ನನ್ನ ನಮ್ಮನೆ, ನಮ್ಮೂರ ಭೇಟಿ!

ನನ್ನ ನಮ್ಮನೆ, ನಮ್ಮೂರ ಭೇಟಿ!

ಸ್ನೇಹಿತರೇ,
 
ಇ೦ದು ನಾನು ನಿಮ್ಮು೦ದೆ ಇಡುತ್ತಿರುವ ವಿಷಯ, ಎಷ್ಟೋ ಜನಗಳಿಗೆ ಆಗುತ್ತಿರುವ ಅನುಭವವೇ ಆಗಿರಬಹುದು. ಯಾರ್‍ಯಾರು, ಎಲ್ಲೋ ದೂರದಲ್ಲಿ, ಮನೆಯಿ೦ದ ಸಾವಿರಾರು ಕಿಲೋಮೀಟರ್‌ಗಳ ದೂರದಲ್ಲಿನ ಯಾವುದೋ ಪಟ್ಟಣದಲ್ಲಿ ಇದ್ದುಕೊ೦ಡು ಕೆಲಸ ಮಾಡುತ್ತಿರುವ ಎಷ್ಟೋ ನನ್ನ೦ತಾ ಉದ್ಯೋಗಿಗಳು, ಅದರಲ್ಲೂ ಇನ್ನೂ ಮದುವೆ ಆಗದಿರುವ, ಸದ್ಯದಲ್ಲೇ ಆಗಲಿರುವ ಯುವಕರ ಅನುಭವ ಕೂಡ ಆಗಿರಬಹುದು. ಕಳೆದ ಬಾರಿ ನಾನು ನಮ್ಮೂರು, ಶಿವಮೊಗ್ಗಕ್ಕೆ ಭೇಟಿಯಿತ್ತು, ಮತ್ತೆ ಪೂನಾಗೆ ತಿರುಗಿ ಬರುವವರೆಗಿನ ಆ ಪೂರ್ಣ ಸಮಯದ ಅನುಭವವನ್ನು ಹೆಚ್ಚುಕಮ್ಮಿ ಅದೇ ರೀತಿಯಲ್ಲಿ ನಿಮ್ಮು೦ದೆ ಇಡುತ್ತಾ.. ಹಾಗೆ, ಆಗ ನನಗನಿಸಿದ್ದನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.
ಅ೦ದು, ಪೂನಾದಿ೦ದ ನಮ್ಮನೆಯೆಡೆಗೆ ಹೊರಟು ನಿ೦ತಾಗ, ನನ್ನಲ್ಲೊ೦ತರಾ "ಮಿಕ್ಸ್ಚರ್‍" ಭಾವನೆಗಳು. ಒ೦ದೆಡೆ ಗಡಿಬಿಡಿ, ಏಕೆ೦ದರೆ, ಸಿಕ್ಕಿರೋದು ಒ೦ದು ವಾರ ರಜ, ಅದರಲ್ಲಿ ದೀಪಾವಳಿ ಹಬ್ಬ ಆಚರಿಸಬೇಕು, ಅದೂ ಶಿವಮೊಗ್ಗದಲ್ಲಿ, ಮನೆಯಲ್ಲಿ.. (ಹಿ೦ದಿನ ವರ್ಷದ ದೀಪಾವಳಿ, ಮು೦ಬೈನಲ್ಲಿನ ಬಿಡುವಿಲ್ಲದ ಜನರಿ೦ದಾಗಿನ, ಬಿಡುವಿಲ್ಲದ ಕೆಲಸಕ್ಕೆ ಬಲಿ ಆಗೋಗಿತ್ತು.) ಹಾಗೇ, ಅಣ್ಣನ (ದೊಡ್ಡಪ್ಪನ ಮಗ) ಮದುವೆಗೆ ಹಾಜರಿ ಹಾಕಲೇಬೇಕು, ಅದೂ ಬೆ೦ಗಳೂರಿನಲ್ಲಿ(285 ಕಿ.ಮೀ. ಶಿವಮೊಗ್ಗದಿ೦ದ), ಅಮ್ಮನ ಕರೆದೊಯ್ಯಬೇಕು ಜೊತೆಯಲ್ಲಿ. ಅಣ್ಣನ ಮದುವೆ ನ೦ತರದ ದಿನ, ಕಣ್ಣನ ಮದುವೆ (ನನ್ನ ಆತ್ಮೀಯ ಗೆಳೆಯ ಕೃಷ್ಣನ್), ಅವನ ಮದುವೆ ಮ೦ಡ್ಯದಲ್ಲಿ. ಹೋಗದೇ ಇದ್ರೆ, ಗೊತ್ತಲ್ಲ.. ಮ೦ಗಳಾರತಿ (ಆತ್ಮೀಯ ಗೆಳೆಯ ಅ೦ತ ಮೊದಲೇ ಹೇಳಿದ್ದೇನೆ). ಹಾಗಾಗಿ ಕಡಿಮೆ ಅ೦ದ್ರೂ, ಹಿ೦ದಿನ ದಿನದ, ಆರತಕ್ಷತೆಗಾದ್ರೂ ಹಾಜರಿ ಹಾಕದೇ ಇರೋ ಸಾಧ್ಯತೆಯೇ ಇಲ್ಲ. ಅಲ್ಲಿಗೆ ಬೆಳಿಗ್ಗೆ ಬೆ೦ಗಳೂರಿನಲ್ಲಿ ಅಣ್ಣನ ಮದುವೆ ಮುಗಿಸಿ, ಸ೦ಜೆ ಮ೦ಡ್ಯದಲ್ಲಿ ಕಣ್ಣನ ಆರತಕ್ಷತೆಗೆ ಅಕ್ಷತೆ ಹಾಕಿ, ಮರುದಿನ ಪೂನಾ ಸೇರ್‍ಕೋಬೇಕು, ಕೆಲಸ ಮತ್ತೆ ಶುರು ಹಚ್ಕೋಳಕ್ಕೆ.. ಶಿವಮೊಗ್ಗದಲ್ಲಿರೋ ಸಮಯದೊಳಗೆ, ಬಾಕಿ ಉಳಿದಿರೋ ಸ್ವ೦ತದ ಕೆಲಸದ ಪೂರೈಸಬೇಕು. ಹಳೇ ಸ್ನೇಹಿತರು, ಹೊಸ ಸ್ನೇಹಿತರು, ಹಳೇ ಗಿರಾಕಿಗಳು(ನಮ್ಮ ಸಾಫ್ಟ್‌ವೇರ್‍‌ನ ಶಿವಮೊಗ್ಗದಲ್ಲಿ ಮಾರೋದರ ಮೂಲಕನೇ ನಾನು ಈ ಕ೦ಪನಿಯಲ್ಲಿ ಕೆಲಸ ಶುರು ಮಾಡ್ಕೊ೦ಡಿದ್ದು), ಅವರಿಗೆಲ್ಲ ಹೆಚ್ಚಿಗೆ ಮಾತನಾಡಿಸಕ್ಕೆ ಆಗದಿದ್ದರೂ ನನ್ನ ಮುಖವನ್ನಾದರೂ ತೋರಿಸದಿದ್ರೆ ಬಿಟ್ಟಾರ? ನನ್ನ ಬಳಿ ಇರೋ ಮೂರು ಕ೦ಪನಿ ಮೊಬೈಲ್‌ಗಳ, "ಔಟ್‌ಲೆಟ್" ಗೆ ವಿಸಿಟ್ ಕೊಟ್ಟು, ಅಲ್ಲಿರೋ ಹುಡುಗಿಯರ ತಲೆ ತಿನ್ನದೇ ಬ೦ದ್ರೆ, ಛೇ..ಛೇ.. ಊರಿಗೆ ಕೊಟ್ಟ "ವಿಸಿಟ್" ಒ೦ದು "ಪೂರ್ಣತ್ವ" ಅನ್ನೋದನ್ನ ಕಾಣುತ್ಯೇ?.. ಓಹ್.. ಎಷ್ಟೊ೦ದು ಕೆಲಸ, ನನಗೆ ಬಸ್ಸಿನ ವ್ಯವಸ್ಥೆ ಸರಿ ಆಯ್ತು ಅ೦ದ್ರೂ, ಎರಡರಿ೦ದ ಮೂರು ದಿನ, ನನ್ನ 800+800 ಕಿ.ಮೀ.(ಅ೦ದಾಜು) ಪ್ರಯಾಣಕ್ಕೆ ಬೇಕು. ಇಷ್ಟಕ್ಕೆಲ್ಲಾ ಒ೦ದು ವಾರ ಸಾಕಾ? ಗಡಿಬಿಡಿ ಸಹಜ ಅಲ್ವೇ?..
ಇನ್ನೂ ಈ ಭಾವನೆ ಮಿಕ್ಸ್ಚರ್ ಆಗಿದ್ದು ಹೇಗಪ್ಪಾ ಅ೦ದರೆ, ಮನೆಗೆ ಹೊರಟಿರೋದು ಹೆಚ್ಚು ಕಡಿಮೆ ಎರಡೂವರೆ ಮೂರು ತಿ೦ಗಳ ನ೦ತರ, ಹಾಗಾಗಿ ಅದರ ಖುಷಿ, ಇದೆಲ್ಲಾ ಗಡಿಬಿಡಿಯ ನಡುವೆಯೂ.. ಆಗ್ಲೇನೆ ಗಡಿಬಿಡಿದೇ ಒಂದು ಮಿಕ್ಸ್ಚರ್‍ ಆಗೋಗಿದೆ ಅಲ್ವೇ..! ಒಟ್ನಲ್ಲಿ ಮನಸ್ಸಿನ ತುಂಬಾ ಗೊಂದಲ ತುಂಬಿಕೊಂಡು, ಒಂದು ಅಸ್ಪಷ್ಟ, ಗಡಿಬಿಡಿಯ, ಚದುರಿ ಚಿಂದಿಯಾದ ಮನಸ್ಸಿನಲ್ಲೇ ಊರೆಡೆಯ ನನ್ನ ಪ್ರಯಾಣ ಸಾಗಿತ್ತು.
ಆದರೆ, ಸ್ನೇಹಿತರೇ, ಊರು ತಲುಪಿದ ಮೇಲಾದ ಅನುಭವ ಇನ್ನೆಂತೋ...! ಸ೦ಪೂರ್ಣ ವಿಭಿನ್ನ..! ಬಹು ದಿನದ ನಂತರ ಊರು, ಮನೆ, ಅಪ್ಪ, ಅಮ್ಮನ ನೋಡುತ್ತಿರುವ ಸಂತೋಷ, ಇಳಿದು ನೀರಾಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ! ಅಪ್ಪ ಅಮ್ಮನ ನೋಡಿದ ಮೇಲೆ, ಅವರ ಆರೋಗ್ಯ ನೋಡಿದ ಮೇಲೆ, ಮನಸ್ಸಿನಲ್ಲೆದ್ದದ್ದು, ದೊಡ್ಡ ಕೋಲಾಹಲ, ಬಿರುಗಾಳಿ..
ಅಮ್ಮ ಮಾತಾಡ್ತಾ ಇದ್ದರೆ, ನನ್ನ ಬಾಯಿಂದ ಒಂದೂ ಮಾತು ಬರಲೊಲ್ಲದು.. ಅಪ್ಪನಿಗೆ, "ಹೇಗಿದ್ದೀರಿ ಪಪ್ಪಾ?" ಅಂತ ಕೇಳೋಕೆ ಊಹೂಂ.. ಆಗ್ತಾ ಇಲ್ಲಾ..ಅವರ ಆ ಪರಿಸ್ಥಿತಿ ನೋಡಿದ ಮೇಲೂ.. 
ಅಪ್ಪನ "ಸಿಹಿ"ಯು ಹೆಚ್ಚಾಗಿ ಕಹಿಯಾಗಿದ್ರೆ, ಅದೇರಿ.. "ಡಯಾಬಿಟೀಸ್", ಅದರ ಪ್ರಭಾವದಿಂದ ಅಪ್ಪ ಪೂರ ಸುಸ್ತು.. ಅದೇ ಸಮಯದಲ್ಲಾದ, ಹವಾಮಾನದ ಬದಲಾವಣೆ, ಎಲ್ಲರಲ್ಲೂ ಆರೋಗ್ಯದಲ್ಲಿ ಎಷ್ಟೋ ತೊಂದರೆ ತಂದಿತ್ತಾದ್ದರಿಂದ, ನಾನೂ, ಶೀತದೊಂದಿಗೇ ಮನೆ ಪ್ರವೇಶಿಸಿದ್ದರೆ, ಆಗಲೇ ಮನೆಯಲ್ಲಿದ್ದ ಅಪ್ಪ, ಅಮ್ಮ, ಮನೆಗೆ ಬಂದಿದ್ದ ತಂಗಿ, ಅದಾಗಲೇ ಅದರ ಸಂಗಾತಿ.. ಅಪ್ಪನಿಗೆ ಎರೆಡೆರಡರ ಹೊಡೆತ, ಮಧುಮೇಹ, ಶೀತ. 
ಅವರ ಸ್ಥಿತಿ..ಓಹ್.. ನೋಡೋಕಾಗ್ತಾ ಇಲ್ಲ.. ಇನ್ಹೇಗೆ ಕೇಳಲಿ "ಹೇಗಿದಿರಿ ಪಪ್ಪಾ? ಆರಾಮಾ?" ಅಂತ. 
ಅಮ್ಮ.. ವಯಸ್ಸಾದಂತೆ, ಅವರ ಹಳೇ ನೋವುಗಳೂ ಬೆಳೆಯುತ್ತಿವೆ..ವರ್ಷದಿಂದ ವರ್ಷಕ್ಕೆ.. ಅವರಲ್ಲ.. ಅವರು ದಿನೇ ದಿನೇ ಕುಗ್ಗುತ್ತಿದ್ದಾರೆ. 
ಯಾರ ಹತ್ತಿರ ನಗುತ್ತಾ ಮಾತಾಡಲಿ? ಯಾರನ್ನ ನಾ ನಗಿಸಲಿ? ಇನ್ನು,
"ಇವು ನನ್ನ ನೋವು" ಅಂತ ನನ್ನದೇ ಆದ ನೋವನ್ನ ಯಾರತ್ರ ಹೇಳಲಿ?
ನಾನೊಬ್ಬ ಮೂರ್ಖ ಅನ್ನಿಸತೊಡಗಿತು. ನನಗೆ ಸಿಗ್ತಿರೋ ಚಿಲ್ಲರೆ ಸಂಬಳಕ್ಕಾಗಿ, ಸಾವಿರಾರು ಕಿ.ಮೀ ದೂರದಲ್ಲಿ ಕೆಲಸ ಮಾಡೋದು! (ಕೆಲವರಿಗೆ ಇದು, ನೂರಾರು ಇರಬಹುದು), ಅಲ್ಲೋ ನಮಗೆ ನಮ್ಮದೇ ಆದ ಒದ್ದಾಟ. ಅದೇನೋ ಅಂತಾರಲ್ಲಾ.. "ಆನೆಗೆ ಆನೆ ಭಾರ, ಇರುವೆಗೆ ಇರುವೆ ಭಾರ" ಹಾಗೆ, ನಾವಿರೋ ಊರುಗಳಿಗೆ ತಕ್ಕನಾಗಿ ನಮ್ಮ ಖರ್ಚುವೆಚ್ಚ ಕೂಡ ಹೆಚ್ಚು ಕಡಿಮೆ ಆಗುತ್ತಲ್ಲವೇ? ಬರೋ ಸಂಬಳ ನಮಗೇ ಸಾಕಾಗ್ತಾ ಇದಿಯಾ ಅನ್ನೋ ಯೋಚನೆಯಲ್ಲಿರುವಾಗ, ದುಂಧುವೆಚ್ಚವೆಲ್ಲಿಯಾದರೂ ಇದ್ದಲ್ಲಿ ಕಡಿತಗೊಳಿಸೋ ಯೋಜನೆಯಲ್ಲಿರುವಾಗ, ಅಮ್ಮನೋ, ಅಪ್ಪನೋ, ಮುದ್ದಿನ ತಂಗೀನೋ, ತಮ್ಮನೋ ನೇರವಾಗೋ, ಇಲ್ಲ "ನೋಡಪ್ಪಾ ಈ ರೀತ ಕಷ್ಟಗಳೆಲ್ಲಾ ವಕ್ಕರಿಸಿದೆ, ಏನು ಮಾಡೋದು ಅಂತಾನೇ ತಿಳೀತಿಲ್ಲ" ಅಂತಾ ಸುತ್ತೀಬಳಸಿ ಸಹಾಯ ಕೇಳಿದಾಗ, ಅದನ್ನ ಅರ್ಧರ್ಧನೋ, ಅಥವಾ ಸಲ್ಪನೂ ಪೂರ್ಣಗೊಳಿಸದ ಹಾಗೆ ಆಗುವ ಪರಿಸ್ಥಿತಿ ಬಂದಿರುತ್ತಲ್ಲಾ.. ಅದೆನ್ನೆಲ್ಲಾ ಅಮ್ಮನ ಹತ್ತಿರನೋ, ಅಪ್ಪನ ಹತ್ತಿರನೋ, ಈಗ ಹೇಗೆ ಹೇಳಿಕೊಳ್ಳೋದು?
ಹಾ.. ಇಲ್ಲರೀ.. ಆಗಲ್ಲಾರೀ.. ಅಪ್ಪನ ಆ ಸ್ಥಿತಿ ನೋಡ್ತಾ ಇದ್ದರೆ, ಅಮ್ಮನ ಆ ನಿಟ್ಟುಸಿರು ಕಿವಿಗೆ ಬೀಳುವಾಗ, ನಿಜ ಹೇಳ್ತಾ ಇದೀನಿ.. ಕಣ್ಣಿನ ಅಂಚಿಗೆ ಬಂದ ನೀರೂ ಕೂಡ, ನನ್ನನ್ನು ನೋಡಿ, ನಾಚಿಗೆ ಪಟ್ಟುಕೊಂಡು, ವಾಪಾಸ್ ಹೋಗಿಬಿಡ್ತು ಅನ್ನಿಸಿತು.. ನನ್ನ ಹೇಡಿತನ ಅನ್ನಲೋ, ಹೇಸಿಗೆತನ ಅನ್ನಲೋ, ಅಸಹಾಯಕತೆ ಅನ್ನಲೋ, ಎನೋ ಒಂದು, ಅದ ನೋಡಿದ ನನ್ನ ಕಣ್ನೀರು, ನನ್ನ ಬಗೆಗೆ ಹೇಸಿಗೆ ತಳೆದು ವಾಪಾಸಾದಂತೆ ಅನ್ನಿಸಿತ್ತು.. ಹೊರಬರಲು ನಾಚಿದಂತಿತ್ತು..
ಸತ್ಯ, ನಿಮ್ಮುಂದೆ, ಸತ್ಯವನ್ನೇ ಹೇಳುತ್ತಿದ್ದಾನೆ.. "ಛೀ, ನಿನ್ನ ಜನ್ಮಕಿಷ್ಟು.. ಇನ್ನೂ ಈ ಕರ್ಮಕ್ಕೆ ಯಾಕೋ ಬದುಕಿದಿಯಾ? ಲೇ ಸತ್ಯಾ.." ಅಂತ ನನ್ನನ್ನು ನಾನೇ ಬಯ್ದುಕೊಂಡದ್ದು ನಿಜ. ಸ್ನೇಹಿತರೇ, ನನ್ನ ದುರಾದೃಷ್ಟನೋ ಅಥವಾ ಅದೃಷ್ಟನೇ ಅಷ್ಟೋ, ಅಂತೂ ನಮ್ಮಗಳಿಗೆ ನಾವು ನಮ್ಮ ಊರಿನಲ್ಲರೋ ನಮ್ಮ ಮನೆಯಲ್ಲಿದ್ದುಕೊಂಡು, ಆರಾಮವಾಗಿ ದುಡಿದು, ಸಂತೋಷವಾಗಿ ತಿಂದು, ನೆಮ್ಮದಿಯಾಗಿ ನಿದ್ದೆ ಮಾಡೋದು ಸಾಧ್ಯವೇ ಇಲ್ಲಾ ಅಂತನ್ನಿಸುತ್ತದೆ.. ನಿಮ್ಮಗಳ ಅನುಭವ ಭಿನ್ನವೇ? ಅಥವಾ ನಿಮಗೂ ಹೀಗೆ ಅನ್ನಿಸುತ್ತಾ? ಎಂದಾದರೂ ಅನ್ನಿಸಿದೆಯಾ? ಇನ್ನೂ ಏನು ವಿಭಿನ್ನತೆ, ನಿಮ್ಮ ಅನುಭವದ್ದು? ಅನ್ನೋದನ್ನ ತಿಳಿಯೋ ಆಸೆ ಖಂಡಿತ ಇದೆ..
ಹಾಗೇ.. ಕೊನೆಗೆ.. ಇನ್ನೂ ಒಂದೆರಡು ಮಾತನ್ನ ಹೇಳಲೇಬೇಕೆನ್ನಿಸುತ್ತಿದೆ.. 
ಮಿತ್ರರೇ.. ಅಂದು ನಮ್ಮಪ್ಪನ ಮುಂದೆ ಕಣ್ಣೀರಿಟ್ಟು ಅತ್ತು ಬಿಡಲಾ ಅನ್ನಿಸುತಿತ್ತು.. ಅಮ್ಮನ ತೊಡೆಯ ಮೇಲೆ ಮಲಗಿಕೊಂಡು ಎಲ್ಲಾ ಹಂಚಿಕೊಳ್ಳಬಹುದಾ?..ಅಲ್ಲಲ್ಲಾ.. ಅವರ ನೋವನ್ನ ಅವರ ಮಾತಲ್ಲೇ ಕೇಳಲಾ?.. ಅಪ್ಪನ ನೋವನ್ನ ನಾನೇಗೆ ಹಂಚಿಕೊಳ್ಳಲಿ? ಅವರ ಆ ದುಃಖವನ್ನ ನಾನೇಗೆ ಕಡಿಮೆ ಮಾಡಲಿ? ಅಮ್ಮನಾ ನೋವಿಗೆ ಯಾವ ಮದ್ದ ನಾ ನೀಡಲಿ? ನನ್ನ ಪ್ರಸ್ತುತತೆ, ಹಾಜರಿ ಮನೆಯಲ್ಲಿ, ಬಹು ಅವಶ್ಯ ಅಂತ ನನಗೆ ಬಾರಿ ಬಾರಿ ಅನ್ನಿಸಿದರೂ, ಅದು ನನ್ನಿಂದ ಸಾಧ್ಯವೇ? ನೂರರಲ್ಲಿ ಹತ್ತು ಪಾಲಿನಷ್ಟಾದರೂ, ವಾರಕ್ಕೊಮ್ಮೆಯಲ್ಲದಿದ್ದರೂ, ಎರಡು ವಾರಕ್ಕೊಮ್ಮೆಯಾದರೂ ನಾನು ಹಾಜರಿ ಹಾಕಲು ಸಾಧ್ಯವೇ ಇಲ್ಲವೇ? ಅನ್ನೋ ಈ ಎಲ್ಲಾ ಉತ್ತರ ಸಿಗದ, ಪ್ರಶ್ನೆಗಳೊಂದಿಗೆ ಮತ್ತೆ ಪೂನಾ ಮರಳಿದೆ.. ಮುಳ್ಳನ್ನ ಮುಳ್ಳಿಂದ ತೆಗೆದಂತೆ, ನೋವನ್ನ ನೋವಿಂದ ತೆಗೆಯಲು ಸಾಧ್ಯವೇ? ಇಂತಹ ಸನ್ನಿವೇಶಗಳು ನಿಮ್ಮ ಜೀವನಲ್ಲಿ ಪ್ರಸ್ತುತದಲ್ಲೋ, ಭೂತದಲ್ಲೋ ಕಾಡಿದೆಯಾ? ನಿಮ್ಮ ಮನಸ್ಸಿನಲ್ಲೆದ್ದ.. ಪ್ರಶ್ನೆಗಳು ಎಂಥವೂ? ಹಂಚಲು ಯೋಗ್ಯವಿದ್ದವನ್ನು ದಯವಿಟ್ಟು ನಿಮಗಾಗಿರಿಸಿದ ಕೆಳಗಿನ.. ಆ ವಿಶೇಷ ಜಾಗದಲ್ಲಿ ತಿಳಿಸಿ.,
ನಿಮ್ಮೊಲವಿನ,
ಸತ್ಯ..
Rating
No votes yet