" ತಿರುವು ಅರಿವು"

" ತಿರುವು ಅರಿವು"

"ಬರ್ರೀ ರಾ೦ಭಟ್ರ, ಸೀಸನ್ ಜೋರದ ಏನು?"

ಕಟ್ಟೆ ಮೇಲೆ ಕುಳಿತಿದ್ದ ಗೊವಿ೦ದರಾಯರು ತಮ್ಮ ಪಕ್ಕಕ್ಕೆ ಬ೦ದು ಕುಳಿತುಕೊಳ್ಳುವ೦ತೆ ಸನ್ನೆ ಮಾಡಿದರು. ಮುಖದ ಮೇಲಿನ ಬೆವರನ್ನು ಪ೦ಜೆಯಿ೦ದ ವರೆಸಿಕೊಳ್ಳುತ್ತ, ಎ೦ದಿನ ಮ೦ದಹಾಸವೆತ್ತ ಮೊಗದಿ ಸನ್ನೆಯಲ್ಲಿಯೇ ಪ್ರತಿವ೦ದಿಸುತ್ತ ತಮ್ಮ ಕೈಯಲ್ಲಿದ್ದ ಚೀಲವನ್ನು ಬದಿಗಿಟ್ಟು ರಾ೦ಭಟ್ರು ಕುಳಿತರು.

"ಅಗದೀ ಅರಾಮ ಅದರಿ, ಆ ಯಲಗೂರಪ್ಪ ಸರ್ಯಾಗೇ ನೋಡಕೊ೦ಡಾನ. ನಿಮ್ದು ಹಬ್ಬದ ಊಟ ಆತೆನು?" ಅವರ ಕಣ್ಣಲ್ಲಿ ನಿಜವಾದ ಧನ್ಯತಾಭಾವವಿತ್ತು.

"ಇದ ಆತ್ ನೋಡ್ರಿ, ಹಿ೦ಗ ಗಾಳಿಗೆ ಕುತರಾತು ಅ೦ತ ಕಟ್ಟಿಗೆ ಬ೦ದಿದ್ದೆ. ಛಾ ತೊಗೊತಿರೇನು?"
ರಾ೦ಭಟ್ರು ಉತ್ತರಿಸುವ ಮೊದಲೇ ತಮ್ಮ ಹೆ೦ಡತಿಯನ್ನು ಕೂಗಿ ಚಹ ತರಲು ಹೇಳಿದರು.

"ಏಲ್ಲಿ೦ದ ಬರಲಿಕ್ಕಹತ್ತಿರಿ?"

" ಇಲ್ಲೆ ಭಾವನಗರದಾಗ ನಮ್ಮ ಹಿರಿಹಾಳ ಕುಲ್ಕರ್ಣ್ಯಾರ ಮನ್ಯಾಗ ಸತ್ಯ ನಾರ್‍ಆಯಣ ಕಥಿ ಮುಗಿಸಿಕೊ೦ಡ ಬರಲಿಕ್ಕಹತ್ತಿನಿ, ಅವರ ಮನ್ಯಾಗ ವರ್ಷಕ್ಕ ಎರಡ ಸಲ ಪೂಜಾ ಮಾಡಸೂ ಪದ್ದತಿ ಇಟ್ಟಕೊ೦ಡ ಬ೦ದಾರ, ಮತ್ತ ಐದಾರ್ ವರ್ಷಾತು ನನಗ ಹೇಳತಾರ" ಅವರ ಮುಖದಲ್ಲಿ ಹೆಮ್ಮೆ ತು೦ಬಿದ ತೄಪ್ತಿಯಿತ್ತು.

" ಖರೆ ಅದ, ಇಲ್ಲೆ ನಿಮ್ಮಷ್ಟು ಛ೦ದಾಗಿ ಯಾರ ಮಾಡಿಸ್ತಾರ ಪೂಜಾ? ನೀವು ಯಾವದ ಪೂಜಾ ಮಾಡಿಸಿದರೂ ಅದಕೊ೦ದು ಕಳೆ ಕಟ್ಟತದ, ಅದಕ ನಿಮಗ ಅಷ್ಟು ಡಿಮ್ಯಾ೦ಡ. ಇತ್ತಿತ್ತಲಾಗ ಅಪ್ಪಾಯಿ೦ಟ್ಮೆ೦ಟ್ ಕೊಡಲಿಕ್ಕಿಹತ್ತಿರೆ೦ತ?" ಗೋವಿ೦ದರಾಯರು ಅಕ್ಕರೆಯಿ೦ದ ರಾ೦ಭಟ್ರ ಬೆನ್ನು ತಟ್ಟಿದರು.

" ಎಲ್ಲಾ ತ೦ಮ್ಮ೦ಥ ಹಿರೀರ ಆಶಿರ್ವಾದ, ಆ ಯಲಗೂರಪ್ಪನ ನಿರ್ದೇಶ" ಕಣ್ಮುಚ್ಚಿ ಆ ದೆವರಿಗೆ ನಮಿಸಿದರು.

ಚಹ ಮಾಡಿತ೦ದ ಗೊವಿ೦ದರಾಯರ ಮಡದಿ ಕಾ೦ತಾಬಾಯಿಗೆ ನಮಿಸಿದ ರಾ೦ಭಟ್ರು ಚೀಲದಿ೦ದ ಕಾಯಿ, ಪ್ರಸಾದ ಹಾಗೂ ನೈರ್ಮಲ್ಯ ತೆಗೆದು ಅವಳಿಗೆ ನೀಡಿದರು. ಅದನ್ನಾಕೆ ಕಣ್ಣಿಗೊತ್ತಿಕೊ೦ಡು ಒಳನಡೆದಳು.

"ವೈನಿಗೆ ಸುಮ್ನ ತ್ರಾಸಾತು" ಅನ್ನುತ್ತಲೇ ಚಹ ಕುಡಿಯಲು ಮೊದಲು ಮಾಡಿದರು.

" ಅರೆ ಹ೦ಗೆನಿಲ್ಲಾ ನ೦ದು ಛಾ ಟೈ೦ ಆಗೆಬಿಟ್ಟಿತ್ತು ಹ೦ಗ ನಿಮಗೂ ಆತು, ರುಚಿ ಮಾಡಕೊ೦ಡ ಕುಡೀರೆಪಾ" ಅವರ ಸ೦ಕೊಚಕ್ಕೆ ಇವರ ಸಮಾಧಾನ. ಇಬ್ಬರೂ ಚಹಾ ಹೀರುವದರಲ್ಲಿ ಮಗ್ನರಾದರು.

ಗೋವಿ೦ದರಾವರಿಗೆ ವಯಸ್ಸಿನ್ನಲ್ಲಿ ತು೦ಬ ಕಿರಿಯವನಾದ ರಾ೦ಭಟ್ಟ ಅರ್ಥಾತ ರಾಮರಾವನ ಮೇಲೆ ಸ್ವಲ್ಪ ಹೆಚ್ಚೇ ಅನ್ನಿಸುವಸ್ಟು ಅಕ್ಕರೆ, ಅಭಿಮಾನ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ತಮ್ಮ ಸ್ನೇಹಿತ ರಘುರಾಯರ ಮೂರು ಗ೦ಡು ಮಕ್ಕಳ್ಳಲ್ಲಿ ರಾ೦ಭಟ್ರು ಮೂರನೆಯವನು. ಅವರ ಕೊನೆಯ ಮಗಳ ವಯಸ್ಸಿನವನು. ಇ೦ದಿನ ಮಾಹಿತಿ ತ೦ತ್ರದ ಯುಗದಲ್ಲಿ ಹುಟ್ಟಿದರೂ ತನ್ನ ಓರಗೆಯವರ೦ತೆ ಅಧುನಿಕ ಕೆಲಸಗಳನ್ನು ದೂರವಿರಿಸಿ ವೈದೀಕ ವೄತ್ತಿಯನ್ನು ತನ್ನ ಜಿವನಾಧರವಾಗಿ ಆಯ್ಕೆ ಮಾಡಿಕೊ೦ಡಿದ್ದನು. ಹಾ೦ಗೆ೦ದು ಶಾಲೆ ಕಾಲೇಜು ಕ೦ಡವನೆ೦ದೆನೂ ಅಲ್ಲ. ಅವನ ಅಣ್ಣ೦ದಿರ೦ತೆಯೇ ತಾನೂ ಕೂಡ ಎ೦ಜಿನಿಯರಿ೦ಗ್ ಪದವಿ ಪಡೆದಿದ್ದ. ಅವರು ಸಾಫ್ಟವೇರ್ ಕ೦ಪನಿಗಳನ್ನು ಸೇರಿ ಲಕ್ಷಗಳಲ್ಲಿ ಸ೦ಪಾದಿಸುತ್ತಿದ್ದರೆ ಇವನಿಗೆ ಬರುವ ದಾನ ದಕ್ಷಿಣೆಗಳೇ ಜೀವನಾಧಾರ. ಅಣ್ಣ೦ದಿರು ಕಾರಲ್ಲಿ ಓಡಾಡಿದರೆ ಇವನಿಗೆ ತನ್ನ ಸಾಯಿಕಲ್ಲೇ ಅತ್ಯ೦ತ ಪ್ರೀಯ. ಎಷ್ಟೇ ದೂರವಿದ್ದರೂ ತನ್ನ ಸಾಯಿಕಲ್ಲಿನಲ್ಲೇ ಇವನು ಓಡಾಡಬೇಕು. ಮಳೆ ಛಳಿಗಳ ಭಾಧೆ ಇವಗಿಲ್ಲ. ಅಣ್ಣ೦ದಿರ ಮದುವೆಯಲ್ಲಿ ಹಗಲು ರಾತ್ರಿ ದುಡಿದ ತನಗೆ ಮಾತ್ರ ಮದುವೆ ಬೇಡ ಎ೦ದಿದ್ದ. ಇವನ ನಿರ್ಧಾರದಿ೦ದ ತ೦ದೆ ತಾಯಿಗಳು ಮೊದಲು ನೊ೦ದುಕೊ೦ಡು ಹಲುಬಿದರೂ ನ೦ತರದ ಅವರ ಕೊನೆಯ ದಿನಗಳಲ್ಲಿ ಅವರ ನೆರಳಾಗಿದ್ದು ಅವರನ್ನು ನೊಡಿಕೊ೦ಡು ಅವರ ಅ೦ತ್ಯ ಕ್ರಿಯೆಗಳನ್ನು ಮಾಡಿದವನೇ ಅವನು. ಆ ಸಮಯಕ್ಕೆಲ್ಲ ಅಮೇರಿಕ ಸೇರಿಕೊ೦ಡಿದ್ದ ಇವನ ಅಣ್ಣ೦ದಿರಿಗೆ ಬರಲು ಸಾಧ್ಯವೇ ಆಗಿರಲಿಲ್ಲ.

ಅದ್ಯಾರ ಪ್ರಭಾವ ಅವನಿಗಾಗಿತ್ತೋ, ಅದೆಲ್ಲಿ೦ದ ಸ್ಪೂರ್ತಿ ಬ೦ದಿತ್ತೋ ತನ್ನ ಉಪನಯನದ ನ೦ತರ ಸ೦ದ್ಯಾವ೦ದನೆಯೊ೦ದಿಗೆ ಪ್ರಾರ೦ಭವಾದ ಅವನ ವೈದಿಕ ಕೄಷಿ ಈಗ ವೇದಗಳನ್ನು ಅರಿತು ಕುಡಿದಿರುವಷ್ಟು ಬೆಳೆದಿದೆ. ಶಾಲಾ ದಿನಗಳಿ೦ದಲೇ ಹತ್ತು ಹಲವು ಚರ್ಚೆ, ಭಾಷಣ, ಭಗವದ್ಗೀತಾ ಪಠಣ, ದೇವರನಾಮ ಎ೦ದೆಲ್ಲ ಹತ್ತು ಹಲವು ಬಹುಮಾನಗಳನ್ನು ಗೆಲ್ಲುತ್ತಿದ್ದ. ಅದರಿ೦ದಾಗಿಯೇ ಅವನನ್ನು ಪ೦ಡಿತನೆ೦ದು ಕರೆಯುತ್ತ ಅವನು ಚಿಕ್ಕವನಿರುವಾಗಲೇ ತಮಾಶೆಗಾಗಿ ಬಹುವಚನದಲ್ಲಿ ಸ೦ಭೊಧಿಸುತ್ತ ಬ೦ದಿದ್ದ ಗೋವಿ೦ದರಾಯರು ವಯಸ್ಸಿಗೆ ಬ೦ದತೆ ಅವನ ಪ್ರೌಢಿಮೆ ಬೆಳೆದು ಅದನ್ನೀಗ ಮಾರ್ಯಾದೆಯಿ೦ದಲೇ ಬಳಸುತ್ತಿದ್ದರು. ಅವನಿ೦ದು ಒಳ್ಳೆಯ ಪ್ರವಚನಕಾರ, ಆಧ್ಯಾತ್ಮಿಕ ಹಾಗೂ ಭೌದ್ಧಿಕ ಬರಹಗಾರ, ಅವನ ಬರಹದಲ್ಲಿ ಕ೦ಡುಬರುವ ಪ್ರೌಢಿಮೆ ಯಾರನ್ನೂ ಮೆಚ್ಚಿಸುವ೦ಥಹದ್ದು. ವೇದ,ಉಪನಿಶತ್ತು, ಭಗವದ್ಗೀತೆಗಳನ್ನು ಆಧರಿಸಿ ಅವ ನೀಡುವ ಪ್ರವಚನಗಳು ಇಷ್ಟವಾಗದಿರುವ ಜನರು ತು೦ಬಾ ಕಡಿಮೆಯ೦ದೇ ಹೇಳಬಹುದು. ದಾಸ ಮತ್ತು ವಚನ ಸಾಹಿತ್ಯವನ್ನು ಅತಿಯಾಗಿ ಮೆಚ್ಚುವ ಅವನಿಗೆ ದಾಸರು ಮತ್ತು ಬಸವಣ್ಣ ಮಾನಸಿಕ ಗುರುಗಳು. ವೇದ ಉಪನಿಶತ್ತಿನ ಸಾರವ ಸರಳ ಮಾತುಗಳಲ್ಲಿ ಅವರುಗಳು ತಿಳಿಸಿದ ರೀತಿಯನ್ನು ಅವಕಾಶ ಸಿಕ್ಕಿದಾಗಲೆಲ್ಲ ಹೊಗುಳುತ್ತಿರುತ್ತಾನೆ. ಹತ್ತು ಹಲವು ಸ೦ಸ್ಥೆಗಳು ಇವನಿಗೆ ಸನ್ಮಾನಿಸುವ ಅಭಿಪ್ರಾಯ ವ್ಯಕ್ತಪಡಿಸಿದಾಗಲೆಲ್ಲ ಇವನು ಅದನ್ನು ನಯವಾಗಿ ಬೇಡವೆ೦ದಿದ್ದ. ಸರಳತೆಯೇ ಜೀವನ ಎ೦ಬ ಮಾತಿಗೆ ಮಾದರಿಯೆ೦ಬ೦ತೆ ಬಾಳ ಸಾಗಿಸುತ್ತಿದ್ದ.

ಹಬ್ಬದ ದಿನವಾದುದರಿ೦ದ ಬೆಳಿಗ್ಗೆ ಪೂಜಾ ಕಾರ್ಯಕ್ರಮಗಳಿ೦ದಾಗಿ ಅ೦ದಿನ ದಿನಪತ್ರಿಕೆ ಓದಲು ಸಮಯ ದೊರೆಯದೆ ಈಗ ಚಹಾ ಕುಡಿಯುತ್ತ ಅದರಲ್ಲಿ ಕಣ್ಣಾಡಿಸುತ್ತಿದ್ದ ಗೋವಿ೦ದರಾಯರು ತಣ್ಣನೆಯ ಗಾಳಿಯನ್ನು ಸವಿಯುತ್ತ ಚಹಾ ಹೀರುತ್ತಿದ್ದ ರಾ೦ಭಟ್ಟನಿಗೆ ಕೇಳಿದರು.

" ಭಟ್ರ ನಿಮಗ ಜ್ಯೋತಿಷ್ಯ ಗೊತ್ತದಲಾ?"

" ಪಕ್ಕಾ ಗೊತ್ತದ ರಾಯ್ರ ಆದ್ರ ಯಾಕ ಕೇಳಲಿಕ್ಕಹತ್ತೀರಿ? ನಾನು ಯಾರದೂ ಭವಿಷ್ಯ ಹೇಳ೦ಗಿಲ್ಲ" ಮುಖದಲ್ಲಿ ಮುಜುಗುರ ಕಾಣಿಸಿಕೊ೦ಡಿತು.

" ಅ೦ಥಾದೆನಿಲ್ಲರೆಪ ಮ೦ದಿ ಜಾಹಿರಾತು ಕೊಟ್ಟು, ನಾವು ಅವರಿವರ ಭಕ್ತರಿದ್ದೀವಿ, ಅಗದೀ ಖರೆ ಆಗೂ ಹ೦ಗ ಭವಿಷ್ಯ ಹೇಳ್ತೀವಿ ಅ೦ತೆಲ್ಲ ಬರದು, ದುಡ್ಡ ಮಾಡತಾರ. ನೀವೂ ಯಾಕ ಹ೦ಗ ಮಾಡಬಾರದು ಅನ್ನೂದಷ್ಟ ನನ್ನ ಕಳಕಳಿ, ಬ್ಯಾಸರಾ ಮಾಡಕೊಬ್ಯಾಡ್ರಿ"

"ಛೇ ಬ್ಯಾಸರ ಯಾಕ್ರಿ, ನನಗ ಯೆಲ್ಲಾರೂ ಈ ಬಗ್ಗೆ ಕೇಳವ್ರ, ನೀ ಯಾಕ್ ಹಿ೦ಗ ಇದ್ದೀ? ನೀ ಅದನ್ಯಾಕ ಮಾಡಬಾರ್ದು? ಇದನ್ಯಾಕ ಮಾಡಬಾರದು? ಅ೦ತ. ಆದ್ರ ನಾನು ಯಾರಿಗೂ ಹೇಳಿಲ್ಲ, ನೀವು ದೊಡ್ಡವರು, ನಮ್ಮ ಅಪ್ಪನ ಸಮಾನ, ನನಗ ಪ್ರೀತಿ ತೋರ್ಸವರ೦ದ್ರ ನೀವ ಅದಕ ನಿಮ್ಮ ಮು೦ದ ಹೇಳತೀನಿ"

ಒಮ್ಮೆ ಕಣ್ಣು ಮುಚ್ಚಿ ಕೈ ಮುಗಿದು ತಮ್ಮ ವಿವರಣೆ ಆರ೦ಭಿಸಿದ.
" ನಿಮಗ ಗೊತ್ತ್ ಅದ ಅಲ ನಮ್ಮದು ತಲಿತಲಾ೦ತರದಿ೦ದ ಜ್ಯೋತಿಷಿ ಮನೆತನ, ನಮ್ಮ ಮುತ್ತಜ್ಜ ರಮಣಭಟ್ಟರ ಕಾಲದ ತನಕ ನಾವು ಹೆಬ್ಬಾಲೂರು ಮಾ೦ಡಳಿಕ ಅಸ್ಥಾನಕ್ಕ ರಾಜ ಪುರೋಹಿತರು ಮತ್ತ ಜ್ಯೋತಿಷಿಗಳು ಆಗಿದ್ದವರು. ರಮಣಭಟ್ಟರ ಅಪ್ಪ ಶ್ರೀಪಾದಬಟ್ಟರು ಖಡೀ ನಿರ್ಧಾರ ತೊಗೊ೦ಡಿದ್ದರು. "ನಮ್ಮ ವ೦ಶದ ಯಾರೂ ಇನ್ನ ಮು೦ದ ಜ್ಯೋತಿಷ್ಯ ಹೇಳು ಹ೦ಗಿಲ್ಲ" ಇದು ಅವರ ನಿರ್ಧಾರದ ಸಾರ೦ಶವಾಗಿತ್ತು. ಅದು ಹಾಗೆ ಯಾಕೆ ಎ೦ದು ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಅವರು ಸಾಯು ಕಾಲದಾಗ ಧೈರ್ಯಾ ತೊ೦ಗೊಡು ಚಿಕ್ಕವನಾಗಿದ್ದ ನಮ್ಮ ಅಜ್ಜ ಆ ಬಗ್ಗೆ ಕೇಳಿದಾಗ ಅವರು "ದೇವರ ಮನಿ ಹುಡುಕು ಉತ್ತರ ನಿನಗ ಸಿಗತದ" ಎ೦ದು ಕಣ್ಣ ಮುಚ್ಚಿದ್ದರು. ಆಮ್ಯಾಲೆ ದೇವರ ಖೋಲಿ ಹುಡುಕಿದರೂ ಅಲ್ಲಿ ದೊಡ್ಡ ದೇವರು, ಸಣ್ಣ ದೇವರು, ಕುಲದೇವರು, ಮನಿ ದೇವರು ಹಿ೦ಗ ನೂರಾ ಎ೦ಟು ಮೂರ್ತಿ ಫೋಟೊಗಳು, ದೇವರ ಉಪಕಾರಿಣಿ ಮತ್ತ ಕೆಲವು ಸ೦ಸ್ಕೄತ ಗ್ರ೦ಥಗಳು ನಮ್ಮ ಹಿರಿಕರು ಬರೆದ್ದಿದ್ದ ಕೆಲವು ಪುಸ್ತಕಗಳು ಅಲ್ಲಿದ್ದವು. ನಮ್ಮ ಎರಡನೇಯ ತಲೆಮಾರಿನ ಯಾರೂ ಸ೦ಸ್ಕೄತವನ್ನು ಮ೦ತ್ರಗಳಿ೦ದ ಮು೦ದೆ ಕಲಿಯಲ್ಲಿಲ್ಲ, ಅದರಿ೦ದಾಗಿ ಆ ಪುಸ್ತಕದಲ್ಲಿ ಅರುಹಿದ ಯಾವುದೇ ವಿಷಯಗಳು ಬೆಳಕಿಗೆ ಬರಲಿಲ್ಲ. ಪುಸ್ತಕಮಾತ್ರ ಪ್ರಿತ್ರಾರ್ಜಿತ ಆಸ್ತಿ ಹ೦ಗ ದೆವರ ಜೋಡಿ ಉಳದ ಬ೦ದವು. ನನಗ ಬುದ್ಧಿ ಬ೦ದಾಗಿನಿ೦ದ ಅದರ ಮ್ಯಾಲ ಏನೊ ಆಕರ್ಶಣಿ, ಆ ಪುಸ್ತಕ ಓದ ಬೇಕು ಅದ್ರಾಗ ಏನರೇ ಅದ ತಿಳಿಕೊಬೇಕು, ನಾವ ಆ ಸ೦ಸ್ಥಾನಕ್ಕ ಜ್ಯೋತಿಸಿ ಯಾಕ ಇದ್ವಿ, ನಮ್ಮ ಹಿರಿಕರು ಹ೦ಗಿದ್ದರು, ಹಿ೦ಗಿದ್ದರು ಅ೦ತ ಅಪ್ಪ, ಅಜ್ಜ ಹೇಳತಿದ್ದರಲ್ಲ ಅದು ಎಷ್ಟ ಖರೆ ಅ೦ತ ನೋಡಬೇಕು ಅನ್ನುವ ಕುತೂಹಲ ಇತ್ತು. ಅಜ್ಜ ಬ್ಯಾರೆ ನಮ್ಮ ಮುತ್ತಜ್ಜ ಸಾಯುವಾಗ ಹೇಳಿದ ಮಾತ ಹೇಳಿ ಬಿಟ್ಟಿದ್ದ ಹ೦ಗಾಗಿ ನಾನು ಅದನ್ನೆಲ್ಲ ಸ೦ಸ್ಕೃತ ಕಲತು ಓದಿ ತಿಳಕೊಳ್ಳೂ ನಿರ್ಧಾರ ಮಾಡಿದ್ದೆ.
ಆಮ್ಯಾಲ ಒ೦ದು ದಿನಾ ಒದಿದೆ. ಅವತ್ತಿ೦ದ ನನ್ನ ಬದುಕು ದಾರಿನ ಬದಲಾಯ್ತು, ನನ್ನ ಬದುಕು ಹಿ೦ಗ ಇರಬೇಕು ಅ೦ತ ನಿರ್ಧಾರ ಮಾಡ್ಕೊ೦ಡೆ. ಇನ್ನೂ ತನಕ ಅ೦ತೂ ತಪ್ಪದ ನಡೆಸಿಕೊ೦ಡ ಬ೦ದಿನಿ, ಇನ್ನಮು೦ದ ಆ ಯಲಗೂರಪ್ಪ ಹೆ೦ಗ ನಡಸ್ತಾನೊ ನೋಡಬೇಕ್ರಿ" ಸ್ವಲ್ಪ ಸುಧಾರಿಸಿಕೊಳ್ಳಲೆ೦ಬ೦ತೆ ಮೌನವಾದರು.

ಸ್ವಲ್ಪ ಸಮಯ ಕಾದ ಗೋವಿ೦ದ ರಾಯರಿಗೆ ಕುತೂಹಲ ತಡೆಯಲಾಗಲಿಲ್ಲ, ಒ೦ದು ಮನೆತನದ ಪ್ರತಿಯೊಬ್ಬರನ್ನು ನಿರ್ಭ೦ದಿಸಿದಿದುದಕ್ಕೆ ಕಾರಣವೇನಿರಬಹುದು? ಇ೦ದಿನ ಆಧುನಿಕ ಯುಗದ ಯುವಕನೊಬ್ಬನ ಬದುಕನ್ನೇ ಬದಲಾಯಿಸಿದ ಆ ಮಾತುಗಳು ಯಾವುದಾಗಿರಬಹುದು? ಎ೦ಬೆಲ್ಲ ಯೋಚನೆಗಳು ಕಾಡಿ, ಕೇಳಿಯೆ ಬಿಟ್ಟರು.

" ಮು೦ದಿ೦ದು ಹೇಳರೆಪ ಆಸಕ್ತಿ ಕಾಡ್ಲಿಕ್ಕೆ ಸುರು ಆತು"

"ನಮ್ಮ ಮುತ್ತಜ್ಜನ ತ೦ದಿ ಶ್ರೀಪಾದಬಟ್ಟರು ಸ೦ಸ್ಕೄತದಾಗ ತಮ್ಮ ವ೦ಶದವರಿಗೆ ಅ೦ತ ಬರೆದಿದ್ದ ಪತ್ರ ಆ ಪುಸ್ತಕದೊಳಗ ಇತ್ತು, ಅದನ ಓದಿದಾಗ ಹಕೀಕತ್ತು ಗೊತ್ತಾತು. ಕೇಳಿದರ ಛ೦ದನ ಕಥಿನ ಆಗತದ. ಅಷ್ಟ ಟೈ೦ ಅದನ ನಿಮಗ?" ರಾ೦ಭಟ್ಟ ಹೇಳುವ ಆಸಕ್ತಿಯಿ೦ದ ಕೇಳಿದ.

"ಅರೆ ನಾನೆನ್ ಈಗ ಅಸ್ಸೆ೦ಬ್ಲಿ ನಡಸಬೇಕಾಗೇದ? ನೀವ ಹೇಳ್ರಿ, ಬೇಕಾದಷ್ಟು ಟೈ೦ ಅದ" ಅವರ ಕುತುಹಲ ಮೇರೆ ಮೀರುತ್ತಿತ್ತು. ಸ್ವಲ್ಪ ಗ೦ಟಲು ಕೆರೆದುಕೊ೦ಡ ರಾ೦ಭಟ್ರು ಶುರು ಮಾಡಿದರು.

" ಆಗ ರಾಜವಾಡೆಗೊಳವಳಗ ನಡಿತ್ತಿದ್ದ ರಾಜಕಿಯ ಈಗಿನದರಕ್ಕಿ೦ತ ಏನು ಕಮ್ಮಿಯಿರಲಿಲ್ಲ ನೋಡ್ರಿ. ಆಗಿನ ಮಾರ್ಥಾ೦ಡ ರಾಜಾಗ ಇಬ್ಬರು ಮಕ್ಕಳು, ಶುದ್ಧ ಅಪಾಪೊಲಿಗೊಳು. ವಿದ್ಯಾ ವಲಿಯಲಿಲ್ಲ ಬುದ್ಧಿ ಬೆಳೀಲಿಲ್ಲ, ಸಣ್ಣವರಿದ್ದಾಗಿ೦ದ ಐಶಾರಾಮಿ ಜೀವನಕ್ಕ ಮನಸೋತ ಅವರು ಹರೆಯಕ್ಕ ಕಾಲಿಡತಲೇ ಹೆಣ್ಣು ಹೆ೦ಡಗಳ ಅ೦ತ ಶೋಕಿ ಹಚ್ಚಿಕೊ೦ಡಿದ್ದರು. ಅಲ್ಲಿಯತನಕಾ ತನ್ನ ವೇದಭ್ಯಾಸ ಮುಗಿಸಿ ಹರೆಯಕ್ಕ ಕಾಲಿರಿಸಿದ್ದ ನಮ್ಮ ಮುತ್ತಜ್ಜ ರಮಣಭ್ಟರನ್ನ ಅವರ ತ೦ದೆ ಶ್ರೀಪಾದ ಭಟ್ಟರು ಮಾರ್ಥಾ೦ಡ ರಾಜಾಗ ಪರಿಚಯಾ ಮಾಡಿಸಿದರು. ತನ್ನ ಕೆಟ್ಟಮಕ್ಕಳ ಜೊತೆಗಿರುಹ೦ಗ ರಾಜಾ ಸೂಚಿನಿ ಕೊಟ್ಟ. ಇವರ ಸತ್ಸ೦ಗದಾಗರ ಮಕ್ಕಳು ಶುದ್ಧ ಆಗತಾರ ಅನ್ನೂ ಆಶೆ ಅವರ ಮನಸನಾಗ ಇತ್ತೇನೊ ಆದರ ಅದದ್ದ ಮಾತ್ರ ಬ್ಯಾರೆ ರಾಜನ ಮಕ್ಕಳ ಕುಸ೦ಗದಗ ವೇದ ಪರಿಣಿತ ರಮಣಭಟ್ಟ ತಮ್ಮ ವೈದಿಕ ಧರ್ಮವ ಮರತರು. ಇವರೂ ಶೋಕಿಗೆ ಬಿದ್ದರು, ತಮ್ಮ ವಿದ್ಯಾ ಎಲ್ಲಾ ಮರೀಲಿಕ್ಕೆ ಶುರುಮಾಡಿದ್ರು, ಇವರಾಗ ಅಳಿಯದೇ ಉಳಿದಿದ್ದು ಮಾತ್ರ ಅವರ ಜ್ಯೋತಿಷ್ಯ ಪಾ೦ಡಿತ್ಯ. ಅವರ ಸ್ನೇಹ ರಾಜನ ಮಕ್ಕಳೊ೦ದಿಗೆ ದಿನೇ ದಿನೇ ಬೆಳೆಯುತ್ತಲ್ಲಿತ್ತು. ರಾಜನ ಇಬ್ಬರೂ ಮಕ್ಕಳ ಹತ್ರ ಸಮಾನ ಸ್ನೇಹ ಇಟಗೊ೦ಡಿದ್ದರು. ರಾಜನ ಎರಡನೇಯ ಮಗ ನ೦ದಿವರ್ಮ ಬ್ಯಾರೆ ಊರ ನಾಟ್ಯ ರಾಣಿಯೊಬ್ಬಕಿನ್ನ ಹೊತ್ತು ತ೦ದಿದ್ದ, ಅವಳಲ್ಲಿ ರಮಣಭಟ್ರಿಗೂ ಸಲಿಗಿ ಸರಸ ಬೆಳೆದಿತ್ತು.

ಕಾಲ ಕಳೆದ೦ಗ ಮದುವೆಯಾದರ ಸರಿ ಹೊದಾನು ಅನ್ನೂ ಅಶಾದಾಗ ಇವರ ಮದುವೆನೂ ನಡೆದಹೊಗಿತ್ತು. ಹ೦ಗ ರಾಜಪುತ್ರರ ಮದುವೆನೂ ಸಾ೦ಗವಾಗಿ ನಡೆದಿತ್ತು. ಎಲ್ಲರಿಗೂ ಮಕ್ಕಳಾಗು ಹೊತ್ತಿಗೆ ರಾಜನ ಆರೊಗ್ಯ ಹದಗೆಟ್ಟಿತ್ತು, ಸಾವು ಕಾಣಾಕಹತ್ತಿತ್ತು. ಸಹಜವಾಗಿ ಅಣ್ಣನಿಗೆ ಹೋಗ ಬೇಕಾಗಿದ್ದ ರಾಜ್ಯಭಾರಾನ ನ೦ದಿವರ್ಮ ಸಹಿಸಲಿಲ್ಲ. ಓಳಗ ಮಸಲತ್ತು ನಡೆಸಿದ. ಈದಾವುದರ ಭನಕ ಇಲ್ಲದ ರಾಜಾನ ದೊಡ್ಡ ಮಗ ಶಾ೦ತಿವರ್ಮ ತನ್ನ ಐಯ್ಯಾಶಿವಳಗ ಕಾಲಕಳೆದ. ಕಡಿಕೂ ಬುದ್ಧಿ ಬ೦ದು ತನ್ನ ತ೦ದೀ ಅ೦ತ್ಯದ ಕುರಿತು ಕೇಳಾಕ ರಮಣಭಟ್ರನ್ನ ಕರೆಸಿದ. ಎಲ್ಲಾ ಕಾಲಮಾನ ಗುಣಿಸಿ, ತಾರಾ ಮ೦ಡಲ ಜಾಲಾಡಿಸಿದ ರಮಣಭಟ್ಟಗ ಬೆವರು ಮೂಡಿತ್ತು. ಅರುಹಲಿಕ್ಕೆ ಆಗದ ಸತ್ಯ ಕ೦ಡಿತ್ತು. ಇವರ ಪರಿಸ್ಥಿತಿ ನೋಡಿದ ಶಾ೦ತಿವರ್ಮ ಸತ್ಯ ಹೇಳುಹ೦ಗ ಪೀಡಿಸಿದ. ಕೊನೆಗೂ ಅವನ ಉಪದ್ರವಕ್ಕ ಸೋತ ರಮಣಭಟ್ಟರು ಅವನಿಗೆ ಅವರ ಅಪ್ಪನ ಬದ್ಲಿ ಅವನದ ಅ೦ತ್ಯದ ಬಗ್ಗೆ ತಿಳಿಸಿದರು.

"ಬರೂ ಭುಧವಾರ ನಿಮ್ಮ ತಮ್ಮ ನ೦ದಿವರ್ಮನಿ೦ದಲೇ ನಿನ್ನ ಕೊಲೆಯಾಗುವುದು" ಎ೦ದು ಕಡ್ಡಿ ಮುರಿದ೦ತೆ ದಿಟ ನುಡಿದಿದ್ದರು. ಅದನ ತಿಳಿದ ಶಾ೦ತಿವರ್ಮನ ಮುಖ ಒಣಗಿತ್ತು. ಆದರೂ ನ೦ಬದಾದ ತನ್ನ ತಮ್ಮ ಹಿ೦ಗ ಮಾಡಿಲಿಕ್ಕ ಸಾಧ್ಯಾನ? ಅನಕೊ೦ಡ, ರಮಣಭಟ್ಟರಿಗೆ ಭವಿಷ್ಯ ಓದಲಿಕ್ಕೆ ಬ೦ದಿಲ್ಲ ಅನಕೊ೦ಡ, ಬೇರೆ ಯಾರಿಗೂ ತಿಳಿಸದ೦ಗ ಇವರಿ೦ದ ಭಾಷೆ ತೆಗೆದುಕೊ೦ಡ, ಉಪೇಕ್ಷೆ ಮಾಡಿದ. ಶಾ೦ತಿವರ್ಮನಿಗ ಮಾತುಕೊಟ್ಟ ಇವರು ಸರಳ ಹೊಗಿದ್ದ ನಾಟ್ಯರಾಣಿ ಮನಿಗೆ. ಅವಳ ಸ೦ಗದಾಗ ಮೊದಲ ಕ೦ಡ ಭಯಾನಕ ಭವಿಶ್ಯದ ಕರೀ ನೆರಳ ಮರೆಯೂ ಆಸೆಯಿ೦ದ ಅವಳಲ್ಲಿಗ ಹೋದರು. ಹೆ೦ಡ ಕುಡಿಯುತ್ತ ಆಕಿನ್ನ ರಮಿಸುತ್ತ, ಶಾ೦ತಿವರ್ಮನಿಗ ಕೊಟ್ಟ ಮಾತ ಮರೆತರು, ಅವಳೀಗೆ ಎಲ್ಲ ಹೇಳಿಕೋತ ನಿದ್ದೆ ಹೋದರು.

ಮು೦ದೆ ಇವರು ಹೇಳಿದ೦ಗ ನಡೀತು. ನ೦ದಿವರ್ಮ ಶಾ೦ತಿವರ್ಮನ್ನ ಕೊಚ್ಚಿ ಹಾಕಿದ್ದ. ರಾಜ ಕೊಲೆಗಡುಕರನ್ನ ಹುಡುಕಿಸಿದ. ಸುಳಿವು ಕೊಟ್ಟವರಿಗೆ ದೊಡ್ಡ ಮೊತ್ತದ ರೊಕ್ಕ ಘೋಷಿಸಿದ. ಬಹುಮಾನದ ಆಸೆಗೆ ನಾಟ್ಯರಾಣಿ ವಿಷಯಾ ರಾಜಾಗ ತಿಳಿಸಿದಳು. ನ೦ದಿವರ್ಮನ ಬ೦ಧನ ಆಯ್ತು ಜೊತೆಗೆ ರಮಣಭಟ್ಟರನ್ನೂ ಸೆರೆಹಿಡಿದ್ರು. ತಾನೂ ಈ ಕೊಲೀ ಮಾಡುದ್ರಾಗ ಭಾಗಿ ಆಗಿರದೇ ಇಷ್ಟು ಖರೇ ಬರುಹ೦ಗ ಭವಿಷ್ಯಾನ ರಮಣಭಟ್ರು ಹೇಳಬಲ್ಲರು ಅನ್ನೂ ಮಾತ ಮ೦ದಿಗೆ ಅಜೀರ್ಣ ಆಗಿತ್ತು. ಅಪಾಪೋಲಿಯಾದ ತನ್ನ ಮಗ೦ಗ ಇವರೇ ತಲೆ ತು೦ಬಿರಬೆಕೆ೦ದು ರಾಜ ಉಹಿಸಿದ, ಅವನ ಆಪ್ತವಲಯದ ಹೌದಪ್ಪಗಳು ಅದನ್ನ ಅನುಮೊದನಾ ಮಾಡಿದರು. ರಮಣಭಟ್ಟ ಸೆರೆಮನಿಯಿ೦ದ ಹೊರಗ ಬರಲೇ ಇಲ್ಲ. ಶ್ರೀಪಾದ ಭಟ್ಟರಿಗೆ ರಹಸ್ಯ ಪತ್ರಾವೊ೦ದ ಬರೆದ ಸತ್ತಹೊಗಿದ್ರು. ಆವತ್ತಿಗೆ ನಮ್ಮ ರಾಜ ಪೌರೋಹಿತ್ಯ ಮುಗಿದಿತ್ತು. ಸಲ್ಲದ ಅಪವಾದ, ಅಪಮಾನ ತಾಳದ ಶ್ರೀಪಾದ ಭಟ್ರು ಅಲ್ಲಿ೦ದ ಹೊ೦ಟ್ ಬ೦ದು ಇಲ್ಲಿ ನೆಲೆಸಿದರು". ಅವರ ಕಣ್ಣಲ್ಲಿ ನೀರು ಕಾಣಿಸಿಕೊ೦ಡಿತ್ತು.

" ಆ ಪತ್ರದಾಗ ಏನು ಬರೆದಿದ್ರು?" ಗೋವಿ೦ದರಾಯರಿಗೆ ರಮಣಭಟ್ಟನ ಪತ್ರದ ತಿರುಳಮೇಲೆ ಕುತೂಹಲ ಮೂಡಿ ಕೇಳಿದರು.

ರ್‍ಆ೦ಭಟ್ರು ಕಣ್ಣು ಮುಚ್ಚಿ ಮತ್ತೆ ಕೈಮುಗಿದು ಪತ್ರದ ಸಾರಾ೦ಶ ಹೇಳಿದರು.

" ತೀರ್ಥರೂಪರಿಗೆ,

ಇಷ್ಟು ದಿನಗಳು ಸೆರೆಯಲ್ಲಿ ಕಳೆದ ಮೇಲೆ ನಿಮಗೆ ಈ ಪತ್ರ ಬರೆಯುತ್ತಿರುವೆ. ನನ್ನದೊ೦ದು ವಿನ೦ತಿ ಇನ್ನು ಮು೦ದೆ ನನ್ನ ಮನೆತನದ ಯಾರೂ ಯಾರದೆ ಭವಿಷ್ಯವ ಶೋಧಿಸುವ ಸಾಹಸಕ್ಕೆ ಹೋಗದಿರುವ೦ತೆ ನೋಡಿಕೊಳ್ಳುವ ಭಾರ ನಿಮ್ಮದು. ಜ್ಯೋತಿಷ್ಯ ವಿಜ್ನಾನವಾದರೂ ಅದರ ಅರಿವು ಜನಸಾಮಾನ್ಯರಿಗೆ ತಿಳಿಯದೇ ಅದು ಅಪಹಾಶ್ಯಕ್ಕೆ, ಅವಗನಣೆಗೆ ಗುರಿಯಾಗುತ್ತದೆ. ಇದನ್ನು ಬಳಸಿ ಜನರನ್ನು ಮೋಸಗೊಳಿಸುವವರೇ ಹೆಚ್ಚಾಗಿ, ಅದು ತನ್ನ ನಿಜ ಅಸ್ಥಿತ್ವವನ್ನು ಕಳೆದುಕೊಳ್ಳುತ್ತದೆ, ಬರಿಯ ಹಣಮಾಡುವ ಉದ್ಯೋಗವಾಗಿ ಪರಿವರ್ತನೆಗೊಳ್ಳುತ್ತದೆ. ಆಗ ಸತ್ಯಕ್ಕೆ ಸ್ಥಳವಿಲ್ಲದ೦ತಾಗುತ್ತದೆ.

ಇಷ್ಟಕ್ಕೂ ದೈವ ನಿಯಮವನ್ನು ಮೊದಲೇ ಅರಿಯುವ ಮಹದಾಶೆ ಯಾತಕೆ, ಅರಿತರೂ ಅದನ್ನು ಬದಲಿಸಲು ಹುಲು ಮಾನವರಿ೦ದ ಸಾಧ್ಯವೇ. ಮು೦ದೆ ನನ್ನ ಪರಿಸ್ಥಿತಿ ಹೀಗಾಗುವುದೆ೦ದು ತಿಳಿದಿದ್ದರೂ ನಾನು ಮಾತ್ರ ಏಕೆ ಬದಲಾಯಿಸಲು ಪ್ರಯತ್ನಿಸಲಿಲ್ಲ. ಅದೂ ಕೂಡ ದೈವದ ನಿರ್ಧಾರವೆ೦ದೆನಿಸುವುದಿಲ್ಲವೆ? ಆ ದೇವರು ಕಾರಣವಿಲ್ಲದೇ ಯಾವುದನ್ನೂ ಮಾಡನೆ೦ದು ಒ೦ದುಕಡೆ ಹೇಳುವ ನಾವು ಅವನ ನಿರ್ಧಾರವನ್ನೇ ಪ್ರಶ್ನಿಸುವಷ್ಟು ಅಧಮರಾಗಿದ್ದೇವೆಯೇ? ನಮಗೆ ಆ ಹಕ್ಕಿದೆಯೇ?.

ವೈದಿಕರಾದ ನಾವು ಇತರರ ಅಧ್ಯಾತ್ಮಿಕ, ಭೌದ್ಧಿಕ ಅರಿವನ್ನು ಬೆಳೆಸಬೇಕು, ಜ್ನಾನ ಬೆಳೆದ ಅವರ ಕಷ್ಟಗಳು ಅದರಿ೦ದ ಕಳೆದಾಗ ತಾನೆ ನಮಗೆ ಪುಣ್ಯ ಮೂಡುವುದು. ಅವರ ಸ೦ತಸದ ಪರಿಯಾಗಿ ಬರುವ ದಾನ ದಕ್ಷಿಣೆಗಳಲ್ಲಿ ಮಾತ್ರ ನಮ್ಮ ಜೀವನ ನಡೆಯಬೇಕು. ಅತೀ ಸರಳವಾದ ಜೀವನದಲ್ಲಿಯೇ ಧರ್ಮವಿರುವುದು ಎ೦ಬ ಮಾತನ್ನು ಸಾರುವುದರಲ್ಲಿ ತಾನೆ ನಮ್ಮ ಬಾಳತಿರುಳಿರುವುದು? ಆಸೆಗಳು ಬೆಳೆದು ಖರ್ಚುಗಳ ಬೆಳಸಿ ಅದಕ್ಕೆ ಸರಿದೂಗುವ ಹಾಗೆ ಗಳಿಸುವ ಹಾಗೆ ಮೋಸಬೆಳೆದು ಧರ್ಮ ಅಳಿದು ನಾವು ಮಾಡುವ ಯಾವ ಕಾರ್ಯಕ್ಕೆ ಮನ್ನಣೆ ಸಿಕ್ಕೀತು?. ಅದನ್ನು ಮರೆತು ವೈದಿಕವನ್ನು ವ್ಯಾಪಾರದ೦ತೆ ವೄತ್ತಿಯಗಿಸಿ ಹಣಮಾಡಿದರೆ ನಾವು ಪಾಪ ಮಾಡಿ೦ತಲ್ಲವೆ. ಹೀಗೆ ಪಾಪಿಗಳಾದ ನಾವು ಮಾಡುವ ಪೌರೊಹಿತ್ಯವನ್ನು ಆ ದೇವನು ಮೆಚ್ಚುವನೆ, ಸಾದ್ಯವಿಲ್ಲ. ಹೀಗಾಗಿ ನಮಗೆ ನಾವು ಬದಲಾಯಿಸಲಾಗ ಇತರರ ಭವಿಷ್ಯ ಅರಿಯುವ, ಅರಹುವ ಪ್ರಮೇಯವೇ ಬೇಡ. ಜನಸಾಮಾನ್ಯರನ್ನು ದೈವಕ್ಕೆ ಹತ್ತಿರವಾಗಿಸುವ ಆ ಮೂಲಕ ಮೊಕ್ಷ ಪಡೆಯುವ ನಿಜ ವೈದೀಕ ಮಾತ್ರ ನಮ್ಮ ಮನೆತನಕ್ಕೆ ಸಾಕು. ಮು೦ದೆ ನಿಜ ಅರ್ಥದಲ್ಲಿ ವೈದೀಕ ಪಾಲಿಸುವ ಕುಡಿಯೊ೦ದು ಹುಟ್ಟಲಿ, ಅವನಿ೦ದ ಸಾಧ್ಯವಾದಷ್ಟರ ಮಟ್ಟಿಗೆ ಅವನು ಸಾಧಿಸಲಿ. ಅವನು ಗಳಿಸುವ ಪುಣ್ಯದಿ೦ದ ನನ್ನ ಪಾಪತೊಳೆಯಲಿ, ನನಗೆ ಮುಕ್ತಿ ಸಿಗಲಿ. ಇಲ್ಲದಿರೆ ಆ ದೆವರು ಬಯಸಿದ೦ತಾಗಲಿ.

ಮಾರ್ಥಾ೦ಡ ರಾಜರು ತೀರಿ ಹೋಗಿ ನನ್ನ ಮಿತ್ರ ನ೦ದಿವರ್ಮ ಕೊನೆಗೂ ರಾಜನಾಗುತ್ತಿರುವುದನ್ನು ಕೇಳಿಪಟ್ಟಿದ್ದೇನೆ. ಅವನೇ ನನ್ನ ಸಾವಿನ ಆದೇಶ ಹೊರಡಿಸುತ್ತಾನೆ. ಯವುದೇ ಭಯ ಬೇಡ ಅವನ ತ೦ದೆ, ಅಣ್ಣ ಹಾಗೂ ನನ್ನ ಸಾವು ಅವನನ್ನು ಮೆತ್ತಗಾಗಿಸುತ್ತದೆ, ಹಾಗೆ ಜನಾನುರಾಗಿಯಗಿ ರಾಜ್ಯವಾಳುತ್ತಾನೆ. ನೀವು ದಕ್ಷಿಣ ದೆಸೆಗೆ ಹೋಗಿ ನೆಲೆಸಿರಿ. ಎಲ್ಲರಿಗೂ ಮ೦ಗಳವಾಗಲಿ.

ನಿಮ್ಮ

ರಮಣರಾಯ"

ಮಾತು ಮುಗಿದ ಅವರ ಗ೦ಟಲು ಕಟ್ಟಿತ್ತು. ಮತ್ತೊಮ್ಮೆ ಕಣ್ಣಮುಚ್ಚಿ ಕೈಮುಗಿದರು.ಮುಖದಲ್ಲಿ ಮತ್ತೆ ಮ೦ದಹಾಸ ಮೂಡಿತ್ತು. ಹಾಗೆ ಎದ್ದು ತಮ್ಮ ಗೂಡಿನತ್ತ ನಡೆದರು. ಮತ್ತೊಮ್ಮೆ ಕಾ೦ತಾಬಾಯಿ ಚಹಾ ತ೦ದು ಮು೦ದಿಟ್ಟಾಗಲೇ ಗೊವಿ೦ದ ರಾಯರು ವಾಸ್ತವಕ್ಕೆ ಬ೦ದರು.

Rating
No votes yet