ತತ್ತರ ಪ್ರದೇಶ : ಮುಲಾಮು ಟ್ಯೂಬ್‌ಗೆ ಪಿನ್ ಚುಚ್ಚಿದ ಕಾಂ-guess!

ತತ್ತರ ಪ್ರದೇಶ : ಮುಲಾಮು ಟ್ಯೂಬ್‌ಗೆ ಪಿನ್ ಚುಚ್ಚಿದ ಕಾಂ-guess!

ಬೊಗಳೂರು, ಜ.18- ಮಕ್ಕಳ ಮೂಳೆ ಮಾಂಸಗಳು ದೊರೆತು ತತ್ತರ ಪ್ರದೇಶವಾಗಿರುವ ಉತ್ತರ ಪ್ರದೇಶದಲ್ಲಿ, ಐದು ವರ್ಷಗಳ ಆಡಳಿತದ ಸವಿಯನ್ನು ಸಂಪೂರ್ಣವಾಗಿ ಸವಿದು, ತಿಂದು ತೇಗಿದ ಬಳಿಕ, ಶೀಘ್ರವೇ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ತಾವು ಮುಲಾಮು ಸಿಂಗ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿರುವುದಾಗಿ ಸತ್ತವರ ಪ್ರದೇಶ ಕಾಂ-guess ಸಮಿತಿ ಸ್ಪಷ್ಟಪಡಿಸಿದೆ.(bogaleragale.blogspot.com)

ಸದ್ಯಕ್ಕೆ ಮುಲಾಮು ಜತೆ ಗುರುತಿಸಿಕೊಂಡರೆ ಮತದಾರರು ತಮ್ಮ ಮೇಲೆ ಆಕ್ರೋಶಗೊಳ್ಳುತ್ತಾರೆ, ಈಗಾಗಲೇ ಮಕ್ಕಳ ತಲೆಬುರುಡೆಗಳು ಹಾಗೂ ಅಸ್ಥಿಪಂಜರಗಳು ಸಿಕ್ಕಿ ಮುಲಾಮು ಸರಕಾರಕ್ಕೆ ಮಸಣದ ದರ್ಶನವಾಗಿದೆ. ಇದು ಅಪಶಕುನವಾಗಿದ್ದು, ಇದರ ಕಳಂಕ ತಮಗೆ ತಟ್ಟಿದರೂ, ಅದನ್ನು ಇನ್ನೆರಡು ತಿಂಗಳೊಳಗೆ ಮತದಾರರ ಮನಸ್ಸಿನಿಂದ ಈ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ಸಮಿತಿ ಅಧ್ಯಕ್ಷ ಖಲ್ಮಾನ್ ಸುರ್ಷಿದ್ ಹೇಳಿದ್ದಾರೆ.

ಅಧಿಕಾರಾವಧಿ ಹೇಗೂ ಮುಗಿದಿದೆ. ಇನ್ನು ಸರಕಾರದಲ್ಲಿರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿರುವ ಅವರು, ನಾವೇನೂ ಮುಲಾಮು ಜತೆಗಿನ ಸಂಬಂಧವನ್ನು ಪೂರ್ಣವಾಗಿ ಕಡಿದುಕೊಂಡಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅದಕ್ಕೆ ಅನುಸಾರವಾಗಿ ನಮ್ಮ ನಿರ್ಧಾರ ಬದಲಿಸಲಾಗುತ್ತದೆ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಮುಲಾಮು ಸರಕಾರ ಇಷ್ಟು ವರ್ಷ ಭ್ರಷ್ಟಾಚಾರ, ದುರಾಡಳಿತಗಳಲ್ಲಿ ನಿರತವಾಗಿತ್ತು. ಈ ವಿಷಯಗಳೆಲ್ಲಾ ಇದುವರೆಗೆ ಅಧಿಕಾರದಲ್ಲಿದ್ದ ನಮಗೆ ಹೇಗೆ ಗಮನಕ್ಕೆ ಬಂದಿಲ್ಲ ಎಂಬುದೇ ತಿಳಿಯುತ್ತಿಲ್ಲ. ಈಗ ಚುನಾವಣೆಗಳು ಹತ್ತಿರ ಬಂದ ಕಾರಣದಿಂದಾಗಿ ನಮ್ಮ ಗಮನಕ್ಕೆ ಬಂದಿರುವುದು ನಮ್ಮ ಪೂರ್ವಜರು ಮಾಡಿದ ಪುಣ್ಯ. ಹಾಗಾಗಿ ಸದ್ಯಕ್ಕೆ ದೂರವಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿರುವ ಅವರು, ಇದೇನೂ ಶಾಶ್ವತ ಕಳಚಿಕೊಳ್ಳುವಿಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಫಲಿತಾಂಶ ಬಂದ ಮೇಲೆ ಮತ್ತೊಂದು ಪತ್ರಿಕಾಗೋಷ್ಠಿ ಕರೆದು ನಮ್ಮ ನಿಲುವನ್ನು ಸ್ಪಷ್ಟಪಡಿಸಲಾಗುತ್ತದೆ. ಅಲ್ಲಿವರೆಗೆ ನಮ್ಮ ನಿಲುವನ್ನು guess ಮಾಡಿ ಎಂದವರು ಹೇಳಿದರು.

Rating
No votes yet