ಧರ್ಮ-ಆಚರಣೆ-ಪದ್ದತಿ..ಇತ್ಯಾದಿ..ಇತ್ಯಾದಿ

ಧರ್ಮ-ಆಚರಣೆ-ಪದ್ದತಿ..ಇತ್ಯಾದಿ..ಇತ್ಯಾದಿ

               ಒಂದು ವಿಷಯವು ಹಲವಾರು ವರ್ಷಗಳಿಂದ ನನ್ನ ತಲೆಯನ್ನು    ಹೊಕ್ಕಿ ಹಲವು ದಿನ ನನ್ನ  ನಿದ್ದೆ ಗೆಡಸಿದೆ. ಅದೇನಪ್ಪಾ ಅಂತಾದ್ದು, ಅಂತೀರಾ?  ಅದೇ ಮೂರನೇ ದಾರಿ. ನಮ್ಮ ಹಿಂದಿನವರು ನಡೆಸಿಕೊಂಡುಬಂದಿದ್ದನ್ನು ಅನುಸರಿಸುತ್ತಿರುವವರದು ಒಂದು ದಾರಿ. ಅವರದು ಏನಿದ್ದರೂ ನಮ್ಮಪ್ಪ ಮಾಡ್ತಾ ಇದ್ರು , ನಾನು ಮಾಡ್ತೀನಿ. ಯಾಕೆ ಮಾಡ್ತಾ ಇದೀನಿ? ಇದಕ್ಕೆ ಏನಾದರೂ ಅರ್ಥ ಇದೆಯೇ, ಇಲ್ಲವೇ, ಎಂದು ಯೋಚಿಸಲು ಹೋಗುವುದೇ ಇಲ್ಲ. ಇದಕ್ಕೆ ಇವರು ಕರೆದುಕೊಳ್ಳುವುದು ನಮ್ಮ ಆಚಾರ ವಿಚಾರಗಳಲ್ಲಿ ಶ್ರದ್ಧೆ. ಶ್ರದ್ಧೆ ಅನ್ನೋದಕ್ಕೆ ಅರ್ಥ ಬೇರೆಯೇ ಇದೆ. ಈಗ ನಾನು ಆಬಗ್ಗೆ ತಲೆ ಕೆಡಸುವುದಿಲ್ಲ. ಸಾಮಾನ್ಯವಾಗಿ ಜನರು ಅರ್ಥೈಸುವಂತೆ ಎಲ್ಲವನ್ನೂ ಶ್ರದ್ಧೆ ಯಿಂದ ಆಚರಿಸುವುದು. ಇಲ್ಲಿ ನಾನು ವಿಚಾರಮಾಡುವಾಗ ಬಹುಪಾಲು ಬ್ರಾಹ್ಮಣ   ಜಾತಿಯವರು ಆಚರಿಸುವ ಆಚರಣೆ ಯಾಗಿರುತ್ತದೆ. ಉಳಿದ ಹಿಂದುಗಳು ಸಾಮಾನ್ಯವಾಗಿ ಇವರು ಮಾಡಿದ್ದನ್ನು ಅವರೂ ಮಾಡುತ್ತಾರೆ.

               ಧರ್ಮವಾಗಿ ಬದುಕುತ್ತಾ ಇದ್ದಾನೆಂದು ಯಾರನ್ನಾದರೂ   ಹೇಳಬೇಕಾದರೆ "ಇವನು ತ್ರಿಕಾಲ ಸಂಧ್ಯವಂದನೆ ಮಾಡ್ತಾನೆ. ಬೆಳಿಗ್ಗೆ ಸಂಜೆ ದೇವರ ಪೂಜೆ ಮಾಡ್ತಾನೆ. ಅಪ್ಪ ಅಮ್ಮನ ಶ್ರಾದ್ಧವನ್ನು ತಪ್ಪದೆ ಮಾಡ್ತಾನೆ, ಯಾವ ಹಬ್ಬ ಹರಿದಿನವನ್ನೂ ಬಿಡುವುದಿಲ್ಲ.ವ್ರತಕಥೆಗಳನ್ನು ಮಾಡ್ತಾನೆ. ಗುರುಗಳು ಬಂದಾಗ ಪಾದ ಪೂಜೆ ಮಾಡ್ತಾನೆ. ಪುಣ್ಯಕ್ಷೇತ್ರದರ್ಶನ ತಪ್ಪದೆ ಮಾಡ್ತಾನೆ....ಇತ್ಯಾದಿ...ಇತ್ಯಾದಿ" ಗಣನೆಗೆ ಬರುತ್ತವೆ.

                   ಎರಡನೆಯ ದಾರಿ ಎಂದರೆ ಸಾಮಾನ್ಯವಾಗಿ ಆರ್ಯಸಮಾಜಿಗಳದ್ದು. ಈ ಮೇಲಿನವರು ಮಾಡುತ್ತಿರುವುದಷ್ಟೂ ವೇದ ವಿರೋಧಿ. ಬದುಕಿದ್ದಾಗ ಅಪ್ಪ-ಅಮ್ಮನ  ಸೇವೆ ಮಾಡುವುದೇ ನಿಜವಾದ  ಶ್ರಾದ್ಧ. ಸತ್ತಮೇಲೆ ಶವವನ್ನು ದಹನಮಾಡಿದರೆ ಅದು ಪಂಚಭೂತಗಳಲ್ಲಿ ಲೀನವಾಯ್ತು. ಅಲ್ಲಿಗೆ ಮುಗಿದುಹೋಯ್ತು. ಈ ಶ್ರಾದ್ಧ ಕರ್ಮಗಳಿಗೆ ಅರ್ಥವಿಲ್ಲ.   ವಿಗ್ರಹಾರಾಧನೆ ವೇದೋಕ್ತವಲ್ಲ. ಹಬ್ಬ ಹರಿದಿನಗಳಿಗೆ ಅರ್ಥವೇ ಇಲ್ಲ. ವಿಗ್ರಹಾರಾಧನೆ ಇಲ್ಲಾ ಅಂದಮೇಲೆ ದೇವಾಲಯಗಳು, ಉತ್ಸವಗಳು, ರಥೋತ್ಸವಗಳು...ಯಾವುದಕ್ಕೂ ಅರ್ಥವಿಲ್ಲ. ಕೆಲವು ಯಜ್ಞಗಳನ್ನು ಮಾಡುವುದು, ವೇದಾಧ್ಯಯನ ಮಾಡುವುದು. ವೇದದ ಮಾರ್ಗದರ್ಶನದಂತೆ ಜೀವನ ನಡೆಸುವುದು. ಪುರಾಣ ಪುಣ್ಯ ಕಥೆಗಳನ್ನು ವೇದದೊಟ್ಟಿಗೆ ಹೇಳುವಂತಿಲ್ಲ. ಭಗವಂತನ ಕುರಿತು ಭಜನೆ  ಮಾಡಬೇಕಾದರೂ  ಅವನ ಸತ್ ಸ್ವರೂಪದ ವರ್ಣನೆಯನ್ನು  ಮಾತ್ರವೇ    ಭಜಿಸುವುದು. ಮದುವೆ ಎಂದರೆ ನಾಲ್ಕಾರು ವೇದ ಮಂತ್ರಗಳನ್ನು ವಧು-ವರರ ಬಾಯಲ್ಲಿ ಹೇಳಿಸಿ" ನಾನು-ನೀನು ಸಾಯುವ ವರೆಗೂ ಜೊತೆಯಾಗಿ ಜೀವನ ಮಾಡೋಣ. ನಾನು ನಿನ್ನನ್ನು ಬಿಟ್ಟು ಬೇರೆ ಸ್ತ್ರೀ/ಪುರುಷ ರೊಡನೆ   ಸಂಪರ್ಕ ಇಟ್ಟುಕೊಳ್ಳುವುದಿಲ್ಲ " ಎಂದು ಸಂಕಲ್ಪ ಮಾಡಿಸುವುದು. ಈ ಮಂತ್ರಗಳು ಸೊಗಸಾಗಿವೆ. ಅದರಂತೆ ವಿವಾಹದಲ್ಲಿ ಗಂಡು-ಹೆಣ್ಣು ಸಂಕಲ್ಪ ಮಾಡಿ ,ಅದರಂತೆ ಜೀವನ ಮಾಡಿದ್ದೇ ಆದರೆ ಅವರ ಬಾಳು ಸ್ವರ್ಗವಾದೀತು. ಆದರೆ ಇಲ್ಲಿ ತಾಳಿಗೆ ಮಹತ್ವವಿಲ್ಲ. ಹೆಣ್ಣಿಗೆ ಬಳೆ-ಬಿಚ್ಚೋಲೆ,ಅರಿಶಿನ-ಕುಂಕುಮಕ್ಕೆ ಪ್ರಾಧಾನ್ಯತೆ ಇಲ್ಲ. ಹಿಂದುಗಳಲ್ಲಿ     ಆಚರಣೆಯಲ್ಲಿರುವ ಉಳಿದ ಯಾವ ಆಚರಣೆಯೂ ಇಲ್ಲ. 

                ಜೀವನದಲ್ಲಿ ಐವತ್ತು ವರ್ಷ ಸಂಪ್ರದಾಯ ಬದ್ಧವಾಗಿ ಬದುಕು ನಡೆಸಿ ಕಳೆದ ಒಂದು ದಶಕಗಳಿಂದ ಆರ್ಯಸಮಾಜಿಗಳ ಪದ್ದತಿಯನ್ನು ನೋಡುತ್ತಿರುವುದರಿಂದ  ಎರಡು ಪದ್ದತಿಗಳಲ್ಲೂ ಹಲವು ಒಳ್ಳೆಯ ಹಲವು ಕೆಟ್ಟ ಸಂಗತಿಗಳನ್ನು ನಾನು ಗಮನಿಸಿದ್ದೇನೆ. ಒಂದೊಂದಾಗಿ ವಿಮರ್ಶೆ ಮಾಡುತ್ತಾ ಹೋದರೆ ಒಂದು ಪುಸ್ತಕ ಬರೆಯುವಷ್ಟು ಚಿಂತನೆಗಳು  ನನ್ನ ತಲೆಯಲ್ಲಿ ಹೊಕ್ಕಿವೆ.ಆದರೆ ಎಲ್ಲವನ್ನೂ ಇಲ್ಲಿ ಪ್ರಸ್ತಾಪಿಸುವುದಿಲ್ಲ. ಆದರೆ ಕೆಲವನ್ನು ಪ್ರಸ್ತಾಪಿಸುತ್ತೇನೆ.

 

            ಉಧಾಹರಣೆಗೆ  ವಿಗ್ರಹಾರಾಧನೆ ಹೆಸರಲ್ಲಿ ಬಾಲಿಶವಾಗಿ ಹಲವು ಕೆತ್ತನೆಗಳನ್ನು ಮಾಡಿ ಅದಕ್ಕೊಂದು ಹೆಸರು ಕೊಟ್ಟು ದೇವಾಲಯ ಕಟ್ಟಿ. ಅದಕ್ಕೊಂದು ಪೂಜಾಕ್ರಮ ತಂದು ಲಕ್ಷಾಂತರ ದೇವಾಲಯಗಳ ನಿರ್ಮಾಣ ಮಾಡುತ್ತಿರುವುದು ಒಂದೆಡೆ ಯಾದರೆ ಮತ್ತೊಂದೆಡೆ ವಿಗ್ರಹಾರಾಧನೆಯನ್ನು ಸಾರಾಸಗಟಾಗಿ ವಿರೋಧಿಸಿ ಅದರ ಹೆಸರಲ್ಲಿ ನಡೆಯುವ ಹಲವು ಭಾವನಾತ್ಮಕ ಕಾರ್ಯಕ್ರಮಗಳಿಂದ ವಂಚಿತರಾಗುವುದು.

                   ಒಂದು ಉಧಾಹರಣೆಗಾಗಿ ಗಣಪತಿಯ ಬಗ್ಗೆ ನೋಡೋಣ. ಆನೆಮೊಗ,ಡೊಳ್ಳು ಹೊಟ್ಟೆ,ನಾಲ್ಕು ಕೈ, ಹೊಟ್ಟೆಗೆ ಸರ್ಪ, ಇಲಿ ವಾಹನ ...ಇದು ಇಲ್ಲಿಯವರೆಗೆ ಸಂಪ್ರದಾಯದಲ್ಲಿ ಬಂದ ಗಣಪ, ಅಲ್ಲವೇ? ಆದರೆ ಇತ್ತೀಚಿನ ವರ್ಷಗಳಲ್ಲಿ      ಕ್ರಿಕೆಟ್ ಆಡುವ ಗಣಪ, ಮೋಟಾರ್ ಬೈಕ್ ಏರಿದ ಗಣಪ,ಇತ್ಯಾದಿ ಇತ್ಯಾದಿ ಹೊಸಹೊಸ ಆವಿಶ್ಕಾರಗಳು ಈಗ ಕಾಣಸಿಗುತ್ತವೆ. ಈ ಭಾರಿ ಮೋದಿ ಏನಾದರೂ  ಪ್ರಧಾನ ಮಂತ್ರಿಯಾದರೆ ಮೋದಿಯನ್ನೂ ಗಣಪನೊಡನೆ ಇರುವಂತೆ ಮಾಡಿ  ಮೋದಿ ಗಣಪನೂ ಮಾರ್ಕೆಟ್ ನಲ್ಲಿ ಖಂಡಿತಾ ಸಿಗುತ್ತಾನೆ. ಇದೊಂದೇ ಉಧಾಹರಣೆಯಿಂದ ವಿಗ್ರಹಾರಾಧನೆಯ ಮೋಜಿನ ಮುಖವನ್ನೂ ನೋಡಬಹುದು. ಇಂತಾ ಸಂದರ್ಭಗಳಲ್ಲಿ ವಿಗ್ರಹಾರಾಧನೆ ತನ್ನ  ಮಹತ್ವವನ್ನು ಚೀಪ್ ರೇಟ್ ಮಾಡಿಕೊಳ್ಳುತ್ತದೆ.

 

         ವಿಗ್ರಹಾರಾಧನೆಯನ್ನು ವಿರೋಧಿಸುವವರಿಗಾಗುವ ನಷ್ಟದ ಬಗ್ಗೆ ನೋಡೋಣ.  ಎಲ್ಲಾ ಹಳ್ಳಿಗಳಲ್ಲೂ,ಎಲ್ಲಾ ನಗರಗಳಲ್ಲೂ, ಎಲ್ಲಾ ಪುಣ್ಯ ಕ್ಷೇತ್ರಗಳಲ್ಲೂ ಸಾಮಾನ್ಯವಾಗಿ ವರ್ಷದಲ್ಲೊಮ್ಮೆ ತೇರು ಜಾತ್ರೆ ನಡೆಯುವುದು ಮಾಮೂಲಿ. ಅಲ್ಲವೇ? ಅಂದು ಜನರ ಸಂಬ್ರಮಕ್ಕೆ ಬೆಲೆ  ಕಟ್ಟಲಾದೀತೇ?  ರಥೋತ್ಸವಗಳಲ್ಲಂತೂ ಲಕ್ಶ್ಹ ಲಕ್ಷ ಭಕ್ತರು ಸೇರಿ ರಥದಲ್ಲಿ ವಿಗ್ರವನ್ನಿಟ್ಟು ಎಳೆಯುವಾಗ ಅವರ ಭಕ್ತಿ ಭಾವಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಇಡೀ ದಿನ ಜನರ ಸಂಬ್ರಮವೋ ಸಂಬ್ರಮ.ಇದಕ್ಕೆ ಯಾವ ವೇದದ ಆಧಾರವೂ ಇಲ್ಲ. ಆದರೂ ಇದನ್ನು ಬಿಟ್ಟವರು ಕೆಟ್ಟರು    ಅಷ್ಟೆ.

 

ಇನ್ನು ಪ್ರಮುಖವಾಗಿ ಮಾಡುವ ಹಬ್ಬಗಳಲ್ಲಿ ಗಣೇಶನ ವ್ರತ. ವ್ರತವನ್ನು ಹೇಗೆ ಮಾಡುತ್ತಾರೆನ್ನುವುದಕ್ಕಿಂತ ಮನೆಯಲ್ಲಿ ಜನರ ಸಂತೋಷ, ಸಂಬ್ರಮ, ಸಡಗರ, ಭಕ್ತಿಪರವಶತೆಗೆ ಬೆಲೆ ಕಟ್ಟಲಾಗುವುದಿಲ್ಲ.ವ್ರತ ಎಂಬ ಪದಕ್ಕೆ ಬೇರೆಯೇ ಅರ್ಥವಿದೆ. ಇರಲಿ.

 

ಇನ್ನು ಶ್ರಾದ್ಧದ ವಿಚಾರವಾಗಿ ನನ್ನ ಅಭಿಪ್ರಾಯವೆಂದರೆ ಮನುಷ್ಯ ಸತ್ತಮೇಲೆ ಮುಗಿದುಹೋಯ್ತು. ಅವರವರ ಕರ್ಮಫಲದಂತೆ ಪುನರ್ಜನ್ಮವೋ, ಸದ್ಗತಿಯೋ ಏನೋ ಒಂದು ಲಭ್ಯವಾಗುತ್ತದೆ. ಶ್ರಾದ್ಧ ಕರ್ಮಗಳನ್ನು  ಮಾಡದಿದ್ದರೆ  ಸತ್ತವನಿಗೆ ಸದ್ಗತಿ ಸಿಗುವುದಿಲ್ಲವೆಂಬ ನಂಬಿಕೆ ನನಗಿಲ್ಲ. ನಾನು ಸತ್ಕರ್ಮಗಳನ್ನು ಮಾಡಿದರೆ ಅದರ ಫಲ ನನಗಿರುತ್ತದೆ. ಇಲ್ಲದಿದ್ದರೆ ಇಲ್ಲ. ನಾನು ಸತ್ತಾಗ ನನ್ನ ಶ್ರಾದ್ಧ ಕರ್ಮಗಳನ್ನು ನನ್ನ ಮಕ್ಕಳು ಮಾಡುವುದರಿಂದ ಖಂಡಿತವಾಗಿ ಯಾವ ಬದಲಾವಣೆಯೂ ಆಗುವುದಿಲ್ಲ. ಆದರೆ ಶ್ರಾದ್ಧ ಮಾಡಬಾರದೇ?  ಮಾಡಿದರೆ ನಷ್ಟವೇನೂ ಇಲ್ಲ. ಸತ್ತವರ ಹೆಸರಲ್ಲಿ ನಾಲ್ಕಾರು ಜನರು ಊಟಮಾಡಬಹುದು. ಸತ್ತವರ ಸ್ಮರಣೆ ಮಾಡಬಹುದು. ಎಲ್ಲಕ್ಕಿಂತ ನನ್ನ ಅಭಿಪ್ರಾಯದಲ್ಲಿ ಅಂದು ಸತ್ತವರ ಹೆಸರಲ್ಲಿ ಅಬಲರಿಗೆ ದಾನಧರ್ಮ ಮಾಡಿದರೆ ಅದು ಉಪಯುಕ್ತ. 

 

ನನ್ನ ಮೂರನೆಯ ದಾರಿ ಮೇಲಿನ   ವಿಮರ್ಶೆಯಲ್ಲಿ ನುಸುಳಿದೆ. ಸಮಾಜದ ಸಾಮರಸ್ಯಕ್ಕೆ ನೆರವಾಗುವ ಯಾವುದೇ ಆಚರಣೆಗೆ ನನ್ನ ವಿರೋಧವಿಲ್ಲ. ಆದರೆ ಅದಕ್ಕೊಂದು ಅರ್ಥವಿರಬೇಕು. ಪೂಜೆ ಪುನಸ್ಕಾರಗಳೆಂದರೆ ಅರ್ಥತಿಳಿಯದೆ ಮಂತ್ರ ಉಚ್ಚರಿಸಿ ದೇವರ ತಲೆಯ ಮೇಲೆ  ಹೂ ಹಾಕಿದರೆ ಪ್ರಯೋಜನವಿಲ್ಲ.  ನಾವು ಈಗಾಗಲೇ ಆಚರಣೆಯಲ್ಲಿ ಹಲವು ವೇದ ಮಂತ್ರಗಳ ಉಪಯೋಗ ಮಾಡಿಕೊಂಡಿದ್ದೇವೆ. ಅದರ ಅರ್ಥ ತಿಳಿದು ಅದರಂತೆ ನಮ್ಮ ನಡೆಯೂ ಇರಲೆಂಬುದು ನನ್ನಾಸೆ. ಭಗವಂತ ಒಬ್ಬನೇ. ಎಲ್ಲರಲ್ಲೂ ಭಗವಂತನಿದ್ದಾನೆ.  ಸೃಷ್ಟಿಯನ್ನು ನಡೆಸುತ್ತಿರುವ   ಆ ಅಗೋಚರ ಶಕ್ತಿಯನ್ನು ನಾವು ನೋಡಲು       ಸಾಧ್ಯವಿಲ್ಲ. ಆದರೆ ಆ ಶಕ್ತಿಯ ಪರಿಣಾಮವನ್ನು ಕಾಣಬಹುದು. ಭಗವಂತನಿಗೆ ಭಯ ಪಡಬೇಕಾಗಿಲ್ಲ. ಪ್ರೀತಿಯಿಂದ ಅವನನ್ನು ಮುದ್ದಿಸಿ ಆನಂದವನ್ನು ಪಡೆಯಬಹುದು. ವಿಗ್ರಹಾರಾಧನೆಯನ್ನು ವಿರೋಧಿಸಬೇಕಾಗಿಲ್ಲ. ಆದರೆ ವಿಗ್ರಹಾರಾಧನೆಯನ್ನು ಮಾಡದಿದ್ದವ ದೈವ ವಿರೋಧಿಯಲ್ಲ. ನಾಸ್ತಿಕನಲ್ಲ.  ತನ್ನಲ್ಲಿ ತಾನು ನಂಬಿಕೆ ಇಡದವನೇ ನಾಸ್ತಿಕನು. ವಿಚಾರ ಮಾಡಲು ಇನ್ನೂ ಇದೆ. ಮುಂದೆ ಸಮಯ ಬಂದಾಗ ಬರೆಯುವೆ.

Rating
No votes yet

Comments

Submitted by kavinagaraj Sat, 03/01/2014 - 09:40

ವೈಚಾರಿಕ ಸಂಘರ್ಷದ ಹಾದಿಯಲ್ಲಿ ಇಂತಹ ವಿಚಾರಗಳು ಸಹಜವಾಗಿ ಮೂಡುತ್ತವೆ. ಆಚಾರ ಮತ್ತು ವಿಚಾರಗಳನ್ನು ಕೂಡಿಸುವ ಸಮನ್ವಯದ ಕೆಲಸ ಮೂರನೆಯ ದಾರಿಯದಾಗಿದೆ. ಆಚಾರದ ಹೆಸರಿನಲ್ಲಿ ಅಂಧ ಸಂಪ್ರದಾಯಗಳನ್ನು ಪೋಷಿಸುವವರನ್ನು ನಿಯಂತ್ರಿಸುವುದು ಅಥವ ಈ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯ.