿಂಧು ಹಾಗೂ ಸೃಜನ್ ನ ತಾಯಿ ಇಬ್ಬರೂ ಸಿಂಧುವನ್ನು ಸಮಾಧಾನ ಮಾಡುತ್ತಿದ್ದರೆ..ಇಬ್ಬರ ತಂದೆಯಂದಿರು ಡಾಕ್ಟರ್ ಬಳಿ ಮಾತನಾಡಲು ತೆರಳಿದರು.

 

Rating
No votes yet