ಡಾ.  ಅನುಪಮಾ ನಿರಂಜನ ವಿರಚಿತ,  'ವಧುವಿಗೆ ಕಿವಿಮಾತು', "ಪರಿಣಿತಾ"-ಪುಟ ೮೬ 

ಡಾ.  ಅನುಪಮಾ ನಿರಂಜನ ವಿರಚಿತ,  'ವಧುವಿಗೆ ಕಿವಿಮಾತು', "ಪರಿಣಿತಾ"-ಪುಟ ೮೬ 

ಚಿತ್ರ

ಇದನ್ನು ಡಾ. ಅನುಪಮಾ ನಿರಂಜನ  ೭೦ ರ ದಶಕದಲ್ಲಿ ಬರೆದಿದ್ದರೂ, 'ಮದುವೆ' ಎಂಬ ಸಂಸ್ಥೆಯ ಮೂಲಭೂತ ತತ್ವಗಳಲ್ಲಿ ಬದಲಾವಣೆಯಾಗಿಲ್ಲ. ಅದು ಇಂದು ಮತ್ತು ಎಂದೆಂದಿಗೂ ನಿಂತಿರುವುದು ಪ್ರೀತಿ, ಹೊಂದಾಣಿಕೆ, ನಂತರ ಇಬ್ಬರೂ ಸೇರಿ ಸಮಾಜದ ಒಳಿತಿಗಾಗಿ ಕೊಡುವ 'ಸತ್ಸಂತಾನ', ಜೊತೆಜೊತೆಗೆ, ತ್ಯಾಗ, ಮೊದಲಾದ ಬಹು ಮುಖ್ಯ ಅಡಿಪಾಯಗಳ ಮೇಲೆ. ಸಂದರ್ಯ ಮೊದಲು ಆಕರ್ಷಣೆಯನ್ನು ಪ್ರೀತಿಮಾಡುವವರಲ್ಲಿ ಒಡ್ಡಿದರೂ,  ಅದು ಕಾಲಕ್ರಮದಲ್ಲಿ ಕರಗಿ ಅದರ ಸೊಗಡು ಕಳೆದುಕೊಳ್ಳುವುದು ಸ್ವಾಭಾವಿಕ. ಪ್ರೀತಿ, ಕೇವಲ ನಿಜವಾದ ಪ್ರೀತಿ, ಒಬ್ಬರನ್ನೊಬ್ಬರು  ಅರ್ಥಮಾಡಿಕೊಳ್ಳುವಿಕೆ, ಹಾಗೂ ಹೊಂದಾಣಿಕೆಗಳು ಸಿಂಹಪಾತ್ರ ವಹಿಸಿ ಜೀವನದುದ್ದಕ್ಕೂ ಜೊತೆಯಲ್ಲಿ ಬರುತ್ತವೆ.

ಸೌಜನ್ಯತೆ :

ಡಾ.  ಅನುಪಮಾ ನಿರಂಜನ ವಿರಚಿತ,  'ವಧುವಿಗೆ ಕಿವಿಮಾತು', "ಪರಿಣಿತಾ"-ಪುಟ ೮೬ 
ಬೆಲೆ : ರೂಪಾಯಿ ೩-೫೦
ಪ್ರಕಟಿಸಿದವರು : ರಶ್ಮಿ, ಜಯನಗರ, ಬೆಂಗಳೂರು-೧೧
ಪ್ರಥಮ ಮುದ್ರಣ : ೧೯೭೧

ಈ ಮಹತ್ವದ ಕಿರು-ಹೊತ್ತಿಗೆಯನ್ನು  ನಮ್ಮ ಮದುವೆಯ (೧೦, ಜೂನ್, ೧೯೭೩), ಉಡುಗೊರೆಯಾಗಿ ಕೊಟ್ಟವರು, ನನ್ನ ಆತ್ಮೀಯ ಗೆಳೆಯ (ದಿ) ಶ್ರೀ. ಕೆ. ಎಸ್. ಶಂಕರನಾರಾಯಣ.  

ಡಾ. ಅನುಪಮಾ ನಿರಂಜನ್ ರವರು,  ಪ್ರಿಯ ವಧುವೊಬ್ಬಳಿಗೆ  ಆಕೆಯ ವಿವಾಹದ ಮಂಗಳ ಮುಹೂರ್ತದಲ್ಲಿ ತಾವು ರಚಿಸಿದ ಸಣ್ಣ ಹೊತ್ತಗೆಯೊಂದನ್ನು  ಉಡುಗೊರೆಯಾಗಿ ಅರ್ಪಿಸಿದ್ದಾರೆ. ಇದು ಕೇವಲ ವಧುವಿಗಾಗಿಯೇ ರಚಿಸಿದ ಕೃತಿ.  ಆಕೆ ಮದುವೆಯಾದ ಬಳಿಕ ಪತಿಯ ಜತೆ ಹಿಂಬಾಲಿಸಿ, ಆತನ ಮನೆಯಲ್ಲಿ ಗೊತ್ತಿಲ್ಲದ ಪರಿಸರದಲ್ಲಿ ಹಲವಾರು ಹೊಸ-ಹೊಸ  ಅನುಭವಗಳು, ಸವಾಲುಗಳಿಗೆ ತನ್ನನ್ನು ಒಡ್ಡಿಕೊಂಡು, ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಾ ಯಶಸ್ವಿಯಾಗಿ ನಿರ್ವಹಿಸುತ್ತಾ  ಮುಂದೆ ಸಾಗಲು ಬೇಕಾಗುವ ಆತ್ಮವಿಶ್ವಾಸವನ್ನು ಈ ಕೃತಿ ಕೊಡುವುದೆಂದು ಆಶಿಸಿ, ಆಶೀರ್ವದಿಸಿದ್ದಾರೆ. ಕೇವಲ ವಧುವಿಗೆ ಮಾತ್ರವಲ್ಲ ಆಕೆಯ ಪ್ರಿಯಕರನಿಗೂ (ಪತಿ) ಇದು ಅನ್ವಯಿಸುತ್ತಿದೆ. 

ಸನಾತನ ಭಾರತೀಯ ಸಂಸ್ಕೃತಿಯಲ್ಲಿ ನಾಲ್ಕು ಪುರುಷಾರ್ಥಗಳಿವೆ. ೧. ಬ್ರಹ್ಮಚರ್ಯ ೨. ಗೃಹಸ್ಥಾಶ್ರಮ ೩. ವಾನಪ್ರಸ್ಥ  ೪.  ಸನ್ಯಾಸಾಶ್ರಮ
ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಮೊದಲ ಮೂರು ಪುರುಷಾರ್ಥಗಳನ್ನು ಅಂದರೆ, ಧರ್ಮ, ಅರ್ಥ, ಕಾಮ, ಇವುಗಳನ್ನು  ಗೃಹಸ್ಥಾಶ್ರಮದಲ್ಲಿ ಸಾಧಿಸತಕ್ಕದ್ದು. ಈ ಪುರುಷಾರ್ಥಗಳು ವೈಯಕ್ತಿಕ ಸಿದ್ಧಿಗಲ್ಲದೆ ಸಮಾಜದ ರಕ್ಷಣೆಗೂ ಆವಶ್ಯಕವಾಗಿವೆ. ಆದ್ದರಿಂದ ಸಮಾಜದಲ್ಲಿ ಪ್ರತಿವ್ಯಕ್ತಿಗೂ ಈ ಹೊಣೆಗಾರಿಕೆ, ಜವಾಬ್ದಾರಿಯಿದೆ. ಮದುವೆಯನ್ನು ಸನಾತನ ಧರ್ಮ ಕಾಣುವುದು, ಕೇವಲ ಗಂಡು-ಹೆಣ್ಣಿನ ನಡುವೆ ಒಂದು ಒಪ್ಪಂದವಾಗಿರದೆ, ಒಂದು ಪ್ರಮುಖ 'ಧಾರ್ಮಿಕ ವಿಧಿ'ಯೆಂದು ಪರಿಗಣಿಸಲ್ಪಟ್ಟಿದೆ. ಕಾಮವೆಂದರೆ, ಸಂತಾನ ಕಾಮ ; ಜೀವನದ ಮುಂದುವರೆಯುವಿಕೆಗಾಗಿ ಸೃಷ್ಟಿ ನಿಯಮಾನುಸಾರ ಸಂತಾನವನ್ನು ಪಡೆಯಬೇಕು. ಪಡೆದ ಸಂತಾನಕ್ಕೆ ತಕ್ಕ ಸಂಸ್ಕಾರಗಳನ್ನು ಒದಗಿಸಿ,  ಸಮಾಜಕ್ಕೆ ಕಾಣಿಕೆಯಾಗಿ ಕೊಡುವುದು ಒಂದು ಮಹತ್ತರ ಜವಾಬ್ದಾರಿಯೂ ಹೌದು.  ಮುಂದಿನದು, ಮೋಕ್ಷಸಾಧನೆ. ಇಲ್ಲಿ ಪತಿ-ಪತ್ನಿಯರಿಬ್ಬರೂ ವಯಕ್ತಿಕವಾಗಿ ಸಾಧನೆಮಾಡಬೇಕು. ಆದರೂ ಈ ಸಾಧನ ಮಾರ್ಗದಲ್ಲಿ ಅವರಿಬ್ಬರೂ ಒಬ್ಬರಿಗೊಬ್ಬರು ನೆರವು ನೀಡುತ್ತಾ ಜತೆ-ಜತೆಯಾಗಿ ನಡೆಯಬಹುದು. ಮೋಕ್ಷವನ್ನು ಪಡೆಯಬೇಕಾದರೆ, ಸನ್ಯಾಸಾಶ್ರಮವನ್ನು ಸ್ವೀಕರಿಸುವುದು ಪ್ರಶಸ್ತವಾದ ಕ್ರಮವೆಂದು ಪರಿಗಣಿಸಲಾಗಿದೆ. 

'ಪರಿಣಿತಾ ':

ಎಂದರೆ,  ವಿವಾಹವಾದವಳು ಎಂದರ್ಥ. ಈ ಪದದೊಂದಿಗೆ ಸಾಲಂಕೃತೆಯಾದ ಗಂಭೀರಕಳೆಯಿಂದ ಕೂಡಿದ ಯುವತಿಯ ಚಿತ್ರ ನಮ್ಮ ಕಣ್ಣಿನ ಮುಂದೆ ಕಟ್ಟುತ್ತದೆ. ಇದೀಗ ಮೊಗ್ಗಲ್ಲ ; ಪೂರ್ಣ ಅರಳಿ ಸುವಾಸನೆ ಬೀರುತ್ತಿರುವ 'ಹೂ' ಎಂದೆನಿಸುತ್ತದೆ. ಇಂತಹ ಕುಸುಮಗಳನ್ನು ಕಂಡರೆ ನೋಡುವವರಿಗೂ ಹಿಗ್ಗು ; ಮುಡಿದವರಿಗೂ ಧನ್ಯತೆ. 

ಮದುವೆಗೆ ಮುನ್ನ ಏನೂ ಅರಿಯದ ಮುಗ್ಧೆಯಾದ ನೀವು,  ವಿವಾಹವಾದಾಗ ಏನೇನೋ ಕನಸುಗಳನ್ನು ಕಟ್ಟಿದ್ದಿರಿ. ಅವುಗಳೆಲ್ಲಾ ನನಸಾಗದೇ ಇರಬಹುದು. ಆದರೂ ಅದರಿಂದ ನಿಮಗೀಗ  ಅತೃಪ್ತಿಯಿಲ್ಲ. ತವರುಮನೆಯಿಂದ ಪತಿಯ ಗೃಹಕ್ಕೆ ಬಂದಾಗ ನಿಮಗೆ ನೂರು ವಿಧದ ಭಯಗಳಿದ್ದವು. ಆದರೆ ನಿಮ್ಮ ಪತಿಯ ಪ್ರೀತಿಯ ನೆರಳಿನಲ್ಲಿ ಕಷ್ಟದ ಬಿಸಿಲಿನ ಬೇಗೆ ನಿಮಗೆ ತಾಗಲೇ ಇಲ್ಲ. ನಿಮ್ಮ ಆತ್ಮ ವಿಶ್ವಾಸ ನಿಮ್ಮನ್ನು ಜಯಶಾಲಿಯಾಗಿ ಮಾಡಿತು. ನಿಮ್ಮ ಸಹನೆ ಅತ್ತೆ-ಮಾವಂದಿರ, ನಾದಿನಿ-ಮೈದುನರ ಪ್ರೀತಿ ಗೌರವಗಳನ್ನು ಗೆದ್ದು ಕೊಟ್ಟಿತು. 

ನಿಮ್ಮ ಬಾಳಿನಲ್ಲೂ ಜಗಳಗಳಾಗದೆ ಇರಲಿಲ್ಲ. ಆದರೆ ನಮ್ಮಲ್ಲಿನ ಗಾದೆಯೊಂದಿದೆಯಲ್ಲಾ,  "ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ" -ಎಂದು. ಅದು ನೂರುಪಾಲಿಗೂ ಸತ್ಯವೆನಿಸುತ್ತದೆ. ಸಣ್ಣ-ಪುಟ್ಟ ಜಗಳಗಳಿಂದ ನಿಮ್ಮ ಹಾಗೂ ನಿಮ್ಮ ಪತಿಯ ಪ್ರೀತಿಗೆ ಯಾವ ಧಕ್ಕೆಯೂ ಬರಲಿಲ್ಲ.  ಬದಲಿಗೆ  ಇದರಿಂದಾಗಿ ಪರಸ್ಪರರನ್ನು  ಹೆಚ್ಚು ಅರ್ಥಮಾಡಿಕೊಂಡಿರಿ. ನಿಮ್ಮಿಬ್ಬರ ಪ್ರೇಮ, ಒಲವು, ಮತ್ತಷ್ಟು ಗಾಢವಾಯಿತು. ಅನುಭವದ ಹಿನ್ನೆಲೆಯಲ್ಲಿ ಅನುಕಂಪ, ಸಹನೆಗಳಿಂದ ವರ್ತಿಸಿ, ನಿಮ್ಮ ವಾತಾವರಣಕ್ಕೆ ತಕ್ಕ ಹಾಗೆ ನಡೆದುಕೊಂಡು, ಇತರರ ಅನುಕರಣೆಗೆ ಪಾತ್ರರಾಗಿದ್ದೀರಿ. ನಿಮ್ಮ ಪತಿಯೊಂದಿಗೆ ಲೈಂಗಿಕ ಸಾಮರಸ್ಯ ಸಾಧಿಸಿಕೊಂಡ ನೀವು, ಆತನಿಗೆ ಅತ್ಯಂತ ಆತ್ಮೀಯ ವ್ಯಕ್ತಿಯಾಗಿದ್ದೀರಿ. ಆತನಿಗೆ ನೀವು ದೇವಿಯೂ ಹೌದು ; ರಾಣಿಯೂ ಹೌದು. ಆತ ನಿಮ್ಮನ್ನು ಗೌರವಿಸುವಷ್ಟೇ ಪ್ರೀತಿ ಸಹ ಮಾಡುತ್ತಾರೆಂದು ನಿಮಗೀಗ ಗೊತ್ತು. ಮನುಷ್ಯರ ಸ್ವಭಾವ, ನಡತೆಗಳನ್ನು ಅಭ್ಯಸಿಸಿದ ನೀವೀಗ ದೊಡ್ಡ ಮನಃಶಾಸ್ತ್ರಜ್ಞೆ. ಮನೆಯಲ್ಲಿ ಯಾರ ಯಾರ ನಡವಳಿಕೆ ಹೇಗೆ ಹೇಗೆ ಇರುತ್ತದೆ ? ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಹೇಗೆ ? ಅದರಿಂದ ಯಾರಿಗೂ ನೋವಾಗದಂತೆ ನಡೆದುಕೊಳ್ಳುವುದು ಹೇಗೆ ? ಎಂಬ ಕಲೆಗಳೆಲ್ಲಾ  ನಿಮಗೀಗ ಕರತಲಾಮಲಕ !  ಇದನ್ನು ಗಳಿಸಲು ನೀವು ಪಟ್ಟ ಕಷ್ಟ ಕಡಿಮೆಯೇನಲ್ಲ.  ಆ ಸಾಹಸಕ್ಕೂ ನಿಮಗೆ  ತಕ್ಕ ಪ್ರತಿಫಲ ಸಿಕ್ಕಿದೆ ; 'ಗೃಹಶಾಂತಿ', 'ಮನೆಯಲ್ಲಿನ ಎಲ್ಲರ ಆದರ, ಮನ್ನಣೆ' ನಿಮಗೆ ಲಭ್ಯವಾಗಿದೆ.
 
'ವಿದ್ಯಾವಂತೆಯಾದ್ರೂ ಸ್ವಲ್ಪಾನೂ ಜಂಭವಿಲ್ಲಮ್ಮ ! ಎಂಥ ವಿನಯ, ಎಂಥಾ ಜಾಣತನ "!-ಎಂದು ನಿಮ್ಮ ನೆರೆಹೊರೆಯವರೂ ನಿಮ್ಮನ್ನು ಹೊಗಳುತ್ತಾರೆ. 
ನಿಮ್ಮ ಪತಿಗಂತೂ ನಿಮ್ಮನ್ನು ಕಂಡರೆ ಅಪಾರ ಹೆಮ್ಮೆ. ಅವರ ಗೆಳೆಯರೂ ನಿಮ್ಮ ನಡತೆಯನ್ನು ತುಂಬಾ ಮೆಚ್ಚಿದ್ದಾರೆ. 

ನೀವು ಯಾವ ಧರ್ಮ ಪಂಗಡಗಳಿಗೆ ಸೇರದಿದ್ದರೂ, ನಿಮ್ಮ ನಡತೆಯಿಂದಾಗಿಯೇ ಸಮಾಜದಲ್ಲಿ ಶೋಭಿಸುತ್ತೀರಿ. ನೀವು ಪ್ರೇಮ ವಿವಾಹವಾಗಿದ್ದರೂ ಸರಿಯೇ,  ಉದ್ಯೋಗದಲ್ಲಿದ್ದರೂ ಸರಿಯೇ, ತಂದೆತಾಯಿಗಳು ಆರಿಸಿದ ವರನನ್ನು ಕೈಹಿಡಿದಿದ್ದರೂ ಸರಿಯೇ, ನೀವು ಎಲ್ಲಿದ್ದರೂ ಅಲ್ಲಿ ನಗೆ ಇರುತ್ತದೆ. ಸಂತೋಷ ತುಂಬಿ ತುಳುಕುತ್ತದೆ. 

ಮುಗ್ಧ  ಹುಡುಗಿಯಾಗಿ ಮೊನ್ನೆ ಮೊನ್ನೆ ವಧುವಾದ ನೀವು ಸಾಧನೆಯ ಮೆಟ್ಟಿಲುಗಳನ್ನೇರಿ, ಈಗ ಪ್ರಬುದ್ಧೆಯಾಗಿದ್ದೀರಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನೀವು ಬಹುಬೇಗ ಬೆಳೆದಿದ್ದೀರಿ. ನಿಮ್ಮವರ ಏಳಿಗೆಗೂ ನೀವು ಕಾರಣವಾಗಿದ್ದೀರಿ. ಸಮಾಜ ಸೇವೆಗೂ ನೀವು ಬದ್ಧ ಕಂಕಣರಾಗಿದ್ದೀರಿ. ಹುಟ್ಟಿದ ಮನೆಯ ಬೆಳಕಾಗಿದ್ದ ನೀವು, ಸೇರಿದ ಮನೆಯಲ್ಲೂ ಜ್ಯೋತಿಯಾಗಿದ್ದೀರಿ. ನಿಮ್ಮ ಜ್ಞಾನದ ದೀಪದಿಂದ ಇತರರ ಅಜ್ಞಾನವನ್ನು ಹೋಗಲಾಡಿಸಿ ಅಲ್ಲಿಯೂ ತಿಳಿವಿನ ಸೊಡರನ್ನು ಹಚ್ಚಿದ್ದೀರಿ. 

ನಿಮ್ಮ ಅನುಭವವನ್ನು ನಿಮ್ಮಂತಹ  ನೂರು, ಸಾವಿರ ಸೋದರಿಯರಿಗೆ ಹಂಚಿ. ಆಗ ಎಲ್ಲ ಮನೆಗಳಲ್ಲೂ ಅನುದಿನವೂ ಬೆಳಕಿನ ಹಬ್ಬದ ಸಡಗರವನ್ನು ನೀವು ಕಾಣುವಿರಿ. " ನಾನು ಸುಖಿ", ಎಂಬ ಭಾವನೆಯಿಂದ ನೀವು ಬೆಳಗುವಿರಿ. 
 

Rating
Average: 2 (1 vote)