ದೀಪಕ್ಕಿಲ್ಲ ಎಣ್ಣೆ...

ದೀಪಕ್ಕಿಲ್ಲ ಎಣ್ಣೆ...

ಹಬ್ಬ ಹರಿದಿನಗಳೆಂದರೆ ಜನರಿಗೆ ಹಿಗ್ಗೋಹಿಗ್ಗು. ಅಪಾರ ಸಂತಸ ಕೂಡ. ಅದರಲ್ಲೂ ದೀಪಾವಳಿಗೊಂದು ವಿಶಿಷ್ಟ ಸ್ಥಾನ ನಮ್ಮ ನಾಡಿನಲ್ಲಿ ಕಲ್ಪಿಸಲಾಗಿದೆ. ಸನಾತನ ಧರ್ಮ ಉಗಮದೊಂದಿಗೆ ದೀಪಾವಳಿ ಆಚರಣೆಯಲ್ಲಿದೆ.

ಕ್ರಿಸ್ತಾಬ್ದಕ್ಕೆ ಪೂರ್ವದಲ್ಲೇ ದೀಪಾವಳಿ ಪ್ರಸಿದ್ದವಾಗಿತ್ತು. "ಭವಿಷ್ಯೋತ್ತರ ಪುರಾಣ" ದಲ್ಲಿ ಇದರ ಉಲ್ಲೇಖನವಾಗಿದೆ. ಅಲ್ಲದೆ, ಪ್ರಾಚೀನ ಕಾವ್ಯಗಳಲ್ಲೂ "ಕೌಮುದಿ ಉತ್ಸವ" ಎಂದು ಹೆಸರಿಸಿರುವುದನ್ನು ಕಾಣಬಹುದು. ಇನ್ನು ಬಲಿಪಾಂಡ್ಯಮಿಯ ಮಹತ್ವವೆಂದರೆ, ಅಸುರ ಚಕ್ರವರ್ತಿ ಬಲಿಯನ್ನು ವಿಷ್ಣು ವಾಮನವತಾರದಲ್ಲಿ ಪಾತಾಳಕ್ಕೆ ತಳ್ಳಿದ ಮೇಲೆ ಬಲಿ, ಭೂಲೋಕಕ್ಕೆ ಒಂದು ದಿನ ಬರಲು ಅನುಮತಿ ಕೇಳಿದನಂತೆ. ಆ ಒಂದು ದಿನವೇ ಬಲಿಪಾಂಡ್ಯಮಿ. ಈ ಎರಡು ಘಟನೆಗಳನ್ನು ಶಾಲೆಯಲ್ಲಿ ಓದಿಯೋ ಅಥವಾ ಕೇಳಿಯೋ ತಿಳಿದುಕೊಂಡಿದ್ದೇವೆ.

ಅಮೇರಿಕಾ ಆರ್ಥಿಕ ಮುಗ್ಗಟ್ಟಿಗೂ ನಮ್ಮ ದೀಪಾವಳಿಯ ಆಚರಣೆಗೆ ಸಂಬಂಧವಿದೆಯಾ..? ಕೆಳಗಿನ ಸಣ್ಣ ಉದಾಹರಣೆ ನೋಡೋಣ..

ಕನ್ನಡದ ಪ್ರಮುಖ ದಿನಪತ್ರಿಕೆಯೊಂದು " ಬ್ರಿಟನ್ : ಕಳೆಗುಂದಿದ ದೀಪಾವಳಿ" ಎಂಬ ಹೆಡ್‌ಲೈನ್ ಅಡಿ ಸುದ್ದಿಯೊಂದು ಪ್ರಕಟಿಸಿತ್ತು. ಬ್ರಿಟನ್‌ನಲ್ಲಿ ನೆಲಸಿರುವ ಭಾರತೀಯರಿಗೆ ದೀಪಾವಳಿ ಸಂಭ್ರಮ ಉಂಟುಮಾಡಿಲ್ಲವಂತೆ. ಯಾಕೆಂದ್ರೆ ಅಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಅಡ್ಡಿಯಾಗಿದೆಯಂತೆ. ಈ ಬಿಕ್ಕಟ್ಟು ಪಟಾಕಿಗಳು, ಚಿನ್ನಾಭರಣಗಳ ಕೊಂಡುಕೊಳ್ಳುವಿಕೆಯ ಶಕ್ತಿಯನ್ನು ಕುಂದಿಸಿದೆಯಂತೆ. ಹೀಗಾಗಿ ಉಡುಗೊರೆ ಕೊಡಲು ಬ್ರಿಟನ್ ಭಾರತೀಯರು ಹಿಂದೇಟು ಹಾಕಿದ್ದಾರೆ. ಚಿನ್ನ ಸೇರಿದಂತೆ ಹಲವು ಮಳಿಗೆಗಳು ಶೇ 50 ರಷ್ಟು ನಷ್ಟ ಅನುಭಿಸುತ್ತಿದ್ದಾರಂತೆ. ಅಲ್ಲದೆ, ವರ್ತಕರ ವ್ಯಾಪಾರದಲ್ಲಿ ಗಣನೀಯವಾಗಿ ಇಳಿಕೆಯಾಗಿದೆಯಂತೆ.

ಇನ್ನು ದೀಪಾವಳಿ ಭಾರತದವರ ಪಾಲಿಗೂ ಸಂತಸ ಉಂಟು ಮಾಡಿಲ್ಲ ಎನ್ನಬಹುದು. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ದೀಪಾವಳಿಯ ಆಚರಣೆ ಉತ್ತರ ಭಾರತಕ್ಕೆ ಹೋಲಿಸಿದರೆ ಕಡಿಮೆಯೇ ಎನ್ನಬಹುದು. ಅದರಲ್ಲೂ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಯುಗಾದಿಗಿರುವ ಪ್ರಾಮುಖ್ಯತೆ ದೀಪಾವಳಿಗಿಲ್ಲ.

ಇದಕ್ಕೆ ಪ್ರಮುಖ ಕಾರಣವೆಂದರೆ ದೀಪಾವಳಿ ಆಚರಣೆಗೆ ಅಧಿಕ ವೆಚ್ಚ ಎಂಬುದು. ಅದರಲ್ಲೂ ಕೋಲಾರ ಭಾಗದಲ್ಲಿ ದೀಪಾವಳಿಯನ್ನು ವರ್ಷ ಬಿಟ್ಟು ವರ್ಷ ಆಚರಿಸುತ್ತಾರೆ. ಪ್ರತಿ ವರ್ಷ ಆಚರಿಸಿದರೆ ಹಣದ ಸಮಸ್ಯೆ ಎದುರಾಗುವುದು ಎಂಬುದು ಈ ಭಾಗದವರ ಅಭಿಪ್ರಾಯ. ಮನೆಗೆ ಸುಣ್ಣ ಬಣ್ಣ ಬಳಿದು ಕಜ್ಜಾಯ ಸೇರಿದಂತೆ ಇತರೆ ಸಿಹಿ ಪದಾರ್ಥಗಳನ್ನು ತಯಾರಿಸಲು ಅಧಿಕ ಹೊರೆ ಬೀಳುತ್ತದೆ. ಅಲ್ಲದೆ, ಇಲ್ಲಿನ ಅವಿಭಕ್ತ ಕುಟುಂಬಗಳಲ್ಲಿ ಹಬ್ಬದಲ್ಲಿನ ಸಂತಸದ ಪ್ರಮಾಣ ತಗ್ಗಿದರೆ ಹಬ್ಬಕ್ಕೂ ಸಾಮಾನ್ಯ ದಿನಕ್ಕೂ ಯಾವುದೇ ವೆತ್ಯಾಸವಿರುವುದಿಲ್ಲ.

ಆದರೂ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸಿ, ಕಜ್ಜಾಯದ ಸವಿ ಸವಿದು ಸಂಭ್ರಮಿಸುವುದು ಮಾತ್ರ ಹಬ್ಬ ಈ ಭಾಗದಲ್ಲಿ. ಹೊರತಾಗಿ ಉಳಿಯುವುದೇನು ಇಲ್ಲ. ಸಂಪ್ರದಾಯಿಕ ಹಬ್ಬದ ಆಚರಣೆಗೆ ಕೋಲಾರ ಭಾಗದಲ್ಲಿ ತುಸು ಕಷ್ಟವೇ..

ಒಟ್ಟಿನಲ್ಲಿ ಬ್ರಿಟನ್‌ನ ಭಾರತೀಯರ ಪಾಲಿಗೆ ದೀಪಾವಳಿ ಹಣಕಾಸಿನ ತೊಂದರೆ ಉಂಟಾಗಿ ಹಬ್ಬದಾಚರಣೆಗೆ ತೊಡಕುಂಟಾಗಿದೆ. ಆದ್ರೆ, ಕೋಲಾರ ಸೇರಿದಂತೆ ರಾಜ್ಯದ ಗ್ರಾಮೀಣ ಜನತೆಗೆ ಇಂದಿಗೂ ಪ್ರತಿ ವರ್ಷ ದೀಪಾವಳಿ ಆಚರಣೆ ಮರೀಚಿಕೆಯಾಗಿಯೇ ಉಳಿದಿದೆ. ಅಂದರೆ ನಮ್ಮ ಜನತೆಗೆ ಮೊದಲಿನಿಂದಲೂ ಆರ್ಥಿಕ ಬಿಕ್ಕಟ್ಟು ಕಾಡ್ತಾನೆ ಇತ್ತೆನ್ನಿ. ಲಂಡನ್‌ ಅಂತಹ ಅಭಿವೃದ್ಧಿ ಹೊಂದಿದ ದೇಶಗಳಲಲ್ಲೇ ಕೊಳ್ಳುವು ಶಕ್ತಿ ಕುಂದಿರುವುದು ಹಬ್ಬಕ್ಕೆ ಮುಕ್ಕುಂಟಾದರೆ, ಇನ್ನೂ ಭಾರತದಂತಹ ಅಭಿವೃದ್ಧಿ ಶೀಲ ದೇಶದ ಸ್ಥಿತಿ ನರಕಾಸುರನಿಗೇ ಪ್ರೀತಿ...

- ಬಾಲರಾಜು . ಡಿ.ಕೆ

Rating
No votes yet