ತಿಗಣೆಗಳ ಜೊತೆ ‘ಲಿವಿಂಗ್ ಟುಗೆದರ್’!
ಮನುಷ್ಯ ಯಾವಾಗಲು ಪಕೃತಿ ಸಹಜತೆಯನ್ನು ತನ್ನ ಪರಿಧಿಯೊಳಗೆ ತರಲು ಹೆಣಗುತ್ತಲೇ ಇರುತ್ತಾನೆ. ಆದರೂ ಕೆಲವೊಮ್ಮೆ ಅವನಿಗೆ ಸವಾಲಾಗುವ ಕ್ಷುಲ್ಲಕ ಜೀವಿಗಳು ಅಂಕೆಗೆ ಸಿಗದ ಸವಾಲುಗಳನ್ನು ಒಡ್ಡುತ್ತಿರುತ್ತವೆ. ತೇಜಸ್ವಿಯವರ ಮಿಲೇನಿಯಂ ಸರಣಿಯಲ್ಲಿ ಇಲಿಗಳ ಕತೆಯನ್ನು ಓದಿರಬಹುದು. ಇಲ್ಲಿ ಸಾಮಾನ್ಯ ಮೂಷಿಕ ಸಮುದಾಯವನ್ನು ಕೊಲ್ಲಲು ಪ್ರಪಂಚದಾದ್ಯಂತ ಹಮ್ಮಿಕೊಂಡ ಯೋಜನೆಗಳು ಸ್ವಾರಸ್ಯಕರವಾಗಿ ತೆರೆದುಕೊಳ್ಳುತ್ತವೆ. ಬೇಸಿಗೆಯಲ್ಲಿ ಸೊಳ್ಳೆ ಕಾಟಕ್ಕೆ ಪರದೆಗಳು, ಮ್ಯಾಟ್‌ಗಳು, ಕಾಯಿಲ್‌ಗಳು, ಫ್ಯಾನ್‌ಗಳು ಹಾಗೂ ಸಾಂಬ್ರಾಣಿ ಹೊಗೆಯ ಮೊರೆಹೋಗುವುದು ಸಾಮಾನ್ಯ.
ಇದು ಮತ್ತೊಂದು ಕ್ಷುಲ್ಲಕ ಜೀವಿ ನನ್ನ ಜೀವನದಲ್ಲಿ ಸವಾಲಾಗಿ ಕಾಡಿದ ಕತೆ. ತಿಗಣೆಗಳ ವಿಚಾರ ಗೊತ್ತಿರಬಹುದು ಅಥವಾ ಅವುಗಳ ಉಪಟಳಕ್ಕೆ ನೀವೂ ತುತ್ತಾಗಿರಬಹುದು. ನಾನು ಪಿಯುಸಿ ಮುಗಿಸುವವರೆಗೂ ತಿಗಣೆಗಳ ಹೆಸರು ಕೇಳಿದ್ದೆನೇ ಹೊರತು ನೋಡುವ ‘ಭಾಗ್ಯ’ ಲಭಿಸಿರಲಿಲ್ಲ. ಸಿನಿಮಾ ಮಂದಿರಗಳಲ್ಲಿ ತಿಗಣೆಗಳು ಇರುತ್ತವೆ ಎಂದು ಹೇಳುತ್ತಿದ್ದರೂ ನಾನು ಸಿನಿಮಾ ನೋಡಲು ಹೋದಾಗ, ಅಲ್ಲಿನ ಕತ್ತಲಿನ ಕಾರಣಕ್ಕೋ, ಸಿನಿಮಾ ಮೋಡಿಗೋ ತಿಗಣೆಗಳ ವಿಚಾರ ಮರೆತು ಹೋಗಿರುತ್ತಿತ್ತು.
ಮಲೆನಾಡಿನಲ್ಲಿ ಹಿಂದೆ ತಿಗಣೆಗಳ ಕಾಟ ತುಂಬಾ ಇರುತ್ತಿತ್ತು ಎಂದು ಅಮ್ಮ ಹೇಳುತ್ತಿದ್ದರು. ಅವಾಗೆಲ್ಲ್ಲ ಈಚಲು ಗರಿಯಿಂದ ಮಾಡಿದ ಚಾಪೆಗಳನ್ನು ಬಳಸುತ್ತಿದ್ದರು. ಈ ಚಾಪೆಗಳು ತಿಗಣೆಗಳಿಗೆ ತಮ್ಮ ಜೀವನ ನಡೆಸಲು ಸೋಪಾನವಾಗಿತ್ತಂತೆ. ನನ್ನ ಬಾಣಂತನದ ಸಮಯದಲ್ಲಿ ಅಮ್ಮ ತಿಗಣೆಗಳಿಂದ ನನ್ನನ್ನು ರಕ್ಷಿಸಲು ಪಟ್ಟ ಪರಿಪಾಟಲಿನ ಕತೆಯನ್ನು ಈಗಲೂ ಸ್ವಾರಸ್ಯಕರವಾಗಿ ಹೇಳುತ್ತಾರೆ. ಹಾಗಾಗಿ ನನಗೆ ಹುಟ್ಟಿನ ಜೊತೆಗೆ ಈ ಬೆಡ್‌ಬಗ್ಸ್‌ಗಳ ನಂಟು ಇತ್ತು ಎನ್ನಬಹುದು. ಬಾಣಂತನ ಕೋಣೆಯ ಗೋಡೆಗಳು ತಿಗಣೆಗಳನ್ನು ಚಚ್ಚಿಸಿಕೊಂಡು ಸುಣ್ಣ ದ ಬಣ್ಣವೇ ಕಾಣುತ್ತಿರಲಿಲ್ಲವಂತೆ!
ಮುಂದೆ ಶಿವಮೊಗ್ಗಕ್ಕೆ ಓದಲು ಹೋದಾಗ ಅಲ್ಲಿನ ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣವಾದ ಬಂಗಲೆಯಲ್ಲೊಂದು ರೂಮು ಬಾಡಿಗೆಗೆ ಹಿಡಿದಿದ್ದೆವು. ಮೊದಲ ದಿನವೆ ನನ್ನ ಗೆಳೆಯರು ತಿಗಣೆಗಳ ವಿಚಾರ ಹೇಳಿದರೂ ನಾನು ಅವುಗಳನ್ನು ಈಗಲಾದರೂ ನೋಡುವ ‘ಭಾಗ್ಯ’ ದೊರೆಯಿತಲ್ಲ ಎಂದು ಖುಷಿಪಟ್ಟಿದ್ದೆ. ಸ್ವಲ್ಲ ದಿನಗಳಲ್ಲೇ ಪುಣಾಣಿ ತಿಗಣೆ ಹಾಗೂ ಅದರ ಭಾರಿ ಕುಟುಂಬದ ಜೊತೆ ನಮ್ಮ ಜೀವನ ಆರಂಭವಾಗಿತ್ತು. ವಿದ್ಯಾರ್ಥಿ ಸಂಘಟನೆ ಮಾಡಿಕೊಂಡಿದ್ದ ನಮಗೆ ಆ ರೂಮು ಹೋರಾಟದ ವಾರ್ ರೂಮ್ ಕೂಡ ಆಗಿತ್ತು. ಹಾಗಾಗಿ ರೂಮಿನ ಗೋಡೆಗಳ ತುಂಬೆಲ್ಲ ಭಗತ್ ಸಿಂಗ್, ಚೆ ಗುವಾರ, ಬಸವಣ್ಣ, ಅಂಬೇಡ್ಕರ್ ಮತ್ತಿತರರ ಚಿತ್ರಗಳನ್ನು ನೇತುಹಾಕಿದ್ದೆವು. ಸುಮಾರು ಒಂದು ಸಾವಿರದಷ್ಟು ಪುಸ್ತಕಗಳ ಸಂಗ್ರಹವೂ ಆ ರೂಮಿನಲ್ಲಿತ್ತು.
ಕಾಲೇಜು, ಹೋರಾಟ, ಓದು ಹೀಗೆ ಬಿಡುವಿಲ್ಲದೆ ದಿನವೆಲ್ಲ ಹೊರಗಡೆ ಓಡಾಡುತ್ತಿದ್ದ ನಾವು ರಾತ್ರಿ ಮಲಗಲು ರೂಮಿಗೆ ಬರುವಾಗ ನಮ್ಮ ‘ರೂಮ್‌ಮೇಟ್’ತಿಗಣೆಗಳ ಸಮುದಾಯವು ಹಾರ್ದಿಕವಾಗಿ ಸ್ವಾಗತಿಸುತ್ತಿತ್ತು. ಒಟ್ಟಿನಲ್ಲಿ ಆರಂಭದ ಕೆಲವು ದಿನಗಳು ನಮ್ಮದು ಒಳ್ಳೆಯ ‘ಲಿವಿಂಗ್ ಟುಗೆದರ್’. ಬರುಬರುತ್ತಾ ‘ವಾರ್‌ರೂಂ’ ಅಕ್ಷರಶ ಹೋರಾಟದ ಕೊಠಡಿಯಾಗಿಯೆ ಬದಲಾಯಿತು. ನಾವು ಕಾಲೇಜಿನಲ್ಲಿ ಹೋರಾಟ ಮಾಡುವುದಕ್ಕಿಂತಲೂ ಕಠಿಣವಾಗಿತ್ತು ಈ ತಿಗಣೆಗಳ ಸವಾಲು. ಮೊದಲು ಉಪೇಕ್ಷಿಸುತ್ತಿದ್ದ ಕೆಲವು ಗೆಳೆಯರು ಕೊನೆಗೆ ರೂಮಿಗೆ ಮಲಗಲು ಬರುವುದನ್ನೇ ಬಿಟ್ಟು ಬಿಟ್ಟರು. ಕೆಲವು ಗೆಳೆಯರು ಛಲ ಬಿಡದ ತ್ರಿವಿಕ್ರಮರಂತೆ ಡಿಡಿಟಿ, ಎಂಡೋ ಸಲ್ಫಾನ್ ತಂದು ತಿಗಣೆಗಳ ಮಾರಣಹೋಮ ನಡೆಸಿದರು. ಇದಾದ ಕೆಲವು ದಿನ ಡಿಡಿಟಿ ವಾಸನೆ ಆಸ್ವಾಧಿಸುತ್ತ ತಿಗಣೆಗಳಿಂದ ಮುಕ್ತಿ ಸಿಕ್ಕಿತು ಎಂದು ಸಮಾಧಾನ ಪಟ್ಟುಕೊಂಡಿದ್ದೆವು. ಆದರೆ ಕೆಲವೇ ದಿನಗಳಲ್ಲಿ ಗೋಡೆಯ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತಿದ್ದವು. ಅದರ ಸುತ್ತ ತಿಗಣೆಯ ಹೊಸ ಜನರೇಶನ್ ಪಟ ಪಟ ಓಡಾಡಲು ಆರಂಭಿಸುತ್ತಿದ್ದವು. ನಿಧಾನವಾಗಿ ತಿಗಣೆ ಸ್ವಚ್ಛಂದ ಸಂಸಾರ ಆರಂಭಿಸುತ್ತಿತ್ತು.ಡಿಡಿಟಿ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ ಎಂದು ಯಾವಾಗ ಮನವರಿಕೆಯಾಯಿತೋ ಅಂದೇ ನಾವು ತಿಗಣೆಗಳ ತಂಟೆಗೆ ಹೋಗುವುದು ಬಿಟ್ಟುಬಿಟ್ಟೆವು. ರೂಮಿನ ಕಡೆ ತಲೆ ಹಾಕದಿರುವವರ ಸಂಖ್ಯೆ ಹೆಚ್ಚಾಯಿತು. ನಮ್ಮ ಚಟುವಟಿಕೆಗಳು ಬೇರೆಡೆಗೆ ಸ್ಥಳಾಂತರಗೊಂಡವು. ಆದರೂ ಕೆಲವೊಮ್ಮೆ ಮಲಗಲು ಆನಿವಾರ್ಯವಾದರೆ ಅಂತಹ ರಾತ್ರಿಗಳೆಲ್ಲ ‘ಶಿವರಾತ್ರಿಗಳೇ’ ಆಗಿರುತ್ತಿದ್ದವು.ಯಾರಿಗಾದರು ನಾವು ಸೀರಿಯಸ್ಸಾಗಿ ತಿಗಣೆಗಳು ಕೊಡುತ್ತಿರುವ ಉಪದ್ರವವನ್ನು ವಿವರಿಸಿದರೆ ತಮಾಷೆ ಮಾಡಿ ನಗುತ್ತಿದ್ದರು.
ಒಮ್ಮೆ ಪರ ಊರಿನ ಗೆಳೆಯನೊಬ್ಬ ಆಕಸ್ಮಿಕವಾಗಿ ರಾತ್ರಿ ನಮ್ಮ ರೂಮಿಗೆ ಉಳಿಯಲು ಬಂದ. ನಾವಾಗಲೇ ಬೇರೆ ಕಡೆ ಸುಖ ನಿದ್ದೆಗೆ ಜಾರಿದ್ದೆವು. ಹೇಗೂ ನಾವು ರೂಮಿಗೆ ಬೀಗವನ್ನೇ ಹಾಕುತ್ತಿರಲಿಲ್ಲವಾದ್ದರಿಂದ ರಾತ್ರಿ ಅಲ್ಲಿಯೇ ಮಲಗಲು ನಿರ್ದರಿಸಿದ. ಅವನಿಗೆ ಸ್ವಲ್ಪ ಮಂಪರು ಆರಂಭವಾಗುತ್ತಿದ್ದಂತೆ ತಿಗಣೆಗಳು ತಮ್ಮ ಬಲಿಯತ್ತ ಮುನ್ನುಗ್ಗಿವೆ. ತುಂಬಾ ದಿನದಿಂದ ರಕ್ತ ಸಿಗದಿರುವ ಕಾರಣಕ್ಕೆ ಅವು ಸಿಟ್ಟಾಗಿರುವ ಸಾಧ್ಯತೆಯೂ ಸೇರಿ ಅಂದು ಪೂರ್ವಯೋಜಿತ ದಾಳಿ ನಡೆಸಿವೆ. ಅವನು ಇಡೀ ರಾತ್ರಿ ತನ್ನ ಸುತ್ತ ಉಪ್ಪು ನೀರಿನ ವೃತ್ತ ನಿರ್ಮಿಸಿಕೊಂಡು ತಿಗಣೆಗಳಿಂದ ರಕ್ಷಿಸಿಕೊಂಡಿದ್ದಾನೆ. ಬೆಳಗ್ಗೆ ನಾವು ಬರುವ ವೇಳೆಗಾಗಲೇ ಅವನು ಜಾಗ ಖಾಲಿ ಮಾಡಿದ್ದ. ಬಹಳ ದಿನಗಳ ನಂತರ ಮತ್ತೆ ಸಿಕ್ಕಾಗ ‘ನಿಮ್ಮ ರೂಮಿನ ಸಹವಾಸ ಸಾಕು ಮಾರಾಯ’ ಎಂದು ಆ ಕರಾಳ ರಾತ್ರಿಯ ವೃತ್ತಾಂತ ಬಿಚ್ಚಿಟ್ಟ. ನನಗೆ ಹೊಟ್ಟೆತುಂಬಾ ನಗು.
ನಾವು ತಿಗಣೆಗಳನ್ನು ಗೆರಿಲ್ಲಾಗಳಿಗೆ ಹೋಲಿಸುತ್ತಿದ್ದೆವು. ಬೆಳಗ್ಗೆ ತಮ್ಮ ಇರುವಿಕೆಯೇ ಗೊತ್ತಾಗದಂತೆ ಬದುಕುವ ಈ ಜೀವಿಗಳು ರಾತ್ರಿ ವೇಳೆಯಲ್ಲಿ ವಿಚಿತ್ರ ಚಟುವಟಿಕೆ ಹೊಂದಿರುತ್ತವೆ. ನೀವು ದಾಳಿ ಮಾಡಿ ಹಿಮ್ಮೆಟ್ಟಿಸಿದರೂ ಅದು ತಾತ್ಕಾಲಿಕ ಮಾತ್ರ. ಮತ್ತೆ ಕೆಲವೇ ದಿನಗಳಲ್ಲಿ ತಿಗಣೆಗಳ ಬಂಡಾಯ ಆರಂಭವಾಗುತ್ತದೆ. ಅದರಲ್ಲೂ ಅವು ಪ್ರತಿದಾಳಿ ನಡೆಸುವಾಗ ಬಲಿದಾನಗಳ ಲೆಕ್ಕಾಚಾರ ಮಾಡುವುದಿಲ್ಲ. ನೀವು ಉಗ್ರವಾದರೆ ಅವು ಶಾಂತವಾಗುತ್ತವೆ. ನೀವು ಶಾಂತವಾಗಿರುವ ವೇಳೆ ಅವು ದಾಳಿ ಮಾಡುತ್ತವೆ. ಯಾವತ್ತೂ ತಿಗಣೆಗಳು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬುದು ನಮ್ಮ ಅನುಭವಕ್ಕೆ ಬಂದ ವಿಚಾರ ಮಾತ್ರವಾಗಿತ್ತು.
ನಾವು ತಿಗಣೆಗಳ ಕಾಟಕ್ಕೆ ಎರಡು ಮೂರು ತಿಂಗಳು ರೂಮಿನ ಕಡೆ ಹೋಗಲಿಲ್ಲ. ಎಲ್ಲ ಸ್ನೇಹಿತರಿಗೂ ಅತ್ತ ತಲೆಹಾಕಬೇಡಿ ಎಂಬ ಮೌಖಿಕ ಆದೇಶವನ್ನು ನೀಡಿದ್ದವು. ಕೊನೆಗೆ ಬೇರೆ ಕಡೆ ರೂಮು ಮಾಡಿ ಅಲ್ಲಿಂದ ಪುಸ್ತಕಗಳನ್ನು ಸಾಗಿಸಲು ಬಂದರೆ ತಿಗಣೆಗಳೆಲ್ಲ ಬೆಳ್ಳಗಾಗಿದ್ದೆವು. ರಕ್ತದಾನ ಮಾಡುವವರಿಲ್ಲದೆ ಇರುವ ಕಾರಣಕ್ಕೆ ದಯನೀಯ ಪರಿಸ್ಥಿತಿ ತಲುಪಿದ್ದವು. ನಮಗೂ ಒಂದು ವರ್ಷ ಸಹಜೀವನ ನಡೆಸಿದ್ದರಿಂದ ಭಾವನಾತ್ಮಕ ಸಂಬಂಧವೊಂದು ಬೆಸೆದಿತ್ತು. ಆದರೂ ತಿಗಣೆಗಳಿಗೆ ರಕ್ತದಾನ ಮಾಡುವ ಪರಿಸ್ಥಿತಿಯಲ್ಲಿ ನಾವಿರಲಿಲ್ಲ. ಕೆಲವು ಪುಸ್ತಕಗಳನ್ನು ಅಲ್ಲಿಯೆ ಬಿಟ್ಟು, ಒಂದು ತಿಗಣೆಯೂ ನಮ್ಮ ಜೊತೆ ಹೊಸ ವಾಸಸ್ಥಳಕ್ಕೆ ಬಾರದಂತೆ ಎಚ್ಚರಿಕೆ ವಹಿಸಿ ಕೊನೆಗೆ ‘ವಾರ್ ರೂಂ’ಗೆ ಗುಡ್‌ಬೈ ಹೇಳಿದೆವು.
ಇದಾದ ಒಂದು ವರ್ಷದ ನಂತರ ಒಮ್ಮೆ ಕುತೂಹಲಕ್ಕೆಂದು ಅಂತರ್ಜಾಲದಲ್ಲಿ ‘ಬೆಡ್‌ಬಗ್ಸ್’ ಎಂದು ಸರ್ಚ್‌ಗೆ ಕೊಟ್ಟರೆ ತಿಗಣೆಗಳ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಹತ್ವವಿರುವುದು ಕಂಡುಬಂತು. ಸುಮಾರು ಒಂದುವರೆ ಸಾವಿರ ವೆಬ್‌ಸೈಟ್‌ಗಳು ತಿಗಣೆಗಳ ಕುರಿತು ಬರೆದಿವೆ. ಪ್ರಪಂಚದಾದ್ಯಂತ ತಿಗಣೆಗಳ ಮೇಲೆ ಸಂಶೋಧನೆಗಳಾಗಿವೆ. ಅವನ್ಯಾರೋ ಒಬ್ಬ ಪುಣ್ಯಾತ್ಮ ತಿಗಣೆಗಳ ಕುರಿತು ಡಾಕ್ಯುಮೆಂಟರಿ ಮಾಡಿದ್ದಾನೆ. ಅದಕ್ಕೆ ಭಾರಿ ಪ್ರಶಸ್ತಿಗಳೂ ಲಭಿಸಿವೆ ಎಂಬ ಮಾಹಿತಿ ಬೇರೆ. ಜಾಗತೀಕರಣದಿಂದ ಲಾಭ ಮಾಡಿಕೊಂಡವರ ಪಟ್ಟಿಯಲ್ಲಿ ತಿಗಣೆಗಳೂ ಸೇರಿವೆ ಎಂದರೆ ನಂಬಬೇಕೋ ಬಿಡಬೇಕೊ ಗೊತ್ತಾಗಲಿಲ್ಲ. ಯಾಕೆಂದರೆ ತಿಗಣೆಗಳ ಮೂಲಸ್ಥಾನ ಅಮೆರಿಕಾದಿಂದ ಮುಕ್ತ ಮಾರುಕಟ್ಟೆ ಹೆಸರಿನಲ್ಲಿ ಪ್ರಪಂಚವೆ ಹಳ್ಳಿಯಾದಂತಾಗಿ ಓಡಾಟ ಜಾಸ್ತಿಯಾದಾಗ ತಿಗಣೆಗಳೂ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿವೆ. ಅದರಲ್ಲೂ ಕಳೆದ ಐದಾರು ವರ್ಷದಲ್ಲಿ ಪ್ರಪಂಚದ ತಿಗಣೆಗಳ ಸಮೂಹದಲ್ಲಿ ಸುಮಾರು ೫೦೦ ಪಟ್ಟು ಏರಿಕೆಯಾಗಿದೆ ಎಂದು ಸಂಶೋಧನೆಯೊಂದು ಆತಂಕಿಸಿದ್ದ ಸುದ್ಧಿ.
ತಿಗಣೆಗಳನ್ನು ನಾಶ ಪಡಿಸುವುದು ಹೇಗೆ ಎಂದು ಸಾಲು ಸಾಲು ಲೇಖನಗಳಿವೆ. ಎಲ್ಲರೂ ಅಕಾಡೆಮಿಕ್ ಆಗಿ ಪ್ರಯೋಗಗಳನ್ನು ನಡೆಸಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇವೆಲ್ಲ ಓದಿದ ಮೇಲೆ ಸ್ವಲ್ಪ ಸಮಾಧಾನವಾಯಿತು. ತಿಗಣೆಗಳಿಗೆ ಸೋಲೊಪ್ಪಿದವರು ನಾವು ಮಾತ್ರವಲ್ಲ. ನಮ್ಮಂತಹ ಸಂತ್ರಸ್ತರ ಸಮೂಹವೇ ಇದೆ ಎಂಬುದು ಅರಿತು ವಿಕೃತ ಸಂತೋಷ. ತಿಗಣೆಗಳೆಂಬ ಗೆರಿಲ್ಲಾಗಳಿಗೆ ಗತಿ ಕಾಣಿಸಲು ಹಲವಾರು ಆಡಳಿತ ಸರಕಾರಗಳು ಮುಂದಾಗಿವೆಯಂತೆ. ಈವರೆಗೂ ತಿಗಣೆಗಳಿಗೆ ಶಾಶ್ವತ ಪ್ರತಿರೋಧ ತೋರುವ ಯಾವ ಕ್ರಿಮಿನಾಶಕಗಳೂ(ಮಿಸೈಲ್‌ಗಳು) ಬಂದಿಲ್ಲದಿರುವುದು ಸೋಜಿಗವೆ. ಹಾಗಾಗಿ ಇದೊಂದು ಸಾಮಾಜಿಕ ಆರ್ಥಿಕ ಸಮಸ್ಯೆ ಎಂದು ಪರಿಗಣಿಸಿ ಶಾಂತಿ ಮಾತುಕತೆ ನಡೆಸಬೇಕು ಎಂಬ ಒಂದು ಪುಕ್ಕಟೆ ಸಲಹೆ ಇದೆ.