ನನ್ನ ಕಂಪ್ಯೂಟರ್‍ ಅನುಭವಗಳು - ೪

ನನ್ನ ಕಂಪ್ಯೂಟರ್‍ ಅನುಭವಗಳು - ೪

  

ಕಂಪ್ಯೂಟರಿಗೆಂಥಾ ವೈರಸ್?

 

ಸುಮಾರು ೧೯೮೯ ಇರಬೇಕು . ನಾವು ಒಬ್ಬ ಅಮೇರಿಕನ್ ತಂಡದೊಡನೆ ಅಟೋಮೇಷನ್ ಸಿಸ್ಟಮ್ ಬಗ್ಯೆ ಮಾತುಕತೆ ನಡೆಸುತ್ತಿದ್ದೆವು. ಯಾವುದೋ ತಂತ್ರಾಂಶದ ಬೆಲೆಯ ವಿಷಯ ಬಂತು. ನಮ್ಮ ಬಾಸ್ ತಮಾಷೆಗೆ "ಅದಕ್ಯಾಕೆ ಪ್ರತ್ಯೇಕ ದುಡ್ಡು. ನಮಗೊಂದು ಕಾಪಿ ಮಾಡಿ ಕೊಟ್ಟುಬಿಡಿ " ಅಂದರು. ಅದಕ್ಕೆ ಆ ಆಮೆರಿಕನ್ ಮನುಷ್ಯ ಕೂಡಾ ತಮಾಷೆಯಾಗಿ ಹೇಳಿದ " ವೈರಸ್ ಅಂತ ಕೇಳಿದ್ದೀರಾ? ಕಾಪಿ ಮಾಡಿದರೆ ಅದೂ ಬಂದೀತು" .

 

ನನಗೇನೂ ಅರ್ಥವಾಗಲಿಲ್ಲ. ವೈರಸ್ ಅಂದರೇನು. ಮೀಟಿಂಗ್ ಮುಗಿದ ಮೇಲೆ ನನ್ನ ಸೀನಿಯರ್‍ ಗಳನ್ನು ಕೇಳಿದೆ. ಅವರು ಅದರ ಬಗ್ಯೆ ಹೇಳಿದರು. ಕೆಲವೇ ದಿನಗಳಲ್ಲಿ ಈ ಬಗ್ಯೆ ಪೇಪರಿನಲ್ಲಿ ಬರತೊಡಗಿತು. ಬಹುಶಃ ಮೊದಲ ವೈರಸ್ ಪಾಕಿಸ್ತಾನದಿಂದ ಬಂದಿತ್ತು ಅಂತ ಕಾಣುತ್ತೆ ( ಪಾಕಿಸ್ತಾನ ಅಂದರೆ ಬರಿಯ ಕೆಟ್ಟ ಇಮೇಜ್ ಯಾಕೋ!) . ಆ ವೈರಸ್ಸಿಗೆ ಮುಂಬಯಿಯ ನೆವಿಲ್ ಬಲ್ಸಾರ ಎಂಬಾತ ಪರಿಹಾರ ಕಂಡುಹಿಡಿದು ಪ್ರಸಿದ್ಧನಾದ. Microcomputer User's Club ನಲ್ಲಿ ಇವನ ಒಂದು ಉಪಸ್ಯಾಸ ಏರ್ಪಡಿಸಿದರು. ಬಹಳ ಮಾಹಿತಿಪೂರ್ಣವಾಗಿತ್ತು.

 

ಅಲ್ಲಿಂದ ಮುಂದಕ್ಕೆ ವೈರಸ್ ಬಗ್ಯೆ ನಮ್ಮೆಲ್ಲರಲ್ಲಿ ಸಾಕಷ್ಟು ಜಾಗೃತಿ ಉಂಟಾಯಿತು. ಅದರಲ್ಲೂ ನಮ್ಮ ಅಟೋಮೇಷನ್ ಸಿಸ್ಟಮ್ಮುಗಳಲ್ಲಿ PC ಗಳ ಉಪಯೋಗ ಇದ್ದಿದ್ದರಿಂದ , ಅಲ್ಲಿ ಸಿಕ್ಕ ಸಿಕ್ಕ ಫ್ಲಾಪಿ ಉಪಯೋಗಿಸುವ ಬಗ್ಯೆ ನಿಯಂತ್ರಣ ಹಾಕಿದೆವು.

 

ನನ್ನ ಮೊದಲ PC

 

ಇಷ್ಟರಲ್ಲಿ ನನಗೆ ಸ್ವಂತಕ್ಕೆ ಒಂದು ಕಂಪ್ಯೂಟರ್‍ ತಗೋಬೇಕು ಅನ್ನೋ ಒಂದು ಬಲವಾದ ಆಸೆ ಇತ್ತು. ಆಗ ಒಂದು ಕಂಪ್ಯೂಟರಿನ ಬೆಲೆ ಸುಮಾರು ೨೫,೦೦೦ ರೂಪಾಯಿ. ಅದು ನಾನು ಪ್ರತಿ ತಿಂಗಳು ಮನೆಗೆ ಒಯ್ಯುವ ಸಂಬಳದ ನಾಲ್ಕು ಪಟ್ಟು. ಹಾಗಾಗಿ ಹಿಂಜರಿದೆ. ಆಗ ಮನೆಯಲ್ಲಿ PC ಇಟ್ಟುಕೊಂಡವರ ಸಂಖ್ಯೆ ಬಹಳ ಕಡಿಮೆ ಇತ್ತು. ಅದೇ ಸಮಯಕ್ಕೆ ET & T ಎಂಬ ಕೇಂದ್ರ ಸರಕಾರದ ಉದ್ಯಮವೊಂದು People's Computer ಅನ್ನುವ PCಯನ್ನು ಹೊರತಂದಿತು, ೧೧,೦೦೦ ರೂಪಾಯಿಗೆ. ನಾನು ಅಂಥ ಒಂದು PC ಕೊಂಡುಕೊಂಡೆ. ಅದರ specificationsಹೀಗಿತ್ತು

 

Processor speed: 9.77 khz

RAM : 640 KB

Hard disk : NIL !!

Floppy Drive: 1 no. (360 KB) 5 ¼ inch

Monitor : Black and White CGA .

Mouse: No (ಬಹುಷಃ ಇನ್ನೂ ಅನ್ವೇಷಣೆ ಹಂತದಲ್ಲಿತ್ತು ಅಂತ ಕಾಣುತ್ತದೆ. ನಮಗಂತೂ ಮೌಸ್ ಅಂತ ಕೇಳಿಯೇ ಗೊತ್ತಿರಲಿಲ್ಲ)

Software : DOS (3.0?), word processing , spread sheet and data base ( ಇವೆಲ್ಲಾ ತಲಾ ಒಂದೊಂದು ೩೬೦ ಕೆಬಿ ಫ್ಲಾಪಿಯಮೇಲೆ ಬಂದಿದ್ದವು. )

 

PCಯನ್ನು ಬೂಟ್ ಮಾಡಬೇಕಾದರೆ DOS ಫ್ಲಾಪಿ ಹಾಕಬೇಕಾಗುತ್ತಿತ್ತು. . ಆಮೇಲೆ ಬೇಕಾದ ಫ್ಲಾಪಿಯನ್ನು ಹಾಕಿ ಕೆಲಸಮಾಡಬೇಕಾಗಿತ್ತು. word proessing , spread sheet and data base ಎಲ್ಲಾ ಸಾಕಷ್ಟು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದವು, ನಿಧಾನ ಅನ್ನುವುದನ್ನು ಬಿಟ್ಟರೆ. ಅಷ್ಟರಲ್ಲಿ ನನಗೊಂದು ಅನಿಮೇಷನ್ ಸಾಫ್ಟ್ವೇರ್‍ ಸಿಕ್ಕಿತ್ತು . ಅದನ್ನು ಉಪಯೋಗಿಸಿ , ನಂಬರುಗಳು, ಇಂಗ್ಲೀಷ್ ಅಕ್ಷರಗಳು ಇತ್ಯಾದಿ ಗಳ ಅನಿಮೇಷನ್ ಮಾಡಿ ನನ್ನದೇ PCಯ ಮೇಲೆ ಆಗ ಎರಡು ವರ್ಷದ ನನ್ನ ಮಗನಿಗೆ ಕಲಿಸಲು ಉಪಯೋಗಿಸಿದೆ.

 

ಆಗ ೩೬೦ ಕೆಬಿ ಫ್ಲಾಪಿ ಹೋಗಿ ಅದರ ಜಾಗದಲ್ಲಿ ೧ ಎಂಬಿ ಫ್ಲಾಪಿ ಮಾರ್ಕೆಟ್ಟಿನಲ್ಲಿ ಬರುತ್ತಿತ್ತು. ನನ್ನ ಡ್ರೈವಿನಲ್ಲಿ ಅದು ನಡೆಯುತ್ತಿರಲಿಲ್ಲ. ಸರಿ ೧ ಎಂಬಿ ಡ್ರೈವ್ ತಗೋಬೇಕು ಅಂತ ಹಂಬಲ ಶುರುವಾಗಿ, ಸ್ವಲ್ಪ ಕಾಲದಲ್ಲಿಯೇ ಕೊಂಡುಕೊಂಡೆ. ಆಗ ಪಟ್ಟ ಆನಂದ ಅಂದರೆ ಕೇಳಬೇಡಿ !

ಮುಂದೆ ಒಂದು -ಎರಡು ವರ್ಷಗಳಲ್ಲಿ ಈ ಕಂಪ್ಯೂಟರ್‍ ತೊಂದರೆ ಕೊಡಲು ಪ್ರಾರಂಭಿಸಿತು. ಬೂಟ್ ಮಾಡುವಾಗ, ಅಥವಾ ಕೆಲಸ ಮಾಡುವಾಗ ಇದ್ದಕ್ಕಿದ್ದ ಹಾಗೇ ನೇಣು ಹಾಕಿಕೊಳ್ಳುತ್ತಿತ್ತು :-) . ಮದರ್‍ ಬೋರ್ಡಿನ ಮೇಲೆ RAM ಚಿಪ್ಪುಗಳನ್ನು ಸಾಕೆಟ್ಟುಗಳಲ್ಲಿ ಜೋಡಿಸಿದ್ದರು. ಅಂಥಾ ೯ ಬ್ಯಾಂಕುಗಳಿತ್ತು. ಒಂದೊಂದರಲ್ಲಿ ಎಂಟೆಂಟು. ಕಂಪ್ಯೂಟರ್‍ ನಿಂತಾಗಲೆಲ್ಲ ಈ ಚಿಪ್ಪುಗಳನ್ನು ತೆಗೆದು ಅದರ ಕಾಲುಗಳನ್ನು :-) ಒರೆಸಿ ಸ್ವಚ್ಛ ಮಾಡಿ ಮತ್ತೆ ಹಾಕುತ್ತಿದ್ದೆ. ಮತ್ತೆ ನಡೆಯುತ್ತಿತ್ತು.

ಹೀಗೆ ಸ್ವಲ್ಪ ಕಾಲದ ನಂತರ ಅದೂ ನಿಂತಿತು. ಈಗ ಚಿಪ್ಪುಗಳ ಜಾಗ ಅದಲುಬದಲು ಮಾಡತೊಡಗಿದೆ. ಅದೂ ಒಂದಷ್ಟು ಕಾಲ ನಡೆಯಿತು. ಕೊನೆಗೆ ಕಂಪ್ಯೂಟರ್‍ ನಡೆಯುವ ಹೊತ್ತಿಗೆ ಇದ್ದಕ್ಕಿದ್ದಂತೆ ನಿಧಾನವಾಗತೊಡಗಿತು. ಯಾಕೆ ಅಂತ ತಲೆಬಿಸಿಯಾಗಿ , ಮತ್ತೆ ಮತ್ತೆ ಬೂಟ್ ಮಾಡಿ ನೋಡಿದರೆ , ೬೪೦ ಕೆಬಿ ಯ ಜಾಗದಲ್ಲಿ ೫೧೨ ಕೆಬಿ ಮಾತ್ರ ಕೆಲಸ ಮಾಡುತ್ತಿತ್ತು ! ಇಷ್ಟೆಲ್ಲ ಆದರೂ ಕಂಪ್ಯೂಟರ್‍ ಪೂರಾ ಕೈಕೊಡಲಿಲ್ಲ. ಈಗಾಗಲೇ ಹಂಬಲಿಸಿ, ಹಂಬಲಿಸಿ, ಒಂದು ಹಾರ್ಡ್‌ಡಿಸ್ಕ್ ಬೇರೆ ಅಳವಡಿಸಿದ್ದೆ. ೨೦ ಎಂಬಿಯದು ! ಮೊದಲ ಸಲ ಫ್ಲಾಪಿಯಿಲ್ಲದೆ ಬೂಟ್ ಮಾಡಿದಾದ ಸ್ವರ್ಗವೇ ಕೆಳಗಿಳಿದಂತಾಗಿತ್ತು.

ಮುಂದುವರಿಯುವುದು....  (Y2K ಎಂಬ ಗುಮ್ಮ)

Rating
No votes yet

Comments