ಟಿಇಟಿ ಶಿಕ್ಷಕರ ನೇಮಕಾತಿ ಗೊಂದಲ

ಟಿಇಟಿ ಶಿಕ್ಷಕರ ನೇಮಕಾತಿ ಗೊಂದಲ

ಇತ್ತೀಚಿನ ಬೆಳವಣಿಗೆಗಳು, ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದರೆ, ಡಿ.ಎಡ್ ಮಾಡಿದ ಅಭ್ಯರ್ಥಿಗಳ ಸ್ಥಿತಿ ಶೋಚನೀಯ ಎನಿಸದಿರುವುದಿಲ್ಲ. ಅಷ್ಟಕ್ಕೂ ಇವರು ಮಾಡಿದ ತಪ್ಪಾದರೂ ಏನು.? ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರೂ ಸಹ ಶಿಕ್ಷಕ ವೃತ್ತಿ ಶ್ರೇಷ್ಠ ಎಂದುಕೊಂಡು, ಪಡಬಾರದ ಪಾಡು ಪಟ್ಟು ಡಿ.ಎಡ್ ವ್ಯಾಸಂಗ ಮಾಡಿದ್ದು ಇವರು ಮಾಡಿದ ಮಹಾಪರಾಧ.
ಸುಮಾರು ಆರು ವರ್ಷಗಳಿಂದ ನೇಮಕಾತಿಗಾಗಿ ಎದುರು ನೋಡುತ್ತಾ, ಸರಕಾರದ ಪ್ರತಿಯೊಂದು ಹೇಳಿಕೆಗಳನ್ನೂ ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಹೇಳಿಕೆಗಳು ಕ್ಷುಲ್ಲಕವೆಂದು ಗೊತ್ತಾದಾಗ, ಇನ್ನೊಂದು ಹೇಳಿಕೆಗಾಗಿ ದೈನ್ಯ ದೃಷ್ಠಿಯಿಂದ ಕಾಯುತ್ತಾರೆ. ಪಿ.ಯು.ಸಿ ಮುಗಿಸಿದ ಕೂಡಲೇ ಡಿ.ಎಡ್ ಮಾಡುತ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡ ಮಾತುಗಳು, ಇತ್ತಿಚೆಗೆ ಮೂಕವಾಗಿದೆ. ಡಿ.ಎಡ್ ಸೇರುವಾಗಿನ ಆ ಉತ್ಸಾಹ, ಇವತ್ತು ಜಡವಾಗಿದೆ. ಡಿ.ಎಡ್ ಮುಗಿಸಿ ಅಂಕಪಟ್ಟಿ ಪಡೆದುಕೊಂಡ ಕ್ಷಣ ಕಣ್ಣಲ್ಲಿದ್ದ ಭರವಸೆಯ ಮಿಂಚು ಈಗ ಮಂಕಾಗಿದೆ. ಶಿಕ್ಷಕನಾದ ಮೇಲೆ ಹೇಗಿರಬೇಕು? ಹೇಗಿರಬಾರದು? ಎಂಬ ಆದರ್ಶಗಳು, ಹೊಟ್ಟೆ ತುಂಬಿಸಲು ಪರದಾಡುವ ಅವಸರದಲ್ಲಿ ಕಳೆದುಹೋಗಿದೆ. ಕೆಲವೊಮ್ಮೆ ಈ ಮೇಲಿನ ಮಾತುಗಳು ಅತಿರೇಕವೆನಿಸಬಹುದು. ಆದರೆ ಒಂದು ಮಾತಂತೂ ಸತ್ಯ, ಡಿ.ಎಡ್ ವ್ಯಾಸಂಗ ಮಾಡಿ ಕೆಲಸಕ್ಕೋಸ್ಕರ ಕಾಯುತ್ತಿರುವವರ ಸ್ಥಿತಿ ಇದಕ್ಕಿಂತಲೂ ಅಂದರೇ ಅತಿರೇಕಕ್ಕಿಂತಲೂ ಹೆಚ್ಚಾಗಿಯೇ ಶೋಚನೀಯವಾಗಿದೆ.
ಕಳೆದ ವರ್ಷ 2013ರಲ್ಲಿ ನೇಮಕಾತಿಗೆ ಆದೇಶ ಹೊರಡಿಸಿದ ಸರಕಾರ, ಯಾವುದೋ ಕಾರಣ ನೀಡಿ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತು. ಯಾವ್ಯವುದೋ ಕಾನೂನುಗಳನ್ನು ಜನವಿರೋಧವಿದ್ದರೂ ಕೂಡ ಜಾರಿಗೆ ತರುವ ಸರಕಾರಕ್ಕೆ ಶಿಕ್ಷಕರ ನೇಮಕಾತಿಯೊಂದೇ ಮಾಡಲಾಗದ ಅಸಾಧ್ಯ ಕೆಲಸ ಎಂದೆನಿಸುತ್ತಿದೆ. ಸರಕಾರದ ಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕೆಲವೊಂದು ನಿರುಪಯೋಗಿ ಯೋಜನೇಗಳಿಗೆ, ಪರಿಸರ ತಜ್ಞರ, ಸಾಮಾನ್ಯ ಜನರ ವಿರೋಧವಿದ್ದರೂ ಕೂಡ ಆ ಯೋಜನೆಗಳಿಗೆ ಹಣಕಾಸು ಇಲಾಖೆ ತಕ್ಷಣ ಒಪ್ಪಿಗೆಯನ್ನೂ ನೀಡುತ್ತದೆ, ಸರಕಾರ ಅವಸರವಾಗಿ ಜಾರಿಗೆಯನ್ನೂ ಮಾಡುತ್ತದೆ. ಆದರೆ ಶಿಕ್ಷಕರ ನೇಮಕಾತಿಗೆ ಮಾತ್ರ ಕ್ಷುಲ್ಲಕ ಕಾರಣಗಳನ್ನು ನೀಡುತ್ತದೆ. ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು, ಇತ್ತೀಚೆಗೆ 2014 ಜೂನ್‌ನಲ್ಲಿ ನಡೆಸಿದ ಟಿಇಟಿ ಪರಿಕ್ಷೆ ಮತ್ತೆ ಡಿ.ಎಡ್ ಅಭ್ಯರ್ಥಿಗಳಲ್ಲಿ ಆಸೆ ಗರಿಗೆದರುವಂತೆ ಮಾಡಿತ್ತು. ಸರಿ ಉತ್ತರಗಳನ್ನು (ಕೀ ಆನ್ಸರ್) ವೆಬ್‌ಸೈಟಿನಲ್ಲಿ ಪ್ರಕಟಿಸಿದ ದಿನವೇ ತಾಂತ್ರಿಕ ದೋಷಗಳ ಕಾರಣ ನೀಡಿ ಹಿಂಪಡೆಯಲಾಗಿದೆ. 2 ದಿನಗಳಲ್ಲಿ ಮತ್ತೆ ಪ್ರಕಟಗೊಳಿಸುವ ಆಶ್ವಾಸನೆ 2 ವಾರ ಕಳೆದರೂ ಇನ್ನೂ ಈಡೇರಿಲ್ಲ. ಈ ನಡುವೆ ಪ್ರಶ್ನೆ ಪತ್ರಿಕೆಗಳ ಸೋರಿಕೆ, ಅಭ್ಯರ್ಥಿಗಳ ಭವಿಷ್ಯಕ್ಕೆ ತೂಗುಗತ್ತಿಯಾಗಿದೆಯೇ ವಿನಃ, ಸರಕಾರಕ್ಕೆ ಸೊಳ್ಳೆ ಕಡಿತದ ಅನುಭವವೂ ಆಗಿಲ್ಲ ಎನ್ನುವುದು ಅಕ್ಷರಶಃ ಸತ್ಯ.
ಗುಜರಾತ್‌ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 'ಸಹಾಯಕ ಶಿಕ್ಷಕ'ರ ನೇಮಕಾತಿ ಕುರಿತ ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ಬಿ.ಎಸ್.ಚೌಹಾಣ್ ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಮಾನದಂಡವಿಲ್ಲದೇ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಆಘಾತಕಾರಿ ಎಂದು ಅಭಿಪ್ರಾಯಪಟ್ಟಿದೆ. ಶಿಕ್ಷಕರಿಗೆ ಶೈಕ್ಷಣಿಕ ಅರ್ಹತೆಯಿರಬೇಕು. ಅವರು ಮಾಡುವ ಬೋಧನೆ ಭವಿಷ್ಯದ ದೇಶದ ಪ್ರಜೆಗಳ ಮೇಲೆ ಪರಿಣಾಮ ಬೀರಬೇಕು. ಆದರೆ, ಅರ್ಹತೆ ಇಲ್ಲದವರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಜೊತೆ ರಾಜ್ಯ ಸರ್ಕಾರಗಳು ಚೆಲ್ಲಾಟವಾಡುತ್ತಿದೆ ಎಂದು ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ಆದರೂ ಸರಕಾರದ ಪ್ರತಿಕ್ರಿಯೆ ದಿವ್ಯ ನಿರ್ಲಕ್ಷ್ಯ.ಸುಪ್ರೀಮ್ ಕೋರ್ಟನ್ನೇ ಲೆಕ್ಕಿಸದವರು ನಮ್ಮ ನಿಮ್ಮ ಮಾತು ಕೇಳುತ್ತಾರೆಯೇ...!?
ಡಿ.ಎಡ್ ಮಾಡಿದವರೆಲ್ಲರಿಗೂ ಸರಕಾರ ಕೆಲಸ ಕೊಡಬೇಕೆಂಬುದು ನನ್ನ ವಾದವಲ್ಲ. ಆದರೂ ವಾಸ್ತವ ಹೇಗಿದೆ ನೋಡಿ...? ಒಂದು ಕಡೆಯಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ.. ಇನ್ನೊಂದೆಡೆ ವರ್ಷಗಳಿಂದ ನೇಮಕಾತಿಗೋಸ್ಕರ ಕಾದು ಬಳಲಿರುವ ಭಾವಿ ಶಿಕ್ಷಕರು.. ಇನ್ನೊಂದೆಡೆ ವಿದ್ಯಾರ್ಥಿಗಳು ಮತ್ತು ಭಾವಿ ಶಿಕ್ಷಕರ ನೈತಿಕ ಸ್ಥೈರ್ಯಕ್ಕೆ ಕೊಡಲಿ ಪೆಟ್ಟಾಗುತ್ತಿರುವ ರಾಜಕಾರಣಿಗಳ ಬಾಲಿಶ ಹೇಳಿಕೆಗಳು.. ಕೊನೆಯ ಪ್ರಶ್ನೆ 2013ರಲ್ಲಿ ಸಿಇಟಿ ಪರೀಕ್ಷೆಯ ನೆಪದಲ್ಲಿ ಲಕ್ಷಾಂತರ ಅಭ್ಯರ್ಥಿಗಳಿಂದ ಕಸಿದುಕೊಂಡ ಕೋಟಿಗಟ್ಟಲೆ ಹಣ, 2014ರ ಟಿಇಟಿ ನೆಪದಲ್ಲಿ ಸುಮಾರು 4 ಲಕ್ಷ ಅಭ್ಯರ್ಥಿಗಳಿಂದ ಕೆಲವರಿಂದ ರೂ.800 ಹಾಗೂ ಕೆಲವರಿಂದ ರೂ.500ರಂತೆ ಹಗಲು ದರೋಡೆ ಮಾಡಿದ ಕೋಟ್ಯಾಂತರ ಹಣ ಎಲ್ಲಿ ಹೋಗಿದೆ..? ಇದೇ ರೀತಿಯಾದರೆ ನೇಮಕಾತಿಯಾಗುವುದು ಸಂಬಳ ಪಡೆಯುವ ನೌಕರರೇ ವಿನಃ ಭವಿಷ್ಯ ರೂಪಿಸುವ ಶಿಕ್ಷಕರಲ್ಲ....!!!

Rating
No votes yet