ನನ್ನ ಕಂಪ್ಯೂಟರ್‍ ಅನುಭವಗಳು - ೫

ನನ್ನ ಕಂಪ್ಯೂಟರ್‍ ಅನುಭವಗಳು - ೫

Y2K ಎಂಬ ಗುಮ್ಮ !

ಪೇಪರುಗಳಲ್ಲಿ ಒಳಪುಟದಲ್ಲೆಲ್ಲೋ ಪ್ರಾರಂಭವಾದ ಸುದ್ದಿ ಬೇಗನೇ ಮುಖ ಪುಟಕ್ಕೇ ಬಂತು. ಹಾರುತ್ತಿರೋ ವಿಮಾನ ಹಠಾತ್ತನೆ ಉರುಳಿ ಬಿದ್ದೀತೇ? ಬ್ಯಾಂಕಿನ ನಮ್ಮ ಹಣ ಇನ್ನೊಬ್ಬರ ಅಕೌಂಟಿಗೆ ಹೋದೀತೇ? ಪರಮಾಣು ಬಾಂಬು ಅಕಸ್ಮಾತ್ತಾಗೆ ಸಿಡಿದೀತೇ? ಇತ್ಯಾದಿ ಪ್ರಳಯಾಂತಕ ಸುದ್ದಿ ಕೇಳಬರತೊಡಗಿತು. ಯಾಕೆ ಅಂದರೆ, ಕಂಪ್ಯೂಟರಿನಲ್ಲಿ ತಾರೀಖಿನ ಮಿತಿಯಿಂದ ಹಂಗೆಲ್ಲಾ ಆಗಬಹುದು ಅಂತ ಅವರೆಲ್ಲರ ಅಂಬೋಣವಾಗಿತ್ತು.

ಸರಿ, ದೊಡ್ಡ ಕಂಪನಿಯಾದ ನಾವು ಸುಮ್ಮನಿರಲಾಗುತ್ತದೆಯೇ. ನಮ್ಮಲ್ಲಿರುವ ವಿವಿಧ ಕಂಪ್ಯೂಟರೈಸ್ಡ್ ಸಿಸ್ಟಮುಗಳನ್ನು ಪರಿಶಿಲಿಸಿ , ಸಪ್ಲೈ ಮಾಡಿದವರನ್ನು ಸಂಪರ್ಕಿಸಿ , ಅವರಿಂದ ಏನೂ ಆಗುವುದಿಲ್ಲ ಅನ್ನೋ ಭರವಸೆ , ಅಥವಾ ಏನೂ ಆಗದಂತೆ ಮಾಡುವುದಕ್ಕೆ ಕೊಟೇಶನ್ ಪಡೆದುಕೊಂಡು upgrade ಮಾಡುವುದು ಇತ್ಯಾದಿಗಳಿಗೆ ಒಂದು ದೊಡ್ಡ task force ರಚನೆಯಾಗಿ
ಕೆಲಸ ಪ್ರಾರಂಭಿಸಿತು. ಅನೇಕ upgrade ಮಾಡಿದೆವು. ಕೆಲವು ಹಳೆಯದನ್ನು ತೆಗೆದು ಹೊಸ ಸಿಸ್ಟಮ್ ಹಾಕಿದೆವು. ಅಂತೂ ನಮ್ಮ ಯಾವುದೇ ಮಶಿನು ನಿಲ್ಲದೇ , ಯಾವುದೇ ಅನಾಹುತವಾಗದೇ ಸುಸೂತ್ರ ೨೦೦೦ಕ್ಕೆ ತಲುಪಿದೆವು.

ಅನೇಕ ಹಳೆಯ ಸಿಸ್ಟಮುಗಳು ಈ ನೆವದಲ್ಲಿ ಬದಲಾದದ್ದಂತೂ ಸತ್ಯ. ಹಾಗೆಯೇ ಇದೇ ನೆವದಲ್ಲಿ ಕೆಲವರಾದರೂ ಕಂಪನಿಗಳು, ಜನಗಳು ಹೊಸ upgrade ಸುಮ್ಮಸುಮ್ಮನೆ ಮಾರಿ ದುಡ್ಡು ಮಾಡಿಕೊಂಡರು ಅಂತ ನನಗೆ ಗುಮಾನಿ ಇದ್ದೇ ಇದೆ.

ವಿಂಡೋಸ್ ಬಂತು ! ವಿಂಡೋಸ್ ಬಂತು !

ನಾವೆಲ್ಲಾ ಆ ಕಾಲದಲ್ಲಿ DOS OS ಮೇಲೆ ನಡೆಯುತ್ತಿದ್ದ Lotus 123, Multimate, Wordstar ಇತ್ಯಾದಿ ಪ್ರೋಗ್ರಾಮುಗಳನ್ನು ಉಪಯೋಗಿಸಿ , ಅವುಗಳ ವಿಧವಿಧ features ಕಂಡುಹಿಡಿಯಲು ಕುತೂಹಲ ಪಡುತ್ತಾ ಇದ್ದೆವು. ಇಂದು ನಾವೆಲ್ಲಾ ನೀರು ಕುಡಿದಷ್ಟು ಸುಲಭವಾಗಿ ಉಪಯೋಗಿಸುವ Ctrl C Ctrl V ಇತ್ಯಾದಿ ಆಗಿನ್ನೂ ಸಾಧ್ಯವಿರಲಿಲ್ಲ. ಯಾಕೆಂದರೆ ಪ್ರತಿಯೊಂದು ಪ್ರೋಗ್ರಾಮಿಗೂ ಅವರದ್ದೇ Short Cut Key ಕಾಂಬಿನೇಷನ್ ! ಹಾಗಾಗಿ Multimate ಪರಿಣಿತರು Wordstarನಲ್ಲಿ ತಡಬಡಾಯಿಸಬೇಕಾಗುತ್ತಿತ್ತು. ಆದರೂ ಅದಕ್ಕೆಲ್ಲಾ ತಲೆಬಿಸಿ ಮಾಡಿಕೊಳ್ಳದೇ ಇದ್ದದ್ದನ್ನೇ ಖುಶಿಯಿಂದ ಉಪಯೋಗಿಸುತ್ತಿದ್ದವು. ನಮ್ಮ ಕಂಪ್ಯೂಟರ್‍ ಪ್ರಪಂಚ cd\, chkdsk, dir , copy ಇತ್ಯಾದಿಗಳಿಗೆ ಸೀಮಿತವಾಗಿತ್ತು..

ಇಷ್ಟು ಹೊತ್ತಿಗೆ , ವಿಂಡೋಸ್ ಅಂತ ಹೊಸ OS ಬಗ್ಯೆ ಅಲ್ಲಲ್ಲಿ ಓದಲಿಕ್ಕೆ , ಕೇಳಲಿಕ್ಕೆ ಸಿಗತೊಡಗಿತು. ಕೆಲ ಸಮಯದಲ್ಲಿಯೇ ನಮ್ಮದೇ ಒಂದು PCಯಲ್ಲಿ ಬಂತು. ಅದು ಬಹುಷಃ Version 2.1 . ಅದನ್ನು ಮೊದಲ ಬಾರಿ ನೋಡಿದ್ದು ನನಗೆ ನೆನಪಿದೆ.ಅದರ ಹಿಂದೆಯೇ 3.1 ಬಂತು . ಇಲ್ಲಿಂದ ಮುಂದೆ ವಿಂಡೋಸ್ OS ನಮ್ಮ ಕಂಪ್ಯೂಟರ್‍ ಜೀವನದ ಅನಿವಾರ್ಯ ಭಾಗವಾಗತೊಡಗಿತು. Windows 95 ಬಿಡುಗಡೆಯ ಮುಂಚೆ ಬಹಳ ನಿರೀಕ್ಷೆ ಉಂಟು ಮಾಡಿತ್ತು . ಹಾಗೂ ಕೆಲವೆಲ್ಲಾ ಒಳ್ಳೆಯ features ಅದರಿಂದಲೇ ಶುರುವಾಯಿತು ಅಂತ ನೆನಪು. ಅಲ್ಲಿಂದ ಮುಂದೆ ವಿಂಡೋಸ್ ಬದಲಾದದ್ದು ಈಚೆಗಿನ ವಿಷಯ , ಆದ್ದರಿಂದ ನಾನೇನೂ ಹೇಳುವುದಿಲ್ಲ.

ವಿಂಡೋಸ್ ಬಹಳ ಹೊಸ ಹೊಸ features , GUI, click and drag ಇತ್ಯಾದಿಗಳನ್ನು ತಂದು ನಮ್ಮ ಕೆಲಸ ಹಗುರ ಮಾಡಿದ್ದೇನೋ ಹೌದು. ಯಾವುದೇ commandಗಳನ್ನು ನೆನಪಿಟ್ಟುಕೊಳ್ಳುವ ಅನಿವಾರ್ಯತೆ ಮಾಯವಾಯಿತು. "Wrong Command or Filename " ಅನ್ನುವ ಪದಗುಚ್ಛ ಇತಿಹಾಸ ಸೇರಿತು.

ಆದರೆ, ಅದರೊಂದಿಗೇ ನಮ್ಮ ಕಂಪ್ಯೂಟರುಗಳೂ ಹೆಚ್ಚು ಹೆಚ್ಚು ಜಟಿಲವಾಗುತ್ತಾ ನಡೆದವು. ಅಲ್ಲಿಯವರೆಗೂ ಬರಿಯ exe file ಕಾಪಿ ಮಾಡಿಕೊಂಡು ಪ್ರೋಗ್ರಾಮ್ ನಡೆಸಹುದಾಗಿದ್ದ ಸುಲಭ ವಿಧಾನ ತಪ್ಪಿಹೋಯಿತು. Install , Setup ಇತ್ಯಾದಿಗಳ ಯುಗ ಪ್ರಾರಂಭವಾಯಿತು. ಒಂದೊಂದು ಪ್ರೋಗ್ರಾಮಿನದ್ದೂ ಹತ್ತಾರು ಥರದ ,ಬೇರೆ ಬೇರೆ folderಗಳಲ್ಲಿ ಅವಿತಿರುವ ನೂರಾರು , ಸಾವಿರಾರು fileಗಳು. ಒಟ್ಟಿನಲ್ಲಿ ಅಲ್ಲಿಯವರೆಗೂ ನನಗಿದ್ದ ಕಂಪ್ಯೂಟರ್‍ ಬಗ್ಯೆ ಅಲ್ಪ ಸ್ವಲ್ಪ ತಿಳುವಳಿಕೆ ಈಗ Irrelevant ಆಗತೊಡಗಿತು. ಕಂಪ್ಯೂಟರ್‍ ಚೆನ್ನಾಗಿ ನಡೆಯುತ್ತಿದ್ದಾಗ ಎಷ್ಟು ಮಜವೋ, ನಡೆಯದೇ ಇದ್ದಾಗ ಅಷ್ಟೇ ಅಸಹಾಯಕತೆಯನ್ನೂ ಉಂಟುಮಾಡತೊಡಗಿತು.

ಆದರೂ ಕಂಪ್ಯೂಟರ್‍ ನನ್ನ ಆಸ್ಥೆಯ ವಿಷಯವಾಗಿ ಇಂದಿಗೂ ಉಳಿದುಕೊಂಡಿದೆ ಅನ್ನುವುದಂತೂ ಸತ್ಯ.

ಮುಗಿಯಿತು

Rating
No votes yet