ದೆವ್ವದ ನೆನೆಪಲಿ..

ದೆವ್ವದ ನೆನೆಪಲಿ..

ಮೂಡಣ ಗಾಳಿಯ ತಣ್ಣನೆ ದಿನಗಳ

ನೀರವ ನಿಶ್ಶಬ್ದ ರಾತ್ರಿಯ ಹೊತ್ತಲಿ

ನಿದ್ದೆಯ ಕೆಡಿಸುವ ಕಿವಿಗಡಚಿಕ್ಕುವ

ಕಿವಿಗಳ ಗುರ್ಮಿಯು ಸಿಡಿಯುವ ಪರಿಯಲಿ

ರುಮುರುಮು ರುಮ್ಮಿಯ ತೀಡುವ ಹೊಡೆತಕೆ

ಊರಿನ ದೇವತೆ ದುರುಗೆಯ ಪೌಳಿಯ

ಗುಡಿಯಲಿ ನಡೆದಿಹ ದೇವಿಯ ಹೊರಡಿಸೊ

ಪೂಜಾರಿ ಕೇಕೆಯ ಕೇಳಿದ ಬಳಿಕವೆ

ಮಲಗದೆ ನಡೆದವು ಗುಂಪಲಿ ಬಿಡದೆ

ಹಳ್ಳಿಯ ಹೈಕಳು ಪೌಳಿಯ ಬಳಿಯಲಿ

 

ಹಳ್ಳಿಗೆ ವಿದ್ಯುತ್ ಬಾರದ ದಿನಗಳು

ಬೀದಿಯ ದೀಪಗಳಿಲ್ಲದ ರಾತ್ರಿಯು

ಚುಕ್ಕೆಯ ಬೆಳಕಲಿ ದಾರಿಯ ಸವೆಸುತ

ದೇವಿಯ ಗ್ರಾಮ ಸಂಚಾರದಬ್ಬರ

ದೆವ್ವವ ಬಿಡಿಸುವ ಬರ್ಬರ ನೋಟವ

ನೋಡುವ ತವಕದಿ  ನೆರೆದೆವು ಗುಂಪಲಿ

ಭಯವನು ತೋರದ ತೋರಿಕೆ ಧೈರ್ಯದ

ಹಳ್ಳಿಯ ಹೈದರು ಪೌಳಿಯ ಬಳಿಯಲಿ 

 

ನಿಂಬೆಯ ಹಣ್ಣಿನ ಸರವದು ಕೊರಳಲಿ

ಹೆಗಲಲಿ ಚರ್ಮದ ಛಡಿಯನು ಏರಿಸಿ

ಕುಂಕುಮ ಬಳಿದಿಹ ಕರ್ರನೆ ಮುಖದಲಿ

ಹಣೆಯಲಿ ಹರಿಷಿಣ ಕೆಂಪಿನ ಕಂಗಳ

ಕೈಯಲಿ ಬೇವಿನ ಸೊಪ್ಪಿನ ಹಿಡಿಕೆಯು

ಗರಗರ ತಿರುಗುತ ಕೇಕೆಯ ಹಾಕುವ

ಪೂಜಾರಿ ಕುಣಿತಕೆ ರುಮ್ಮಿಯ ಬಡಿತಕೆ

ಎದೆಯಲಿ ಡವಡವ ಆದರು ನೋಡುವ

ಸೆಳೆತದ ಸನ್ನಿಯ ಹಳ್ಳಿಯ ಹುಡುಗರು

ನೆರೆದೆವು ದುರ್ಗೆಯ ಪೌಳಿಯ ಬಳಿಯಲಿ

 

ಊರಿನ ಗೌಡರು ಬಂದರು ಸರಿಯಿರಿ

ದಾರಿಯ ಮಾಡಲು ಪಂಜಿನ ಚಾರರು

ರುಮ್ಮಿಯ ಬಡಿತವು ಪೂಜಾರಿ ಕೇಕೆಯು

ಮುಗಿಲನು ಮುಟ್ಟಿತು ಭಕ್ತರು ಕೂಗಲು

ಗೌಡರು ವಂದಿಸಿ ಪೂಜೆಯ ಮುಗಿಸಲು

ಪಲ್ಲಕ್ಕಿ ಹೊತ್ತಿಹ ಯುವಕರು ಜೋರಲಿ

ಕುಣಿದರು ತೊನೆಯುತ ರುಮ್ಮಿಯ ತಾಳಕೆ

ಗರಗರ ತಿರುಗುತ ಸಿಕ್ಕಿದ ದಿಕ್ಕಲಿ

ಓಟವ ಕೀಳಲು ನಾಗಾಲೋಟದಿ 

ಹಿಂದೆಯೆ ಓಡಿತು ಭಕ್ತರ ಗುಂಪು

 

ಮೂಲೆಯ ಮನೆಯ ಹೊರಗಿನ ಕಂಬಕೆ

ಢಿಕ್ಕಿಯ ಕೊಟ್ಟಿತು ಪಲ್ಲಕ್ಕಿ ಬೊಂಬಲಿ

ದೆವ್ವವ ಹಿಡಿದು ಬಡಿದಳು ದೇವಿಯು

ಎನ್ನುತ ಭಕ್ತರು ಹರುಷದಿ ಕೂಗಲು

ಕರ್ಕಶ ಕೂಗಿನ ಕೇಕೆಯ ದನಿಯಲಿ

ಪೂಜಾರಿ ಬೀಸಿದ ಛಡಿಯನು ಬಯಲಲಿ

ಹಿಡಿದನು ದೆವ್ವವ ಕಟ್ಟುತ ದಾರದಿ

ಹಿಡಿದಿಹ ದೆವ್ವದ ಬಿಡುಗಡೆ ಮಾಡಲು

ಹೊರಟಳು ದೇವಿಯು ಊರಿನ ಗಡಿಗೆ

ಜುಳುಜುಳು ಹರಿಯುವ ಹಳ್ಳದ ಕಡೆಗೆ

 

ಪಂಜಿನ ಬೆಳಕಲಿ ಹಳ್ಳದ ಬದಿಯ

ಕಟ್ಟೆಯ ಮೇಲೆಯೆ ದೇವಿಯ ಪಲ್ಲಕ್ಕಿ

ದೆವ್ವವ ಬಿಡಿಸುವ ಪೀಠಿಕೆ ಕುಣಿತದಿ

ಛಡಿಯನು ಬೀಸುತ ಕರೆದನು ಪೂಜಾರಿ

ಏರಿದ ದನಿಯಲಿ ಮೊದಲನೆ ದೆವ್ವವ

ಕಣ್ಗಳ ತಿರುವುತ ಲಟಿಕೆಯ ಮುರಿಯುತ

ಕೆದರಿದ ಕೂದಲ ತೊನೆಯುತ ಬಂದಳು

ಅತ್ತೆಯ ಕಾಟದಿ ಬೇಸತ್ತ ಗೌರಿಯು

ಮುಂದಲೆಗೂದಲ ಹಿಡಿದನು ಪೂಜಾರಿ

ಬೇವಿನ ಸೊಪ್ಪಲಿ ರಪರಪ ಬಡಿಯುತ

ಕಣ್ಗಳ ಅಗಲಿಸಿ ಹೊಗೆಯನು ಏಳಿಸಿ

ದೆವ್ವದ ಪ್ರವರವ ಕೇಳಿದ ಜೋರಿಗೆ

ಕೀರಲು ದನಿಯಲಿ ಕೂಗಿದ ದೆವ್ವವು

ನಾ ಪೇರು ರಮಣಮ್ಮ ಎನ್ನಲು

ಗುಂಪಲಿ ಎದ್ದಿತು ಗುಸುಗುಸು ಮಾತು

ಬಾವಿಗೆ ಬಿದ್ದ ತೆಲುಗರ ರಮಣಮ್ಮ

ದೆವ್ವವೆ ಆಗಿ ಹಿಡಿದಳೆ ಗೌರಿಯ

ಗೌರಿಯ ಅತ್ತೆಗೆ ನಡುಗುವ ಸರದಿಯು

ರಮಣಮ್ಮನ ಜೊತೆಯಲೆ ಸೇರಿ

ಮುದ್ದಿನ ಸೊಸೆಗೆ ಮಾಟವ ಮಾಡಿ

ಮದ್ದನು ತಿನಿಸಿದ ಪಾಪದ ಪ್ರಗ್ನೆಗೆ

ಎದ್ದಳು ತಟ್ಟನೆ ಗೌರಿಯ ಸೇವೆಗೆ

ಪೂಜಾರಿ ಕೇಳಿದ ಬಂದದ್ದೇಕೆ

‘ನಾಕು ತೋಡು ಕಾವಾಲಿ’ ಅಂದುಕೆ

ಗೌರಿ ‘ಅತ್ತನು ತೀಸಿಕೆಳ್ತಾನು’ ಎನ್ನಲು

ಗೌರಿಯ ಅತ್ತೆಯು ಕುಸಿದಳು ಬೆವರುತ

ಪೂಜಾರಿ ಕಾಲನು ಹಿಡಿದಳು ಭಯದಲಿ

ಇವತ್ತೇ ಹೋಗ್ಬೇಕು ಚೀರಿದ ಪೂಜಾರಿ

ಗೌರಿಗೆ ಛಡಿಯಲಿ ಬಿಡದೆ ಬಾರಿಸೆ

ಪೋತಾನು ಎನ್ನುತ ಧೊಪ್ಪನೆ ಬಿದ್ದಳು

ಹಳ್ಳದ ನೀರಲಿ ಸ್ನಾನವ ಮಾಡಿಸಿ

ಉಟ್ಟಿಹ ಬಟ್ಟೆಯ ಅಲ್ಲಿಯೇ ಬಿಟ್ಟು

ಹೊಸಸೀರೆಯ ಉಡಿಸಿ ಹಿಂದಕೆ ನೋಡದೆ

ಕಾಟವ ಕೊಡದಿರಿ ನಡೆಯಿರಿ ಮನೆಗೆ

ದೆವ್ವವು ಬಾರದು ಎಂದನು ಪೂಜಾರಿ

 

ಉಳಿದಿಹ ದೆವ್ಗಳ  ಬಿಡಿಸುವ ಹೊತ್ತಿಗೆ

ಕೋಳಿಯು ಕೂಗಿತು ಬೆಳ್ಳಿಯು ಮೂಡಿತು

ಗುಂಪದು ಕರಗಿತು ರೋಚಕ ಮಾತಲಿ

ನಾವೂ ನಡೆದೆವು ಜೋರಿನ ಮಾತಲಿ

ತೆಲುಗಿನ ಗಂಧವೆ ಇಲ್ಲದ ಗೌರಿಯು

ಬಳಬಳ ತೆಲುಗಲಿ ಉತ್ತರ ಹೇಳಲು

ಅರಿವಿಗೆ ಬಾರದೆ ದೆವ್ವದ ಭಯದಲಿ

ಬೆನ್ನಿನ ಹುರಿಯಲೆ ಛಳಿಯದು ಏಳಲು

ನೆನೆದೆವು ಮನದಲಿ ಹನುಮನ ನಾಮವ

 

ಹಳ್ಳಿಯ ದೇವಿಯ ಗ್ರಾಮ ಸಂಚಾರ

ರುಮ್ಮಿಯ ಬಡಿತದಿ ದೆವ್ವವ ಬಿಡಿಸುವ

ಜಯಪ್ರಕಾಶಿತ ಕವನದ ರೂಪದ

ಮಾಗಿಯ ರಾತ್ರಿಯ ಅನುಭವ ಕಥನ.

Rating
No votes yet