ನನ್ನ ನಿಲುವು ನನ್ನದು

ನನ್ನ ನಿಲುವು ನನ್ನದು

ನನ್ನ ಹಿಂದೂ ದ್ವಂದ್ವ; ಎಂಬ ಲೇಖನವನ್ನು ಸಂಪದದಲ್ಲಿ  ಬರೆಯುತ್ತಾ ನಾರಾಯಣ ಅವರು ತಮ್ಮ ಮಾನಸಿಕ
ತುಮಲವನ್ನು ತೋಡಿಕೊಂಡಿದ್ದರು.ಅದಕ್ಕೆ ಉತ್ತರವಾಗಿ ನಾನು ಸ್ಪಷ್ಟ ನುಡಿಗಳಲ್ಲಿ ನಾನು ಹಿಂದು ಎನ್ನಲು
ಸಂಕೋಚವೇಕೆ ? ಎನ್ನುತ್ತಾ ಬಿಚ್ಚು ಮಾತುಗಳಲ್ಲಿ ನನ್ನ ಆರ್.ಎಸ್.ಎಸ್. ಸಂಬಂಧವನ್ನು ಹೇಳಿದ್ದೆ. ಇದೀಗ
ಅದನ್ನು ಇನ್ನೂ ಸ್ಪಷ್ಟ ಪಡಿಸಬೇಕೆನಿಸಿದೆ.ನಿಜವಾಗಿ ನನ್ನ ಕೆಲವು ನಿಲುವುಗಳಿಂದ ಎಂತಹಾ ಸಂದಿಗ್ಧ
ಸ್ಥಿತಿ ಎದಿರುಸುತ್ತಿದ್ದೀನೆಂದರೆ ಹುಟ್ಟು ಬ್ರಾಹ್ಮಣ ಜಾತಿಯಲ್ಲಾದರೂ ಅನ್ಯ ಜಾತಿಗಳೊಡನೆ ನನ್ನ ಮಿತ್ರತ್ವದಿಂದ
, ಸಹಪಂಕ್ತಿ ಭೋಜನದಿಂದ, ಬ್ರಾಹ್ಮಣೇತರ ಮನೆಗಳಲ್ಲಿ ಉಣ್ಣುವುದರಿಂದ, ಹಲವರಿಗೆ ನನ್ನ ಬಗ್ಗೆ ಒಂತರಾ...ಭಾವನೆ.
ಅರ್.ಎಸ್.ಎಸ್. ಸಂಬಂಧದಿಂದ ನನ್ನನ್ನು ಬ್ರಾಹ್ಮಣ ಪಟ್ಟಿಗೆ ಸೇರಿಸಿರುವ ಸಮಾಜದ ಅನ್ಯ ಬಂಧುಗಳು.ಆರ್.ಎಸ್.ಎಸ್.ವಿಚಾರ
ಒಪ್ಪದ ಜನರೊದನೆ ಇರುವ ಸಂಬಂಧದಿಂದ ದೂರ ಮಾಡುವ  ಕಟ್ಟಾ ಆರ್.ಎಸ್.ಎಸ್ ನವರು.ಇವೆಲ್ಲಾ ವರವೋ
ಶಾಪವೋ ತಲೆ ಕೆಡಸಿಕೊಳ್ಳಲು ನಾನಂತೂ ಹೋಗುಲ್ಲ.  ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಯಾವಾಗಲೂ
ನೆನಪಿನಲ್ಲುಳಿಯುವವರು  ಸಮಾಜಕಾರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಜಿಸಿ ಅಮರರಾದ ಯಾಧವರಾವ್
ಜೋಷಿ, ಹೊ.ವೆ.ಶೇಷಾದ್ರಿ ಮುಂತಾದ ಮಹನೀಯರು.ಸ್ವಾತಂತ್ರ್ಯ ಸಂಗ್ರಾಮವನ್ನಂತೂ ನೋಡಲು ಹುಟ್ಟಿರಲಿಲ್ಲ.ಆದರೆ
ಸಮಾಜಕಾರ್ಯಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡವರನ್ನು ನನ್ನ ಜೀವನದಲ್ಲಿ ನೋಡಲು ಸಾಧ್ಯವಾಯ್ತು. ಅದೇ
ನನ್ನ ಪುಣ್ಯ.ಕಾಲ ಈಗ ಬದಲಾಗಿದೆ. ಹೊಸ ನೀರು ಬಂದಿದೆ.ಹಳೆಯನೀರು ಕೊಚ್ಚಿ ಹೋಗುತ್ತದಲ್ಲಾ ಎಂದರಾಗುವುದಿಲ್ಲ.
ಕಾಲವನ್ನು ತಡೆಯುವವರು ಯಾರೂ ಇಲ್ಲ.

ಕೇವಲ ಸಂಸ್ಕೃತಿ-ಪರಂಪರೆ ಎನ್ನುವಲ್ಲಿ ನಾನು ಹಿಂದುಪದ ಬಳಸುವೆ.ಹಿಂದು ಸಂಸ್ಕೃತಿಯಲ್ಲಿ ಹುಟ್ಟಿ ಸಹಜವಾಗಿ
ಅದರ ಬಗ್ಗೆ ಶ್ರದ್ಧೆ. ಅನ್ಯ ಸಂಸ್ಕೃತಿ ನನಗೆ ಗೊತ್ತಿಲ್ಲ. ಅದೇಕೋ ಹಿಂದು ಪದ ಬಳಕೆಯಾದ ಕೂಡಲೇ ಎಲ್ಲಿಲ್ಲದ
ಚರ್ಚೆ ಶುರುವಾಗಿಬಿಡುತ್ತೆ.ತನ್ನ ಮನೆ, ತನ್ನ ಊರು, ತನ್ನ ಸಮಾಜ, ತನ್ನ ಸಂಸ್ಕೃತಿ-ಪರಂಪರೆಯನ್ನು
ಪ್ರೀತಿಸದವನು ಬೇರೆ ಯಾರನ್ನು ಪ್ರೀತಿಸಲು ಸಾಧ್ಯ? ಅದರಿಂದ ನನಗೆ ಇಲ್ಲಿ ಪ್ರೀತಿ. ಅದ್ಯಾಕೋ ಅನ್ನಿಸುತ್ತೆ,
ವಿಶಾಲ  ಹೃದಯಿಯಾದ ಹಿಂದು ಇಡೀ ಪ್ರಪಂಚದ ಶಾಂತಿ-ನೆಮ್ಮದಿ ಉಳಿಸಬಲ್ಲ.

ಹೀಗೆಯೇ ಚಿಂತಿಸುವಾಗ ನಮ್ಮ  ಋಷಿಮುನಿಗಳ ವಿಚಾರಧಾರೆಯನ್ನು ಹೆಚ್ಚು ಹೆಚ್ಚು ಓದಬೇಕು, ಹೆಚ್ಚು
ಹೆಚ್ಚು ಪ್ರಚುರಪಡಿಸಬೇಕು, ಅನ್ನಿಸುತ್ತೆ. ನಮ್ಮ  ಋಷಿಮುನಿಗಳ  ವಿಚಾರಧಾರೆಯನ್ನು ತಪ್ಪಾಗಿ ಅರ್ಥೈಸಿ ಶಾಂತಿಕೆಡಲು ಕಾರಣ
ವಾಗಿದೆಯೇ? ಅನ್ನಿಸುತ್ತಿದೆ.

ಅಂತೂ
ಏನೇನೋ ಚಿಂತನೆಗಳು ಯಾವಾಗಲೂ ತಲೆಯಲ್ಲಿ ತುಂಬಿರುತ್ತವೆ. ನನ್ನ ವಿಚಿತ್ರ ನಡೆ ಎಂದರೆ ಕಾರ್ಯಕ್ರಮ
ಒಂದರಲ್ಲಿಭಗವಹಿಸಿದ್ದೆ. ಒಂದು ಹಿಂದು ಕುಟುಂಬದಲ್ಲಿ ಮಿನಿಮಮ್ ಏನೇನು ಸಂಗತಿಗಳು ಆಚರಣೆ ಯಲ್ಲಿರಬೇಕು?
ಎಂಬುದು ಚರ್ಚೆಯಾಗಿ,  ಹಿಂದುಮನೆಗಳಲ್ಲಿ  ಕನಿಷ್ಟತಮ ಅಚರಣೆ ಗಳೆಂದರೆ  ಬೆಳಗಾಗೆದ್ದು
ಚಿಕ್ಕದಾಗಿಯದರೂ ದೇವರ ಪೂಜೆ ಮಾಡದೆ ಉಪಹಾರ ತೆಗೆದುಕೊಳ್ಳಬಾರದೆಂಬುದು. ನಾನು ಹಾಗೆಯೇ ನನ್ನ ಜೀವನ
ಕ್ರಮ ನೋಡಿದಾಗ ಅನೇಕ ದಿನಗಳು ಅದು ಅಸಾಧ್ಯ.ಆದರೂ ನನಗೆ ಏನೂ ಅನ್ನಿಸುವುದಿಲ್ಲ. ದೇವರ ಪೂಜೆ ಮಾಡುವುದೆಂದರೇನು?
ಸ್ನಾನ ಮಾಡಿ ದೇವರಕೋಣೆಯಲ್ಲಿ ಒಂದರ್ಧ ಗಂಟೆಯಾದರೂ ಕುಳಿತು ಪೂಜೆ ಮಾಡುವುದು ತಾನೆ? ನಿಜವಾಗಿ ಬೆಳಗಾಗೆದ್ದು
ಅನೇಕ ದಿನಗಳುನೆಟ್ ಮುಂದೆ ಕುಳಿತರೆ ಅಲ್ಲಿ ಓದುವುದು ಬರೆಯುವುದು  ಭಗವಂತನ ವಿಚಾರವೇ ಆಗಿದೆ. ಅರ್ಧಗಂಟೆ ದೇವರ ಕೋಣೆಯಲ್ಲಿ
ಕುಳಿತುಕೊಳ್ಳಲು ಸಾಧ್ಯವಾಗದೇ ಇರುವ ಅನೇಕ ದಿನಗಳು ಇವೆ. ಹಾಗಾದರೆ ನಾನು ಬ್ರಷ್ಟ ನಾಗಿ ಬಿಟ್ಟೆನೇ?ಖಂಡಿತವಾಗಿಯೂ
ನನಗೆ ಹಾಗನಿಸುವುದಿಲ್ಲ. ದಿನದ ಬಹುಪಾಲುಭಗವಂತನ ಚಿಂತನೆಯಲ್ಲೇ ಕಳೆಯುವ ನನಗೆ ನಿರ್ದಿಷ್ಟ ವಾದ ಸೂಚಿತ
ಕ್ರಮದಲ್ಲಿ  ಪೂಜೆಮಾಡಲಾಗಲಿಲ್ಲವಲ್ಲಾ! ಎಂದು ಬೇಸರವಿಲ್ಲ.

ಪೂಜೆ-ಪುನಸ್ಕಾರಗಳ ಬಗ್ಗೆ
ಅದೇಕೋ ನನ್ನ ಚಿಂತನೆ ನನಗೇ ವಿಚಿತ್ರವಾಗಿ ಅನ್ನಿಸುತ್ತೆ. ಇಷ್ಟಕ್ಕೂ ದೇವರ ಮುಂದೆ ಕುಳಿತು ಪೂಜೆ
ಮಾಡುವುದು ಏಕೆ? ಬಹುಪಾಲು ಜನರ ಅಭಿಪ್ರಾಯವೆಂದರೆ 
ಭಗವಂತನ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥ ನೆರೆವೇರಿಸುತ್ತಾನೆ. ಅದಕ್ಕಾಗಿ ನಿತ್ಯ ಪಂಚಾಮೃತಾಭಿಷೇಕ,
ಅರ್ಚನೆ, ಮಂಗಳಾರತಿ, ಎಲ್ಲಾ ಮಾಡಿ ಕೊನೆಯಲ್ಲಿ ತಮ್ಮ ಮನಸ್ಸಿನಲ್ಲಿರುವುದನ್ನು ನೆರವೇರಿಸಲು  ಪ್ರಾರ್ಥಿಸುವುದು ಸರ್ವೇ ಸಾಮಾನ್ಯ ಸಂಗತಿ. ನನಗೆ ಅನೇಕ
ವೇಳೆ ಪಂಚಾಮೃತಾಭಿಷೇಕ  ಮಾಡುವಾಗಲೇ ಮನದೊಳಗೇ ನಗು
ಬಂದಿದೆ. ನಿಜವಾಗಲೂ  ಪುಟ್ಟ ಪುಟ್ಟ ವಿಗ್ರಹಗಳು ಆಟಿಕೆಗಳಂತೆ
ಭಾಸವಾಗುತ್ತವೆ. ಅಯ್ಯೋ ನನ್ನ ಮೂಢತನವೇ ! ನಾನು ಪಂಚಾಮೃತಾಭಿಷೇಕದ ಆಟವಾಡಬೇಕೆ? ಎನಿಸಿ ,ಹಾಗೇ ಕಣ್ಮುಚ್ಚಿ  ಅರ್ಧಘಂಟೆ ಕುಳಿತು ಎದ್ದಿರುವ ದಿನಗಳೂ ಇವೆ. ಸಮಯದ ಅವಕಾಶವಿದ್ದು
ಮನಸ್ಸು ಬಂದರೆ ಮನಸ್ಸಿಗೆ ಉಲ್ಲಾಸವಾಗುವಂತೆ ಮಂತ್ರಗಳನ್ನು ಹೇಳಿಕೊಂಡು ಅದೇ ವಿಗ್ರಹಗಳಿಗೆ ಪಂಚಾಮೃತಾಭಿಷೇಕ
ಮಾಡಿದ್ದೂ ಇದೆ. ಅಂತೂ ನನ್ನ ಮನಸ್ಸಿಗೆ  ಆಗಾಗ ಹೇಗೆ
ಅನ್ನಿಸುತ್ತೆ, ಹಾಗೆ ಮಾಡುವ ನಾನೊಬ್ಬ ವಿಚಿತ್ರ ವ್ಯಕ್ತಿ ಅಂತಾ ನನಗೇ ನಗು ಬರುತ್ತೆ. ಒಂದಂತೂ ನಿಜ,
ನಾನು ದೇವರಿಗೆ  ಭಯ-ಭಕ್ತಿಯಿಂದ ಪೂಜೆ ಮಾಡಬೇಕೆನಿಸುವುದಿಲ್ಲ.
ಯಾವುದೋ ಇಷ್ಟಾರ್ಥ ಸಿದ್ಧಿಗಾಗಿ ವ್ರತ-ಕಥೆಗಳಾಚರಣೆ ಮಾಡಬೇಕೆನಿಸುದಿಲ್ಲ, ಬದಲಿಗೆ ನನ್ನ ಮನಸ್ಸಿಗೆ
ತುಂಬಾ ಬೇಸರವಾದರೆ, ಶರೀರದ ಆರೋಗ್ಯ ಹಾಳಾಗಿದ್ದು ನೆಮ್ಮದಿಯಾಗಿ ದೇವರ ಮುಂದೆ ಕುಳಿತು ಪೂಜೆ ಮಾಡಬೇಕೆನಿಸಿದರೆ,
ಆಗ ಪೂಜಾ ಕೋಣೆಯ ಪ್ರವೇಶ. ಅಲ್ಲಿ ಪ್ರವೇಶಿಸಿದಾಗ ಕಣ್ಣಿಗೆ ಬೀಳುವುದು ಪತ್ನಿ ಮಾಡಿರುವ ಪೂಜೆಯ ರಂಪ.
ಆಗ ದೇವರುಗಳನ್ನು , ಪೂಜಾಗೃಹವನ್ನು ಕ್ಲೀನ್ ಮಾಡಬೇಕೆನಿಸುತ್ತೆ. ಯಾವುದಾದರೂ ಸೂಕ್ತ ಹೇಳಿಕೊಂಡು
ಆನಂದವಾಗಿ  ಪೂಜಾ ಗೃಹವನ್ನು , ಪೂಜಾ ಸಾಮಗ್ರಿಗಳನ್ನು,
ವಿಗ್ರಹಗಳನ್ನು ತೊಳೆದು, ಒರಸಿ, ಓರಣ ಮಾಡಿ , ಹೂ ಇದ್ದರೆ ಅಲಂಕರಿಸಿದರೆ ಅನೇಕ ವೇಳೆ ನನ್ನ ಪೂಜೆ
ಮುಗಿಯುತ್ತೆ. ಇನ್ನೊಂದು ವಿಚಾರ ಹೇಳುವುದು ಮರೆತಿದ್ದೆ. ಮೊದಲು ಎರಡು ದೀಪ ಹಚ್ಚ್ವುದು ಮರೆಯುವುದಿಲ್ಲ.
ಅದರ ಬೆಳಕಿನಲ್ಲಿ ಪೂಜಾಗೃಹ ನೋಡಲು ಚಂದ. ನಮ್ಮಪ್ಪ ಸತ್ತು ಹತ್ತು ವರ್ಷಗಳಾಗುತ್ತಾ ಬಂತು.  ಕಡೆಯಲ್ಲಿ ಒಂದೆರಡು ವರ್ಷ ನಾನೇ ಸ್ನಾನ ಮಾಡಿಸಬೇಕಿತ್ತು.
ಆಗ ನನಗರಿವಿಲ್ಲದೆ  ಪುರುಷಸೂಕ್ತ ಹೇಳಿಕೊಂಡು ಸ್ನಾನ
ಮಾಡಿಸುತ್ತಿದ್ದೆ. ನನಗದರಲ್ಲಿ ಖುಷಿ ಇರ್ತಿತ್ತು. ಅದು ನಮ್ಮಮ್ಮನಿಗೆ  ಅದೆಷ್ಟು ಸಂತೋಷವನ್ನು ಕೊಟ್ಟಿತ್ತೆಂದರೆ "ನಮ್ಮ ಶ್ರೀಧರ
ಪುರುಷ ಸೂಕ್ತ ಹೇಳಿಕೊಂಡು ಅವರಪ್ಪನ   ಸ್ನಾನ ಮಾಡಿಸುತ್ತಾನೆ" ಅಂತಾ ಬಂದವರಿಗೆಲ್ಲಾ ಸಂತೋಷದಿಂದ
ಹೇಳಿಕೊಳ್ಳುತ್ತಿದ್ದರು.ಪಾಪ! ಅವರಾದರೋ ಇಡೀ ಜೀವನ ಕಷ್ಟದಲ್ಲಿ ಕಳೆದು ನಾನು ಸ್ವಲ್ಪ ಕಣ್ ಬಿಡುವ
ಹೊತ್ತಿಗೆ ಇಹಲೋಕವನ್ನೇ ತ್ಯಜಿಸಿದರು. ಬಡತನ ಹಾಸಿಹೊದ್ದು ಮಲಗಿದ್ದ ನಮ್ಮ ಮನೆಯಲ್ಲಿ  ಊಟಕ್ಕೆ ದಾರಿಮಾಡಿದ್ದೇ ನನ್ನ ಒಂದು ದೊಡ್ದ ಸಾಧನೆ. ಪಾಪ!
ಅಮ್ಮ ಉಡಲು ಒಂದು ಸೀರೆ ಬಯಸಲಿಲ್ಲ.. ಅಮ್ಮನಿಂದಲೇ ಅಲ್ಪ ಸ್ವಲ್ಪ   ವೈಚಾರಿಕ ಚಿಂತನೆ ನನಗೂ ಬಂದಿದೆ ಅನ್ನಿಸುತ್ತೆ. ಅವರು ಅಡುಗೆ
ಮಾಡಿ ಅನ್ನದ ತಪ್ಪಲೆ ಒಲೆಯಮೇಲಿಂದ ಇಳಿಸಿದವರೇ " ತಾಯಿ ಇದು ನಿನಗರ್ಪಿತ "ಎಂದು ಹೇಳಿದರೆ ದೇವರ ನೈವೇದ್ಯ
ಮುಗಿಯುತ್ತಿತ್ತು. ಭಗವನ್ನಾಮ ಸ್ಮರಿಸುತ್ತಲೇ ಮನೆ ಕೆಲಸವೆಲ್ಲಾ ಮುಗಿಯುತ್ತಿತ್ತು.  ಈಗ ಅಮ್ಮನ ವಿಚಾರ ಇಷ್ಟು ಸಾಕು. ಅಮ್ಮನ ನೆನಪನ್ನು ಬೇರೆ
ಯಾವಾಗಲಾದರೂ ಮಾಡಿಕೊಳ್ಳುವೆ.

ಹತ್ತು ವರ್ಷಗಳಿಂದ  ಸ್ನೇಹಿತರಾಗಿರುವ ಮಿತ್ರ ಬಶೀರ್ ಅಹ್ಮದ್, ಎಷ್ಟೊಂದು ಜನರಿಗೆ
ಅವರುಗಳ ಆಪತ್ಕಾಲದಲ್ಲಿ ಹತ್ತಾರು ಸಾವಿರ ಹಣಕೊಟ್ಟಿದ್ದಾರೆ, ಒಂದುರೂಪಾಯಿ ಬಡ್ಡಿ ಅಂತಾ ತೆಗೆದುಕೊಂಡಿಲ್ಲ
ವಲ್ಲಾ! ನನಗೂ ಕಷ್ಟವಿದ್ದಾಗ ಹಣದ ಸಹಾಯ ಮಾಡಿರುವ ಬಶೀರರನ್ನು ಹೇಗೆ ಮರೆಯಲಿ? ಅವರು ಮುಸಲ್ಮಾನರೆಂದು
ದ್ವೇಷಿಸಲೇ? ನಮ್ಮ ಕಛೇರಿಯ ತಸ್ನಿಮ್ ಫಾತಿಮಾ : ಅವಳ
ತಂದೆ  ಮೃತರಾಗಿ ಮೂರು ತಿಂಗಳ ಮೇಲಾಯ್ತು, ಇನ್ನೂ ಹೊಟ್ಟೆ
ತುಂಬಾ ಊಟ ಮಾಡುತ್ತಿಲ್ಲವಲ್ಲಾ!! ವಿಚಾರಿಸಿದರೆ ತುತ್ತು ಕೈನಲ್ಲಿ ಎತ್ತಿದಾಗ ಅಪ್ಪನ  ನೆನಪಾಗುತ್ತೆ ,ಗಂಟಲಿನಲ್ಲಿ ಅನ್ನ ಇಳಿಯುಲ್ಲಾ ಅಂತಾ ಅನ್ನೋ
ಆ ಹುಡುಗೀನ ಕಂಡಾಗ ಕರುಳು ಕಿತ್ತು ಬರುತ್ತೆ, ಇದು ತಪ್ಪಾ?

ದೇವರು ಧರ್ಮದ ಹೆಸರಲ್ಲಿ
ಹೋರಾಟ ಮಾಡಬೇಕೆ? ಎಂಬುದು ನನಗೆ ಚೋದ್ಯವಾಗಿ ಕಾಣುತ್ತೆ. ಅದೆಂತ ಮತಾಂತರವೋ? ಯಾಕ್ರೀ ಬೇಕು ಈ ಮತಾಂತರ?
ಒಂದು ಮತದಿಂದ ಬೇಸತ್ತು ಇನ್ನೊಂದು ಮತವವನ್ನು ಅರ್ಥ ಮಾಡಿಕೊಂಡು ಸ್ವ ಇಚ್ಛೆಯಿಂದ ಮತಾಂತರ ವಾಗುತ್ತಾರೆಂಬುದು
ನನಗೆ ನಂಬಲು ಸಾಧ್ಯವಿಲ್ಲ. ಮತಾಂತರ ವೆಂದರೆ ಅದು ಒಂದು ಮತದ ನಿಷ್ಠೆ ಬದಲಿಸುವ ಮಾತಲ್ಲ, ಅದರಿಂದ
ಈ ದೇಶದ ಮೇಲಿನ ನಿಷ್ಟೆ ಬದಲಾಗುತ್ತೆ ಅಂತಾ ವಿ.ಹೆಚ್.ಪಿ
ಯವರು ಹೇಳುತ್ತಾರೆ.ಅದೇನೋ ಹೊಟ್ಟೆ  ಪಾಡಿಗಾಗಿ ಈ ಮತಾಂತರವೆಲ್ಲಾ
ನಡೀತಿದೆ, ಎಂದು ನನ್ನ ಭಾವನೆ.

ಇನ್ನು ನಮ್ಮ ರಾಜಕಾರಣದ
ಬಗ್ಗೆ ತುಂಬಾ ಘಾಸಿಗೊಳಗಾಗುತ್ತೇನೆ. ರಾಜಕಾರಣದಿಂದ ದೇಶದ ಹಣವನ್ನು ದೋಚಿಲ್ಲದ ರಾಜಕಾರಣಿಗಳಿದ್ದಾರೆಯೇ
ಎಂಬ ಸಂದೇಹ ನನ್ನನ್ನು ಯಾವಾಗಲೂ ಕಾಡುತ್ತೆ. ಯಾವ ಪಕ್ಷವೂ ಬ್ರಷ್ಟಾಚಾರದಿಂದ ಹೊರತಾಗಿಲ್ಲವಾದ್ದರಿಂದ
ಬಿ.ಜೆ.ಪಿ.ಯನ್ನು  ಆರ್.ಎಸ್.ಎಸ್. ನ ಪರಿವಾರವೆನ್ನುವುದಾದರೆ
ಅವರಿಗೆ ಸಂಸ್ಕಾರ ಕೊಟ್ಟಿಲ್ಲವೇಕೆ? ಎಂಬ ನೋವಿದೆ.

ಅಂತೂ ನಾನು ನಾನೇ, ಯಾರಿಗೂ
ಹೊಂದಲು ನಾಲಾಯಕ್ಕು.
ಭಾಷೆ ಹೆಸರಲ್ಲಿ, ರಾಜಕೀಯ ನಾಯಕರ ಅಭಿಮಾನಿಗಳ ಹೆಸರಲ್ಲಿ ಹುಟ್ಟಿಕೊಂಡಿರು ಸಂಘಟನೆಗಳನ್ನು ನೆನಸಿಕೊಂಡರೆ ಭಯವಾಗುತ್ತೆ. ರಾಜಕಾರಣವನ್ನು ನೋಡಿದರಂತೂ ಛೇ...ನಮ್ಮ ಕ್ರಾಂತಿಕಾರಿಗಳು ತಮ್ಮ ಜೀವವನ್ನು ಬಲಿಕೊಟ್ಟು ಹೋರಾಟ ಮಾಡಿ ಸ್ವಾತಂತ್ರ್ಯ ಗಳಿಸಿದ್ದು, ಮಹಾತ್ಮ ಗಾಂಧಿ ಉಪವಾಸ ಮಾಡಿದ್ದು ಇಂತಾ ದೂರ್ತರು ನಮ್ಮ ದೇಶವನ್ನಾಳಲಿ ಎಂದೇ?
ಇಂದು ಶಿವರಾತ್ರಿ, ಈಗ ರಾತ್ರಿ ೧೨.೨೦, ಇಂದು ಇದೇ ನನ್ನ ಜಾಗರಣೆ.

Rating
No votes yet

Comments