ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ
ಮಧುರ ಮಾರುತ ಮಂದಾನಿಲವಾಗಿ ಸುಳಿದಿರಲು
ಚಂದಿರನ ಸುತ್ತ ಬೆಳ್ಳಿ ತಾರೆಗಳು ಹೊಳೆದಿರಲು
ನಿದಿರೆಯಮೃತದ ಸವಿಯು ಮನದುಂಬಿರಲು
ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ !
ನಿನ್ನ ಕನಸಿನಲೇ ಅರಳಿರುವೆ
ನಿನ್ನ ಮನೆ ಅಂಗಳದಲಿ ನಿಂದಿರುವೆ
ನನ್ನ ಕೈ ಹಿಡಿದು ಕರೆತಂದ ದೇವಿಯಾರು?
ಚನ್ನ ಚೆಲುವೆಯ ಸಮ್ಮೋಹನದ ತೇರು
ಸುಳಿಗಾಳಿ ಬೀಸುವುದು ಮೆಲ್ಲ ನಿಲಬಹುದು.
ನದಿಯ ಜುಳುಜುಳುನಾದ ಮೌನವಾಗಲುಬಹುದು.
ಸಂಪಿಗೆಯ ಘಮವು ಮಾಯವಾಗಲುಬಹುದು.
ಕನಸಳಿದು ಸವಿ ನೆನಪುಳಿದು ಮಾಸಲು ಬಹುದು
ಮೇಲೆತ್ತು ನನ್ನೀ ಪತನದಿಂದ
ಮುತ್ತಿನ ಮಳೆಯಲ್ಲಿ ಪ್ರೀತಿ ಸುರಿಸು
ಬತ್ತಿದಾ ತುಟಿ ಮೇಲೆ ಜೇನ ಹರಿಸು
ಮಂಕಾದ ಕೆನ್ನೆಯಲಿ ರಂಗನಿರಿಸು
ತಪ್ಪಿದ ಎದೆ ತಾಳದಲಿ ಹದವನಿಡಿಸು
ಒತ್ತರಿಸು.. ಚಿತ್ತರಿಸು ಮತ್ತಗೊಳಿಸು
ಹೊಚ್ಚ ಹೊಸ ಜೀವನದ ಹೂವರಳಿಸು
ಪಿ. ಬಿ. ಶೆಲ್ಲಿಯ " Indian Serenade" ಕವನದ ಭಾವಾನುವಾದ
Rating
Comments
ಉ: ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ
ಮೂಲ ಕವನವನ್ನೂ ಪ್ರಕಟಿಸಿದ್ದರೆ ಚೆನ್ನಿತ್ತು. ಭಾವ ಸುಂದರವಾಗಿದೆ.
In reply to ಉ: ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ by kavinagaraj
ಉ: ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ
ನನ್ನಿ ಕವಿ ನಾಗರಾಜ್ ಸರ್, ಕವನದ ಕೊನೆಯಲ್ಲಿ ಮೂಲದ ಕೊಂಡಿ ಕೊಟ್ಟಿರುವೆ .