ತಂಗಳು ಬದುಕಿನ ಮಳೆ
ಎರಡನೇ ತಲೆಮಾರಿನವನು. ದೊಡ್ಡ ಬರ್ನರಿನ ಚಿಮಣೀ ಎಣ್ಣೆ ಸ್ಟೌ ಬುಸ್ಸೋ ಹಚ್ಚಿಕೊಂಡರೇ ಸಾಕು ಗಿರಾಕಿಗಳು ಹಾಜರಾಗುತ್ತಿದ್ದರು. ಹಿಂದಿನ ತಲೆಮಾರಿನ ಹಿರಿಯ ಆರಂಭಿಸುವಾಗ ಈಗಿರುವಷ್ಟು ದೊಡ್ಡದಲ್ಲದ ಸ್ಟೌ ಇತ್ತು. ಆ ಕಾಲಕ್ಕೆ ದೊಡ್ಡದೇ ಆಗಿತ್ತು. ಬಾಣಲೆ ಮಾತ್ರ ಅದೇ ಗಾತ್ರದ್ದು. ಮೆಣಸಿನ ಬಜೆ ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನುವ ಆಸೆ ಹುಟ್ಟಿಸುವ ರುಚಿಯಿರುತ್ತಿತ್ತು. ಶರಾಬು ಕುಡಿಯುವ ಕುಡುಕರಿಗೆ ಶರಾಬಿನ ಘಾಟು ತಪ್ಪಿಸಲು ನಶೆಯ ಗಮ್ಮತ್ತು ವಿಪರೀತವಾಗಲು ಮೆಣಸಿನ ಬಜೆ ಬೇಕಿತ್ತು. ಉದ್ದಿನ ಅಂಬೋಡೆ ಬಾಯಿಗಿಟ್ಟರೆ ಕರಗುವಷ್ಟು ಮ್ರದು, ಹಿಂಗು, ಬೇವಿನಸೊಪ್ಪು ಎಳೆಮೆಣಸು ಮಿಶ್ರಿತ ಹಿಟ್ಟು ಬಿಸಿ ಬಿಸಿ ಎಣ್ಣೆಯಲ್ಲಿ ಅರಳಿಕೊಳ್ಳುವಾಗ ಕಾವ್ಯದಂತಹ ಪರಿಮಳ ಇರುತ್ತಿತ್ತು. ಹಳದಿಯಿಂದ ಕೆಂಪಿಗೆ ತಿರುಗುವ ಮುನ್ನ ತೂತುಗಳುಳ್ಳ ದೊಡ್ಡ ಸೌಟಿನಲ್ಲಿ ಬಸಿದು ಹರಿವಾಣಕ್ಕೆ ಹಾಕುತ್ತಿದ್ದ. ಹರಿವಾಣಕ್ಕೆ ಬಿದ್ದದ್ದೆ ತಡ, ಬಕಪಕ್ಷಿಗಳ ಹಾಗೆ ಕಾಯುತ್ತ ನಿಂತ ಗಿರಾಕಿಗಳು, ಹಳೇ ನ್ಯೂಸ್ ಪೇಪರಿನ ಹಾಳೆಯಲ್ಲಿ ಕರಿದ ತಿಂಡಿ ಕಟ್ಟಿಸಿಕೊಂಡು ಮನೆಗೊಯ್ಯುತ್ತಿದ್ದರು. ಇನ್ನು ಕೆಲವರು ಅಲ್ಲೇ ಮೆದ್ದು ಹಾಕುತ್ತಿದ್ದರು. ಈ ಹಿರಿಯ, ಮೊಣಕಾಲಿನ ತನಕ ಬರುವ ಆ ತಲೆಮಾರು ಕಂಡ ಪೋಲಿಸು ಚಡ್ಡಿ ಧರಿಸುತ್ತಿದ್ದ. ಬಣ್ಣ ಮಾತ್ರ ಖಾಕಿಯಾಗಿರಲಿಲ್ಲ. ಕಪ್ಪು ಬಣ್ಣದಿತ್ತು. ಕರಿಯುವಾಗ ಕೈಯಲ್ಲಿ ಅಲ್ಪ ಸ್ವಲ್ಪ ಉಳಿದ ಕಡಲೇ ಹಿಟ್ಟಿನ ಅಂಟು, ಚಡ್ಡಿಗೆ ಅಲ್ಲಲ್ಲಿ ಮೆತ್ತಿಕೊಳ್ಳುತ್ತಿತ್ತು. ಹೊಟ್ಟೆಯ ಮೇಲೆ ಕಿಸೆ ಇರುವ, ಕುರ್ತಾವೂ ಅಲ್ಲದ, ಬನಿಯನ್ನೂ ಅಲ್ಲದ ಖಾದಿಯಲ್ಲಿ ತಯಾರಾದ, ತೋಳು ಇಲ್ಲದ ಅಂಗಿ ಧರಿಸುತ್ತಿದ್ದ. ಎಣ್ಣೆಯ ತುಂತುರು, ಸ್ಟೌನ ಬಿಸಿಗೆ, ಬಿಳಿ ಬಣ್ಣ ಮಾಸಿ ಜಿಗುಟು ಬಣ್ಣದಲ್ಲಿರುತ್ತಿತ್ತು. ಕಿವಿಗೆ ಕೆಂಪು ಕಲ್ಲಿನ ಒಂಟಿಯಿತ್ತು. ಬೀಡಾ ಬಾಯಲ್ಲಿ ಗಂಟಾಗಿ ಎಡಕೆನ್ನೆಯ ಒಳಗೆ ಉಂಡೆಯಾಗಿ ಇರುತ್ತಿತ್ತು. ಬಿಸ್ಕುಟು ರೊಟ್ಟಿ, ಕ್ಯಾಬೇಜ್ ಅಂಬಡೆ, ಗೆಣಸು ಪೋಡಿ, ಜೀ ಗುಜ್ಜೆ ಪೋಡಿ, ಬಿಟ್ರೂಟ್, ಬಟಾಟೆ, ಬೇಯಿಸಿ ನುಲಿದು, ಬಟಾಣೀ ಕಾಳು ಬೆರೆಸಿದ ಹೂರಣದ ಬೋಂಡ, ನೀರುಳ್ಳಿ ಬಜೆ, ಗೋಳಿ ಬಜೆ ಒಂದಾದ ನಂತರ ಒಂದರಂತೆ ಕರಿಯುತ್ತಲೇ ಇರುತ್ತಿದ್ದ. ಬೆಳಗ್ಗೆ ಹಚ್ಚಿಟ್ಟ ಹಸಿಮೆಣಸು, ಗೆಣಸು, ಕಲಸಿಟ್ಟ ಹೂರಣ, ಕಡಲೇ ಹಿಟ್ಟು ಕಲಸಿಟ್ಟ ದೊಡ್ಡ ಪಾತ್ರೆ, ಎರಡು ಮೂರು ಡಬ್ಬೆ ತೆಂಗಿನ ಎಣ್ಣೆ ಖಾಲಿಯಾಗಿ ಯಾರ್ಯರ ಹೊಟ್ಟೆ ಸೇರಿ ಗ್ಯಾಸಗುತ್ತಿತ್ತು. ಮಧ್ಯಾಹ್ನಎರಡಕ್ಕೆ ಹಚ್ಚಿದ ಸ್ಟೌ ರಾತ್ರಿ ಎಂಟಕ್ಕೆ ಆರುತ್ತಿತ್ತು. ಅದುವರೆಗೂ ಗಾಳಿಯಲ್ಲಿ ಕರಿಯುವ ಕಂಪು ಇರುತ್ತಿತ್ತು. ಹತ್ತಿಪ್ಪತ್ತು ಲೀಟರ್ ಚಿಮಿಣಿ ಎಣ್ಣೆಯೂ ಮುಗಿಯುತ್ತಿತ್ತು. ಸ್ಟೌನ ಹತ್ತಿರ ಹೊಗೆ ಹಿಡಿದ ಗೋಡೆ ಸ್ಟೌ ಇಡಲಿಕ್ಕೆ ಒಂದು ಮೇಜು. ಕರಿದುದನ್ನು ಸುರಿಯಲಿಕ್ಕೆ ಮೂರು ದೊಡ್ಡ ಹರಿವಾಣ, ಹರಿವಾಣ ಇಡಲಿಕ್ಕೊಂದು ಮೇಜು, ಈ ಎರಡು ಮೇಜುಗಳ ನಡುವೆ ನುಸುಳಿದರೆ ಕುಳಿತಿರುವುದಕ್ಕೆ ಉದ್ದನೆಯ ಬೆಂಚು. ಒಟ್ಟು ಅಂಗಡಿಯೇ ಅಷ್ಟು. ಹಿರಿಯ ದುರಾಸೆಯವನಲ್ಲ. ಪುಡಿಗಾಸಿನ ಲಾಭಕ್ಕೆ ವ್ಯಾಪಾರ ಮಾಡುತ್ತಿದ್ದ. ವಿಪರೀತ ವ್ಯಾಪಾರವಿತ್ತು. ಜೀವನದಲ್ಲಿ ಶಿಸ್ತು ಇತ್ತು. ಅವನು ನಂಬಿದ ದೇವಸ್ಥಾನದ ತೇರು, ಜಾತ್ರೆಗೆ ಅವನು ಅಂಗಡಿ ಮುಚ್ಚಿರುತ್ತಿದ್ದ. ಅಂಗಡಿ ಮುಚ್ಚಿದ ದಿನ ಗಿರಾಕಿಗಳು ಏನೋ ಕಳಕೊಂಡವರ ಹಾಗೇ ಮಂಕಾಗುತ್ತಿದ್ದರು. ಚಡಪಡಿಸುತ್ತಿದ್ದರು. ಇದ್ದಕ್ಕಿದ್ದ ಹಾಗೇ ಎರಡನೆಯ ತಲೆಮಾರಿನ ಯುವಕ ತಯಾರಾಗುತ್ತಿದ್ದ. ಚಡ್ಡಿಯ ಬದಲು ಖಾವಿ ಮುಂಡು, ಹಿರಿಯನ ತರಹದೇ ಅಂಗಿ. ಕಿವಿಗೆ ಒಂಟಿಯಿಲ್ಲ. ಬೀಡಾದ ಉಂಡೆ ಬಲಗೆನ್ನೆಗೆ ಬಿಟ್ಟರೆ ಬೇರೆ ವ್ಯತ್ಯಾಸಗಳು ಗೊತ್ತೇ ಆಗದ ಹಾಗೆ ತಲಾಂತರವಾಗಿತ್ತು. ಈಗಲೂ ದರದಲ್ಲಿ ವಿಪರೀತ ಏರಿಕೆಯಾಗಿರಲಿಲ್ಲ. ಹಳೇ ತಿಂಡಿಗಳು, ಹಳೇ ತಲೆಮಾರಿನದೇ ಆದರ್ಷಗಳು, ಹಳೇ ತಲೆಮಾರು ನಿಗದಿಸುತ್ತಿದ್ದ ದರದ ಅಳತೆಯಲ್ಲಿಯೇ ವ್ಯಾಪಾರ ಸಾಗಿತ್ತು. ಸರಕಾರ ರಸ್ತೆ ಅಗಲಗೊಳಿಸುವುದಕ್ಕೆ ಮಾರ್ಕಿಂಗ್ ಮಾಡಿ ನೋಟಿಸು ಕೊಟ್ಟಿತ್ತು. ಸರಕಾರದ ಅಧಿಕಾರಿ ಸ್ವತಹ ಬಂದು ಅಂಗಡಿಯವರ ಮನವೊಲಿಸಿದ್ದ. ಸ್ಥಳೀಯ ಶಾಸಕನೂ ತುಂಬಾ ಪ್ರಭಾವ ಬೀರಿದ್ದ. ರಸ್ತೆ ಅಗಲಗೊಂಡರೆ ವ್ಯಾಪಾರ ಇನ್ನಷ್ಟು ಅಭಿವ್ರದ್ಧಿಯಾಗುವುದನ್ನು ವಿವರಿಸಿದ್ದ. ಮಾರ್ಕಿಂಗ್ ಮಾಡಿರುವಷ್ಟು ಭಾಗ ಮಾಲೀಕರೇ ಕೆಡವಿ, ಕೆಡವಿದ ಜಾಗಕ್ಕೆ ಪರಿಹಾರ, ಕೆಡವಿ ಉಳಿದ ಜಾಗದಲ್ಲಿದ್ದ ಅಂಗಡಿಯ ಮೇಲೆ ದುಪ್ಪಟ್ಟು ಮಹಡಿಯನ್ನು ಕಟ್ಟಿಕೊಳ್ಳಲು ಪರವಾನಿಗೆ, ಕಟ್ಟಿಸುವ ಖರ್ಚು ಸರಕಾರವೇ ಕೊಟ್ಟು, ಹಿಂದೆ ಸರಿಯಲು ವಿನಂತಿಸಿದ್ದ. ಒಂದಿಬ್ಬರು ಮೂವರನ್ನು ಬಿಟ್ಟರೆ ಎಲ್ಲರೂ ಒಪ್ಪಿದ್ದರು. ಬಜೆ ಕಾಯಿಸುವ ಅಂಗಡಿಯವ, ಯಾವತ್ತು ಮಾತೇ ಆಡದವ, ಸ್ವಾಮಿ ಬಡವ ಅಂಥ ಶುರು ಹಚ್ಚಿಕೊಂಡವನನ್ನು, ಸರಕಾರದ ಅಧಿಕಾರಿ ತಡೆದ. ಆ ಅಧಿಕಾರಿ ಭರ್ಜರಿಯಾಗಿಯೇ ತಯಾರಿ ಮಾಡಿ ಬಂದಿದ್ದ. ಒಂದರ ನಂತರ ಒಂದರಂತೆ ನಾಲ್ಕು ಫ್ಲ್ಯಾಟುಗಳ ಹೆಸರು ಹೇಳಿ ಫ್ಲ್ಯಾಟ್ ನಂಬ್ರಗಳನ್ನು ಉಚ್ಚರಿಸಿದ್ದ. ಇದರ ಒಡೆತನ ನಿನ್ನದಲ್ಲವೇ? ಅನ್ನುವ ಪ್ರಶ್ನೆ ಕೇಳದೆಯೇ, ಕಿರುನಗು ಸೂಸಿ ನಿಲ್ಲಿಸಿದ್ದ. ಬೀದಿ ಮಧ್ಯದಲ್ಲಿ ನಗ್ನನಾದವನ ಹಾಗೇ ಬಜೆ ಅಂಗಡಿಯವ ಗುಂಪಿನಿಂದ ಬೇರ್ಪಟ್ಟು, ಅಂಗಡಿಗೆ ದುಡು ದುಡು ಓಡುತ್ತಾ ಇರುವ ಹಾಗೆ ನಡೆದ. ಉರಿ ಸಣ್ಣದು ಮಾಡಿದ್ದ ಸ್ಟೌಗೆ ಪಂಪು ಹೊಡೆಯತೊಡಗಿದ.