ನಮ್ಮೂರ ಶಾಲೆ
ನಮ್ಮೂರ ಶಾಲಾ ವಾರ್ಷಿಕೋತ್ಸವ ೨೦೦೯-೧೦
ಅನೇಕ ವರ್ಷಗಳ ನಂತರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಲಗಾರು, ಸಿದ್ದಾಪುರ (ಉ.ಕ.) ಇದರ ವಾರ್ಷಿಕ ಸ್ನೇಹ ಸಮ್ಮೇಳನವು ದಿನಾಂಕ ೯-೪-೨೦೧೦ರಂದು ನಡೆಯಿತು,
ಪ್ರಸ್ತುತ ವರ್ಷದಲ್ಲಿ ಶಾಲೆಯಲ್ಲಿ ಐದನೇ ತರಗತಿಯ ವರೆಗೆ ಪಾಠಪ್ರವಚನಗಳು ನಡೆಯುತ್ತಿದ್ದು, ಐದನೇ ತರಗತಿಯಲ್ಲಿ ೧, ನಾಲ್ಕನೇ ತರಗತಿಯಲ್ಲಿ ೧, ಮೂರನೇ ತರಗತಿಯಲ್ಲಿ ೨, ಹಾಗೂ ೨ನೇ ತರಗತಿಯಲ್ಲಿ ೬ಜನ ಒಟ್ಟು ೧೦ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀಮತಿ ಬೀನಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಾಲೆಯ ಕೆಲಸಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿದೆ ಎಂದು ವರದಿಯಲ್ಲಿ ಶ್ರೀಮತಿ ಬೀನಾ ತಿಳಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ. ಎಂ.ಸಿ. ಅಧ್ಯಕ್ಷ ಶ್ರೀ ಪ್ರಸನ್ನ ಕೆ. ಹೆಗಡೆ ವಹಿಸಿದ್ದು, ಅತಿಥಿಗಳಾಗಿ ಶ್ರೀ ಆರ್.ಎಸ್. ನಾಯ್ಕ, ಸಿ.ಆರ್.ಪಿ. ಮನ್ಮನೆ ಮತ್ತು ಶ್ರೀ ತಿಮ್ಮಣ್ಣ ಭಟ್ಟ ಕಲಗಾರು, ಅವರು ವಹಿಸಿದ್ದರು. ಆರ್ಎಸ್. ನಾಯ್ಕ್ ರವರು ಈ ಶಾಲೆಯು ಮಕ್ಕಳ ಸಂಖ್ಯೆಯಲ್ಲಿ ಚಿಕ್ಕದಿದ್ದರೂ ಗುಣಮಟ್ಟದಲ್ಲಿ ಉನ್ನತವಾಗಿದ್ದು, ಕ್ಲಸ್ಟರ್ ಮಟ್ಟದ ಉತ್ತಮ ಶಾಲೆಯಾಗಿದೆ. ಹಾಗೂ ಈ ಶಾಲೆಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರದ ಯೋಜನೆ ಅಡಿಯಲ್ಲಿ ದೊರಕಿಸಿಕೊಡುವ ಜವಾಬ್ದಾರಿ ನನ್ನದು, ಆದರೆ ಶಾಲೆಯಲ್ಲಿಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಉಳಿಸಿಕೊಂಡು ಶಾಲೆಯನ್ನು ಉಳಿಸಿಕೊಳ್ಳುವುದು ತಮ್ಮೆಲ್ಲರ ಕರ್ತವ್ಯ ಎಂದು ನುಡಿದರು. ಹಾಗೆಯೇ ಜನಸಂಖ್ಯಾ ನಿಯಂತ್ರಣದ ಪ್ರಭಾವ ಹಾಗೂ ಯುವ ಜನರ ವಲಸೆ, ಖಾಸಗೀ ಶಾಲಾ ವ್ಯಾಮೋಹದಿಂದಾಗಿ ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಇಲ್ಲಿನ ವಿದ್ಯಾರ್ಥಿಗಳಿಗೆ ಆಧುನಿಕ ಜಗತ್ತಿನೊಡನೆ ಹೆಜ್ಜೆ ಹಾಕಲು ಬೇಕಾದ ವಿವಿಧ ತರಬೇತಿಗಳನ್ನು ನೀಡುವಂತಾದಲ್ಲಿ ಸ್ವಲ್ಪಮಟ್ಟಿಗೆ ಶಾಲೆಗಳು ಉಳಿಯಬಹುದು. ಅದು ತ್ವರಿತ ಗತಿಯಲ್ಲಿ ಆಗಬೇಕಾಗಿದೆ. ಇದು ನಾವೆಲ್ಲರೂ ಓದಿ ಬೆಳೆದ ಶಾಲೆ, ಈ ಶಾಲೆಗೆ ಕನಿಷ್ಟ ೬೦ ವರ್ಷಗಳ ಇತಿಹಾಸವಿದ್ದು, ಮೊದಲು ಶಾಲೆಯು ನಮ್ಮೂರ ದೇವಾಲಯದಲ್ಲಿ ನಡೆಯುತ್ತಿತ್ತು ಎಂದು ತಿಮ್ಮಣ್ಣ ಭಟ್ಟ ಅವರು ಹೇಳಿದರು. ಸ್ಫರ್ಧಾ ವಿಜೇತ ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇರುವ ವಿದ್ಯಾರ್ಥಿಗಳಿಂದ ನೃತ್ಯ, ಹಾಡು, ಏಕಪಾತ್ರ ಅಭಿನಯಗಳ ಜೊತೆ ಮಾಧವ ಶರ್ಮ ಕಲಗಾರ್ ಇವರ ನಿರ್ದೇಶನದಲ್ಲಿ ಅವರೇ ರಚಿಸಿದ "ಕಾಡದಿರು ನೆರೆಯ" ಎಂಬ ಕಿರು ನಾಟಕವನ್ನು ಸಹ ಪ್ರದರ್ಶಿಸಲಾಯಿತು. ಕೇವಲ ೧೦ ವಿದ್ಯಾರ್ಥಿಗಳಿಂದ ಸುಮಾರು ೩೦ ಕ್ಕೂ ಹೆಚ್ಚು ಕಾರ್ಯಕ್ರಮ ನೀಡಲಾಯಿತು. ಸಿದ್ದಾಪುರದ ಕುಮಾರಿ ಭಾರ್ಗವಿ ಹೆಗಡೆ ಯವರ ಭರತ ನಾಟ್ಯವನ್ನು ಸಹ ಕಾರ್ಯಕ್ರಮದಲ್ಲಿ ಸೇರಿಸಿ ಇನ್ನಷ್ಟು ರಂಗು ನೀಡಲಾಗಿತ್ತು. ಕಾರ್ಯಕ್ರಮವನ್ನು ನಟೇಶ್ ಹೆಗಡೆ ನಿರೂಪಿಸಿ, ಪ್ರಸನ್ನ ಹೆಗಡೆಯವರು ಮಾಧ್ಯಮ ಪ್ರತಿನಿಧಿಗಳನ್ನು ಸೇರಿದಂತೆ ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರನ್ನೂ ವಂದಿಸಿದರು.
ಈ ಮೇಲಿನದು ವರದಿಯಾದರೂ ಸಹ ನನ್ನ ಗೆಳೆಯ ನಾಗರಾಜ ಡೋಂಗ್ರೆ ಹಾಸ್ಯಕ್ಕಾಗಿ ಹೇಳಿದ ಒಂದು ಮಾತನ್ನು ಇಲ್ಲಿ ಉಲ್ಲೇಖಿಸುತ್ತೇನೆ. "ಈ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಗಳೆಲ್ಲರೂ ಸೇರಿ ಒಂದು ಏಕಪಾತ್ರ ಅಭಿನಯ ಮಾಡಿದರು, ಶಾಲೆಯ ಎಲ್ಲ ವಿದ್ಯಾರ್ಥಗಳೂ ಸ್ವಾಗತಿಸಿದರು" ಅಂದರೆ ನಾಲ್ಕನೇ ತರಗತಿಯಲ್ಲಿರುವುದು ಒಂದೇ ವಿದ್ಯಾರ್ಥ.
,
ಹೀಗೆ ಒಂದೆಡೆ ಜನಸಂಖ್ಯಾ ಸ್ಫೋಟ, ಇನ್ನೊಂದೆಡೆ ಶಾಲೆಗಳಿಗೆ ವಿದ್ಯಾರ್ಥಗಳೇ ಇಲ್ಲದೇ ಶಾಲೆ ಮುಚ್ಚುವ ಸ್ಥಿತಿ, ಒಂದನೇ ತರಗತಿಯಲ್ಲಿ ಯಾರೂ ಇಲ್ಲ, ಇನ್ನು ಮೂರು ವರ್ಷಗಳ ಕಾಲ ಯಾವುದೇ ಪ್ರವೇಶಾತಿಗಳು ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಶಾಲೆ ಮುಚ್ಚುವ ಹಂತದಲ್ಲಿದೆ. ಇರುವ ಒಂದೆರಡು ಮಕ್ಕಳು ಎಂತಹ ಪ್ರತಿಭಾವಂತರಾದರೂ ಇವರಿಗೆ ಶಿಕ್ಷಣ ಮಾತ್ರ ದುಸ್ತರವಾಗುವ ಹಂತದಲ್ಲಿದೆ. ಇದರಿಂದಾಗಿ ಉಳಿದ ಕೆಲವೇ ವಿದ್ಯಾರ್ಥಗಳಿಗೆ ಶಾಲೆ ಗಗನ ಕುಸುಮ ವಾಗುತ್ತಿದೆ. ಇದು ಈ ಊರಿನ ಪರಿಸ್ಥಿತಿ ಮಾತ್ರವಲ್ಲ. ಮಲೆನಾಡಿನ ಪುಟ್ಟ ಪುಟ್ಟ ಎಲ್ಲ ಊರುಗಳಲ್ಲಿಯ ವಸ್ತುಸ್ಥಿತಿ. ಸರ್ಕರ ಶಿಕ್ಷಣ ಹಕ್ಕು ಎಂದು ಕಾನೂನು ಮಾಡಿದ್ದೇನೋ ಸರಿ. ಪ್ರಾಥಮಿಕ ಶಾಲೆ ಒಂದು ಕಿ.ಮಿ. ಅಂತರದೊಳಗಿರಬೇಕು. ಇಲ್ಲವಾದಲ್ಲಿ ಮಕ್ಕಳಿಗೆ ಉಚಿತ ಸಾರಿಗೆ ಅಥವಾ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದೆ. ಆದರೆ ಇಂತಹ ದೂರದ ಪುಟ್ಟ ಹಳ್ಳಿಗಳಿಗೆ ವಾಹನ ವ್ಯವಸ್ಥೆ ಸಾಧ್ಯನಾ? ಒಂದೋ ಎರಡೋ ಮಕ್ಕಳಿರುವ ಪೋಷಕರು ಪುಟ್ಟ ಕಂದಮ್ಮಗಳನ್ನು ವಸತಿ ಶಾಲೆಗೆ ಸೇರಿಸಬಲ್ಲರೇ? ಇದಕ್ಕೇನು ಪರಿಹಾರ?