ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್‌ನಲ್ಲಿಯ ಬುಲೆಟ್

ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್‌ನಲ್ಲಿಯ ಬುಲೆಟ್

ನಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ ನಂತರ ಬಂದ ಬಹುಪಾಲು ಅಭಿಪ್ರಾಯಗಳನ್ನು ಇತ್ತೀಚೆಗೆ ತಾನೆ ವೆಬ್‍ಸೈಟಿನಲ್ಲಿ ಹಾಕಿದ್ದೇನೆ. ಭಾರತದ ನನ್ನ ತಲೆಮಾರಿನ ತಲ್ಲಣ, ಆಶಾವಾದ, ಕನಸುಗಳು, ಆದರ್ಶಗಳು, ಸಿನಿಕತೆ, ಎಲ್ಲವೂ ಇಲ್ಲಿವೆ.
http://www.ravikrishnareddy.com/feedback.html

ಇದು ಪಯಣದ ಆರಂಭ. ಜೀವನ ಸಾರ್ಥಕ್ಯದ ಕ್ಷಣಗಳು ಈಗ ಆರಂಭವಾಗಿದೆ. ಒಂದಿಡೀ ತಿಂಗಳು ಮನಸ್ಸು ಎಲ್ಲಾ ತರಹದ ಗೊಂದಲ, ಗೊಜಲು, ಆಮಿಷ, ಒತ್ತಡ, ಮಮಕಾರ, ಆಸೆ, ಆಕಾಂಕ್ಷೆ, ಭಯಗಳಿಂದ ಮುಕ್ತವಾಗಿತ್ತು. ಬಹುಶಃ ಮೊದಲ ಬಾರಿಗೆ ಅನುಭವಿಸಿದ ಆತ್ಮತೃಪ್ತಿಯ ದಿನಗಳು ಅವು. ಸಂಪೂರ್ಣ ಆದರ್ಶದಲ್ಲಿ ನಡೆದುಕೊಂಡ ಕಾಲ. ಎಲ್ಲಿಯೂ ರಾಜಿಯಾಗಲಿಲ್ಲ. ಆತ್ಮಸಾಕ್ಷಿಗೊಪ್ಪದ್ದನ್ನು ಹೇಳಲಿಲ್ಲ, ಮಾಡಲಿಲ್ಲ.

ಇನ್ನೆರಡು ದಿನದಲ್ಲಿ ಕರ್ನಾಟಕದ ಚುನಾವಣಾ ಫಲಿತಾಂಶ ಬರಲಿದೆ. ಹತ್ತು ಲಕ್ಷದ ಮಿತಿಯೊಳಗೆ, ಕಾನೂನುಬದ್ಧವಾಗಿ ಚುನಾವಣೆ ನಡೆಸಿದ ಯಾರೊಬ್ಬರೂ ಗೆಲ್ಲುವ ಸೂಚನೆಗಳು ಇಲ್ಲ. ಕೆಲವು 'ಅತಿ ಬುದ್ಧಿವಂತರು' ಚುನಾವಣಾ ಆಯೋಗ ಅಭೂತಪೂರ್ವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಅಲ್ಪಬುದ್ಧಿಗೆ, ಅಲ್ಪತೃಪ್ತಿಗೆ ಶರಣಾಗಿದ್ದಾರೆ. ಆದರೆ, ಕಾನೂನು ಜಾರಿ ಮಾಡಲಾಗದ ಚುನಾವಣಾ ಆಯೋಗವೆ ಈ ಕೆಟ್ಟ ರಾಜಕೀಯ ವ್ಯವಸ್ಥೆಯ ಮಹಾಪೋಷಕ. ಒಳ್ಳೆಯದಕ್ಕೆ ಬದಲಾಗುತ್ತಿರುವ ಮತ್ತು ಬಲವಾಗುತ್ತಿರುವ ಭಾರತದ ಕಾನೂನು ವ್ಯವಸ್ಥೆಯ ಪರ ನಾನೂ ಇದ್ದೇನೆ ಎಂಬ ಹುಸಿ ನಟನೆ ಆಯೋಗದ್ದು. ಅಭ್ಯರ್ಥಿಗಳು ಕೋಟಿಕೋಟಿ ಖರ್ಚು ಮಾಡಿ ಕೇವಲ ಒಂದೆರಡು ಲಕ್ಷಗಳ ಲೆಕ್ಕ ತೋರಿಸಿದರೂ ಆಯೋಗ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುತ್ತದೆ ಎಂದರೆ, ಇದೊಂದು ಪ್ರಜಾಪ್ರಭುತ್ವ ಪರವಿಲ್ಲದ, ಕಾನೂನನ್ನು ಬಿಗಿಯಾಗಿ ಜಾರಿಗೊಳಿಸಲಾಗದ ಅಧಿಕಾರಿಗಳ ಕೂಟ. ಇದು ಬದಲಾಗಬೇಕು. ಆದರೆ ಇದನ್ನು ಸಾಧಿಸುವುದು ಹೇಗೆ?

ಇನ್ನು ಎರಡು ದಿನದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶವೂ ಬರುವ ಸಾಧ್ಯತೆಗಳಿವೆ. ನಾನು ಚುನಾವಣಾ ಅಯೋಗಕ್ಕೆ ಕೊಟ್ಟಿರುವ ದೂರಿಗೆ ಇನ್ನೂ ಉತ್ತರ ಬಂದಿಲ್ಲ ಮತ್ತು ಅವರು ಮುಂದಕ್ಕೆ ಏನು ಮಾಡಲಿದ್ದಾರೆ ಎನ್ನುವ ಬಗ್ಗೆಯೂ ಗೊತ್ತಾಗುತ್ತಿಲ್ಲ. "ಮತಎಣಿಕೆ ಪ್ರಕ್ರಿಯೆಗೆ ಸ್ಟೇ ಆರ್ಡರ್ ತರಲು ಆಗುವುದಿಲ್ಲ, ಯಾವುದಕ್ಕೂ ಫಲಿತಾಂಶ ಬರುವ ತನಕ ಕಾಯಬೇಕು," ಎಂದು ವಕೀಲರು ಹೇಳುತ್ತಿದ್ದಾರೆ. ಕೇಸು ಹಾಕಲು ಕೆಲವು ದಾಖಲೆಗಳು ಬೇಕಾಗಿವೆ. ಆಯೋಗ ನಮಗೆ ಒದಗಿಸಬೇಕಾದ ದಾಖಲೆಗಳನ್ನು ಇನ್ನೂ ಒದಗಿಸಿಲ್ಲ. ಏನೇ ಇರಲಿ, ಒಂದು ಸುದೀರ್ಘವಾದ ಕಾನೂನು ಸಮರಕ್ಕೆ ಎಲ್ಲಾ ಸಜ್ಜಾಗುತ್ತಿದೆ. ಸದ್ಯದ ಗುರಿ, "ಜಯನಗರ ಕ್ಷೇತ್ರದಲ್ಲಿ ಮರುಚುನಾವಣೆ ನಡೆಯುವಂತೆ ಮಾಡಬೇಕು ಮತ್ತು ಆಗ ಯಾವೊಬ್ಬ ಅಭ್ಯರ್ಥಿಯೂ ಹತ್ತು ಲಕ್ಷದ ಮಿತಿಗಿಂತ ಹೆಚ್ಚಿಗೆ ಖರ್ಚು ಮಾಡಬಾರದ ಕಾನೂನು ಜಾರಿಯಾಗುವಂತೆ ಮಾಡಬೇಕು," ಎನ್ನುವುದು. ಇದು ಕೇವಲ ಕರ್ನಾಟಕಕ್ಕಷ್ಟೇ ಅಲ್ಲದೆ, ಇಡೀ ದೇಶದ ಕಾನೂನು ಉಲ್ಲಂಘಕ ಅನೈತಿಕ ರಾಜಕಾರಣಿಗಳಿಗೆ ಮತ್ತು ಭ್ರಷ್ಟ ವ್ಯವಸ್ಥೆಗೆ ಸ್ಪಷ್ಟ ಸಂದೇಶ ರವಾನಿಸುತ್ತದೆ ಮತ್ತು ಮೌಲ್ಯ ಮತ್ತು ನೈತಿಕತೆ ಇರುವ ಯೋಗ್ಯರು ಸಾರ್ವಜನಿಕ ಬದುಕಿಗೆ ಬರಲು ಪ್ರೇರೇಪಿಸುತ್ತದೆ. ಸದ್ಯದ ಫಲಿತಾಂಶ ಮತ್ತು ಕೇಸು ಏನೇ ಆಗಲಿ, ಅಂತಿಮ ಗುರಿ ಇದೇನೆ.

ಕಳೆದ ಎರಡು ದಿನಗಳಿಂದ ನನ್ನ ವೈಯಕ್ತಿಕ ಸರಹದ್ದಿನಲ್ಲಿ ಆಗುತ್ತಿರುವ ಘಟನೆಗಳ ರೂಪಕ ಹೀಗಿದೆ:

ನಾನದನ್ನು ಬಯಸಿರಲಿಲ್ಲ. ಆದರೆ, ಸಮಯ ಮತ್ತು ಸಂದರ್ಭ ನನ್ನ ಕೈಯ್ಯಲ್ಲಿ ರಿವಾಲ್ವರ್ ಇಟ್ಟಿದೆ. ಟ್ರಿಗರ್ ಒತ್ತಲೇಬೇಕಾದ ಅನಿವಾರ್ಯತೆಯನ್ನೂ ನಿರ್ಮಿಸಿದೆ. ಈ ರಿವಾಲ್ವರ್‍‌ನಲ್ಲಿ ಗುಂಡು ಇದೆಯೊ ಇಲ್ಲವೊ ನನಗೆ ಗೊತ್ತಿಲ್ಲ. ಪಿಸ್ತೂಲಿನ ಅತ್ತ ಇರುವವರಲ್ಲಿ ಕೆಲವರು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಅದರಲ್ಲಿ ಅವರಿಗಷ್ಟೆ ತಗಲುವ ಬುಲೆಟ್ ಇದೆ ಎಂಬ ಭಯ. ನಾನಂತೂ ಟ್ರಿಗರ್ ಒತ್ತುತ್ತೇನೆ. ಅದು ಪಾಲಿಗೆ ಬಂದಿರುವ ಕರ್ತವ್ಯ. ಅತ್ತ ಕಡೆಯವರೆಲ್ಲರಿಗೂ ತಗಲುವ ಗುಂಡು ಇದರಲ್ಲಿ ಇದ್ದದ್ದೇ ಆದರೆ, ಆದರ್ಶ ರಾಜಕೀಯದ ಭವಿಷ್ಯ ನಿರ್ಮಾಣದ ಹೊಸ್ತಿಲಲ್ಲಿ ನಾವಿದ್ದೇವೆ.
Rating
No votes yet