ದೇವರು ಮತ್ತು ಪಾಪ

ದೇವರು ಮತ್ತು ಪಾಪ

ಅದು ತೀರ ಹಳ್ಳಿಯೇನೂ ಅಲ್ಲ. ಉಡುಪಿಗೂ ಕುಂದಾಪುರಕ್ಕೂ ನಟ್ಟ ನಡುವೆ ಇದ್ದ ಊರು. ಗುಂಡ್ಮಿ, ಪಾಂಡೇಶ್ವರ, ಐರೋಡಿ ಎಂದೆಲ್ಲ ನಾಲ್ಕಾರು ಗ್ರಾಮಗಳು ಸೇರಿ ಒಂದು ಊರು ಆದ ಹಾಗಿತ್ತದು. ನನ್ನ ಬಾಲ್ಯದ ಬಹಳ ಮುಖ್ಯ ಎನ್ನಬಹುದಾದ ದಿನಗಳನ್ನೆಲ್ಲ ನಾನು ಕಳೆದಿದ್ದು ಇಲ್ಲೇ. ನಾನು ಹೈಸ್ಕೂಲಿಗೂ ಬರುವ ಮೊದಲಿನ ಕೆಲವು ನೆನಪುಗಳನ್ನು ಹೇಳುತ್ತೇನೆ. ನಮ್ಮ ಮನೆಗೆ ಹತ್ತಿರದಲ್ಲೇ ಅಮ್ಮನ ಮನೆ ಎಂದು ನಾವೆಲ್ಲ ಕರೆಯುತ್ತಿದ್ದ ಒಂದು ಮನೆಯಿತ್ತು. ಊರಿಗೇ ಬಹುಷಃ ಎರಡನೆಯ ಅಥವಾ ಮೂರನೆಯ ಶ್ರೀಮಂತ ಕುಟುಂಬ ಇದ್ದೀತದು. ಆದರೂ ಯಾರೂ ಆ ಮನೆಯ ಯಜಮಾನನ ಹೆಸರಿನಿಂದ ಆ ಮನೆಯನ್ನು ಗುರುತಿಸುತ್ತಿರಲಿಲ್ಲ. ಎಲ್ಲರಿಗೂ ಅದು ಅಮ್ಮನ ಮನೆ. ಯಜಮಾನರ ಮಡದಿಗೆ ಪ್ರತಿ ಶನಿವಾರ ಎಂದು ನೆನಪು, ದೇವಿ ಮೈಮೇಲೆ ಬರುತ್ತಿದ್ದಳು. ತೀರ ಮೊದಲು ಆಕೆ ಮನೆಯೆದುರಿನ ವಿಶಾಲವಾದ ಜಗಲಿಯಲ್ಲೇ ಅತ್ತಿತ್ತ ನಡೆದಾಡುತ್ತ ಹಳ್ಳಿಯ ಮುಗ್ಧ ಮಂದಿಯ ಸಮಸ್ಯೆ, ಕಷ್ಟ ನಷ್ಟಗಳಿಗೆ ತನಗೆ ತೋಚಿದ ಪರಿಹಾರ, ಉಪಶಮನ ಸೂಚಿಸುತ್ತಿದ್ದಳು. ಜಗಲಿಗೆ ಸಿಮೆಂಟು ಹಾಕಲಾಗಿತ್ತು. ಮೇಲೆ ಜಿಂಕ್ ಶೀಟುಗಳನ್ನು ಹೊದೆಸಲಾಗಿತ್ತು. ಮನೆಯೆದುರಿನ ದನಕರುಗಳಿದ್ದ ಹಟ್ಟಿಗೂ ಮನೆಗೂ ನಡುವಿನ ಜಾಗವನ್ನೆಲ್ಲ ಇದು ಆಕ್ರಮಿಸಿದ್ದರೂ ನೆರೆದ ಜನಜಂಗುಳಿಗೆ ಸಾಲುತ್ತಿರಲಿಲ್ಲ. ನಂತರ ಕ್ರಮೇಣ ಜನ ಹೆಚ್ಚಿ, ಅಮ್ಮನ ವಯಸ್ಸೂ ಹೆಚ್ಚಿ, ಆಕೆ ಒಳಗೆ ಕುರ್ಚಿಯ ಮೇಲೆ ಕೂತಿರುವುದು ಸುರುವಾಯಿತು. ಜೊತೆಗೆ ಇಬ್ಬರು ಮೂವರು ಬಂಟರು. ಪ್ರಸಾದ ಕೊಡಲು, ತೀರ್ಥ ಎರಚಲು, ಅಮ್ಮನ ನುಡಿಗಳನ್ನು ಬಿಡಿಸಿ ಹೇಳಲು ಇತ್ಯಾದಿ. ಒಳಗೆ ಇದೆಲ್ಲ ನಡೆಯುತ್ತಿರುವಾಗ ಅಮ್ಮನ ಗಂಡ, ಮನೆಯ ಯಜಮಾನ, ಬಿಳಿಯ ಸಿಲ್ಕಿನ ಪಂಚೆ, ಶರಟು ತೊಟ್ಟು, ಅದ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಎಲೆ ಅಡಿಕೆ ಜಗಿಯುತ್ತ, ಬಂದವರಲ್ಲಿ ಅಕಸ್ಮಾತ್ ಪರಿಚಯದ ಯಾರಾದರೂ ಇದ್ದರೆ ಅವರ ನಮಸ್ಕಾರ ಸ್ವೀಕರಿಸುತ್ತ ಎಲ್ಲೋ ದೃಷ್ಟಿ ನೆಟ್ಟು ಕೂತಿರುತ್ತಿದ್ದುದು ನೆನಪಿದೆ. ಶನಿವಾರವೆಲ್ಲ ಆದಷ್ಟೂ ಆತ ಮನೆಯ ಹೊರಗೇ ಇರುತ್ತಿದ್ದರು ಅನಿಸುತ್ತದೆ. ಅವರಿಗೆ ಆಗ ಏನು ಅನಿಸುತ್ತಿತ್ತೋ. ಅವರ ದಾಂಪತ್ಯ ಅದು ಹೇಗಿತ್ತೋ, ಹೆಂಡತಿಯನ್ನು ಎಲ್ಲರೂ ದೇವರೆಂದೇ ತಿಳಿದಿದ್ದಂಥ ಸಂದರ್ಭದಲ್ಲಿ ಆಕೆಯ ಗಂಡನಾಗಿ ಆತನ ಮನೋಧರ್ಮ ಎಂಥದಿತ್ತೋ ನನಗೆ ಎಂದಿಗೂ ಕುತೂಹಲವೇ.

ಅವರಿಗೊಬ್ಬ ಮಗನಿದ್ದ. ಮನೆಯ ಪರಿಚಾರಿಕೆಗೆ, ಇತ್ಯಾದಿಗೆ ಎಂದು ಮನೆಯಲ್ಲೇ ಮನೆಯವರಂತೆಯೇ ಇರುತ್ತಿದ್ದ ಹಲವರ ಜೊತೆ ಅವನೂ ಇದ್ದ. ಕೊಂಚ ಪೆದ್ದನಂತೆ ಅವನು ಕಾಣಿಸುತ್ತಿದ್ದ. ಅದೇನೇ ಇದ್ದರೂ ಆಗಲೂ ನಮಗೆಲ್ಲ ಅಲ್ಲಿ ತುಂಬ ಮನರಂಜನೆ ಸಿಗುತ್ತಿತ್ತು. ಅಲ್ಲಿ ಮೈಮೇಲೆ ಬರುವವರು, ಭೂತ ಹಿಡಿದವರು, ತಲೆಕೆಟ್ಟವರು ಎಲ್ಲ ತುಂಬ ಮಂದಿ ಬರುತ್ತಿದ್ದುದರಿಂದ ಮತ್ತು ಅಮ್ಮನ ಸಹಾಯಕರಾಗಿ ನಿಲ್ಲುತ್ತಿದ್ದ ಇಬ್ಬರು ಮೂವರು ಬೇಕಾದ ಬೇಡದ ಪ್ರಶ್ನೆ, ಉಪಪ್ರಶ್ನೆ, ಚಿತಾವಣೆ ಎಲ್ಲ ಮಾಡುತ್ತಿದ್ದುದರಿಂದ ನಮಗಿಂತ ದೊಡ್ಡವರಿಗೂ ಅಲ್ಲಿ ಸಾಕಷ್ಟು ಮನರಂಜನೆ ಸಿಗುತ್ತಿದ್ದುದರಲ್ಲಿ ಅನುಮಾನವಿಲ್ಲ. ಇನ್ನೊಬ್ಬರ ಮನೆಯ ಗುಟ್ಟಿನ ಸಂಗತಿಗಳೆಲ್ಲ ಅಲ್ಲಿ ಗಟ್ಟಿಸ್ವರದಲ್ಲಿ ಬಯಲಾಗುತ್ತಿದ್ದುದು ಇನ್ನೊಂದು ಆಕರ್ಷಣೆ. ಆದರೆ ಪರರಿಗೂ ನಮ್ಮ ಹಾಗೇ ನೋವುಗಳು, ಸಂಕಟಗಳು ಇವೆ ಎಂಬ ಸತ್ಯ ಅವರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿತ್ತೆ, ಗೊತ್ತಿಲ್ಲ. ಇನ್ನೂ ವಿಚಿತ್ರವೆಂದರೆ ಈಚೆಗೆ ಸಿಕ್ಕಿದ ಬಾಲ್ಯದ ಗೆಳೆಯನೊಬ್ಬ ಅಲ್ಲಿ ನಾವೆಲ್ಲ ಲೈನ್ ಹೊಡೆಯುತ್ತಿತ್ತಲ್ಲವ, ಚಂದಚಂದದ ಹುಡುಗಿಯರು ಬರುತ್ತಿದ್ದರಲ್ಲವ ಎಂದೆಲ್ಲ ಹೇಳಿದ್ದು ಕೇಳಿ ವಿಸ್ಮಯವಾಯಿತು! ಆ ವಯಸ್ಸಿನಲ್ಲಿ ಅಂಥದ್ದೆಲ್ಲ ನಮ್ಮ ತಲೆಯಲ್ಲಿರಲು ಸಾಧ್ಯವೇ ಇರಲಿಲ್ಲ ಎಂದು ನಂಬಿದ್ದ ನನ್ನ ನಂಬುಗೆಗೇ ಆತ ಕೊಡಲಿ ಇಟ್ಟಿದ್ದ!

ಅಲ್ಲಿ ಕೊಡುತ್ತಿದ್ದ ಪ್ರಸಾದ, ವಿಧಿಸುತ್ತಿದ್ದ ಮತ್ತೆ ಬರಬೇಕಾದ ದಿನಾಂಕದ ವಾಯದೆ, ಕೊನೆಯಲ್ಲಿ ಹಂಚುತ್ತಿದ್ದ ವಿಧವಿಧವಾದ ಹೂವುಗಳಿಗೆ, ಪ್ರಸಾದಕ್ಕೆ ನಡೆಯುತ್ತಿದ್ದ ಸ್ಪರ್ಧೆ ಎಲ್ಲ ನೆನೆದರೆ ಅಚ್ಚರಿಯಾಗುತ್ತದೆ. ಬೀಡಿಯ ತುದಿಯನ್ನು ಗರ್ಭಗುಡಿಯಲ್ಲಿ ಸುಟ್ಟು ತಯಾರು ಮಾಡಿ ಇಡಲಾಗುತ್ತಿತ್ತು. ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಅದೇ ಪ್ರಸಾದ. ಇಂತಿಷ್ಟು ದಿನ, ದಿನಕ್ಕೆ ಒಂದಾವರ್ತಿಯೋ ಎರಡು ಬಾರಿಯೋ ಆ ಬೀಡಿಯನ್ನು ಸ್ವಲ್ಪ ಸ್ವಲ್ಪವೇ ಸುಟ್ಟು ಒಂದು ಕಾಗದದಲ್ಲಿ ಅದರ ಬೂದಿಯನ್ನು ಶೇಖರಿಸಿ ಅದನ್ನು ಸೇವಿಸುವುದು ಕ್ರಮ. ಇದೇ ಬೀಡಿಯನ್ನು ಮನೆಯ ಜಂತಿಗೆ ಕಟ್ಟಲು ಕೊಡುವುದೂ ಇತ್ತು. ಅದನ್ನು ಕಾಲಕಾಲಕ್ಕೆ ಹೊಸದಕ್ಕೆ ಬದಲಾಯಿಸಬೇಕಿತ್ತು. ಇನ್ನೊಂದು ಗೋಪೀಚಂದನದ ಹುಡಿ. ವೈಷ್ಣವರು ಇಂದಿಗೂ ಮೈಮೇಲೆ ಬರೆದುಕೊಳ್ಳುವ ನಾಮಕ್ಕೆ ಇದನ್ನು ಬಳಸುತ್ತಾರೆ. ಇದನ್ನು ಕೂಡಾ ಕ್ರಮಬದ್ಧವಾಗಿ ತಿನ್ನಬೇಕಾಗುತ್ತಿತ್ತು. ಉಳಿದಂತೆ ಪ್ರತಿ ಶನಿವಾರ ದಿನವೂ ಸುಮಾರು ಮೂರುಗಂಟೆಯಿಂದ ರಾತ್ರಿ ಏಳು, ಏಳೂವರೆಯ ವರೆಗೆ ನಡೆಯುತ್ತಿದ್ದ ದರ್ಶನ, ವರ್ಷಕ್ಕೊಮ್ಮೆ ನಡೆಯುತ್ತಿದ್ದ ವಸಂತ (ತುಲಸೀ ಕಟ್ಟೆಗೆ ನಡೆಸುವ ಒಂದು ಪೂಜಾವಿಧಿ), ಕೊಣ್ಕಿ (ಆಹೋರಾತ್ರಿ ತುಲಸೀಕಟ್ಟೆಯ ಸುತ್ತ ಸುಮಾರು ಹದಿನೈದು ಮಂದಿ ವಿಧವಿಧವಾಗಿ ಕುಣಿಯುತ್ತ, ಆ ನರ್ತನಕ್ಕೆ ಬೇಕಾಗಿ ನುರಿತ ಹಾಡುಗಾರನೊಬ್ಬ ಕಥಾನಕವೊಂದನ್ನು ರಾಗವಾಗಿ ಹಾಡುತ್ತ, ಕೊನೆಯಲ್ಲಿ ಮೈ ಜುಂ ಎನ್ನಿಸುವ ಕೋಲಾಟವಾಡಿ ಮುಗಿಸುವ ಒಂದು ಹರಕೆ. ಮುಂಜಾವದಲ್ಲಿ ಊಟ ಇರುತ್ತದೆ), ಶನಿದೇವರ ಕತೆ (ಇದೂ ಆಹೋರಾತ್ರಿ ಮತ್ತು ಮುಂಜಾನೆ ಊಟ) ಆ ಮನೆಯನ್ನು ನಮ್ಮ ಜಾಗ್ರತ, ಸುಪ್ತ ಪ್ರಜ್ಞೆಗಳಲ್ಲಿ ಸಂಸ್ಕೃತಿಯ ಒಂದು ಕೇಂದ್ರವೇ ಆಗಿರುವಂತೆ ರೂಪಿಸಿತ್ತೆನ್ನಬೇಕು.

ಅಲ್ಲಿಗೆ ರೆಗ್ಯುಲರ್ ಆಗಿ ಬರುವ ಭಕ್ತರಿರುವಂತೆಯೇ ರೆಗ್ಯುಲರ್ ಆದ, ದೀರ್ಘಕಾಲೀನ ಸಮಸ್ಯೆ ಹೊತ್ತವರೂ ಇದ್ದರು. ಅವರು ಬರದಿದ್ದರೆ ಆವತ್ತು ಎಲ್ಲರಿಗೂ ಬೇಜಾರಾಗುವಷ್ಟು ಮಂದಿ ಅವರಿಗೆ ಹೊಂದಿಕೊಂಡು ಬಿಟ್ಟಿದ್ದರು.

ಇದನ್ನೆಲ್ಲ ಯಾಕೆ ಹೇಳಿದೆನೆಂದರೆ, ಇತ್ತೀಚೆಗೆ ಒಂದು ಕಾದಂಬರಿ ಓದಿದೆ. ಸ್ವೀಡಿಶ್ ಮೂಲದ ಈ ಸಿಬಿಲ್ ಎಂಬ ಹೆಸರಿನ (ಪ್ರವಾದಿನಿ ಎಂಬ ಅರ್ಥವಂತೆ) ಕಾದಂಬರಿಯನ್ನು ಕನ್ನಡಕ್ಕೆ ತಂದವರು ಡಿ.ಆರ್.ಮಿರ್ಜಿ. ೧೯೫೧ರ ನೊಬೆಲ್ ವಿಜೇತ ಕೃತಿಯ ಮೂಲ ಕೃರ್ತೃ ಪಾರ್ ಲಾಗರ್ಕ್ವಿಸ್ಟ್. ಈ ಕಾದಂಬರಿಯಲ್ಲಿ ಏಸುವಿನ ಹುಟ್ಟು, ಬದುಕು ಮತ್ತು ಸಾವನ್ನು ಹೋಲುವ ವಿವರಗಳೇ ಬರುವುದು ಕುತೂಹಲಕರ. ಇವತ್ತು ನಮ್ಮ ದೇಶದಲ್ಲಿ ಇಂಥ ಒಂದು ಕಾದಂಬರಿಯನ್ನು ಶ್ರೀರಾಮನ ನೆರಳಿನಲ್ಲೋ, ಕೃಷ್ಣನ ಕುರಿತೋ ಬರೆದರೆ ಫತ್ವಾ ಹೊರಟೀತು! ಮುಟ್ಟುಗೋಲು, ಕ್ಷಮಾಯಾಚನೆ ಎಲ್ಲ ಅಗತ್ಯವಾದೀತು! ಪೋಲಂಕಿ ರಾಮಮೂರ್ತಿಯವರ ಸೀತಾಯಣದ ನೆನಪಿರಬಹುದು. ಮತ್ತೆ ಪೋಲಂಕಿಯವರು ಬರೆಯುವುದನ್ನೇ ಬಿಟ್ಟುಬಿಟ್ಟರು, ಇರಲಿ. ನಾವು ಬರಬರುತ್ತ ನಮ್ಮನ್ನು, ನಮ್ಮದೆನ್ನುವುದನ್ನು ನಮಗಾಗಿಯಾದರೂ ನಾವೇ ವಿಮರ್ಶಿಸಿಕೊಳ್ಳುವುದನ್ನೂ, ಆ ಮೂಲಕ ನಮ್ಮನ್ನು, ನಮ್ಮ ಬದುಕನ್ನು ಅರ್ಥಮಾಡಿಕೊಳ್ಳುವುದನ್ನೂ ತಪ್ಪು, ಅಪರಾಧ ಎಂದು ತಿಳಿಯುತ್ತೇವೆಯೆ?

ಶಿಲುಬೆಹೊತ್ತು ಬೆಟ್ಟವೇರುತ್ತಿದ್ದ, ಮರಣದಂಡನೆಗೆ ಗುರಿಯಾದ ಒಬ್ಬ ವ್ಯಕ್ತಿಗೆ ಹಾದಿಯಲ್ಲಿ ಆಯಾಸ ಪರಿಹಾರಕ್ಕೆಂದು ಒಂದು ಘಳಿಗೆ ತನ್ನ ಮನೆಯ ಗೋಡೆಗೆ ತಲೆಯಾನಿಸಲು ಬಿಡದೆ ಗದರಿದ ತಪ್ಪಿಗೆ ಆತ ಶಾಪ ಕೊಡುತ್ತಾನೆ. ನೀನು ಸಾವಿಲ್ಲದೆ ನಿರಂತರ ಅಶಾಂತಿಯಿಂದ ತೊಳಲಾಡುತ್ತ, ನಿಂತಲ್ಲಿ ನಿಲಲಾರದೆ ಜಗವೆಲ್ಲ ಸುತ್ತುತ್ತಿರುವಂತಾಗಲಿ ಎಂಬುದೇ ಶಾಪ. ಮುಂದೆ ಹಾಗೆ ಶಪಿಸಿದವನು ಸಾಧಾರಣ ಮನುಷ್ಯನಾಗಿರದೆ ದೇವರ ಮಗನಾಗಿದ್ದ ಎಂಬುದೂ ತಿಳಿಯುತ್ತದೆ. ದೇವರೂ ಸಿಟ್ಟಿಗೆ, ಅಸಹನೆಗೆ ಹೊರತಲ್ಲವಾದರೆ, ಅವನೂ ನಮ್ಮ ನಿಮ್ಮಂತೆ ಶಾಪಕೊಡುವವನಾದರೆ ನಮಗೂ ಅವನಿಗೂ ವ್ಯತ್ಯಾಸವೇನು? ಮನುಷ್ಯ ಸಹಜ ದೌರ್ಬಲ್ಯಗಳೇಕೆ ಅವನಿಗೆ ಅರ್ಥವಾಗುವುದಿಲ್ಲ ಎಂದು ನಾವು ತಿಳಿಯಬೇಕು? ಮನುಷ್ಯ ಸಹಜ ಆಸೆ, ಆಕಾಂಕ್ಷೆ, ಸಣ್ಣತನಗಳು ಅವನಲ್ಲೂ ಇದ್ದರೇ ಅವನು ದೇವರೆ? ಅವೆಲ್ಲ ಇಲ್ಲದವನು ಇರುವುದೇ ಸುಳ್ಳಿರಬಹುದೆ? ಆದರೂ ಇದ್ದಾನೆ ಎಂದು ಹೇಳುತ್ತ, ಮನುಷ್ಯ ಸಹಜವಲ್ಲದ ರೀತಿ ನೀತಿಗಳನ್ನು ನಮಗೆ ವಿಧಿಸಿದವರು ದೇವರಾಗಿರದೆ ಲಾಭಬಡುಕ ಪುರೋಹಿತರಿರಬಹುದೆ? ದೇವರಿಗೆ ಇದೆಲ್ಲ ಗೊತ್ತಿದೆಯೆ?

ತಕ್ಕ ಮಟ್ಟಿಗೆ ಸ್ವಂತ ಮನೆ, ಹೊಲ, ಚಂದದ ಹೆಂಡತಿ, ಮಗು ಎಂದು ಸುಖವಾಗಿಯೇ ಇದ್ದ ಆತನ ದೆಶೆ ಅಂದಿನಿಂದ ಬದಲಾಗುತ್ತದೆ. ಅವನನ್ನು ನೋಡಿದ ಮಂದಿ ಇದ್ದಕ್ಕಿದ್ದ ಹಾಗೆ ಆತನ ಕಣ್ಣುಗಳು ಮುದಿಯನ ಕಣ್ಣುಗಳಾಗಿರುವುದನ್ನು ಗುರುತಿಸುತ್ತಾರೆ. ಕ್ರಮೇಣ ಎಲ್ಲರೂ ಅವನಿಂದ ದೂರವಿರಲು ಬಯಸುತ್ತಾರೆ. ಹೆಂಡತಿ ತನ್ನ ಮಗುವಿನೊಂದಿಗೆ ಮಾಯವಾಗುತ್ತಾಳೆ. ಅಶಾಂತಿ, ಗೊಂದಲ, ತಳಮಳ ಅವನ ನಿತ್ಯ ಸಂಗಾತಿಗಳಾಗುತ್ತಾರೆ.

ವಿಚಿತ್ರ ಗಮನಿಸಿ. ಇಲ್ಲಿ ಈತ ಮಾಡಿದ ತಪ್ಪು ತೀರ ಸಣ್ಣದು. ಬಸ್‌ಸ್ಟ್ಯಾಂಡಿನಲ್ಲೋ, ಮನೆಬಾಗಿಲಿನಲ್ಲೋ ಅನಪೇಕ್ಷಿತವಾಗಿ ಕಾಣಿಸಿಕೊಂಡ ಒಬ್ಬ ಭಿಕ್ಷುಕನಿಗೋ, ಹುಚ್ಚನಂತೆ ಕಾಣುವ ವ್ಯಕ್ತಿಗೋ ನಾವು ನೀವು ಹಚ ಹಚ ಎಂದಷ್ಟೇ ಸಣ್ಣದು, ಅಷ್ಟೇ ದೊಡ್ಡದು. ಆದರೆ ಅದು ಕೂಡ ನಮ್ಮದೇ ಸಿಟ್ಟಿನಂತೆ ಮನಸ್ಸಿಗೆ ಹಿತಕೊಡುವ ಅನುಭವವಲ್ಲ. ಇನ್ನೊಬ್ಬರನ್ನು ಬಯ್ದುಬಿಟ್ಟ ಬಳಿಕ ಮನಸ್ಸು ಮುದುಡುವಂತೆ, ಭಾರವಾದಂತೆ ಇದೆಲ್ಲ ಎಲ್ಲೋ ಕಾಡುತ್ತ, ಚುಚ್ಚುತ್ತ ಇರುತ್ತದೆ. ಅದೇ ಶಾಪ, ಹೊಸತೇನಲ್ಲ. ಆದರೆ ದೇವರ ಮಗ ಅದನ್ನೇ ಬಾಯಿಬಿಟ್ಟು ಹೇಳಿ ಅದನ್ನು ನಿರಂತರವಾಗಿ ಈತನ ಮೇಲೆ ಹೊರಿಸಿದ್ದಾನೆ. ಎಷ್ಟೋ ಕಾಲದ ನಂತರ ಈತನಿಗೆ ತಾನೇಕೆ ಅದನ್ನು ಮೌನವಾಗಿ ಸ್ವೀಕರಿಸಿದೆ, ಅಲ್ಲೇ ನಿರಾಕರಿಸಲಿಲ್ಲ ಎಂಬುದು ಹೊಳೆಯುತ್ತದೆ!!

ಪಾಪಪ್ರಜ್ಞೆಯನ್ನು ಕೂಡ ಸ್ವೀಕರಿಸುವುದು ಅಥವಾ ನಿರಾಕರಿಸುವುದು ಒಂದು ಮನಸ್ಥಿತಿ. ಮಾಡಿದ್ದು ಪಾಪವಾಗಿದ್ದೂ, ತಪ್ಪಾಗಿದ್ದೂ ಪಾಪಪ್ರಜ್ಞೆ ನಮ್ಮನ್ನು ಕಾಡದ ಹಾಗೆ ಜಡ್ಡುಗಟ್ಟಿಕೊಂಡಿರಲು ಸಾಧ್ಯವಿದೆ! ಹಾಗಿರುವುದು ಸಾಧ್ಯವಾದಾಗ ನಮಗೆ ಯಾವುದೂ ಪಾಪ ಅನಿಸುವುದಿಲ್ಲ. ಕಾಡುವುದಿಲ್ಲ. ನಿದ್ದೆಗೆಡುವ ಸಂದರ್ಭ ಬರುವುದಿಲ್ಲ. ಆದರೆ ನಮ್ಮ ನಾಯಕನಿಗೆ ಅದೇನೂ ಹೆಚ್ಚುಹೊತ್ತು ಸಾಧ್ಯವಾಗುವುದಿಲ್ಲ. ಆತ ಪ್ರವಾದಿನಿಯೊಬ್ಬಳ ಬಗ್ಗೆ ಕೇಳಿ ತಿಳಿದು ಅವಳನ್ನು ಹುಡುಕಿಕೊಂಡು ಹೊರಡುತ್ತಾನೆ.

ಆ ಪ್ರವಾದಿನಿಗೂ ನಾನು ಮೇಲೆ ಹೇಳಿದ ಅಮ್ಮನಿಗೂ ಮನಸ್ಸು ಹೋಲಿಸಿ ನೋಡುತ್ತದೆ. ಪ್ರವಾದಿನಿಯ ನೇಮ, ನಿಷ್ಠೆ, ಅವಳಿಗೆ ಪ್ರವಾದಿನಿಯಾಗಲು ನಿಜಕ್ಕೂ ಮನಸ್ಸಿತ್ತೇ, ಎಲ್ಲರಂತೆ ಒಬ್ಬ ಹೆಣ್ಣುಮಗಳಾಗಿ ಇದ್ದುಬಿಡುವುದು ಸುಖ ಎಂದು ಎಂದಾದರೂ ಅನಿಸಿತ್ತೇ, ಅವಳಿಗೇ ಸ್ವತಃ ತಾನು ಪ್ರವಾದಿನಿ ಮತ್ತು ದೇವರು ತನ್ನಲ್ಲಿ ಆವಾಹನೆಯಾಗುತ್ತಾನೆ ಎಂದು ಪ್ರಾಮಾಣಿಕವಾಗಿ ಅನಿಸಿತ್ತೇ, ಹಾಗೆಂದು ಅವಳು ಕೊನೆತನಕ ನಂಬಿದ್ದು ಇನ್ನೇನೋ ಅಗಿತ್ತೆಂದು ನಿಮಗೆ ಕಾಣುವುದೆ, ಎಲ್ಲವನ್ನೂ ಮುಗ್ಧವಾಗಿ ನಂಬಿಯೇ ವಿವರಿಸುವ ಅವಳಿಗೆ ಅವಳ ಹೆಣ್ತನ ಎಂದೂ ಅಡ್ಡಿಯಾಗಲಿಲ್ಲವೇ, ಅಂಥ ಪಾತ್ರ ನಿರ್ವಹಿಸುತ್ತ ಇದ್ದಾಗಲೂ ಅವಳಿಗೆ `ಪಾಪ' ಮಾಡುವುದು ಶಕ್ಯವಿತ್ತೇ....

`ಪಾಪ' ಮಾಡಿಯೂ ಉಳಿದವರಂತೆ, ಸಹಜ ಮನುಷ್ಯನಂತೆ ಇರಲು ದೇವರು, ದೇವರ ಮಗ ಬಿಡುತ್ತಿದ್ದರೇ ಎಂಬುದೇ ಇಲ್ಲಿ ಮುಖ್ಯವಾದ ಪ್ರಶ್ನೆ. ಅವಳು ಮಾಡಿದ್ದು ಪಾಪ ಎಂದು ಹೇಳಿದವರು ಕೊನೆಗೂ ಯಾರು, ದೇವರೆ ಅಥವಾ ದೇವರನ್ನು ಅರ್ಥೈಸುವ ಹೊಣೆಹೊತ್ತವರೆ? ಅಲ್ಲ ದೇವರಲ್ಲಿ ಅಚಲ ವಿಶ್ವಾಸವಿಟ್ಟಿರುವ ನಮ್ಮ ನಿಮ್ಮಂಥ ಸಾಮಾನ್ಯ ಜನರೆ? ಕಾದಂಬರಿ ಹಲವು ರೀತಿಗಳಲ್ಲಿ ನಮ್ಮನ್ನು ಕಾಡುತ್ತದೆ. ನಾವೂ ಇವತ್ತಿನ ರಾಮಸೇತು, ಅಯೋಧ್ಯೆಯ ರಾಮಮಂದಿರ, ಇವುಗಳ ಕುರಿತ ಗದ್ದಲ, ಸಾವುನೋವು, ಸ್ವತಃ ವಾಲ್ಮೀಕಿಗೆ, ಶ್ರೀರಾಮನಿಗೆ ಇದೆಲ್ಲ ಕಾಣಬಹುದು ಎಂದು ಕ್ಷಣಕಾಲ ಯೋಚಿಸಬಹುದು. ಯಾವುದೇ ನಿಲುವು, ತೀರ್ಮಾನಗಳಿಲ್ಲದ, ಪ್ರಾಮಾಣಿಕವಾಗಿ ಬದುಕಿನ ಸತ್ಯವನ್ನರಸುತ್ತ ಸಾಗುವ ಒಂದು ಹಾಡಿನಂತಿರುವ ಈ ಕಾದಂಬರಿ ಅನುವಾದಿತವಾದರೂ ಸೊಗಸಾಗಿದೆ. ಐಬಿಎಚ್ ನವರು ಪ್ರಕಟಿಸಿದ್ದಾರೆ. ಬೆಲೆ ಕೇವಲ ಎಪ್ಪತ್ತು ರೂಪಾಯಿ. ಪುಟಗಳೂ ಅಷ್ಟೇ, ನೂರ ಹದಿನಾರು. ಇದನ್ನು ಓದಿ.

Rating
No votes yet

Comments