ತಾಳ್ಮೆ
ನೀನೊಮ್ಮೆ ಉಲಿಯುವ ತನಕ
ಕಾಯುತ್ತ ಕಾವೆನು ನಾನು
ಎದೆಯ ಗೂಡಿನ ತುಂಬ ಕಾತರವ ತುಂಬಿ
ಇರುಳು ಕಳೆಯುವವರೆಗೆ
ಇರುಳಿನೊಲು ಕಾವೆನು ನಾನು
ಬೆಳಗ್ಗಿನಾ ಬೆಳಕಿನ ಬರವ ತಾಳ್ಮೆಯಲಿ ತಾಳ್ದು
ಬೆಳಗು ಬೆಳಗಲೇ ಬೇಕು
ಇರುಳು ಮಾಸಲೇ ಬೇಕು
ನಿನ್ನಿನಿದಾದ ಮಾತುಗಳ ಹೊಳೆ ಹರಿಯಬೇಕು
ಇನಿದಾದ ಮಾತಿನ ಒಳಗೆ
ಕೇಳರಿಯದಾ ಗಾನ
ಆಕಾಶ ಗೋಪುರವ ಛೇದಿಸಲೇ ಬೇಕು
ಎನ್ನೆದೆಯ ಗೂಡಿನೊಳಿರುವ
ಹಕ್ಕಿಗಳ ಚಿಲಿಪಿಲಿಯಿಂದ
ಗಾನಕ್ಕೆ ಮೇಳವನು ಕೂಡಿಸಲೇ ಬೇಕು
ಆ ಗಾನಮೇಳದಿಂದೆ
ಹೂವುಗಳು ತಾವು ಅರಳಿ
ಇಳೆಯ ಹೂದೋಟಗಳ ವ್ಯಾಪಿಸಲೇ ಬೇಕು
ನೀನೊಮ್ಮೆ ಉಲಿಯುವ ತನಕ
ಕಾಯುತ್ತ ಕಾವೆನು ನಾನು
ಎದೆಯ ಗೂಡಿನ ತುಂಬ ಕಾತರವ ತುಂಬಿ
Rating
Comments
(No subject)