ಜ್ಞಾನಜ್ಯೋತಿಯಲ್ಲಿ ಬೆಳಗಿದ ಸ್ವಾತಂತ್ರ್ಯದ ಸ್ಫೂರ್ತಿ
ಐಟಿ (ಅಥವಾ ಮಾಹಿತಿ ತಂತ್ರಜ್ಞಾನ) ನಮ್ಮ ದೇಶಕ್ಕೆ ಬಂದಿದ್ದು ಜ್ಞಾನವಾಗಿ ಅಲ್ಲ. ಸರಕಾಗಿ. ನಾವು ಬೆಂಗಳೂರಲ್ಲಿ ಐಟಿ ಮಠಗಳನ್ನು ಕಟ್ಟಿದ್ದೇವೆ. ಐಟಿ ಕಂಪನಿಗಳು - ಮಠಗಳು ಧರ್ಮವನ್ನು ಒಂದು ಸರಕು ಮಾಡಿದಂತೆ - ಐಟಿಯನ್ನು ಅವರಿಗೆ ಲಾಭ ಹೆಚ್ಚಿಸುವ ಒಂದು ಸರಕು ಆಗಿ ಮಾಡಿದ್ದಾರೆ. ಸ್ವತಂತ್ರ ಸಾಫ್ಟ್ ವೇರ್ ಚಳುವಳಿ ಭಕ್ತಿ ಚಳುವಳಿಯಂತೆ ಈ ಐಟಿ ಮಠಗಳ ವಿರುದ್ದದ ಚಳುವಳಿ ಆಗಿದೆ. ಈ ಮಾತುಗಳೊಂದಿಗೆ ಖ್ಯಾತ ಬಂಡಾಯ ಸಾಹಿತಿ ಚಿಂತಕ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸ್ವತಂತ್ರ ಸಾಫ್ಟ ವೇರ್ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು. ಸಾಮಾನ್ಯವಾಗಿ ಸಭೆ ಸಮಾರಂಭಗಳು ನಡೆದಾಗಲೂ ಗಂಭೀರ ಮೌನ ತಾಳಿರುವ ಜ್ಞಾನಜ್ಯೋತಿ ಸಭಾಂಗಣ ಸ್ವಾತಂತ್ರ್ಯದ ಸ್ಫೂರ್ತಿ ಸಂಭ್ರಮಗಳಿಂದ ಗಿಜಿಗಿಡುತ್ತಿತ್ತು. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ೫೦೦ ಕ್ಕೂ ಹೆಚ್ಚು ಐಟಿ ತಜ್ಞರು ಸಂಶೋಧಕರು ಅಧ್ಯಾಪಕರು ರಾಜಕೀಯ ಆಡಳಿತ ಕ್ಷೇತ್ರದ ನಾಯಕರು ವಿವಿಧ ಕ್ಷೇತ್ರಗಳಿಂದ ಬಂದ ಸ್ವತಂತ್ರ ಸಾಫ್ಟ್ ವೇರ್ ಚಳುವಳಿಯ ಕಾರ್ಯಕರ್ತರೊಂದಿಗೆ ಈ ಉದ್ಘಾಟನೆಯಲ್ಲಿ ಸಂಭ್ರಮ ಪಟ್ಟರು.
ಸಾಫ್ಟ ವೇರ್ ಬಳಕೆದಾರನ ಸ್ವಾತಂತ್ರ್ಯ ಹರಣದ ವಿರುಧ್ಧ ಮಾತ್ರವಲ್ಲದೆ ಐಟಿ ಮಠಗಳ ಭಾರತೀಯ ಭಾಷೆಗಳ ಬಗೆಗಿನ ಅಸ್ಪ್ರಶ್ಯತೆ, ಜ್ಞಾನವನ್ನು ಒಂದು ಉದ್ಯಮವಾಗಿ ನೋಡುವ ಗ್ಯಾಟ್/ಡಬ್ಲ್ಯೂ.ಟಿ.ಒ. ಕಣ್ಣೊಟ, ಮಠಾಧೀಶರ ಮತ್ತು ಕೋಟ್ಯಾಧೀಶರಿಗೆ ಮಾತ್ರ ಮಣೆ ಹಾಕುವ ಸರ್ಕಾರದ ಆರ್ಥಿಕ ನೀತಿ, - ಇವುಗಳ ವಿರುಧ್ಧವೂ ಸ್ವತಂತ್ರ ಸಾಫ್ಟ್ ವೇರ್ ಚಳುವಳಿ ದನಿ ಎತ್ತಬೇಕೆಂದು ಪ್ರೊಫೆಸರ್ ಬರಗೂರು ಕರೆ ನೀಡಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಗೋಪಿನಾಥ್ ಸ್ವಾಗತ ಭಾಷಣ ಮಾಡುತ್ತಾ ಹವಾಮಾನ ಬದಲಾವಣೆಯಂತಹ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಸ್ವತಂತ್ರ ಸಾಫ್ಟ ವೇರಿನ ಮಹತ್ವ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರಭುದೇವ ಸ್ವತಂತ್ರ ಸಾಫ್ಟ್ ವೇರ್ ಆಂದೋಲನದ ಉಗಮ, ವಿಕಾಸ ಮತ್ತು ಮಹತ್ವ ವಿವರಿಸಿ ಶಿಕ್ಷಣ ಮತ್ತು ಆಡಳಿತದಲ್ಲಿ ಐಟಿ ಬಳಕೆ ಸಾಧ್ಯ ಮಾಡಲು ಅದರ ಕೊಡುಗೆ ಅಪಾರ ಎಂದರು.
೨೦೧೭ ರ ಹೊತ್ತಿಗೆ ವಿಂಡೋಸ್ ನಂತಹ ಲೈಸೆನ್ಸ್ ಸಾಫ್ಟ ವೇರುಗಳ ಅಂತ್ಯವಾಗಲಿದೆ ಎಂದು ಕೈಗಾರಿಕಾ ವಿಶ್ಲೇಷಣೆ ಸಂಸ್ಥೆ ಗಾರ್ಟ ನರ್ ೨೦೦೭ ರಲ್ಲೇ ಅಂದಾಜು ಮಾಡಿತ್ತು ಎಂದು ತಮಿಳುನಾಡಿನ ಹಿರಿಯ ಐ.ಎ.ಎಸ್. ಅಧಿಕಾರಿ ಇ-ಆಡಳಿತ ವಿಶೇಷಜ್ಞ ಮತ್ತು ಮಾಜಿ ಎಲ್ಕಾಟ್ ಎಂ.ಡಿ. ಉಮಾಶಂಕರ್ ಹೇಳಿ ಎಲ್ಲರನ್ನು ಚಕಿತ ಗೊಳಿಸಿದರು.
ಮೈಕ್ರೋ ಸಾಫ್ಟ್, ಒರೇಕಲ್ ನಂತಹ ಲೈಸೆನ್ಸ್ ಸಾಫ್ಟ್ ವೇರ್ ಕಂಪನಿಗಳಿಗೆ ಉತ್ತೇಜನ ನೀಡದಿದ್ದರೆ ನಮ್ಮ ಐಟಿ ಕೈಗಾರಿಕೆಗೆ ಕುತ್ತು ಇದೆ ಎನ್ನುವ ನಾಸ್ಕೋಂ ವಾದ ಈ ಹಿನ್ನೆಲೆಯಲ್ಲಿ ಹುರುಳಿಲ್ಲದ್ದು ಎಂದರು. ಐಟಿ ಕೈಗಾರಿಕೆ ಭವಿಷ್ಯ ನಮ್ಮದೇ ಸಾಫ್ಟ ವೇರ್ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಇದೆ ಎಂದರು. ಅವರು ಸ್ವತಂತ್ರ ಸಾಫ್ಟ್ ವೇರ್ ಬಳಸಿ ಇ-ಆಡಳಿತ ಜಾರಿ ಮಾಡಿದ ತಮ್ಮ ಅನುಭವವನ್ನು ಸಹ ಹಂಚಿಕೊಂಡರು.
ಕಿರಣ್ ಚಂದ್ರ ಚಳುವಳಿ ನಡೆದು ಬಂದ ಹಾದಿ, ಮುಂದೆ ಇರುವ ಸಾಧ್ಯತೆ ಸವಾಲು ಕಾರ್ಯಯೋಜನೆ ಮಂಡಿಸಿದರು. ಈ ಸಮ್ಮೇಳನದಲ್ಲಿ ಒಂದು ಸ್ವತಂತ್ರ ಸಾಫ್ಟ್ ವೇರ್ ಚಳುವಳಿಗಳ ರಾಷ್ಟ್ರೀಯ ಜಾಲ ರಚಿಸುವ ಅಗತ್ಯದ ಬಗ್ಗೆ ಒತ್ತು ಕೊಟ್ಟರು. ಕರ್ನಾಟಕ ಸಕಾರದ ಐಟಿ ವಿಬಾಗದ ಅಶೋಕ ಮನೋಲಿ ಮತ್ತು ಅಜಯ್ ಕಡಾಲಾ, ತಮಿಳುನಾಡಿನ ಉಮಾಶಂಕರ್ ಭಾಗವಹಿಸಿದ ’ಇ-ಆಡಳಿತ ಮತ್ತು ಸ್ವತಂತ್ರ ಸಾಫ್ಟ ವೇರ್’ ಎಂಬ ವಿಶೇಷ ಗೋಷ್ಟಿ ಸಹ ನಡೆಯಿತು.
Comments
ಉ: ಜ್ಞಾನಜ್ಯೋತಿಯಲ್ಲಿ ಬೆಳಗಿದ ಸ್ವಾತಂತ್ರದ ಸ್ಫೂರ್ತಿ
In reply to ಉ: ಜ್ಞಾನಜ್ಯೋತಿಯಲ್ಲಿ ಬೆಳಗಿದ ಸ್ವಾತಂತ್ರದ ಸ್ಫೂರ್ತಿ by shivaram_shastri
ಉ: ಜ್ಞಾನಜ್ಯೋತಿಯಲ್ಲಿ ಬೆಳಗಿದ ಸ್ವಾತಂತ್ರದ ಸ್ಫೂರ್ತಿ
In reply to ಉ: ಜ್ಞಾನಜ್ಯೋತಿಯಲ್ಲಿ ಬೆಳಗಿದ ಸ್ವಾತಂತ್ರದ ಸ್ಫೂರ್ತಿ by sharathc08
ಉ: ಜ್ಞಾನಜ್ಯೋತಿಯಲ್ಲಿ ಬೆಳಗಿದ ಸ್ವಾತಂತ್ರದ ಸ್ಫೂರ್ತಿ