ದಕ್ಷಿಣಾಮೂರ್ತಿ ಸ್ತೋತ್ರದ ಭಾವಾನುವಾದ
ಜಗದ ಕನ್ನಡಿಯೊಳಾ ತೋರಿಕೆಯನಿರಗೊಡುತ ತನ್ನೊಳಿರವಿನ ನಿಜವ ತೋರ್ದಡಿಯ ಪೊಡಮಡುತ |
ನಿದಿರೆಯಿಂದೆಚ್ಚರಿತು ತನ್ನಿರವಿನಚ್ಚರಿಯ ತಾನು ತಾನರಿಯೆ ಬಗೆಯ ತೋರ್ದಡಿಯ ಪೊಡಮಡುತ || ೧ ||
ಮೊಳಕೆಯೊಳಗಣ ಆ ಮುಗುಳುಗಳು ಬಿರಿವಡೆದು ತನ್ನೊಳಚ್ಚರಿಯನಿರಗೊಟ್ಟಡಿಯ ಪೊಡಮಡುತ |
ದೇಶಕಾಲಗಳದೀ ತೋರಿಕೆಯನಣಿಗೊಳಿಸಿ ನಿರ್ವಿಕಲ್ಪವ ಮಾರ್ಪಡಿಪಡಿಯ ಪೊಡಮಡುತ || ೨ ||
ಮಿಡಿತವದೊಂದರಿಂದೀಯಿದರನಳಗೊಳಿಸಿ ಈಯಿದದೆಂಬುದನರಿಯಗೊಟ್ಟಡಿಯ ಪೊಡಮಡುತ |
ನಿಜದರಿವನಿರಗೊಡುತ ಇಳೆಯೊಳಾ ಪರಮವನು ಮರುವಾರಿ ಬಾರಗೊಡದಡಿಯ ಪೊಡಮಡುತ || ೩ ||
ಹಲವು ರಂಧ್ರಗಳೊಡಗೊಂಡ ಘಟವೊಂದದರ ಬೆಳಕ ಬಿತ್ತರಿಪಂತಿಡಗೊಟ್ಟಡಿಯ ಪೊಡಮಡುತ |
ಬಗೆಯೆ ತಾನು ತಾನೆಂದರಿವನೊಡಮೂಡಿಸುತ ಕರಣಗಳ ಹಲವನಿರಗೊಟ್ಟಡಿಯ ಪೊಡಮಡುತ || ೪ ||
ಭ್ರಾಂತಿಯಿಂ ಹಲಬಗೆಯ ಭಾವಗಳನೊಳಗೊಳುತ ಪ್ರಾಣದೇಹವೆನೆ ಮರೆ಼ಗಳನಿರಗೊಟ್ಟಡಿಯ ಪೊಡಮಡುತ |
ಬಾಲ ನಾನೆನುತ ಬಾಲಿಕೆಯೆ ತಾನೆನುತ ತೋರಿಕೆಯ ಜಗದೆ ಮತಿಗಳನಿರಗೊಟ್ಟಡಿಯ ಪೊಡಮಡುತ || ೫ ||
ಕರಣಗಳ ಹಲವನಿರಗೊಡುತ ತಾನೆಡೆವಡುತ ನಾಡಿಗಳ ಮರೆಯನಿರಗೊಟ್ಟಡಿಯ ಪೊಡಮಡುತ |
ನಿದಿರೆಯಿಂದೆಚ್ಚರಿತು ಇರವಿನರಿವಾ ಪರಿಯ ತಾನು ತಾನೆನುತ ಬಗೆಯಗೊಟ್ಟಡಿಯ ಪೊಡಮಡುತ || ೬ ||
ಶಮನೀವ ಮುದಿರೆಯದೊಂದರಿಂದರ್ಚಿಪಗೆ ತಾನು ತಾನೆನುತಲರಿಯಗೊಟ್ಟಡಿಯ ಪೊಡಮಡುತ |
ಎಚ್ಚರದ ಅನುಭವದೆ ಮತ್ತೆಳವೆಯೆನೆ ಸ್ಥಿತಿಗಳೊಳು ಮಿಡಿವ ಮಿಡಿತಗಳನಿರಗೊಟ್ಟಡಿಯ ಪೊಡಮಡುತ || ೭ ||
ಕಾರ್ಯಕಾರಣ ಬಂಧದಿಂದೀ ಜಗವನೀಕ್ಷಿಸುತ ಬಂಧಗಳ ಹಲವನಿರಗೊಟ್ಟಡಿಯ ಪೊಡಮಡುತ |
ಎಚ್ಚರದೆ ನಿದಿರೆಯೊಳೆ ತೋರಿಕೆಗಳಿರಗೊಡುತ ಪೆರಮೆಗಳ ಬಗೆಯಗೊಟ್ಟಡಿಯ ಪೊಡಮಡುತ || ೮ ||
ಪ್ರಣವದೋಂಕಾರವನೆಡೆಬಿಡದೆ ಜಪಿಸುತಲಿರುತ ಇರವು ಅರಿವಿನ ನಲವನಿರಗೊಟ್ಟಡಿಯ ಪೊಡಮಡುತ |
ಈ ಚರಾಚರದಖಿಲದೊಳೆ ವ್ಯಾಪಿಸುತ ತಾನು ತಾನಲ್ಲದುದಿಲ್ಲವೆಂಬುದನರಿಯಗೊಟ್ಟಡಿಯ ಪೊಡಮಡುತ || ೯ ||
ಹದುಳವಿದು ತನ್ನೊಳಗೆ ಹಸಾದವಿದೆಂದೆನುತ ಅಹಮಿಕೆಯ ಪೊರೆಯೊಳಹಮಿಕೆಯನಿರಗೊಟ್ಟಡಿಯ ಪೊಡಮಡುತ |
ಶ್ರವಣದಿಂ ಮನನದಿಂ ಹದಗೊಂಡ ಮನಸ್ಸುಗಳು ಧ್ಯಾನಿಸುತಲರಿವನರಿವನು ಪಡೆಯಗೊಟ್ಟಡಿಯ ಪೊಡಮಡುತ || ೧೦ ||