ಟಾಲ್ಸ್‌ಟಾಯ್: ಕ್ರೂಟ್ಸರ್‌ ಸೊನಾಟಾ: ಅಧ್ಯಾಯ ಆರು

ಟಾಲ್ಸ್‌ಟಾಯ್: ಕ್ರೂಟ್ಸರ್‌ ಸೊನಾಟಾ: ಅಧ್ಯಾಯ ಆರು

“ಆಗಿದ್ದೆಲ್ಲ ಆಗಿಹೋಯಿತು. ನನಗೆ ಹಾಗೇ ಆಗಬೇಕಾಗಿತ್ತು! ಇಂಥ ವಿಷಯಗಳಲ್ಲಿ ಪಾಪದ ಹೆಣ್ಣುಗಳೇ ಯಾವಾಗಲೂ ಮೋಸಹೋಗುವುದು. ಅಮ್ಮಂದಿರು, ಅದರಲ್ಲೂ ಹೆಣ್ಣುಮಕ್ಕಳ ಅಮ್ಮಂದಿರು, ತಮ್ಮ ಗಂಡಂದಿರಿಂದ ಪಾಠ ಕಲಿತಿರುತ್ತಾರೆ, ಅವರಿಗೆ ಎಲ್ಲಾ ಗೊತ್ತಿರುತ್ತದೆ. ಆದರೂ ಮದುವೆಯಾಗಲಿರುವ ವರ ಪರಿಶುದ್ಧನೆಂದೇ ನಂಬಿದವರಹಾಗೆ ನಟನೆಮಾಡುತ್ತಾರೆ. ಮಗಳಿಗಾಗಿ ಗಂಡನ್ನು ಹಿಡಿಯುವುದಕ್ಕೆ, ಮತ್ತೆ ತಮ್ಮನ್ನೂ ನಂಬಿಸಿಕೊಳ್ಳುವುದಕ್ಕೆ, ಗಾಳ ಹೇಗೆ ಹಾಕಬೇಕು ಎಂದು ಗೊತ್ತು ಅವರಿಗೆ.
“ಗೊತ್ತಿಲ್ಲದೆ ಇರುವುದು ನಮಗೆ, ಗಂಡಸರಿಗೆ. ಗೊತ್ತು ಮಾಡಿಕೊಳ್ಳುವ ಇಷ್ಟ ಇಲ್ಲ ನಮಗೆ. ಆದರೆ ಹೆಂಗಸರಿಗೆ ಚೆನ್ನಾಗಿ ಗೊತ್ತು. ನಾವು ಯಾವುದನ್ನು ಅತ್ಯಂತ ಉನ್ನತವಾದ, ಕಾವ್ಯಾತ್ಮಕವಾದ, ಆದರ್ಶ ಪ್ರೀತಿ ಅನ್ನುತ್ತೇವೆಯೋ ಅದು ಕೇವಲ ನೀತಿಗೆ ಸಂಬಂಧಿಸಿದ್ದಲ್ಲ, ಮೈಗೆ ಮೈ ತಗಲುವಷ್ಟು ಹತ್ತಿರ ಇರಬೇಕು ಅನ್ನುವ ಆಸೆ, ಹೆಂಗಸರು ತಲೆಗೂದಲು ಕಟ್ಟಿಕೊಳ್ಳುವ ಸ್ಟೈಲು, ಮೈ ಬಣ್ಣ, ಆಕಾರ ಇಂಥವುಗಳನ್ನು ಕುರಿತ ಮೋಹ ಇವುಗಳಿಗೆ ಸಂಬಂಧಿಸಿದ್ದು ಅವರಿಗೆ ಗೊತ್ತು. ಗಂಡಸನ್ನು ಮರುಳು ಮಾಡಲು ಹೊರಟಿರುವ ಅನುಭವಸ್ಥೆ ಬಣ್ಣದ ಬೀಸಣಿಗೆಯನ್ನು ಕೇಳಿನೋಡಿ- ಅಳತೆಗೆ ಹೊಂದದ ಮ್ಯಾಚ್ ಆಗದೆ ಇರುವ ಡ್ರೆಸ್ಸು ಹಾಕಿಕೊಂಡು ಗಂಡಸಿನೆದುರು ಕಾಣಿಸಿಕೊಂಡದ್ದಕ್ಕೆ ಶಿಕ್ಷೆ ಅನುಭವಿಸುತ್ತೀಯೋ ಅಥವಾ ನಿನ್ನ ಸುಳ್ಳು, ಕಪಟ, ಕ್ರೌರ್ಯ ಗಂಡಸಿಗೆ ಗೊತ್ತಾಯಿತೆಂದು ಶಿಕ್ಷೆ ಅನುಭವಿಸುತ್ತೀಯೋ ಎಂದು. ಆಕೆ ಖಂಡಿತವಾಗಿ ಮೊದಲ ಕಾರಣಕ್ಕೇ ಶಿಕ್ಷೆ ಆದರೆ ಆಗಲಿ ಅನ್ನುತ್ತಾಳೆ. ನಾವು ಗಂಡಸರು ಉದಾತ್ತ ಭಾವನೆಗಳ ಬಗ್ಗೆ ಮಾತಾಡುವುದೆಲ್ಲ ಸುಳ್ಳು ಎಂದು ಅವಳಿಗೆ ಗೊತ್ತು. ನಮಗೇನಿದ್ದರೂ ಅವಳ ಮೈಯನ್ನು ಪಡೆದುಕೊಳ್ಳುವ ಆಸೆಯಷ್ಟೇ ಇರುತ್ತದೆ. ಮಿಕ್ಕ ಎಲ್ಲ ಕೀಳುಸಂಗತಿಗಳನ್ನೂ ಕ್ಷಮಿಸಿಬಿಡುತ್ತೇವೆ. ಆದರೆ ಕೆಟ್ಟ ಬಣ್ಣದ, ಟೇಸ್ಟ್‌ ಇಲ್ಲದ, ಅವಳಿಗೆ ಒಪ್ಪದ ಅಲಂಕಾರವನ್ನು ಸಹಿಸುವುದಿಲ್ಲ.
“ಬಣ್ಣದ ಚಿಟ್ಟೆಗೆ ಇವೆಲ್ಲ ಅನುಭವದಿಂದ ಗೊತ್ತು. ಮದುವೆಯಾಗದ ಎಳೆಯ ಕನ್ಯೆಯರಿಗೆ, ಪ್ರಾಣಿಗಳಿಗೆ ತಿಳಿಯುವಂತೆಯೇ ಸ್ವಭಾವತಃ ಇವೆಲ್ಲ ತಿಳಿದಿರುತ್ತವೆ.
“ಆದ್ದರಿಂದಲೇ ಭಯಂಕರವಾದ ಜೆರ್ಸಿಗಳು, ಕೃತಕವಾದ ಉಬ್ಬುಗಳು, ಬತ್ತಲೆ ತೋಳುಗಳು, ಕೈಗಳು, ಇತ್ಯಾದಿಗಳೆಲ್ಲ. ಗಂಡಸರಿಂದ ಪಾಠಕಲಿತು ಪಾಸಾಗಿ ಬಂದಿರುವ ಹೆಂಗಸರಿಗೆ ಗೊತ್ತು, ಉದಾತ್ತ ಸಂಗತಿಗಳ ವಿಚಾರವೆಲ್ಲ ಕೇವಲ ಮಾತುಕತೆಗೆ ಮಾತ್ರ, ಗಂಡಸಿಗೆ ಏನಿದ್ದರೂ ಅವಳ ಮೈ, ಮೈಯ ಅಲಂಕಾರ ಮಾತ್ರ ಇಷ್ಟ ಎಂದು. ಅದಕ್ಕೇ ಹಾಗೆ ನಡೆದುಕೊಳ್ಳುತ್ತಾರೆ. ವಿವರ ಎಲ್ಲಾ ಬಿಟ್ಟು ಸುಮ್ಮನೆ ನೋಡಿದರೆ ಮೇಲುವರ್ಗದ ಹೆಂಗಸರೂ ಅಷ್ಟೆ, ನಾಚಿಕೆ ಇಲ್ಲದ ಕೆಳವರ್ಗದ ಹೆಂಗಸರೂ ಅಷ್ಟೆ. ಎಲ್ಲ ಹೆಂಗಸರಲ್ಲೂ ಈ ವಿಕೃತಿ ಇದ್ದೇ ಇದೆ. ನೀವು ಒಪ್ಪುವುದಿಲ್ಲವೇ? ತಾಳಿ, ನಿಮಗೆ ತಕ್ಕ ಪ್ರೂಫು ಕೊಡುತ್ತೇನೆ.” ನನ್ನ ಮಾತನ್ನು ತಡೆದು ಹೇಳಿದ.
“ಮೇಲುವರ್ಗದ ಹೆಂಗಸರು ಬೇರೆ ಆಸಕ್ತಿಗಳನ್ನು ಇಟ್ಟುಕೊಂಡಿರುತ್ತಾರೆ, ಸಾಮಾನ್ಯ ಹೆಂಗಸರಹಾಗೆ ಬಿದ್ದು ಹಾಳಾಗಿಹೋದವರಲ್ಲ ಅನ್ನುತ್ತೀರೇನು? ಖಂಡಿತ ಸುಳ್ಳು. ಜೀವಿತದ ಉದ್ದೇಶದ ಕಾರಣದಿಂದ ಮನುಷ್ಯರು ಬೇರೆ ಬೇರೆಯಾಗಿ ಕಾಣುತ್ತಾರೆ, ಅವರ ಅಂತರಂಗದ ಬದುಕು ಬಹಿರಂಗದಲ್ಲಿ ಗೊತ್ತಾಗುತ್ತದೆ ಅನ್ನುವುದು ನಿಜವಾದರೆ ಸಾಮಾನ್ಯ ಹೆಂಗಸನ್ನೂ ಮೇಲುವರ್ಗದ ಹೆಂಗಸನ್ನೂ ಹೋಲಿಸಿ ನೋಡಿ. ಇಬ್ಬರಲ್ಲೂ ಅದೇ ಸ್ಟೈಲಿನ ಉಡುಪು, ಅದೇ ಫ್ಯಾಶನ್ನು, ಅದೇ ಪರ್‌ಫ್ಯೂಮುಗಳು, ಅದೇ ಒಡವೆ, ಬೆಳ್ಳಿ ಬಂಗಾರಗಳ ಬಯಕೆ, ಅದೇ ಬರಿತೋಳು, ಅದೇ ಅರೆತೆರೆದ ಎದೆ, ಅದೇ ಕೃತಕವಾಗಿ ಉಬ್ಬಿದ ಹಿಂಬದಿ, ಅದೇ ಮನರಂಜನೆ, ಅದೇ ಸಂಗೀತ, ಅವೇ ಹಾಡುಗಳು. ಮೇಲುವರ್ಗದ ಹೆಂಗಸು ಏನೇನೆಲ್ಲ ಮಾಡಿ ಗಂಡನ್ನು ಆಕರ್ಷಿಸಲು ಟ್ರೈಮಾಡುತ್ತಾಳೆ. ಸಾಮಾನ್ಯ ಹೆಂಗಸು ಕೂಡ ಅದನ್ನೇ ಮಾಡುತ್ತಾಳೆ. ಕೆಲಕಾಲ ನಮ್ಮೊಡನೆ ಇರುವ ಸೂಳೆಯನ್ನು ಕೀಳಾಗಿ ಕಾಣುತ್ತೇವೆ, ಮದುವೆಯಾಗಿ ನಮ್ಮ ಜೊತೆ ದೀರ್ಘಕಾಲ ಇರುವವಳನ್ನು ಗೌರವಿಸುತ್ತೇವೆ. ಇಬ್ಬರಿಗೂ ಏನೂ ವ್ಯತ್ಯಾಸವಿಲ್ಲ, ಏನೇನೂ!”
(ಮುಂದುವರೆಯುವುದು)

Rating
No votes yet