ದೆವ್ವವೆಂಬ ದೈವ ಮತ್ತು ಗಂಧರ್ವರು ಸಿನೆಮವೆಂಬ ಬದುಕಿನ, ಅಕಾಲಿಕ ಮರಣವೆಂಬ ಸಿನೆಮವನ್ನು ಅರ್ಧಕ್ಕೆ ನಿಲ್ಲಿಸಿದಂತೆ! --ಗಾದೆಗೊಂದು ಗುದ್ದು ೭
(೩೧) ದೇವರ ಇರುವಿಕೆ ಒಂದು ವಾಸ್ತವ. ಆದರೆ ಆತನ ಇರುವಿಕೆಯನ್ನು ಒಪ್ಪಿಕೊಂಡಾತನ ಸೃಷ್ಟಿಕರ್ತನು ದೇವನೇ ಎಂಬುದೊಂದು ವಿರೋಧಾಭಾಸ. ಆತ ಇರಲಿ ಬಿಡಲಿ, ದೈವಕಾರ್ಯವೆಂಬುದೇ ಒಂದು ವಿರೋಧಾಭಾಸ!
(೩೨) ದೆವ್ವವಿಲ್ಲದೆ ದೇವರು ನಾಲಾಯಕ್ಕೆನಿಸಿಬಿಡುತ್ತಾನೆ. ದೆವ್ವವಿದ್ದಲ್ಲಿ ದೇವರು ಕಾರ್ಯಬಾಹುಳ್ಯದಲ್ಲಿ ನಿರತನಾಗಿಬಿಡುತ್ತಾನೆ. ಎರಡೂ ನಿಟ್ಟಿನಿಂದಲೂ ದೇವರು ನಮಗೆ ಅರ್ಥಪೂರ್ಣವಾಗಿ ಲಭ್ಯವಿಲ್ಲ. ಮತ್ತು ಆತ ಬಿಟ್ಟಿಯಾಗಿ ಲಭ್ಯನಲ್ಲ!
(೩೩) "ನನಗೆ ಗಂಧರ್ವನನ್ನು ತೋರಿಸು. ಆಗ ಮಾತ್ರ ಆತನನ್ನು ಚಿತ್ರಿಸಬಲ್ಲೆ" ಎಂದಿದ್ದಾನೆ ಇಂಪ್ರೆಷನಿಸ್ಟ್ ಕಲಾವಿದನೊಬ್ಬ. ಯಾರೂ ಚಿತ್ರಿಸದಿದ್ದಲ್ಲಿ ಗಂಧರ್ವನು ಇರುವುದಾದರೂ ಹೇಗೆ ಸಾಧ್ಯ?!
(೩೪) ಸಿನೆಮವೊಂದನ್ನು ವೀಕ್ಷಿಸುವುದೆಂದರೆ ಅಕ್ಷರಶಃ ಮತ್ತೊಬ್ಬರ ಜೀವನಚಕ್ರವನ್ನು ಸಂಕ್ಷಿಪ್ತ ಕಾಲದಲ್ಲಿ ಸ್ವತಃ ಬದುಕುವುದೇ ಆಗಿದೆ.
ನೈಜಕಾಲವನ್ನು ಭ್ರಮಾತ್ಮಕ ನೈಜತೆಗೆ ಭಾಷಾಂತರಿಸುವುದನ್ನೇ ಸಿನೆಮ ಎನ್ನುತ್ತೇವೆ.
ನೈಜ ಬದುಕೆಂದರೆ ಸಂಸ್ಕರಿತವಾಗದ, ಸಂಪಾದಿತವಾಗದ ಸಿನೆಮ.
ವ್ಯತ್ಯಾಸವೇನೆಂದರೆ, ಈ ಸಿನೆಮ ಮುಗಿದಾಗ ಸಿನೆಮಮಂದಿರದಿಂದ ನಾವು ಹೊರಕ್ಕೆ ಬರಲಾಗದಷ್ಟೇ!
(೩೫) ಅಕಾಲಿಕವಾಗಿ ಮರಣವನ್ನಪ್ಪುವುದೆಂದರೆ ವಿದ್ಯುತ್ ಕೊರತೆಯಿಂದಾಗಿ ಸಿನೆಮ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದಂತೆ.
ಸಿನೆಮದ ಪುನರ್-ಪ್ರದರ್ಶನದ ಸಾಧ್ಯತೆಯಲ್ಲಿ ನಂಬಿಕೆ ಇರಿಸಿಕೊಂಡವರು ಸೃಷ್ಟಿಸಿದ ನಂಬಿಕೆಯ ವ್ಯವಸ್ಥೆಯನ್ನೇ ಪುನರ್ಜನ್ಮ ಎನ್ನುತ್ತೇವೆ!
Comments
ಉ: ದೆವ್ವವೆಂಬ ದೈವ ಮತ್ತು ಗಂಧರ್ವರು ಸಿನೆಮವೆಂಬ ಬದುಕಿನ, ಅಕಾಲಿಕ ...