ನಮ್ಮ ಕುಮಾರ ಪರ್ವತ ಚಾರಣ

ನಮ್ಮ ಕುಮಾರ ಪರ್ವತ ಚಾರಣ

ಈ ಚಾರಣಗಳೆಂದರೆ ವೈಷ್ಣೋದೇವಿ ಮಂದಿರಕ್ಕೆ ಹೋದ ಹಾಗೆ. ಯೋಗ ಬರದೆ ಅವು ಮೆಟೀರಿಯಲಾಯಿಸ್ ಆಗುವುದೇ ಇಲ್ಲ. ಕುಮಾರ ಪರ್ವತಕ್ಕೆ ಚಾರಣ ಮಾಡುವ ನಮ್ಮ ಕನಸು ಹಲವಾರು ವರ್ಷಗಳ ಭಗ್ನತೆಯ ಬಳಿಕ ಚಿಗುರೊಡೆದು ಕೊನೆಗೂ ಈಡೇರಿದೆ!.

ಮೂರು ಪ್ರತ್ಯೇಕ ಸ್ಥಳಗಳಿಂದ ಹೊರಟು ನಾವೆಲ್ಲ ಉಪ್ಪಿನಂಗಡಿಯ ಸಂಬಂಧಿಕರ ಮನೆಯಲ್ಲಿ ಒಂದಾದೆವು. ಚಾರಣ ಹೊರಡುವವರು ನಾವು ೬ ಮಂದಿ ದೊಡ್ಡವರು ಮತ್ತು ಇಬ್ಬರು ಮಕ್ಕಳು. ನನ್ನ ಚಿಕ್ಕಮ್ಮ ಸರಭರನೆ ಓಡಾಡಿ ನಮಗಾಗಿ industrial scale ನಲ್ಲಿ ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರು, ರಾತ್ರಿಗೆ  ಚಪಾತಿ, ಪಲ್ಯ, ಫ್ಲಾಸ್ಕಿನಲ್ಲಿ ಬಿಸಿಹಾಲು (ಕಾಫಿಗಾಗಿ!) ತಯಾರು ಮಾಡಿಕೊಟ್ಟರು.

ಕೊನೆಗೂ ನಾವು ಎರಡು ಕಾರಿನಲ್ಲಿ ಹೊರಟೆವು. ಹತ್ತಿರದ ಸುಬ್ರಮಣ್ಯದ ದಾರಿಗೆ ಬದಲಾಗಿ ಬಿಸಿಲೆ ಘಾಟಿ ದಾಟಿ ಹತ್ತುವ ಮಾರ್ಗ ವನ್ನು ಆಯ್ದುಕೊಂಡಿದ್ದೆವು. ಬುದ್ಧಿ ಇದ್ದವರು ಆಯ್ಕೆಮಾಡಿಕೊಳ್ಳದ ಅಸಾಧ್ಯವಾದ ಮಾರ್ಗದಲ್ಲಿ ನಮಗೆ ೬೦ ಕಿಮೀ ಕ್ರಮಿಸಲು ೪ ಘಂಟೆ ಬೇಕಾಯಿತು. (ನಮಗೆ ಬುದ್ಧಿ ಇರಲಿಲ್ಲವೆಂದಲ್ಲ. ಮಾರ್ಗ ಸರಿ ಇಲ್ಲ ಎಂದು ಗೊತ್ತಿರಲಿಲ್ಲ ಅಷ್ಟೆ). ಕಾರುಗಳು ಎಲ್ಲ ಕೀಲುಗಳಿಂದ ಕಿರ್ರ್ ಎಂದು ಶಬ್ದ ಮಾಡಲು ಶುರುಮಾಡಿದ್ದವು.

ನನ್ನ ತಂದೆಯವರಿಂದ ಮಲ್ಲಿಕಾ ಪುಷ್ಫದಂತೆ ಟ್ರೀಟ್ ಮಾಡಿಸಿಕೊಳ್ಳುವ ನಮ್ಮ ಕಾರು ಇವನ್ಯಾವನಪ್ಪ ನನ್ನ ಮೇಲೆ ಕೂತಿರುವವನು ಎಂದು ಅಶ್ಚರ್ಯ ಪಡುತ್ತಿತ್ತೇನೋ.

ದಾರಿಯಲ್ಲಿ ಒಂದು ಹೊಳೆಬದಿಯಲ್ಲಿ ಮಧ್ಯಾಹ್ನದ ಊಟ. ಅಂತೂ ಇಂತೂ ಪರ್ವತದ ತಪ್ಪಲು ಮಟ್ಟಿದಾಗ ಸ್ಂಜೆ ೫ ಗಂಟೆ.

ಅಲ್ಲಿನ ಫಾರೆಸ್ಟರು ನಮಗೆ ಆ ಹೊತ್ತಿನಲ್ಲಿ ಹತ್ತಲು ಅನುಮತಿ ಕೊಡಲಿಲ್ಲ. ರಾತ್ರಿ ಆನೆಗಳಿರುತ್ತವೆ ಎಂದು ಹೆದರಿಸಿ ಬೇಕಿದ್ದರೆ ಅವರು ಉಳಿದುಕೊಳ್ಳುವ ಕಟ್ಟಡದಲ್ಲಿ ಮಲಗಲು ಅವಕಾಶ ಕೊಟ್ಟ. ನಮ್ಮ ಜೊತೆಗಿದ್ದ ೨ ಮಕ್ಕಳಿಂದಾಗಿ ನಮಗೆ ಸ್ವಲ್ಪ ಅನುಕಂಪದ ಮತಗಳು ಬೇರೆ ದೊರೆಯುತ್ತಿದ್ದವು. ನಾವು, ಇಲ್ಲ ನಮಗೆ ಹೊರಗೆ ಮರದ ಕೆಳಗೆ ಮಲಗಿಕೊಳ್ಳಬೇಕಿದೆ ಅದಕ್ಕಾಗಿಯೇ ಇಷ್ಟು ದೂರ ಬಂದಿದ್ದೇವೆ ಎಂದು ಹೇಳಿ ಅವರ ಸಲಹೆಯನ್ನು ತಿರಸ್ಕರಿಸಿಬಿಟ್ಟೆವು. ಅವನು, ನಾವು ಮಲಗಬೇಕೆಂದು ಪ್ಲಾನು ಮಾಡುತ್ತಿರುವ ಜಾಗದಲ್ಲಿ tiger scat ದೊರೆತಿದೆ ಎಂದು ಬೇರೆ ಹೇಳಿ ನಮ್ಮ ಆತ್ಮ ವಿಶ್ವಾಸವನ್ನು ಕಡಿಮೆ ಮಾಡಲೆತ್ನಿಸಿದ. ಆದರೆ ನಮ್ಮ ಗ್ರೂಪಿನಲ್ಲಿ ಉಲ್ಲಾಸ ಕಾರಂತರ ಜೊತೆ ಕೆಲಸ ಮಾಡಿದ್ದ ನನ್ನ ಭಾವ ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ, ಆದರೆ ಆಸಕ್ತಿಯಿಂದ ಫಾರೆಸ್ಟರ್ ಜೊತೆಗೆ ಆ ಬಗ್ಗೆ ಸಂಭಾಷಿಸುತ್ತಿದ್ದ. ನಮಗೆ ಮೊದಲಿಗೆ tiger scat ಎಂದರೆ ಏನೆಂದೇ ತಿಳಿಯಲಿಲ್ಲ, ಆದರೆ ಅದನ್ನೆಲ್ಲ ತೋರಿಸಿಕೊಳ್ಳದೆ ಅರ್ಥವಾದವರಂತೆ ತಲೆಯಾಡಿಸುತ್ತಿದ್ದೆವು. ದೇವರು deduction ನ ಶಕ್ತಿ ಕೊಟ್ಟಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ ಅವರು ’ಹುಲಿಯ ಮಲ’ದ ಬಗ್ಗೆ ಮಾತನಾಡುತ್ತಿದ್ದಾರೆಂದು ತಿಳಿಯಿತು. ನಾವಂತೂ ನಮ್ಮ ಶಯ್ಯಾಗ್ರಹವನ್ನು ಬದಲಿಸಲಿಲ್ಲ. ಉಲ್ಲಾಸ ಕಾರಂತರ ಶಿಷ್ಯ ಬಂದಿದ್ದಾರೆಂದರೆ ಹುಲಿಗೂ ಸ್ವಲ್ಪ ಗೌರವ ಇರುವುದಿಲ್ಲವೆ?!, ಕಾರಂತರು ಅಷ್ಟು ದೊಡ್ಡ ರಿಸರ್ಚರ್ ಬೇರೆ.

ರಾತ್ರಿಯ ತನಕ ಹೊತ್ತು ಕಳೆಯಲು ಅಲ್ಲಿ ಹತ್ತಿರದ ದಿಬ್ಬವೊಂದಕ್ಕೆ ಹತ್ತಿ ಇಳಿದದ್ದಾಯಿತು. ಆಮೇಲೆ ಸೌದೆ ಒಟ್ಟುಗೂಡಿಸಿ camp fire ಹಾಕುವ ಕೆಲಸ. ಪುಣ್ಯಕ್ಕೆ ಅಲ್ಲಿ ಸಾಕಷ್ಟು ಒಣ ಸೌದೆ ಇತ್ತು (ಕೊಡಚಾದ್ರಿಯಲ್ಲಿ ಸೌದೆ ದೊರೆಯದೆ ಮೊಬೈಲ್ ಬೆಳಕಿನಲ್ಲಿ camp fire ಮಾಡಿ ಸಮಾಧಾನ ಪಟ್ಟುಕೊಂಡಿದ್ದೆವು). ಸ್ವಲ್ಪ ಹೊತ್ತಿನ ಮಾತುಕತೆಯ ಬಳಿಕ ರಾತ್ರಿಯ ಊಟ. ಊಟವೆಂದರೆ ಚಪಾತಿ, ಪಲ್ಯ (ಮೇಲೆ ಹೇಳಿದಂತೆ), ಆಮೇಲೆ ಬಿಸಿಬಿಸಿ ಕಾಫಿ (ಇದೊಂದು ಒಳ್ಳೆ ಐಡಿಯಾ. ನೀವು ಚಾರಣಿಗರಾಗಿದ್ದರೆ ಮಾಡಿ ನೋಡಿ. ಈಗ ಒಡೆಯುವ ಸಮಸ್ಯೆ ಇಲ್ಲದ ಸ್ಟೀಲ್ ಫ್ಲಾಸ್ಕುಗಳು ಬರುತ್ತವೆ). ಮತ್ತೆ ಸ್ವಲ್ಪ ಮಾತು. ಆಮೇಲೆ ನಿದ್ದೆ. ಮಲಗುವ ಮೊದಲು ಥರ್ಮಲ್ ವೇರ್, ಸಾಕ್ಸ್, ಗ್ಲೌಸು ಎಲ್ಲ ಧರಿಸಿಕೊಂಡಿದ್ದೆವು. ರಾತ್ರಿ ಮೂರು ಘಂಟೆಯ ಹೊತ್ತಿಗೆ ಎಲ್ಲರೂ ಒಬ್ಬೊಬ್ಬರಾಗಿ ಎಚ್ಚರಗೊಂಡೆವು. camp fire ನ ಬೆಂಕಿ ಆರಿ ನಾವು ಧರಿಸಿದ್ದ ಎಲ್ಲ ಪದರಗಳನ್ನು ದಾಟಿ ಛಳಿ ನಿರಾತಂಕವಾಗಿ ನಮ್ಮೊಳಗೆ ನುಗ್ಗಿತ್ತು. ಅನಿವಾರ್ಯವಾಗಿ ಎದ್ದು ಅಳಿದುಳಿದ ತರಗೆಲೆ, ಸೌದೆಗಳನ್ನು ಒಟ್ಟುಗೂಡಿಸಿ ಮತ್ತೆ ಬೆಂಕಿ ಮಾಡಿದೆವು.

ಬೆಳಗ್ಗೆ ಐದಕ್ಕೆಲ್ಲ ಎದ್ದು ತಯಾರಾಗಲು ಶುರುಮಾಡಿ ೭ ಘಂಟೆಗೆ ಪರ್ವತ ಹತ್ತಲು ಮೊದಲು ಮಾಡಿದೆವು. ಆಹೊತ್ತಿನಲ್ಲಿ ಹತ್ತುವುದು photography ಯ ದೃಷ್ಟಿಯಿಂದ ತುಂಬಾ beneficial. ಓರೆ ಬೆಳಕು ಸಿಗುವುದರಿಂದ ಒಳ್ಳೆಯ ಚಿತ್ರಗಳು ಬರುತ್ತವೆ. ಆ ದಾರಿಯಲ್ಲಿ ದಕ್ಷಿಣ ಕನ್ನಡಕ್ಕಿಂತ ಭಿನ್ನವಾದ vegetation ಬೇರೆ ಕಾಣ ಸಿಗುತ್ತದೆ. ನಾವು ನಾಡಿನಲ್ಲಿ ನೋಡುವ ಅವೇ ಮರಗಳು ದಟ್ಟ ಕಾಡಿನಲ್ಲಿ ಬೇರೆಯೇ ರೀತಿಯಾಗಿ ಬೆಳೆಯುತ್ತವೆ. ಪುನರ್ಪುಳಿ, ಹಲಸಿನಂತ ಮರಗಳು ಉದ್ದಕ್ಕೆ ಅಡಿಕೆಮರಗಳಂತೆ ಗೆಲ್ಲುಗಳಾಗಿ ಕವಲೊಡೆಯದೆ ಬೆಳಕಿನ ಅನ್ವೇಷಣೆಯಲ್ಲಿ ಹೊರಟಿದ್ದವು. ಸ್ವಲ್ಪ ಬೆಟ್ಟದ ಮೇಲೆ ಹೋದಂತೆ ಕೆಲವು ಜಾತಿಯ ಮರಗಳೆಲ್ಲ ಬೊನ್ಸೈ ಗಳಂತೆ ಕುಬ್ಜತೆಯನ್ನು ಪಡೆದಿದ್ದವು - ಬಹುಶ: ನೀರಿನ ಅಲಭ್ಯತೆಯಿಂದ. ಈ ದಾರಿಯಾಗಿ ಹೋದರೆ ಹೆಚ್ಚು ಕಮ್ಮಿ ಪರ್ವತದ ತುದಿಯ ತನಕ ಕಾಡಿನ ಒಳಗೇ ನಡೆಯುತ್ತೇವೆ. ಆದರೆ ಮಧ್ಯದಲ್ಲಿ ೩ ಕಡೆ ಪಾದೆ ಕಲ್ಲಿನ ಕಡಿದಾದ ದಿಬ್ಬಗಳು ಸಿಗುತ್ತವೆ. ಇಲ್ಲಿ ಬಿದ್ದರೆ ಅಪಾಯ ಗ್ಯಾರಂಟಿ. ನನ್ನ ತಮ್ಮ (ಚಿತ್ರದಲ್ಲಿ ಕಾಣುವ ಹುಡುಗ) ಹೇಳುವಂತೆ ಇವು 86 ಡಿಗ್ರಿ ಕೋನದಲ್ಲಿವೆ! (೮೬ ಅಥವಾ ೬೮? ನೆನಪಾಗುತ್ತಿಲ್ಲ).  ಅಂದರೆ ಹೆಚ್ಚುಕಮ್ಮಿ vertical.

ಈ ದಾರಿಯಿಂದ ಹತ್ತಿ ಸುಬ್ರಮಣ್ಯ ದಾರಿಯಿಂದ ವಾಪಸು ಇಳಿಯುವ ಹಲವು ಅನುಭವಿ ಚಾರಣಿಗರು ನಮಗೆ ದಾರಿಯಲ್ಲಿ ಸಿಕ್ಕರು.
ದಾರಿಯಲ್ಲಿ ಮತ್ತೆ ನಮಗೆ tiger scat ಕಾಣ ಸಿಕ್ಕಿತು. ಮಲದಲ್ಲಿ ಅದು ತಿಂದಿದ್ದ ಮುಳ್ಳುಹಂದಿಯ ಮುಳ್ಳುಗಳು ಹಾಗೇ ಇದ್ದವು. ನಾವು evolution (ವಿಕಾಸ) ದ ಬಳಿಕ ಜನಿಸಿದ್ದು ಎಷ್ಟು ಒಳ್ಳೆಯದಾಯಿತು ಎಂದು ನನಗೆ ಆಗ ಅರಿವಾಯಿತು. ಇಲ್ಲದಿದ್ದಲ್ಲಿ ಹಲಸಿನ ಹಣ್ಣನ್ನೆಲ್ಲ ಮೇಣದ ಸಹಿತ ತಿನ್ನಬೇಕಾಗಿತ್ತೇನೋ (ನಾನು vegetarian).

ಬೆಟ್ಟದ ತುದಿ ತಲುಪಿದಾಗ ಹತ್ತು ಹನ್ನೊಂದು ಘಂಟೆ. ಅನುಭವಿಗಳು ಹೇಳುವಂತೆ ಗುರಿಗಿಂತ ತಲುಪುವ ಮಾರ್ಗ ಹೆಚ್ಚು ಅಪ್ಯಾಯಮಾನ, (ಅದೂ ನಮ್ಮಲ್ಲಿ ನೀರು ಮತ್ತು ಮಜ್ಜಿಗೆಯ ಕೊರತೆ ಇದ್ದು ತಲೆಯ ಮೇಲ ಸೂರ್ಯ ಸುಡುತ್ತ ಇದ್ದಾಗ). ಕುಮಾರ ಪರ್ವತ, ಶೇಷ ಪರ್ವತ, ಭತ್ತದ ರಾಶಿ (ಯಂತೆ ಕಾಣುವ ಒಂದು ಪರ್ವತ), ಇತ್ಯಾದಿಗಳನ್ನು ನೋಡಿ ವಾಪಸ್ ಬಂದೆವು. ಪರ್ವತದ ತುತ್ತ ತುದಿಯಿಂದ ನೆನಪಿಗೆ ಇರಲಿ ಎಂದು ಒಂದು ಆರ್ಕಿಡ್ ಸಸಿಯನ್ನು ನಾನು ಸಂಗ್ರಹಿಸಿ ತಂದೆ.

ಕುಮಾರಪರ್ವತದಲ್ಲಿ ಚಾರಣಿಗರು ಕೂಡಾ ಹೆಚ್ಚು ಪ್ರಜ್ನಾವಂತರಂತೆ ವರ್ತಿಸುತ್ತಿದ್ದಾರೆ ಅನ್ನಿಸಿತು ನನಗೆ - ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕವರುಗಳು ಇಲ್ಲ ಎನ್ನುವಷ್ಟು ಕಡಿಮೆ. ನಾವುಗಳೂ ನಮ್ಮ ವೇಸ್ಟುಗಳನ್ನಲ್ಲದೆ ಸ್ವಲ್ಪ ಅಲ್ಲಿದ್ದ ಪ್ಲಾಸ್ಟಿಕ್ ಕೂಡಾ ಸ್ವಲ್ಪ ಹೆಕ್ಕಿ ತಂದೆವು.

ಹೆಚ್ಚಿನ ಚಿತ್ರಗಳಿಗೆ ನೀವು ಇಲ್ಲಿಗೆ ಭೇಟಿ ಕೊಡಬಹುದು.

Rating
No votes yet

Comments