ನಡೆಯಲು ಬಾಟಾ, ಓಡಾಡಲು ಟಾಟಾ

ನಡೆಯಲು ಬಾಟಾ, ಓಡಾಡಲು ಟಾಟಾ

(ಸಂಪಾದಕೀಯ)

ಭಾರತದ ಬಡ ಜನರ ಕಷ್ಟಗಳನ್ನು ದೂರ ಮಾಡಲು ಬಾಟಾ ಮತ್ತು ಟಾಟಾ ನಡೆಸಿರುವ ಪ್ರಯತ್ನ ಶ್ಲಾಘನೀಯ. ದೇಶದ ಜನರ ಕಾಲುಗಳು ಮುಳ್ಳು, ಕಲ್ಲು ತುಳಿಯುವುದನ್ನು ನೋಡಲಾಗದೇ ಬಾಟಾ ದೇಶಾದ್ಯಂತ ಚಪ್ಪಲಿ, ಷೂ ಅಂಗಡಿಗಳನ್ನು ಪ್ರಾರಂಭಿಸಿದ್ದನ್ನು ಇಲ್ಲಿ ಹೆಮ್ಮೆಯಿಂದ ಸ್ಮರಿಸಬೇಕಿದೆ. ಅದೇ ದಾರಿಯಲ್ಲಿ ಸಾಗಿರುವ ಟಾಟಾ ಕಂಪನಿ, ಬಡ ರೈತರು ಮಳೆ, ಗಾಳಿ, ಚಳಿಯಲ್ಲಿ ನಡುಗುತ್ತ ಓಡಾಡುವುದನ್ನು ನೋಡಲಾಗದೆ ನ್ಯಾನೊ ಕಾರನ್ನು ಅತಿ ಚೀಪ್ ರೇಟಿನಲ್ಲಿ ಬಿಡುಗಡೆ ಮಾಡಲು ಏನೆಲ್ಲಾ ಕಷ್ಟಪಡುತ್ತಿದೆ. ಇದನ್ನು ತೃಣಮಾತ್ರವೂ ಅರ್ಥ ಮಾಡಿಕೊಳ್ಳದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ಸಿನ ನಾಯಕಿ ಮಮತಾ ಬ್ಯಾನರ್ಜಿ, ಸುಮ್ಮಸುಮ್ಮನೇ ಕ್ಯಾತೆ ತೆಗೆದಿರುವುದು ಖಂಡನೀಯ. ಕೇಂದ್ರ ಸರ್ಕಾರ ಇಂತಹ ಜನವಿರೋಧಿ ನೀತಿಯನ್ನು ದೂರ ಇಡಬೇಕಿದೆ.

ಇಡೀ ದೇಶ ಕೋಮು ದಳ್ಳುರಿ, ಹಣದುಬ್ಬರ, ಷೇರು ಮಾರುಕಟ್ಟೆ ಕುಸಿತ, ಬಾಂಬ್ ಸ್ಫೋಟಗಳಿಂದ ತಲ್ಲಣಗೊಂಡಿದೆ. ಇಂತಹ ಸಂದರ್ಭದಲ್ಲಿ ನಡೆದಾಡಲು ಬಾಟಾ ಮತ್ತು ಓಡಾಡಲು ಟಾಟಾ ನ್ಯಾನೊದಂಥ ಪ್ರಯತ್ನಗಳು ಹೆಚ್ಚಬೇಕಾದ ಅವಶ್ಯಕತೆಯಿದೆ. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇದನ್ನು ಚೆನ್ನಾಗಿ ಮನಗಂಡಿದ್ದಾರೆ. ಅದಕ್ಕೆಂದೇ ಟಾಟಾ ಕಂಪನಿಗೆ ಧಾರವಾಡದಲ್ಲಿ ಭೂಮಿ ಹಾಗೂ ಸೌಲಭ್ಯಗಳನ್ನು ಕೊಟ್ಟು ನ್ಯಾನೊ ಕಾರು ಉತ್ಪಾದಿಸಬೇಕೆಂದು ಆಗ್ರಹಪೂರ್ವಕವಾಗಿ ಆಹ್ವಾನಿಸಿದ್ದಾರೆ. ಇದನ್ನು ಎಲ್ಲರೂ ಶ್ಲಾಘಿಸಿ ಸ್ವಾಗತಿಸಬೇಕಿದೆ.

ಕೋಮುದಳ್ಳುರಿ, ಬಡತನ, ನಿರುದ್ಯೋಗದಿಂದ ಬಳಲುವ ಜನತೆ ಬಾಟಾ ಚಪ್ಪಲಿ ಹಾಕಿಕೊಂಡರೆ ವಾಸ್ತವ ಚುಚ್ಚುವುದು ಕಡಿಮೆಯಾಗುತ್ತದೆ. ಓಡಾಡಲು ನ್ಯಾನೊ ಮಾದರಿಯ ಚೀಪ್ ಕಾರಿದ್ದರೆ ಆತ ಕೋಮು ಗಲಭೆಗಳಿಗೆ ಸಿಲುಕುವ ಸಂದರ್ಭವೇ ಬಾರದು. ಏಕೆಂದರೆ, ಗಲಭೆ ಸಂದರ್ಭಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡುವ ಅವಶ್ಯಕತೆ ಇರುತ್ತದೆ. ಬಾಟಾ ಕಂಪನಿಯ ಚಪ್ಪಲಿ, ಷೂಗಳನ್ನು ಬಿಟ್ಟು ಆತ ಓಡಲಾರ. ಇನ್ನು ಕಾರಿದ್ದವರು ಕೋಮು ಗಲಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಸಂಶೋಧನೆ ವರದಿ ಸಾಬೀತುಪಡಿಸಿದೆ. ಏಕೆಂದರೆ, ಗಲಭೆ ಸಂದರ್ಭಗಳಲ್ಲಿ ಮೊದಲು ಪುಡಿಪುಡಿಯಾಗುವುದೇ ಅವರ ಕಾರುಗಳು. ಹೀಗಾಗಿ, ಜನರ ಕಾಲಿಗೆ ಬಾಟಾ ಹಾಗೂ ಓಡಾಡಲು ಟಾಟಾ ಇದ್ದು ಬಿಟ್ಟರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಇವೆರಡನ್ನೂ ಚೆನ್ನಾಗಿ ಮನಗಂಡಿರುವ ರಾಜ್ಯ ಸರ್ಕಾರ ಬಾಟಾ ಹಾಗೂ ಟಾಟಾ ಕಂಪನಿಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹವೇ ಆಗಿದೆ. ಇದೇ ಮಾದರಿಯನ್ನು ಜೀವನದ ಇತರ ಕ್ಷೇತ್ರಗಳಿಗೂ ವಿಸ್ತರಿಸಿದರೆ ದೇಶದಲ್ಲಿ ಕೋಮು ದಳ್ಳುರಿ, ದೊಂಬಿ, ಗಲಭೆ, ಅನಾಚಾರಗಳಿಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಆಗ, ಪೊಲೀಸರು ಹಾಗೂ ಪರಿಹಾರಕ್ಕೆಂದು ಮಾಡುವ ಖರ್ಚನ್ನು ಕಡಿತಗೊಳಿಸಿ, ಜನರಿಗೆ ಓಡಾಡಲು ಉತ್ತಮ ರಸ್ತೆ ನಿರ್ಮಿಸುವುದು ಸಾಧ್ಯವಾಗುತ್ತದೆ. ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‍ನಂಥ ವಿವಾದಗಳಿಗೆ ಆಗ ಆಸ್ಪದವೇ ಇರುವುದಿಲ್ಲ.

ನಾಯಕರಾದ ಎಚ್.ಡಿ. ದೇವೇಗೌಡ, ಅವರ ಪುತ್ರರಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ, ಪ್ರತಿಪಕ್ಷದ ನಾಯಕರಾದ ಧರಂ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಟಾಟಾ ಕಂಪನಿಗೆ ಸ್ವಾಗತ ಕೋರಿರುವುದನ್ನು ಖಂಡಿಸುವುದನ್ನು ಬಿಟ್ಟು ಬೆಂಬಲಿಸಬೇಕು. ಟಾಟಾ ಮತ್ತು ಬಾಟಾದಂಥ ಕಂಪನಿಗಳು ರಾಜ್ಯದಲ್ಲಿ ಕೈಗಾರಿಕೆ ಹೂಡಲು ಆಸ್ಪದ ಕೊಡಬೇಕು.

- ಚಾಮರಾಜ ಸವಡಿ

Rating
No votes yet

Comments