ತಂಗಳು ಬದುಕಿನ ಮಳೆ
ಬುಧವಾರದ ದಿನವಾಗಿತ್ತು. ನಗರದ ವ್ಯಾಪಾರ ಮಳಿಗೆಗಳ ಸಾಲುಗಳೇ ಇರುವ ರಸ್ತೆಯಾಗಿತ್ತು. ವಿಪರೀತ ವಾಹನಗಳು, ವಿಪರೀತ ಜನದಟ್ಟಣೆ ಇರುವುದರಿಂದ ಗದ್ದಲದ ವಾತವರಣ ಇರುತ್ತಿತ್ತು. ರಾಷ್ಟ್ರೀಕ್ರತ ಬ್ಯಾಂಕಿನ ಶಾಖೆಯೊಂದು ಒಂದನೇ ಮಹಡಿಯಲ್ಲಿ, ಇದೇ ರಸ್ತೆಯಲ್ಲಿತ್ತು. ತುಂಬಾ ಕಸ್ಟಮರುಗಳು ಇರುವ ಬ್ರಾಂಚ್ ಅದಾಗಿತ್ತು. ಸಿಬ್ಬಂದಿಗಳು ತುಂಬಾನೇ ಇದ್ದರು. ಯಾರಿಗೂ ಪುರುಸೊತ್ತಿಲ್ಲದಷ್ಟು ಕೆಲಸವಿರುತ್ತಿತ್ತು. ಆಕೆ ತುಂಬಾ ಸುಂದರ ಹೆಂಗಸು. ಅದು ಅವಳಿಗೇ ಚೆನ್ನಾಗಿ ತಿಳಿದಿತ್ತು. ಕಸ್ಟಮರುಗಳು ಅವಳನ್ನು ನೋಡದೆ ಇದ್ದರೆ ಏನೋ ಮಿಸ್ಸ್ ಮಾಡಿಕೊಂಡವರ ಹಾಗೇ ಆಗುತ್ತಿದ್ದರು. ಬ್ಯಾಂಕ್ ವ್ಯವಹಾರಕ್ಕೆ ಗಂಡಸರೇ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದರೂ, ಬ್ಯಾಂಕಿಗೆ ಬರುವ ಹೆಂಗಸರು ಸಹ ಆಕೆಯನ್ನು ಬೆರಗಿನಿಂದ ನೋಡುತ್ತಿದ್ದರು ಅವತ್ತು ಅವಳು ಸೇವಿಂಗ್ಸ್ ಕೌಂಟರಿನಲ್ಲಿ ಇದ್ದಳು. ಅವಳು ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿದ್ದಳು. ಪರಿಚಿತ ಕಸ್ಟಮರುಗಳ ಹತ್ತಿರ ಹರಟೆ ಹೊಡೆಯುವುದು ಅವಳಿಗಿಷ್ಟ. ಕೌಂಟರಿನ ಪಕ್ಕದ ಸಹೋದ್ಯೋಗಿಗಳನ್ನು ಹರಟೆಗೆ ಕಿವಿಯಾಗಿಸುವುದು ಅವಳಿಗಿಷ್ಟ. ಅವಳ ಕೌಂಟರಿನ ಯಾವ ಕೆಲಸಗಳೂ ಮುಗಿಯುತ್ತಿರಲಿಲ್ಲ. ಇತರ ಸಹೋದ್ಯೋಗಿಗಳು ಕೆಲಸವನ್ನು ಮುಗಿಸುತ್ತಿದ್ದರು. ತುಂಬಾ ಸಿರಿವಂತ ಕುಟುಂಬದಿಂದ ಅವಳು ಸಿರಿವಂತ ಕುಟುಂಬಕ್ಕೆ ಮದುವೆಯಾಗಿ ಹೋಗಿದ್ದಳು. ಈ ಕೆಲಸವೇನೂ ಅವಳಿಗೆ ಬೇಕಿರಲಿಲ್ಲ. ಸಮಯ ಕಳೆಯಲು, ಸಿಂಗರಿಸಿಕೊಂಡು ಬಂದು ಹೋಗಲು, ತನ್ನ ವೈಭವವನ್ನು ಪ್ರದರ್ಶಿಸಲು ಅವಳಿಗೆ ಕೆಲಸ ಬೇಕಿತ್ತು. ಹಾಗಂತ ಅವಳು ತನ್ನ ಸಹೋದ್ಯೋಗಿಗಳ ಹತ್ತಿರ ಹೇಳಿ ಕೊಳ್ಳುತ್ತಲೂ ಇದ್ದಳು. ಅವಳ ಪ್ರಭಾವಳಿಯ ಪರಿಣಾಮದಿಂದ ಯಾರೂ ಅವಳನ್ನು ಗದರಿಸುತ್ತಲೂ ಇರಲಿಲ್ಲ. ತಾನುಟ್ಟ ಸೀರೆ, ಧರಿಸಿದ ಹೊಸ ಆಭರಣ, ನೋಡಿದ ಹೊಸ ಸೀನೆಮಾ, ತಿಂದ ಖಾದ್ಯ, ತಿರುಗಾಡಿದ ಸ್ಥಳ, ಹಾರಡಿದ ಊರು, ತನ್ನ ಕುಟುಂಬ, ತನ್ನ ಆಸ್ತಿ, ಇದರ ವರ್ಣನೆಗೇ ಸಮಯ ಸಾಕಾಗುತ್ತಿರಲಿಲ್ಲ. ಯಾರಿಗೂ ಒಂದು ಧಮಡಿಗೂ ಉಪಕಾರಕ್ಕೆ ಬೀಳುತ್ತಿರಲಿಲ್ಲ. ವಯಸ್ಸು ನಲ್ವತ್ತರ ಸಮೀಪ ಬಂದಿದ್ದರೂ ಅವಳ ವರ್ತನೆ ಹದಿಹರೆಯದವರ ಹಾಗಿರುತ್ತಿತ್ತು. ಸಣ್ಣ ಪುಟ್ಟ ಕಸ್ಟಮರುಗಳೆಂದರೇ ಅವಳಿಗೆ ಅಲರ್ಜಿ. ಹರಿಹಾಯುವುದು ಅವಳ ಧರ್ಮವಾಗಿರುವ ಹಾಗೇ ಇತ್ತು. ಅವಳ ಮಾತಿನ ಪ್ರಪಂಚಕ್ಕೆ ಧಕ್ಕೆಯಾಗುವ ಕಸ್ಟಮರುಗಳನ್ನು ಕಂಡರೆ ಅವಳಿಗೆ ಉರಿಯೇಳುತ್ತಿತ್ತು. ದಿನಾ ಬರುವ ಕಸ್ಟಮರುಗಳು ಕೆಲಸ ನಿಧಾನವಾದರೂ, ಅವಳ ಸೌಂದರ್ಯಕ್ಕೆ ಸೋತವವರ ಹಾಗೇ ನಿಂತು, ಅವಳ ಮಾತಿಗೆ ಮಾತು ಕೂಡಿಸುತ್ತಾ ತಾಳ್ಮೆಯಿಂದ ನಿಂತು ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು. ಅತೀ ತುರ್ತಿನಲ್ಲಿ ಕೆಲಸ ಆಗಬೇಕಾದ ಕೌಂಟರುಗಳಿಂದ ಅವಳನ್ನು ಆದಷ್ಟು ತಪ್ಪಿಸಲು ಉಳಿದ ಸಿಬ್ಬಂದಿ ಪ್ರಯತ್ನಿಸುತ್ತಿತ್ತು. ಅದನ್ನಿವಳು ಪ್ರಶ್ನಿಸುತ್ತಿದ್ದಳು. ತುಂಬಾ ಚಟುವಟಿಕೆ ಇರುವ ಕೌಂಟರು ಸರಧಿಯಲ್ಲಿ ಬಂದಾಗ ಇಡೀ ಬ್ಯಾಂಕು ಚಡಪಡಿಸುತ್ತಿತ್ತು. ಎದುರು ಹಾಕಿಕೊಳ್ಳಲು ಅವರ್ಯಾರಿಗೂ ಇಷ್ಟವಿರಲಿಲ್ಲ. ಆತ ಪಾಸ್ ಪುಸ್ತಕ ತಂದಿದ್ದ. ಪುಸ್ತಕ ಮಡಚಿ ಸುರುಳಿಸಿದ್ದ. ಪುಡಿಪುಡಿಯಾದ ಹಾಳೆಗಳು ಕಿವಿ ಬಂದಿದ್ದವು ಅದನ್ನು ನೀವೀ ನೀವೀ, ಸರಿಪಡಿಸಿದಷ್ಟು ಅದು ಸುರುಳಿ ಸುತ್ತುತ್ತಿತ್ತು. ಅವನು ಧರಿಸಿದ್ದ ಧೋತಿ ಧೂಳು ಕೊಳೆಯಿಂದ ತುಂಬಿತ್ತು. ಉದ್ದ ತೋಳಿನ ಮೊಣಕಾಲಿನ ತನಕ ಬರುವ ಅಂಗಿಯೂ ಅಲ್ಲದ ಕುರ್ತಾವೂ ಅಲ್ಲದ ಟಿಪಿಕಲ್ ಹಳ್ಳಿಗನ, ವೇಷದಲ್ಲಿದ್ದ. ಗುಳೇ ಎದ್ದು ಬಂದ ರೈತ ಎನ್ನುವುದು ಎಲ್ಲರಿಗೂ ತಿಳಿಯುವ ಹಾಗಿದ್ದ. ವಯಸ್ಸು ಐವತ್ತರ ಆಸುಪಾಸಿನಲ್ಲಿತ್ತು. ಬಾಯಲ್ಲಿ ಕವಳದ ಮುದ್ದೆ ಎಡಕೆನ್ನೆಯ ಬಳಿ ಉಂಡೆಯ ಹಾಗೇ ಕಾಣಿಸುತ್ತಿತ್ತು. ಬೀಡಿಯ ಕಟ್ಟೂ ಅವನ ಎದೆಯ ಮೇಲಿದ್ದ ಅಂಗಿಯ ಜೇಬಿನಲ್ಲಿತ್ತು. ಬೆವರು ನಾರುತ್ತಿದ್ದ. ಸುಮಾರು ಹೊತ್ತಿನಿಂದ ಸೇವಿಂಗ್ಸ್ ಕೌಂಟರಿನ ಮುಂದೆ ನಿಂತಿದ್ದ. ಆಕೆ ಅವನನ್ನು ನೋಡಿಯೂ ಇದ್ದಳು. ಏನು ಬೇಕಾಗಿದೆ ಅನ್ನುವ ವಿಚಾರಣೆಗೆ ಅವಳು ಹೋಗಲಿಲ್ಲ. ಬೇರೆ ಪರಿಚಿತ ಕಸ್ಟಮರುಗಳು ಬಂದಾಗ ನಗುತ್ತಾ ಮಾತಿಗೆ ತೊಡಗಿಸಿ ತನ್ನ ಕೌಂಟರಿನ ಕೆಲಸವಾಗಿದ್ದರೆ ನಿಧಾನಕ್ಕೆ ಮಾಡಿಕೊಟ್ಟು, ತನ್ನದಲ್ಲದಿದ್ದರೆ ಹರಟೆ ಹೊಡೆಯುತ್ತಾ ಇದ್ದಳು. ಸುಮಾರು ಒಂದು ತಾಸಿಗಿಂತ ಹೆಚ್ಚು ಹೊತ್ತು ಆತ ನಿಂತಿದ್ದ. ಕೊನೆಗೆ ಒಂದು ಹೊತ್ತಿನಲ್ಲಿ ಕಸ್ಟಮರುಗಳು ಯಾರೂ ಅವಳ ಕೌಂಟರಿನ ಬಳಿ ಇಲ್ಲದ ಸಂಧರ್ಬದಲ್ಲಿ ಅವನು ಪಾಸು ಪುಸ್ತಕವಾಗಿದ್ದ, ಆದರೀಗ ಪಾಸ್ ಪುಸ್ತಕ ಅನಿಸುವ ಹಾಗಿಲ್ಲದ ಹಾಳೆಗಳ ಪುಸ್ತಕವನ್ನು ಅವಳ ಮುಂದೆ ಒಡ್ಡಿದ. ಅಸಹ್ಯದಿಂದ ಅವಳು ಮುಖ ಕಿವುಚುತ್ತಾ, ಸಂಭಂದಿಸದ ಬೈಗಳನ್ನು ಸಿಡಿಸುತ್ತಾ, ಕೆಲಸ ಮಾಡಲೇಬೇಕಾಗಿ ಬಂದ ಅನಿವಾರ್ಯತೆಗೆ ತಾಳ್ಮೆ ತಪ್ಪುತ್ತಾ, ಅವನು ಒಟ್ಟು ಮೊತ್ತ ಎಷ್ತಿದೆ ? ಎಂದುದಕ್ಕೆ ರಪರಪ ಅವನ ಪಾಸ್ ಪುಸ್ತಕದಲ್ಲಿ ಗೀಚಿ, ಕೌಂಟರಿನ ಮೇಲೆ ಎಸೆದು ಮುಖ ತಿರುವಿ ಕುಳಿತಿದ್ದಳು. ಉಳಿದ ಸಿಬ್ಬಂದಿ ನಡೆದುದನ್ನು ಗಮನಿಸಿಯೂ ಗಮನಿಸದ ಹಾಗೇ ಗಂಭೀರವಾಗಿ ಕೆಲಸದಲ್ಲಿ ಮುಳುಗಿರುವ ನಟನೆಯಲ್ಲಿತ್ತು. ಕಸ್ಟಮರುಗಳೂ ನಡೆದುದನ್ನು ನೋಡಿ ಬೆಪ್ಪಾಗಿದ್ದರು. ಯಾರೋ ಹೊಸಬ ಯುವಕ, ಬ್ಯಾಂಕಿನಲ್ಲಿ ಬೇರೆನೋ ವ್ಯವಹಾರಕ್ಕೆ ಬಂದವನು ಈತನನ್ನು ಪಕ್ಕಕ್ಕೆ ಕರೆದು ವಿಚಾರಿಸಿದ್ದ. ರೈತನ ಕೈಲಿದ್ದ ಪಾಸ್ ಪುಸ್ತಕದಲ್ಲಿದ್ದ ಮೊತ್ತವನ್ನು ತಿಳಿಸಿದ್ದ. ಪೂರಾ ಹಣ ಡ್ರಾ ಮಾಡಲಿಕ್ಕೆ ಆಗುವುದಿಲ್ಲ, ಪೂರಾ ಡ್ರಾ ಮಾಡಬೇಕಾದರೆ ಖಾತೆ ಮುಚ್ಚಬೇಕು, ಹಾಗೇ ಮುಚ್ಚಲು ಕಾಗದ ಬರೆಯಬೇಕು ಅಂದಿದ್ದ. ರೈತ ಗಾಬರಿಯಾಗಿದ್ದ. ಮಿನಿಮಮ್ ಹಣ ಖಾತೆಯಲ್ಲಿ ಬಿಟ್ಟು, ಡ್ರಾ ಮಾಡಬಹುದಾಗಿದ್ದ ಮೊತ್ತವನ್ನು ಯುವಕ ಪುಸ್ತಕ ನೋಡಿ ತಿಳಿಸಿದ್ದ. ರೈತ ಸಮಾಧಾನ ಹೊಂದಿದ್ದ. ಯುವಕ ತಿಳಿಸಿದ ಹಾಗೇ ಮತ್ತೆ ಕೌಂಟರಿಗೆ ಬಂದು ಅಳುಕಿ ಅಳುಕಿ ತೆಗೆಯಲು ಇಚ್ಚಿಸುವ ಮೊತ್ತ ತಿಳಿಸಿದ್ದ . ಇಷ್ಟು ಹೊತ್ತು ಯುವಕ ಮತ್ತು ರೈತನ ಮಾತುಕತೆ ಅವಳಿಗೆ ತಿಳಿದ ಹಾಗಾಗಿತ್ತು. ಕೋಪ ಅವಳ ಕಣ್ಣಿನಲ್ಲಿ ಬಣ್ಣದ ಸಿಡಿಪಟಾಕಿಯ ಹಾಗೇ ಚೆಲ್ಲುತ್ತಿತ್ತು. ವಿತ್ ಡ್ರಾವಲ್ ಸ್ಲಿಪ್ ಒಂದನ್ನು ಕೌಂಟರಿನ ಮೇಲೆ ಎಸೆದು ಸುಮ್ಮನೆ ಕುಳಿತಿದ್ದಳು. ಮತ್ತೆ ಸಂಭಂದವಿಲ್ಲದ ಬೈಗಳನ್ನು ಏರು ದನಿಯಲ್ಲಿ ಗೊಣಗಿದ್ದಳು. ರೈತ ಏನು ಮಾಡಬೇಕು ಅಂಥ ತಿಳಿಯದೆ ಸ್ಲಿಪ್ ಹಿಡಿದು ನಿಂತಿದ್ದ. ಅದೇ ಯುವಕ ಇದನ್ನು ಗಮನಿಸಿದ್ದ. ರೈತನನ್ನು ಪಕ್ಕಕ್ಕೆ ಕರೆದು ಕಸ್ಟಮರುಗಳು ನಿಂತು ಬರೆಯುವ ಸಣ್ಣ ಮೇಜಿನ ಬಳಿ ರೈತನನ್ನು ಕರೆದೊಯ್ದಿದ್ದ. ರೈತ ತೆಗೆಯಬಹುದಾಗಿದ್ದ ಮೊತ್ತ ನಮೂದಿಸಿದ್ದ. ರೈತ ಕನ್ನಡದಲ್ಲಿ ಸಹಿ ಹಾಕಿದ್ದ. ತಾನು ಊರಿಗೆ ಹೊರಟಿರುವುದಾಗಿಯೂ, ವ್ರದ್ಧ ತಂದೆ ಕೊನೆಯ ಹಂತದಲ್ಲಿರುವುದಾಗಿಯೂ ರೈತ ಯುವಕನಿಗೆ ವಿವರಿಸಿದ್ದ. ತಿರುಗಿ ಯಾವಾಗ ನಗರಕ್ಕೆ ಬರುವುದು ಅಂಥ ನಿಶ್ಚಯಿಸಿಲ್ಲದ್ದನ್ನು ಹೇಳಿದ್ದ. ತಾನು ಕೆಲಸ ಮಾಡುತ್ತಿದ್ದ ಫ್ಲಾಟಿನ ಕಾರ್ಯದರ್ಶಿಯೇ ಖಾತೆ ತೆರೆಸಿದ್ದನ್ನು ತಿಳಿಸಿದ್ದ. ಕಾರ್ಯದರ್ಶಿಯೇ ಬ್ಯಾಂಕಿಗೆ ಜಮಾ ಮಾಡುತ್ತಿದ್ದುದ್ದನ್ನು ತಿಳಿಸಿದ್ದ. ಅವರು ಊರಿನಲ್ಲಿ ಇರದ ಕಾರಣ ಒಬ್ಬನೇ ಬ್ಯಾಂಕಿಗೆ ಬರಬೇಕಾದುದನ್ನು ವಿವರಿಸಿದ್ದ. ಸ್ಲಿಪ್ ಅನ್ನು ಆಕೆಗೆ ಕೊಟ್ಟರೆ ಅವಳು ಒಂದು ಬಿಲ್ಲೆ ಕೊಡುವುದನ್ನು ಯುವಕ ತಿಳಿಸಿದ್ದ. ಆ ಬಿಲ್ಲೆಯನ್ನು ಎಲ್ಲಿ ಕೊಟ್ಟರೆ ನಗದು ಸಿಗುತ್ತದೆ ಎಂಬುದನ್ನು ರೈತನಿಗೆ ವಿವರಿಸಿದ್ದ. ಏನೂ ತೊಂದರೆಯಾಗುವುದಿಲ್ಲ ಎಂಬ ಆಶ್ವಾಸನೆ ಕೊಟ್ಟು ಯುವಕ ಬ್ಯಾಂಕಿನಿಂದ ಹೊರಟಿದ್ದ. ರೈತ ಮತ್ತೆ ಹದಿನೈದು ನಿಮಿಷ ಕಾದ ನಂತರ ಅವಳು ಬಿಲ್ಲೆ ಮತ್ತು ಪಾಸ್ ಪುಸ್ತಕ ಕೌಂಟರ್ ಮೇಲೆ ಎಸೆದಿದ್ದಳು. ಮತ್ತೆ ಹೆಚ್ಚು ಹೊತ್ತಾಗಲಿಲ್ಲ. ನಗದು ಸಿಕ್ಕಿತ್ತು. ರೈತನ ಅಂಡರ್ ವೇರ್ ಚಡ್ಡಿ ಕಿಸೆಯಲ್ಲಿ ಭದ್ರವಾಗಿ ಕುಳಿತ್ತಿತ್ತು. ಪಾಸ್ ಪುಸ್ತಕ ಸುರುಳಿಯಾಗಿ ಅಂಗಿಯ ಜೇಬಿನಲ್ಲಿದ್ದ ಬೀಡಿಯ ಕಟ್ಟಿನ ಜೊತೆಗೆ ಹಗುರವಾಗಿ ನುಸುಳಿ ಕೊಂಡಿತ್ತು. ಎಡಕೆನ್ನೆಯಲ್ಲಿದ್ದ ತಾಂಬೂಲದ ಉಂಡೆಯನ್ನು ಒಂದೆರಡು ಬಾರಿ ಜಗಿದು, ರಸ ನುಂಗಿದ್ದ. ಬಲಕೆನ್ನೆಗೆ ಉಂಡೆಯನ್ನು ದೂಕಿದ್ದ. ಬ್ಯಾಂಕಿನಿಂದ ಹೊರಡಲು ಸಿದ್ದನಾಗಿದ್ದ. ಕಸ್ಟಮರುಗಳು ಸುಮಾರಾಗಿದ್ದರು, ಬ್ಯಾಂಕು ಮತ್ತೆ ಹಿಂದಿನ ಸ್ಥಿತಿಗೆ ಬರುತ್ತಿತ್ತು. ಅವಳು ಮತ್ತೆ ಯಾರೋ ಕಸ್ಟಮರನ್ನು ಮಾತಿಗೆಳೆದಿದ್ದಳು. ಹೊರಟು ಹೋಗುತ್ತಿದ್ದ ರೈತ ಅವಳ ಕೌಂಟರಿನಲ್ಲಿ ಗಕ್ಕನೇ ನಿಂತಿದ್ದ. ಅವನ ಇಡೀ ದೇಹ ಟ್ರಾನ್ಸ್ ಗೆ ಒಳಗಾದ ಹಾಗೇ ಸೆಟೆದು ನೇರವಾಗಿತ್ತು. ಏನಮ್ಮೀ ? ನಿಂದೇನು ಬಂಗಾರದ್ದಾ? ಅಂಥ ಇಡೀ ಬ್ರ್ಯಾಂಚೇ ಬೆಚ್ಚುವ ಹಾಗೇ ಪ್ರಶ್ನಿಸಿದ್ದ. ಅವನ ಮುಗ್ಧ ಹಾವಭಾವದ ನೇರ ಪ್ರಶ್ನೆಗೇ ತಬ್ಬಿಬ್ಬಾಗಿದ್ದ ಕಸ್ಟಮರುಗಳು, ಉಳಿದ ಸಿಬ್ಬಂದಿ ವರ್ಗ, ತಲೆ ಮರೆಸಿ ಮುಸಿ ನಗುವನ್ನು ಮುಚ್ಚಿಡುವ ಪ್ರಯತ್ನದಲ್ಲಿ ಸೋಲುತ್ತಿತ್ತು. ಆಮೇಲೆ ಓಡು ನಡಿಗೆಯಲ್ಲಿ ರೈತ ಮಿಂಚಿನ ಹಾಗೇ ಬ್ಯಾಂಕಿನಿಂದ ಮಾಯವಾಗಿದ್ದ. ಆಕೆ ಮರುದಿನದಿಂದ ಆ ಬ್ರ್ಯಾಂಚಿನಲ್ಲಿ ಕಾಣಿಸಲಿಲ್ಲ.