ನನ್ನೊಳಗಿನ ನಾನು

ನನ್ನೊಳಗಿನ ನಾನು

ನೆನಪಿನ ಅಂಗಳದಲ್ಲಿ ಇಣುಕಿ ನೋಡಿದಾಗ ಎಷ್ಟೋ ಸಂತಸದ ಕ್ಷಣಗಳು ಗರಿ ಕೆದರಿ ಹಾರಿ ನನ್ನೆದುರು ನಿಂತು ನಸು ನಗುತ್ತದೆ. ಒಂದು ವರ್ಷಕ್ಕೆ ಇರೋದು 365 ದಿನಗಳು. ಒಬ್ಬ ಮನುಷ್ಯ 100 ವರ್ಷ ಬದುಕ್ತಾನೆ ಅಂತ ಲೆಕ್ಕ ಹಾಕಿದ್ರು ಅವನು ಬದುಕೋದು ಒಟ್ಟು36,500 ದಿನಗಳು. ಅದ್ರಲ್ಲಿ ಅರ್ಧ ಭಾಗ ರಾತ್ರಿ ನಿದ್ದೆ ಮಾಡೋದ್ರಲ್ಲಿ ಕಳೆದು ಹೋಗತ್ತೆ. ಅಲ್ಲಿಗೆ ನಮಗೆ ಅಂತ ಉಳಿದದ್ದು ಬರೀ 18,250 ದಿನಗಳು. ಆಯಸ್ಸನ್ನು ದಿನಗಳ ರೀತಿ ಲೆಕ್ಕ ಹಾಕಿದ್ರೆ ಇಷ್ಟೇ ದಿನಾನ ಜೀವನ ಅನ್ನಿಸ್ತದೆ. ಅದ್ರಲ್ಲಿ ಬಾಲ್ಯ , ಮುಪ್ಪು ಅಂತ ಕಳೆದ್ರೆ ಸಿಗೋ ದಿನಗಳು ಅದಕ್ಕಿಂತ ಕಡಿಮೆ. 
ಯಾವಾಗ ಈ ರೀತಿ ದಿನ ಲೆಕ್ಕ ಹಾಕ್ತೇವೋ, ಆಗ ಇರೋ ಅಷ್ಟು ದಿನಾನಾದ್ರೂ ಸಂತೋಷದಿಂದ ಕಳೆಯೋಣ ಅನ್ನೋ ಭಾವನೆ ಬರೋದು ಸಹಜ. ಹಾಗಿದ್ರೆ ಸಂತೋಷವಾಗಿ ಇರೋದು ಹೇಗೆ? ಒಮ್ಮೆ ನಿಮ್ಮ ನಿಮ್ಮ ನೆನಪಿನ ಅಂಗಳದಲ್ಲಿ ಇಣುಕಿ ನೋಡಿ. ಸಂತೋಷ ತಾನಾಗಿ ಮುಖದ ಮೇಲೆ ಸಣ್ಣ ನಗುವಾಗಿ ಹೊರಹೊಮ್ಮುತ್ತದೆ. ಸ್ಕೂಲ್ ಟೀಚರ್ ಗೆ ಕೊಡೋಕೆ ಅಂತ ತಗೊಂಡು ಹೋದ ಅಂಗಳದ ಚಿಕ್ಕ ಚಿಕ್ಕ ಹೂವು, ಅದನ್ನು ಕೊಟ್ಟಾಗ ಟೀಚರ್ ಕೊಟ್ಟ ಸುಂದರ ಸ್ಮೈಲ್, ಬೇಸಿಗೆಯಲ್ಲಿ  ಉಪ್ಪು ಖಾರ ಹಾಕಿ ತಿಂದ ಮಾವಿನ ಕಾಯಿ, ಅಮ್ಮ ಬಟ್ಟೆ ಒಗೆಯುವಾಗ ನಾನು ಬಟ್ಟೆ ಒಗಿತೆನೆ ಅಂತ ಬಕೆಟ್ ನೀರಲ್ಲಿ ಟಪ ಟಪ ಅಂತ ಆಡಿದ ನೆನಪು, ಇನ್ನೂ ಇಂತಹ ಎಷ್ಟೊಂದು ನೆನಪುಗಳು ನಮಗೆ ಸಂತೋಷವನ್ನು ಕೊಡ್ತವೆ.ಆದ್ರೆ ಈಗಿನ ಈ ಒತ್ತಡದ ಬದುಕಿನಲ್ಲಿ ಸಂತೋಷ ಅನ್ನೋ ಭ್ರಮೆಯ ಜೀವನ ಮಾಡ್ತ ಇರ್ತೇವೆ. ಬೆಳಗಾದ್ರೆ ಪ್ರಾರಂಭಿಸೋ ಕೆಲಸ ರಾತ್ರಿ ಆದ್ರೂ ಮುಗಿಯಲ್ಲ. ಬಸ್ ಸ್ಟಾಪ್ ನಲ್ಲಿ ಬಸ್ಗೆ ಕಾಯ್ಬೇಕು, ಆಫೀಸ್ನಲ್ಲಿ ಕೆಲಸದ ರಾಶಿ, ಎಲ್ಲ ಕೆಲ್ಸ ಮುಗಿಸಿ ಸಂಜೆ ಮತ್ತೆ ಗಂಟೆ ಗಟ್ಟಲೆ ಟ್ರ್ಯಾಫಿಕ್ನಲ್ಲಿ ಕಾದು, "ಛೆ, ಸುಮ್ನೆ ಟೈಮ್ ವೇಸ್ಟ್ ಆಗ್ತಾ ಇದೆ" ಅಂತ ಗೊಣಗಿಕೊಂಡು ಮನೆ ತಲುಪೊ ಹೊತ್ತಿಗೆ ಅರ್ಧ ಜೀವ ಆಗಿರ್ತದೆ. ಹೀಗಿರೊವಾಗ ಸಂತೋಷದ ಬದುಕಿಗೆ ಸಮಯ ಎಲ್ಲಿ? 

ಸಂತೋಷ ಪಡೋದಕ್ಕು ಸುಲಭ ದಾರಿ ಇದೆ. ಬಸ್ ಸ್ಟಾಪ್ ನಲ್ಲಿ ಬಸ್ ಗೆ ಕಾಯೋವಾಗ ಮನಸಲ್ಲೇ ನಿಮಗಿಷ್ಟವಾದ ಹಾಡು ಹೇಳ್ಕೋಳಿ. ಇಲ್ಲವಾದ್ರೆ ಒಂದು ಸುಂದರವಾದ ಕತೆಗೆ ಏನಾದ್ರೂ ಸರಕು ಸಿಗ್ತದಾ ಹುಡುಕಿ. ಅದು ಇಲ್ಲದಿದ್ರೆ ಈ ದೃಶ್ಯವನ್ನು ಯಾವ ರೀತಿ ಪೈಂಟ್ ಮಾಡಬಹುದು ಯೋಚಿಸಿ. ಒಟ್ಟಿನಲ್ಲಿ, ಸಿಕ್ಕಿದ ಸ್ವಲ್ಪ ಸಮಯದಲ್ಲಿ ನನಗೋಸ್ಕರ ನಾನು ಏನು ಮಾಡ್ಕೋಬಹುದು ಅಂತ ಯೋಚಿಸಿದ್ರೆ, ಸ್ವಲ್ಪ ನಮ್ಮ ಉತ್ತಮ ಹವ್ಯಾಸದ ಕಡೆ ಗಮನ ಕೊಟ್ರೆ ಲೈಫ್ ತುಂಬಾ ಚೆನ್ನಾಗಿ ಇದೆ ಅನ್ನಿಸ್ತದೆ. ಎಷ್ಟೇ ಕೆಲ್ಸ ಇರ್ಲಿ, ಇದೊಂದು ತಾನೇ ಮಾಡ್ಲಿಕ್ಕಿರೋದು ಅಂತ ಅದಕ್ಕೊಂದು ಸ್ಮೈಲ್ ಕೊಟ್ಟು ಕೆಲ್ಸ ಮಾಡಿದ್ರೆ, ಕೆಲ್ಸ ಬೇಗ ಮುಗೀತು ಅನ್ನಿಸ್ತದೆ. ಅದರ ಜೊತೆಗೆ ಮನಸ್ಸಿಗೆ ಸಂತೋಷವೂ ಸಿಗುತ್ತದೆ. 

ನನ್ನೊಳಗೆ ನಾನು ಎಂದು ಅರಿಯುವುದು ಏನು?
ನನ್ನೊಳಗೆ ನನ್ನ ಕಾಣುವುದು ಎಂತು?
ನನ್ನೊಳಗಿನ ಒಳ್ಳೆ ಗುಣಗಳ ಬೆಳೆಸಿ,
ನನ್ನೊಳಗಿನ ವೈರಿಗಳ ಅಳಿಸಿ 
ಜೀವನ ನಡೆಸುವುದೇ ನನ್ನೊಳಗಿನ ಅರಿವು
ಇಷ್ಟ ಕಷ್ಟಗಳ ಜೊತೆಗೆ ಬೆರೆಸಿ ಬರುವುದು, 
ಬದುಕಿನ ಸುಖ ದು:ಖಗಳ ನಂಟು.
ನನ್ನ ಇಷ್ಟಗಳು ಇತರರಿಗೆ ಕಷ್ಟ ತರದಿದ್ದರೆ,
ಅದೇ ನಾವು ಇತರರಿಗೆ ಕೊಡುವ ಉಡುಗೊರೆ,
ನಮ್ಮೊಳಗೆ ನಾವು ನಡೆಸುವ ಹಬ್ಬಗಳ ಸರಮಾಲೆ . 

--ಗೀತಾ  ಪ್ರದೀಪ್

 

Rating
No votes yet