ನನಗೂ ನಿಮಗೂ ಸಮಾನವಾದೊಂದು ಧರ್ಮ

ನನಗೂ ನಿಮಗೂ ಸಮಾನವಾದೊಂದು ಧರ್ಮ

ಉದ್ಧಾಲಕ ಹೇಳಿದ್ದರಲ್ಲಿ ತಪ್ಪೇನಿದೆ? ಅವನೇನು ಮಗನನ್ನು ಅವನ ಮನಸ್ಸಿನ ವಿರುದ್ಧ ನಡೆದುಕೊಳ್ಳಲು ಹೇಳಿದನೆ? ತನಗೆ ತನ್ನ ಧರ್ಮವನ್ನು ಆಚರಿಸಲು ಬಿಡು ಎಂದ, ಅಷ್ಟೇ ಅಲ್ಲವೆ? ಶ್ವೇತಕೇತುವಿಗೂ ಅವನು ಅಂಥ ಸ್ವಾತಂತ್ರ್ಯ ಕೊಟ್ಟಿಲ್ಲವೆ? ಉದ್ಧಾಲಕ ನಮಗೆ ಇಲ್ಲಿ ಒಬ್ಬ ಉದಾರ ಮನಸ್ಸಿನವನಾಗಿ ಕಾಣುವುದಿಲ್ಲವೆ? ಇದರಾಚೆಗೆ ನಾವು ಕಾಣಬೇಕಾದದ್ದೂ ಇದೆ ಇಲ್ಲಿ.

ಸಂಸಾರ ಎಂದರೆ ಏನು? ಅದಕ್ಕೂ ಅದರದ್ದೇ ಆದ ಒಂದು ಧರ್ಮವಿಲ್ಲವೆ? ನಾವೆಲ್ಲ ಒಂದೇ ಕುಲ, ರಕ್ತ, ಏನೋ ಸಂಬಂಧ ಎಂಬ ಭಾವದಲ್ಲಿ ಒಂದೇ ಸೂರಿನಡಿ ಬದುಕುತ್ತಿರುವಾಗಲೂ ಕೆಲವೊಂದು ಕಟ್ಟುಪಾಡುಗಳು ಇದ್ದೇ ಇರುತ್ತವೆ. ಸಂಸಾರದ ಎಲ್ಲ ಸದಸ್ಯರ ಮನಸ್ಸಿನಲ್ಲೂ ಸುಪ್ತವಾಗಿಯೋ ಪರೋಕ್ಷವಾಗಿಯೋ ಅವರ ಚಟುವಟಿಕೆಗಳನ್ನು, ನಿರ್ಧಾರಗಳನ್ನು, ನಡತೆಯನ್ನು ನಿಯಂತ್ರಿಸುವ ಒಂದು ಸಮಷ್ಟಿಪ್ರಜ್ಞೆ ಇದ್ದೇ ಇರುತ್ತದೆ. ನನ್ನಿಂದ ಇತರರಿಗೆ ತೊಂದರೆಯಾಗಬಾರದು ಎಂಬುದೇ ಸ್ಥೂಲವಾಗಿ ಈ ಸಮಷ್ಟಿಪ್ರಜ್ಞೆ ಎನ್ನಬಹುದೇನೋ. ಒಬ್ಬೊಬ್ಬರೂ ಅವರವರ ಇಚ್ಚಾನುಸಾರ ಬದುಕುವುದಕ್ಕೆ ಸಂಸಾರ ವ್ಯವಸ್ಥೆ ಅವಕಾಶ ನೀಡುವುದಿಲ್ಲ. ಒಬ್ಬ ಸದಸ್ಯನ ನಡವಳಿಕೆಗಳಿಗೆ ಇಡೀ ಸಂಸಾರ ಬಾಧ್ಯವಾಗುವುದರಿಂದ ಸಂಸಾರಕ್ಕೆ ತನ್ನದೇ ಆದ ಒಂದು ಧರ್ಮ ಅಗತ್ಯ ಕೂಡ. ಇದು ಸಂಸಾರಕ್ಕೆ ಸಂಬಂಧಿಸಿದಂತೆಯೂ ಸತ್ಯ, ಸಮಾಜಕ್ಕೆ ಸಂಬಂಧಿಸಿದಂತೆಯೂ ಸತ್ಯವೇ. ಇದಿಲ್ಲದೇ ಹೋದರೆ ಇಬ್ಬರು ಕೂಡ ಒಂದೇ ಸೂರಿನಡಿ, ಒಂದೇ ಸಮಾಜದಲ್ಲಿ ಬದುಕುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ವ್ಯಕ್ತಿಯ ನಡವಳಿಕೆಗೆ ಸಮಾಜದ, ಪರಂಪರೆಯ, ಧರ್ಮದ, ನ್ಯಾಯಾನ್ಯಾಯದ ನಿಯಂತ್ರಣಗಳಿರುವಂತೆಯೇ ಒಂದು ಸಂಸಾರಕ್ಕೂ ಅದೆಲ್ಲ ಇರುತ್ತದೆ. ಇಲ್ಲಿ ಒಬ್ಬ ವ್ಯಕ್ತಿಗಿಂತ ಹೆಚ್ಚಿನವರ ಬದ್ಧತೆಯ ಪ್ರಶ್ನೆ ಬರುವಾಗ ಸಂಸಾರದ ಧರ್ಮ ಎಂಬುದು ಹೆಚ್ಚು ಹೆಚ್ಚು ತೊಡಕಿನ ಪ್ರಶ್ನೆಯಾಗುತ್ತದೆ. ಕರ್ತವ್ಯಗಳು ಮತ್ತು ಹಕ್ಕುಗಳ ನಡುವೆ ಸಮತೋಲದ ಹಂಚಿಕೆ ಕೂಡ ಇರುವುದಿಲ್ಲ ಸಂಸಾರದಲ್ಲಿ. ಅದಕ್ಕೆ ಯಾರೋ ಒಬ್ಬ ಅಥವಾ ಒಬ್ಬಳು ಅಧಿಕೃತ ಉತ್ತರದಾಯಿತ್ವವನ್ನು ಹೊತ್ತುಕೊಂಡವರಿರುತ್ತಾರೆ. ಅವರ ಅಧಿಕಾರ ಹೆಚ್ಚು. ಅವರ ಮಾತೇ ನಡೆಯಬೇಕೆಂಬ ಪರಿಪಾಠ ಅನೇಕ ಸಂದಿಗ್ಧಗಳಿಗೆ, ಭಿನ್ನಾಭಿಪ್ರ್‍ಆಯಗಳಿಗೆ ಕಾರಣವಾಗುತ್ತದೆ. ಹೊಂದಾಣಿಕೆ ಎಂಬುದು ಮಹತ್ವದ ಮತ್ತು ಅನಿವಾರ್ಯವಾದ ಒಂದು ಅಂಗ, ಸಂಸಾರಕ್ಕೆ.

ಆದರೆ ಹೊಂದಾಣಿಕೆಗಳಿಗೆ ಮಿತಿಗಳಿಲ್ಲವೆ? ಇರಲೇಬಾರದೆಂದರೆ ಕೆಟ್ಟ ಬೆಳವಣಿಗೆಗಳ ಜೊತೆಗೆ ಒಳ್ಳೆಯದನ್ನೂ ತಡೆಗಟ್ಟಿದಂತಾಗದೆ?

ಉದಾಹರಣೆಗೆ ಶ್ವೇತಕೇತು ಒಂದು ವೇಳೆ ಉದ್ಧಾಲಕನ ಮಾನದಂಡದಿಂದ ಅನೈತಿಕವೆನಿಸುವಂಥದ್ದೇನಾದರೂ ಮಾಡಿದ್ದರೆ, ಇದೇ ಉದ್ಧಾಲಕ ಅದನ್ನು ಶ್ವೇತಕೇತುವಿನ ಮೌಲ್ಯ, ಶ್ವೇತಕೇತುವಿನ ಧರ್ಮ, ಅವನು ಅದನ್ನು ಆಚರಿಸುವುದಕ್ಕೆ ತಾನು ಅಡ್ಡಿಬರಬಾರದು ಅಂದು ತೀರ್ಮಾನಿಸುತ್ತಿದ್ದನೆ? ಒಬ್ಬ ತಂದೆಯಾಗಿ, ಸಂಸಾರದ ಯಜಮಾನನಾಗಿ ಅವನಿಗೆ ಶ್ವೇತಕೇತುವನ್ನು ತಿದ್ದುವ ಧರ್ಮವಿರುವುದಿಲ್ಲವೆ?

ವ್ಯಕ್ತಿಗತ ಧರ್ಮ ಮತ್ತು ಸಂಸಾರದ ಸಮಷ್ಟಿಪ್ರಜ್ಞೆಯ ಧರ್ಮಗಳ ನಡುವೆ ಸಂಘರ್ಷ ಹುಟ್ಟುವುದು ಯಾವಾಗ ಎಂಬುದೇ ಕುತೂಹಲಕರ ಸಂಗತಿ. ಉದ್ಧಾಲಕನ ಧರ್ಮ ಮತ್ತು ಅವನದೇ ಕಾಲಮಾನಕ್ಕೆ ಸಲ್ಲುವ ಶ್ವೇತಕೇತುವಿನ ಧರ್ಮದಲ್ಲಿ ಹುಟ್ಟಿದ ಬಿರುಕಿಗೆ ಕಾರಣವಾದ ಮೌಲ್ಯಭೇದ ಬಂದುದು ಎಲ್ಲಿಂದ? ತನ್ನ ತಾಯಿ ಸಂಸಾರದ ಅತಿಥಿಯೊಬ್ಬನ ದೈಹಿಕಸುಖಕ್ಕೆ, ಉಪಭೋಗಕ್ಕೆ ಇರುವ ವಸ್ತುವಲ್ಲ, ಹಾಗೆ ಅವಳನ್ನು ಒಪ್ಪಿಸುವುದು, ಅವಳು ಸ್ವತಃ ಒಪ್ಪಿಸಿಕೊಳ್ಳುವುದು ಶ್ವೇತಕೇತುವಿಗೆ ಒಪ್ಪಿಗೆಯಾಗುವುದಿಲ್ಲ. ಹಾಗಾಗಿ, ಪ್ರತಿಭಟನೆ, ಪೂಜನೀಯ ತಂದೆಯ ಭರ್ತ್ಸನೆ. ಇಲ್ಲಿ ನಾವು ಗಮನಿಸ ಬೇಕಾದ ಕೆಲವು ಸಂಗತಿಗಳಿವೆ. ಮೊದಲನೆಯದು, ಒಂದು ಕಾಲದ ಮೌಲ್ಯಗಳಿಗೆ, ಪರಂಪರೆಗೆ, ಧರ್ಮ ಎಂದು ಗುರುತಿಸಲ್ಪಟ್ಟಿದ್ದಕ್ಕೆ ಅದೇ ಕಾಲದಲ್ಲಿ ತಾರ್ಕಿಕ ಸಂಘರ್ಷ ಉಪನಿಷತ್ತಿನಲ್ಲೂ ಸಾಧ್ಯವಾಗಿತ್ತು ಎಂಬುದು. ಎರಡನೆಯದು, ಈ ಇಂಥ ಪ್ರತಿರೋಧ, ಹಳತು ಹೊಸತು ಮೌಲ್ಯಗಳ ನಡುವಿನ ಸಂಘರ್ಷ ಒಂದೇ ಸೂರಿನಡಿ ಸಾಧ್ಯವಾಗಿತ್ತು ಎಂಬುದು. ಮೂರನೆಯದು, ಉದ್ಧಾಲಕ ಮತ್ತು ಶ್ವೇತಕೇತುವಿನ ಈ ಸಂಘರ್ಷದ ಕತೆ ಉಪನಿಷತ್ತಿನಲ್ಲೇ ಹೇಳಲ್ಪಟ್ಟಿರುವುದರ ಉದ್ದೇಶ ನಮಗೆ ನೀಡುವ ಸಂದೇಶ. ಶ್ವೇತಕೇತು ಒಬ್ಬ ವಿನೀತ ಪುತ್ರನಾಗಿ, ಪಿತೃಧರ್ಮ ಪರಿಪಾಲಕನಾಗಿ ಪರಂಪರೆಯನ್ನು ಒಪ್ಪಿಕೊಂಡು ಅದನ್ನೇ ತನ್ನ ಧರ್ಮವನ್ನಾಗಿಯೂ ಸ್ವೀಕರಿಸಿ ಅದನ್ನೇ ತಾನೂ ತನ್ನ ಪತ್ನಿಯ ಜೊತೆ ಆಚರಿಸಿಕೊಂಡಿರುತ್ತ ಇರಬಹುದಿತ್ತಲ್ಲವೇ? ಅಥವಾ ಶ್ರೀನಿವಾಸ ಶ್ರೋತ್ರಿಗಳ ಹಾಗೆಯೋ ನರಸಿಂಹ ಗೌಡರ ಹಾಗೆಯೋ ಇನ್ನಷ್ಟು ಧರ್ಮಗ್ರಂಥಗಳ ಅಧ್ಯಯನ ಮಾಡಿ ಒಂದೋ ಉದ್ಧಾಲಕನ ನಿಲುವನ್ನು ಒಪ್ಪಿಕೊಂಡು ಇಲ್ಲವೆ ತಾಯಿ ಸತ್ತಾಗಲೋ ಉದ್ಧಾಲಕ ವಾನಪ್ರಸ್ಥಕ್ಕೆ(?) ಸಂದಾಗಲೋ ಸಮಸ್ಯೆ ಪರಿಹಾರವಾಯಿತೆಂದೋ ಉಪನಿಷತ್ತು ಹೇಳಬಹುದಿತ್ತಲ್ಲವೆ? ಹಾಗಾಗದಿರುವುದು ಏನನ್ನು ಹೇಳುತ್ತದೆ? ಹಾಗೆ ಅದು ಹೇಳಲ್ಪಟ್ಟಿರುವುದರಲ್ಲೇ ಒಂದು ಪಾಠವಿದೆಯಲ್ಲವೆ? ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಆರೋಗ್ಯಕರ ಅನಿಸದ್ದನ್ನು ಪ್ರತಿರೋಧಿಸುವುದನ್ನು, ನೇರವಾಗಿ ಅಂಥದ್ದನ್ನು ವಿರೋಧಿಸುವುದನ್ನು ಇದು ಎತ್ತಿಹಿಡಿಯುವುದಲ್ಲವೆ? ತದ್ವಿರುದ್ಧವಾದವುಗಳ ಮುಖಾಮುಖಿ ಇದೆ ಇಲ್ಲಿ. ಪಲಾಯನವಿಲ್ಲ. ಮೂಲ ತತ್ವದ ಸಮರ್ಥನೆಗೇ ಆಗಲಿ ಹೊಸತರ ಪ್ರತಿಪಾದನೆಗೇ ಆಗಲಿ ಪ್ರತಿರೋಧದ ನಿಲುವು, ತತ್ವ ಒಡ್ಡುವ ಸವಾಲುಗಳ ಎದುರು ನಿಲ್ಲುವ ಶಕ್ತಿ ಸಾಮರ್ಥ್ಯವಿದ್ದರೆ ಮಾತ್ರ ಅದು ಬಾಳಲು ಯೋಗ್ಯವಾಗುತ್ತದೆ, ಅಲ್ಲವೆ?

Rating
No votes yet