ದ್ವಿಗುಣ ಹಣ ನೀಡಿದ ಎ.ಟಿ.ಎಂ.- ಪೈಜಾಮಾಗಳಲ್ಲೇ ದೌಡಾಯಿಸಿದ ಜನತೆ

ದ್ವಿಗುಣ ಹಣ ನೀಡಿದ ಎ.ಟಿ.ಎಂ.- ಪೈಜಾಮಾಗಳಲ್ಲೇ ದೌಡಾಯಿಸಿದ ಜನತೆ

ವೆಲ್ಷ್ ಪೂಲ್, ಇಂಗ್ಲೆಂಡ್: ಇಂಗ್ಲೆಂಡಿನ ವೇಲ್ಸ್ ಪ್ರಾಂತ್ರ್ಯಕ್ಕೆ ಸೇರಿದ ವೆಲ್ಷ್ ಪೂಲ್ ಎಂಬ ಪುಟ್ಟ ಪಟ್ಟಣದ ನಾಗರಿಕರಿಗೆ ಜನವರಿ ಹದಿನೈದನೆಯ ರಾತ್ರಿ ಶುಭರಾತ್ರಿಯಾಗಿ ಪರಿಣಮಿಸಿತ್ತು. ಶುಭರಾತ್ರಿಯೆಂದರೆ ಯಾವುದೋ ಹಬ್ಬ ಹರಿದಿನವೆಂದಲ್ಲ. ನಗರದ ಪ್ರಸಿದ್ಧ ಸೇಯ್ನ್ಸ್ ಬರಿ ಸುಪರ್ ಮಾರ್ಕೆಟ್ಟಿನ ಎ.ಟಿ.ಎಂ ಒಂದರಲ್ಲಿ ಏನೋ ಒಂದು ಪ್ರಮಾದವಾಗಿದೆ, ಅದರಲ್ಲಿ ಕಾರ್ಡು ಹಾಕಿ ನೂರು ಪೌಂಡ್ ಕೇಳಿದರೆ ಇನ್ನೂರು ಪೌಂಡ್ ನೀಡುತ್ತದೆ ಎಂದು ಸುದ್ದಿ ಹಬ್ಬಿದ್ದೇ ತಡ, ಜನ ತಾವುಟ್ಟುಕೊಂಡಿದ್ದ ಪೈಜಾಮಾ, ನೈಟ್ ಸೂಟುಗಳಲ್ಲಿಯೇ ತಮ್ಮ ತಮ್ಮ ಕ್ರೆಡಿಟ್ ಕಾರ್ಡು, ಡಿಬಿಟ್ ಕಾರ್ಡುಗಳೊಂದಿಗೆ ದೌಡಾಯಿಸಿದರು.

ಹೇಗೂ ರಾತ್ರಿ ಹೊತ್ತು, ಏ.ಟಿ.ಎಮ್. ತಪ್ಪನ್ನು ಸರಿಪಡಿಸಲು ಬ್ಯಾಂಕಿನವರ ಬರುವುದು ನಾಳೆ ಬೆಳಿಗ್ಗೆ, ಅಷ್ಟರೊಳಗೆ ಸಾಧ್ಯವಾದಷ್ಟು ಹಣವನ್ನು ಪಡೆಯಬಹುದೆಂದು ಬಂದವರು ತಮ್ಮ ಬಂಧು ಬಾಂಧವ ಬಳಗ ಸ್ನೇಹಿತರಿಗೆ ಮೊಬೈಲ್ ಫೋನುಗಳಲ್ಲಿ ಸಂದೇಶ ರವಾನಿಸಿದರು. ಎ.ಟಿ.ಎಮ್. ಒಡಲಲ್ಲಿರುವ ಹಣ ಖಾಲಿಯಾಗುವ ಮುನ್ನವೇ ಬನ್ನಿರೆಂದು ಧಾವಂತಗೊಳಿಸಿದ್ದರಿಂದ ಅರ್ಧಘಂಟೆಯೊಳಕ್ಕೆ ನಗರದ ಮಧ್ಯಭಾಗದಲ್ಲಿ ರಾತ್ರಿಯುಡುಗೆ ತೊಟ್ಟ ನೂರಾರು ಮಂದಿಯ ಕ್ಯೂ ಜಮಾಯಿಸಿತ್ತು.

ಇತ್ತ ಎ.ಟಿ.ಎಂ. ತನ್ನ ಪಾಡಿಗೆ ದ್ವಿಗುಣ ಹಣವನ್ನು ನೀಡುತ್ತಾ ಆರಾಮವಾಗಿತ್ತು. ಜನರು ತಮ್ಮ ಕಾರ್ಡುಗಳಿಗಿರುವ ಮಿತಿಯಷ್ಟೂ ಹಣವನ್ನು ಬಾಚಿದ್ದೂ ಬಾಚಿದ್ದೇ, ತಮ್ಮ ಬಾಂಧವರಿಗೆ ಫೋನ್ ಮಾಡಿದ್ದೂ ಮಾಡಿದ್ದೇ.

ಅಂತೂ ಎ.ಟಿ.ಎಮ್. ಒಡಲು ಬರಿದಾಗುವವರೆಗೆ ಜನರು ಮನಸ್ಸೋ ಇಚ್ಛೆ ಲೂಟಿ ಮಾಡಿ ಸಂತೋಷದಿಂದ ಮನೆಗೆ ನಡೆದಿದ್ದಾರೆ. ಆ ಸುದ್ದಿ ಬ್ಯಾಂಕಿನವರಿಗೂ ಸಿಕ್ಕಿ ನಿರ್ವಹಣಾ ಘಟಕ ಎ.ಟಿ.ಎಮ್. ಬಳಿಗೆ ಬರುವಷ್ಟರಲ್ಲಿ ಏ.ಟಿ.ಎಮ್. ಖಾಲಿ.

ನಿಜಕ್ಕೂ ಎ.ಟಿ.ಎಮ್. ಪ್ರೋಗ್ರಾಮಿಂಗ್ ನಲ್ಲಿ ಯಾವುದೋ ದೋಷ ನುಸುಳಿ ಕೇಳಿದ ಹಣದ ದ್ವಿಗುಣ ನೀಡುತ್ತಿತ್ತು. ಆದರೆ ಲೆಕ್ಕಾಚಾರ ಮಾತ್ರ ರಾಮನ ಲೆಕ್ಕ ತೋರಿಸುತ್ತಿತ್ತು. ಅಂತೂ ಮರುದಿನ ಬೆಳಿಗ್ಗೆ ಎ.ಟಿ.ಎಮ್. ಔಟ್ ಆಫ್ ಆರ್ಡರ್ ಎಂಬ ಪ್ರಿಂಟೌಟ್ ಪುಟವನ್ನು ತನ್ನ ಪರದೆಯ ಮೇಲೆ ಅಂಟಿಸಿಕೊಂಡು ನಿಂತಿತ್ತು.

ಕಳೆದ ರಾತ್ರಿ ದ್ವಿಗುಣ ಹಣ ಪಡೆದವರ ದಾಖಲೆ ಬ್ಯಾಂಕಿನವರ ಹತ್ತಿರ ಇರಬೇಕಲ್ಲವೇ, ಆ ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ಗ್ರಾಹಕರು ಪಡೆದ ಹಣದ ಕ್ರೆಡಿಟ್ ನೋಟ್ ನೀಡಬಹುದಲ್ಲವೇ? ಈಗ ಬ್ಯಾಂಕ್ ಏನು ಮಾಡುತ್ತದೆ ಎಂದು ಕಾದು ನೋಡಬೇಕು.

ಕೃಪೆ: www.countytimes.co.uk

Rating
No votes yet

Comments