ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?

ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?

ಎಲ್ಲಾದರು ನೀವು ನನ್ನನ್ನು ಮೀಟ್ ಮಾಡಲು ಆಫೀಸಿಗೆ ಬರುವುದಿದ್ದರೆ, ನನ್ನ ಕೊಲೀಗ್‌ಗಳ ಬಗ್ಗೆ ಸ್ವಲ್ಪ ಗೊತ್ತಿದ್ದರೆ ಒಳ್ಳೆಯದು. ಅಲ್ವಾ? ಒಮ್ಮೆ ಒಳ ಹೋಗಿ ನೋಡೋಣ. ತಡೀರೀ..ನೀವು ಹೊಸಬರಲ್ವಾ..?

ಹೊಸಬರು ನಮ್ಮ ಆಫೀಸ್ ಒಳಹೊಕ್ಕರೆ, ಕೂಡಲೇ ಹೊರಹೋಗಿ, ಬೋರ್ಡ್ ನೋಡಿ,
ಅಕ್ಕಪಕ್ಕದವರ ಬಳಿ ಕನ್ಫರ್ಮ್ ಮಾಡಿಕೊಂಡು ಪುನಃ ಒಳ ಬರುವರು. ‘ಅಲ್ವೋ, ನಿಮ್ಮದು ಆಫೀಸೋ,ಅಲ್ಲಾ ಇಂಡಿಯನ್ ಕ್ರಿಕೆಟ್ ಟೀಮಿನ ಡ್ರೆಸ್ಸಿಂಗ್ ರೂಮೋ?’ ಎಂದು ಒಬ್ಬ ಕೇಳಿಯೂ ಇದ್ದ.

ಹೌದು. ಧೋಣಿ ಬಳಗ ಬೇಕಿದ್ದರೆ ‘ದೀಪಿಕಾ ಪಡುಕೋಣೆ’ ಬಗ್ಗೆ ಚರ್ಚೆ ಮಾಡಿಯಾರು, ನಮ್ಮಲ್ಲಿ ಕ್ರಿಕೆಟ್ ಬಿಟ್ಟು ಬೇರೆ ವಿಷಯವಿಲ್ಲ. ಒಂದರ್ಥದಲ್ಲಿ ನಮ್ಮದೂ ಸಹ ಇಂಡಿಯನ್ ಕ್ರಿಕೆಟ್ ಟೀಮು-

ಕಿರಿಕಿರಿ ಮಾಡುವ ಕಸ್ಟಮರ್‌ಗಳ ಹತ್ತಿರ ವ್ಯವಹರಿಸಲು ನಾವು ಭಜ್ಜಿ (ನಮ್ಮ ಆಫೀಸಿನ ರವಿ)ಯನ್ನೇ ಕಳುಹಿಸುವುದು. ಶ್ರೀಮಂತರೇ ಇರಲಿ, ಪೈಲ್ವಾನ್‌ಗಳೇ ಇರಲಿ, ಮುಖಕ್ಕೆ ಹೊಡೆದಂತೆ ಹೇಳಿ ಬಾಯಿ ಮುಚ್ಚಿಸುವುದರಲ್ಲಿ ಅವನು ಎಕ್ಸ್‌ಫರ್ಟ್. ಅವನ ಮೇಲೇನಾದರೂ ದೂರು ಕೊಟ್ಟರೆ, ‘ಜಾತಿ ನಿಂದನೆ’ ಮಾಡಿದರು ಎಂದು ಅವರನ್ನೇ ಹೆದರಿಸಬಲ್ಲ.

ಮೋಹನ್‌ಗೆ ತನ್ನ ಹೆಸರು ಮೋಹನ್ ಎಂಬುದೇ ಮರೆತು ಹೋಗಿದೆ. ನಾವೆಲ್ಲಾ ಕರೆಯುವುದು ಕೇಳಿ ಉಳಿದವರೂ ಸಹ ‘ಜಹೀರಣ್ಣ’ ಎಂದೇ ಅವರನ್ನು ಕರೆಯುವುದು.

ಮಲ್ಲೇಶ್(ಕನ್ನಡ ಲೆಸ್) ಸರ್ ಮನಸ್ಸಾದರೆ ಊಟಕ್ಕೂ ಹೋಗದೇ ಇಡೀ ದಿನ ಕೆಲಸ ಮಾಡುತ್ತಿರುತ್ತಾರೆ. ಹೆಚ್ಚಾಗಿ ‘ಈಗಷ್ಟೇ ಬಂದರು’ ಅನ್ನುವುದರೊಳಗಾಗಿ ಹೋಗಿಯಾಗಿರುತ್ತದೆ. ನಾವಿಟ್ಟ ಹೆಸರು.. (ಹೇಳಿ ನೋಡೋಣ)

ಪಾರ್ಟಿಷನ್ ಮೇಲಿಂದ ಬೇರೆ ಟೇಬಲ್ಲಿಗೆ ನೇರವಾಗಿ ಫೈಲು ಬಂದು ಬಿತ್ತೆಂದರೆ ನಮ್ಮ ‘ಯುವರಾಜ್’ ಕಳುಹಿಸಿದ್ದು. ಅವರು ಎದ್ದು ನಡಕೊಂಡು ಬಂದು ಫೈಲು ಇಟ್ಟದ್ದು ನಮ್ಮ ಆಫೀಸಲ್ಲಿ ಯಾರು ನೋಡಿಲ್ಲ.

ಇನ್ನು ಬಾಸ್ ಬಗ್ಗೆ- ಬಹಳ ಒಳ್ಳೆಯ ಜನ. ನೋಡಲು ಸೆಹವಾಗ್ ತರಹ ಇದ್ದರೂ ‘ಧೋಣಿ’ ಹೆಸರು ಯಾಕೆ ಬಂತು ಗೊತ್ತಿಲ್ಲ. ಇರುವ ಒಂದೆರಡು ಕೂದಲನ್ನು ಎಡ ಕಿವಿ ಸಮೀಪದಿಂದ ಎಳಕೊಂಡು ಹೋಗಿ ಬಲಕಿವಿಗೆ, ಬಲಕಿವಿ ಬಳಿಯಿಂದ ಎಳಕೊಂಡು ಹೋಗಿ ಎಡಕಿವಿಗೆ (ಕಿ-ವಿಕೆಟ್ ಟು ವಿಕೆಟ್) ಸ್ಟೈಲಾಗಿ ಬಾಚಿರುವರು.

ಕ್ರಿಕೆಟ್ ಮ್ಯಾಚ್ ನಡೆಯುವ ದಿನ ಅಲ್ಲಿ ಸೆಹವಾಗ್ ಸೆಂಚುರಿ ಹೊಡೆದರೆ, ಇಲ್ಲಿ ನಮ್ಮ
ಸೆಹವಾಗ್ ಸಂಜೆ ಟೀ (ಟೀ ಟೈಮಲ್ಲಿ ಕೋಕ್ ಕುಡಿಯುವುದಿಲ್ಲ), ಸ್ವೀಟ್,ಖಾರ ತರಿಸಿ ಕೊಡಬೇಕು. ಬಾಸ್ ಸಹಿತ ನಮ್ಮ ಜತೆ ಇರುವುದರಿಂದ ಆ ಟೈಮಲ್ಲಿ ಆಫೀಸ್ ಕೆಲಸಗಳೆಲ್ಲಾ ಸ್ಥಗಿತ.

ಹೀಗೇ ಕಳೆದ ಶನಿವಾರದ ಟೀಟೈಮ್ ಮೀಟಿಂಗ್‌ನಲ್ಲಿ ನಮ್ಮೊಳಗೆ ಭರ್ಜರಿ ಚರ್ಚೆ ಸುರುವಾಯಿತು.
‘ದ.ಆಫ್ರಿಕಾಕ್ಕಿಂತ ಇಂಡಿಯಾ ನಂಬರ್ ಒನ್ ತಂಡವಾಗಲು ಫಿಟ್’ ಎಂಬುದು ವಿಷಯ.

ನಮ್ಮದು ಒರಿಜಿನಲ್ ಇಂಡಿಯಾ ಟೀಮಿಗಿಂತಲೂ ಜಾಸ್ತಿ ಒಗ್ಗಟ್ಟಿನ ಇಂಡಿಯಾ ಟೀಮು ಎಂಬುದು ಗೊತ್ತಿಲ್ಲದ ಒಂದಿಬ್ಬರು ಕಸ್ಟಮರ್‌ಗಳು ಚರ್ಚೆಯಲ್ಲಿ ಸೇರಿಕೊಂಡು ದ.ಆಫ್ರಿಕಾದ ಪರ ವಾದಿಸಿದರು.

ಅವರೊಲ್ಲಬ್ಬಾತ ‘ಸಚಿನ್ನನ್ನು ಯಾಕೆ ಟೀಮಲ್ಲಿ ಇಟ್ಟುಕೊಂಡಿದ್ದಾರೆ? ಇರುವ ಎಲ್ಲಾ ರೆಕಾರ್ಡ್ ಮುರಿದಾಯಿತು. ತಲೆಮಾರಿಗಾಗುವಷ್ಟು ಹಣ ಸಂಪಾದಿಸಿದ್ದಾನೆ. ಲಾರಾ ನೋಡಿ ರೆಕಾರ್ಡ್ ಮುರಿದು ರಿಟೈರ್ ಆದ. ಕುಂಬ್ಲೆ ತರಹ ಮರ್ಯಾದೆಯಿಂದ ರಿಟೈರ್ ಆಗಬಾರದೆ? ಇಂಡಿಯಾ ನಂಬರ್ ಒನ್ ಆಗಬೇಕಾದರೆ ತೆಂಡುಲ್ಕರ್‌ನನ್ನು ಮೊದಲು ತೆಗೆಯಬೇಕು. ನಂತರ..’
ನಮ್ಮ ಟೀಮಿನವರ ಕೈಯಲ್ಲಿದ್ದ ಟೀ ಕುದಿಯಲು ಸುರುವಾಯಿತು. ಸಹನೆಗೂ ಒಂದು ಲಿಮಿಟ್ ಇದೆಯಲ್ವಾ?
ಭಜ್ಜಿ ಬೌಲಿಂಗ್‌ಗೆ ಬಂದೇ ಬಿಟ್ಟ ‘ಏನ್ರೀ, ತೆಂಡುಲ್ಕರ್ ಬಗ್ಗೆ ನಿಮಗೇನ್ರೀ ಗೊತ್ತು? ಸರಿಯಾಗಿ ಬ್ಯಾಟು ಹಿಡಿಯಲಿಕ್ಕೆ ಗೊತ್ತಿಲ್ಲ,ತೆಂಡುಲ್ಕರ್ ಬಗ್ಗೆ ಮಾತನಾಡುತ್ತಾರೆ..ರಿಟಾಯರ್ ಆಗಬೇಕಂತೆ..ನಿಮ್ಮ ಕೆಲಸ ಆಗಿದಾ ಇಲ್ಲವಾ? ಮೊದಲು ನೀವು ಮನೆಗೆ ರಿಟೈರ್ ಆಗಿ..’
ಬೈದುಕೊಂಡೇ ಅವರನ್ನು ಹೊರದಬ್ಬಿದ.
ನನ್ನ ಬಳಿ ನಮ್ಮ ಟೀಮಿನ ಎಲ್ಲರೂ ಬಂದರು. ಬಾಸ್ ‘ಕೋತಿಗೇನು ಗೊತ್ತು ಮಾಣಿಕ್ಯದ ಬೆಲೆ.
ನೀವೇನೂ ಬೇಸರ ಮಾಡಬೇಡಿ..’ ಎಂದರು.

ಅಂದಹಾಗೆ..ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?

-ಗಣೇಶ.
(ಅನಿಲ್ ಮತ್ತು ಶ್ರೀ,
ಹಾಸ್ಯ ಬರಹ ಎಂದು ನಿಮ್ಮ ಬಳಿ ಹೇಳಿದ್ದೆ.ನಮ್ಮವರ ಬಗ್ಗೆ,ನಮ್ಮ ಟೀಮಿನ ಬಗ್ಗೆ ಹಾಸ್ಯ..ಸಾಧ್ಯವಿಲ್ಲ..
ಸಾರಿ.
-ಗಣೇಶ)

Rating
No votes yet

Comments