ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
ದಿನವೂ ಸಂಜೆ ಏಳೂವರೆಗೆಲ್ಲಾ ಮನೆ ಸೇರುತ್ತಿದ್ದ ಆಕೆಯ ಗಂಡ ಅಂದು ಎಂಟಾದರೂ ಬಂದಿರಲಿಲ್ಲ. ಎಂಟೂವರೆಯಾಯ್ತು ... ಒಂಭತ್ತಾಯ್ತು... ಆತನ ಆಗಮನಕ್ಕಾಗಿ ಕಾಯುತ್ತಿದ್ದ ಆಕೆಗೆ ಈ ಕಾಯುವಿಕೆಯನ್ನು ಸಹಿಸಲಾಗುತ್ತಿಲ್ಲ. ಆತನಿಗೆ ಕರೆ ಮಾಡಿದರೆ, ಅತ್ತಲಿಂದ ಉತ್ತರವಿಲ್ಲ. ಆಕೆಯ ಬೇಸರ, ದುಃಖ ಜಾಸ್ತಿ ಆಗುತ್ತಾ ಹೋಯ್ತು. ಏನಾಯ್ತೋ...? ಹತ್ತಾರು ಕೆಟ್ಟ ಕೆಟ್ಟ ಯೋಚನೆಗಳು ಆಕೆಯ ತಲೆಯಲ್ಲಿ ಸುತ್ತಾಡ ತೊಡಗಿದವು. ಸರಿಯಾಗಿ ಒಂಭತ್ತೂವರೆಗೆ ಪತಿರಾಯನ ಆಗಮನವಾಯ್ತು. ಅದನ್ನು ದೂರದಿಂದಲೇ ಅರಿತುಕೊಂಡ ಆಕೆ, ಒಮ್ಮೆಗೇ ಮೌನಿಯಾಗುತ್ತಾಳೆ. ಒಳಬಂದ ಗಂಡನತ್ತ ಕತ್ತೆತ್ತಿ ನೋಡುವುದಿಲ್ಲ, ಆತನಿಗೆ ಮುಖ ಕೊಟ್ಟು ಮಾತಾಡಿಸುವುದಿಲ್ಲ. ಆತ ತಾನು ತಡವಾಗಿ ಬಂದುದಕ್ಕೆ ಕಾರಣ ನೀಡಲು ಆರಂಭಿಸಿದಾಗಲೂ ಮೌನವೇ ಉತ್ತರ. ಆತ ಮುಂದುವರಿಸದೇ ಅರ್ಧಕ್ಕೇ ನಿಲ್ಲಿಸಿದ. ಮೌನದಲ್ಲೇ ಊಟವೂ ಮುಗಿಯಿತು. ಊಟ ಮಾಡಿದ ತಟ್ಟೆ ಬಟ್ಟಲುಗಳನ್ನು ತೊಳೆದಿಟ್ಟು ಬಂದವಳಿಗೆ ಮೌನವನ್ನು ಮುಂದುವರಿಸುವುದು ಕಷ್ಟವಾಗತೊಡಗಿತು. ಇಷ್ಟು ಹೊತ್ತು ಕಟ್ಟಿ ಹಾಕಿದ್ದ ಬೇಸರ, ದುಃಖವೆಲ್ಲಾ ಕೋಪಾಗ್ನಿಯಾಗಿ ಕಟ್ಟೆಯೊಡೆದು ಬರಲಾರಂಬಭಸಿತು. ಒಂದೇ ಸಮನೆ ಗಂಡನ ಮೇಲೆ ತನ್ನ ಕೋಪವನ್ನು ಹರಿಹಾಯತೊಡಗಿದಳು. “ನಿಮಗೋಸ್ಕರ ನಾನು ಇಲ್ಲಿ ಕಾಯ್ತಾ ಕೂರಬೇಕು... ನಿಮಗೆ ಜವಾಬ್ದಾರಿಯೇ ಇಲ್ಲ... ಮನೆಯಿಂದ ಹೊರಗೆ ಹೋದ ಮೇಲೆ ಮನೆಯ ಬಗ್ಗೆ ನೆನಪೇ ಇರುವುದಿಲ್ಲ... ಮನೆಯಲ್ಲಿ ಒಬ್ಬಳು ಕಾಯ್ತಾ ಇದ್ದಾಳೆ ಅನ್ನುವ ನೆನಪಾದ್ರೂ ಬೇಡವೇ ನಿಮಗೆ...” ಇತ್ಯಾದಿ... ಇತ್ಯಾದಿ.
ಈ ಮೊದಲೇ ತಾನು ತಡವಾದುದಕ್ಕೆ ಕಾರಣವನ್ನು ಹೇಳಲಾರಂಭಿಸಿದ್ದನಾದರೂ ಕೇಳಿರದ ಹೆಂಡತಿ, ಈಗ ತನ್ನ ಮೇಲೆ ಈ ರೀತಿ ಕೋಪದ ಪ್ರದರ್ಶನ ಮಾಡುತ್ತಿರುವುದು ಆತನಿಗೆ ಹಿಡಿಸಲಿಲ್ಲ. ಆಕೆಯ ಮಾತುಗಳಿಗೆ ಈತನ ಪ್ರತಿಮಾತುಗಳು ಹೊರಬಂದವು. ಮಾತಿಗೆ ಮಾತು ಬೆಳೆದು ಅಲ್ಲಿ ಪುಟ್ಟ ವಾಕ್ಸಮರವೇ ನಡೆದು ಹೋಯ್ತು. ಮತ್ತೆಲ್ಲಾ ಸ್ಮಶಾನ ಮೌನ ಆ ಮನೆಯನ್ನು ಆವರಿಸಿತು. ಹರೆಯಕ್ಕೆ ಇನ್ನೂ ಕಾಲಿಡದ, ಅವರ ಮಕ್ಕಳು ಅಲ್ಲಿ ಮೂಕ ಪ್ರೇಕ್ಷಕರಷ್ಟೇ.
ಯಕ್ಷಗಾನ ಕೇಂದ್ರದಲ್ಲಿ ಬೇಸಿಗೆಯ ತರಬೇತಿ ಶಿಬಿರಕ್ಕೆ ಸೇರಿದ್ದ ಒಂಭತ್ತು ವರುಷದ ಕೃಷ್ಣ ಅಂದು ದಿನವಿಡೀ ಮನೆಯಲ್ಲಿಲ್ಲ. ಪಕ್ಕದ ಜಿಲ್ಲಾಕೇಂದ್ರದಲ್ಲಿನ ಒಂದು ಯಕ್ಷಗಾನ ಪ್ರದರ್ಶನಕ್ಕೆ ಆತನನ್ನೂ ಕರೆದೊಯ್ದಿದ್ದರು ಕೇಂದ್ರದವರು. ಆತನ ಗೈರುಹಾಜರಿ ಆತನ ಅಜ್ಜಿಗೆ ತುಂಬಾ ಕಿರಿಕಿರಿಯನ್ನೂ ಬೇಸರವನ್ನೂ ಉಂಟುಮಾಡಿದೆ. ತನ್ನ ಮಗನನ್ನು ಕರೆದು ಕೇಳಿದರು. “ಅಷ್ಟು ಚಿಕ್ಕ ಹುಡುಗನನ್ನು ಅಷ್ಟೊಂದು ದೂರ ಯಾಕೆ ಕಳಿಸಿದ್ದು ಮಾರಾಯಾ, ಏನಾದ್ರೂ ಆದರೆ ಏನು ಮಾಡೋದು?” ಅತ “ಇಲ್ಲಮ್ಮಾ ... ಏನೂ ಸಮಸ್ಯೆ ಇಲ್ಲ. ಯಕ್ಷಗಾನದ ಕೇಂದ್ರದ ಯಜಮಾನರೂ ಹೋಗಿದ್ದಾರೆ. ಅವರು ಜಾಗ್ರತೆವಹಿಸಿ ಮಕ್ಕಳನ್ನು ವಾಪಾಸು ಕರೆದುಕೊಂಡು ಬರುತ್ತಾರೆ, ಆ ಬಗ್ಗೆ ಚಿಂತೆ ಬೇಡ ನಿಮಗೆ. ನಾನು ಆತನ ಅಪ್ಪನಲ್ಲವೇ... ನನಗೆ ಜವಾಬ್ದಾರಿ ಇಲ್ಲವೇನಮ್ಮಾ...?” ಅಂದ. ಅಷ್ಟೇ... ಅಜ್ಜಿಯ ಬೇಸರ ಕೋಪದ ರೂಪ ತಾಳಿತು. ಮಗನಿಗೆ ಮತ್ತು ಆತನ ಜೊತೆಗೆ ಸೊಸೆಗೂ ಸಹಸ್ರನಾಮ ಹಾಕಿದರು. ತನ್ನ ಮನಬಂದಂತೆಲ್ಲಾ ಬೈಗುಳದ ಸುರಿಮಳೆಗೈದರು. “ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಅರಿವಿಲ್ಲ. ಇವರಿಗೆಲ್ಲಾ ಮಕ್ಕಳ್ಯಾಕೆ ಬೇಕು...” ಇತ್ಯಾದಿ ... ಇತ್ಯಾದಿ.
ಈ ಎರಡೂ ಸನ್ನಿವೇಶಗಳನ್ನು ಕೂಲಂಕಷವಾಗಿ ಗಮನಿಸಿದಾಗ, ಅಲ್ಲಿ ಹೆಂಡತಿ ಹಾಗೂ ಇಲ್ಲಿ ಅಜ್ಜಿ ಈರ್ವರಿಗೂ ಆಗಿದ್ದು ಬೇಸರ. ಆದರೆ ಅವರೀರ್ವರೂ ವ್ಯಕ್ತಪಡಿಸಿದ್ದು, ಹೊರಹಾಕಿದ್ದು ಕೋಪವನ್ನು. ಇವು ಉದಾಹರಣೆಗಳಷ್ಟೇ. ನಾವೆಲ್ಲರೂ ನಮ್ಮ ಮನದೊಳಗಿನ ಭಾವನೆಗಳನ್ನು ಅವುಗಳ ಮೂಲ ರೂಪಗಳಲ್ಲಿಯೇ ಹೊರಗೆಡಹಲು ಸತತವಾಗಿ ವಿಫಲರಾಗುತ್ತಲೇ ಇರುತ್ತೇವೆ ಅಥವಾ ಪ್ರಯತ್ನಿಸುವುದೇ ಇಲ್ಲ. ಇದರಿಂದಾಗಿ ಸಂಬಂಧಗಳು ಮತ್ತು ಬಾಂಧವ್ಯಗಳು ಕೆಡುತ್ತಿವೆ. ಇವು ನಮ್ಮ ಮನೆಗಳಲ್ಲಿ ಇರಬಹುದು, ಕಛೇರಿಯ ಸಹೋದ್ಯೋಗಿಗಳ ನಡುವೆಯೊ ಇರಬಹುದು ಅಥವಾ ಸಮಾಜದಲ್ಲಿ ಇರಬಹುದು. ನಮ್ಮಲ್ಲಿ ಹೆಚ್ಚಿನವರು ನಮಗೆ ಬೇಸರವಾದಾಗಲೂ ವ್ಯಕ್ತಪಡಿಸುವುದು ಕೋಪವನ್ನು, ಕೋಪ ಬಂದಾಗಲೂ ವ್ಯಕ್ತಪಡಿಸುವುದು ಕೋಪವನ್ನು. ಅದೇಕೆ ಹೀಗೆ? ನಾವು ಬೇಸರವಾದಾಗ ನಮ್ಮ ಬೇಸರವನ್ನು ವ್ಯಕ್ತಪಡಿಸಲು ಪ್ರಯತ್ನಿಸದೇ ಕೋಪಗೊಳ್ಳುವುದೇಕೆ?
ಒಂದು ವೇಳೆ ಗಂಡನಿಗಾಗಿ ಕಾಯುತ್ತಾ ಬೇಸರಿಸುತ್ತಿದ್ದ ಹೆಂಡತಿ, ತನ್ನ ಗಂಡನ ಆಗಮನವಾಗುತ್ತಿದ್ದಂತೆ, ಬೇಸರವನ್ನೆಲ್ಲಾ, ಮನದ ದುಃಖವನ್ನೆಲ್ಲಾ ಅಳುವಿನ ರೂಪದಲ್ಲೋ ಅಥವಾ ಬೇಸರವನ್ನೇ ಸೂಚಿಸುವ ಮಾತುಗಳ ರೂಪದಲ್ಲೋ ಹೊರಹಾಕಿದ್ದಿದ್ದರೆ, ಗಂಡನಿಗೆ ಆಕೆಯ ಕಾಳಜಿಯ ಅರಿವಾಗುತ್ತಿತ್ತಲ್ಲವೇ? ಆಕೆಗೆ ಬೇಸರ ಆಗಿದೆ ಎನ್ನುವುದರ ಅರಿವೂ ಆಗುತ್ತಿತ್ತಲ್ಲವೇ? ಆತನಲ್ಲಿ ಆ ಅರಿವು ಮೂಡಿಸಿದ್ದರೆ, ಆತ ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸುವ ಸಾಧ್ಯತೆಗಳಿರುವುದಿಲ್ಲವೇ? ಇನ್ನು ಆ ಅಜ್ಜಿ, ಮೊಮ್ಮಗನ ಸುರಕ್ಷತೆಯ ಬಗ್ಗೆ ಬೇಸರಗೊಂಡವರು, ಬೇಸರ ತಾಳಲಾರದೇ ಅತ್ತುಬಿಡಬಹುದಿತ್ತಲ್ಲವೇ? ಅಳು ಏಕೆ ಬಂದಿಲ್ಲ ... ಕೋಪ ಯಾಕೆ ಬಂದಿತ್ತು?
ಎರಡೂ ಸನ್ನಿವೇಶಗಳಲ್ಲಿ, ತಮ್ಮ ಹಕ್ಕು ಸ್ಥಾಪನೆಯ ಯತ್ನ ನಡೆದಿದೆಯೆಂದು ಅನಿಸುವುದಿಲ್ಲವೇ? ತಮ್ಮನ್ನು ಕೇಳಿಕೊಂಡೇ ಎಲ್ಲವೂ ನಡೆಯಬೇಕು ಅನ್ನುವ ಅಹಂಭಾವ ಕಂಡುಬರುವುದಿಲ್ಲವೇ? ಬೇಸರವಾದ ಮನದಲ್ಲಿ ಅಹಂಭಾವ ಮೂಡಿಸಿಕೊಂಡು, ಕೋಪದ ಮೂಲಕ ಅನ್ಯರ ಮೇಲೆ ಸವಾರಿ ಮಾಡುವ ಪ್ರಯತ್ನ ನಡೆದಿಲ್ಲವೇ? ಇದರಿಂದ ಸಾಧಿಸಿದ್ದಾದರೂ ಏನು? ಸಂಬಂಧಗಳು ಕೆಡಬಹುದು ಅಷ್ಟೇ. ಆ ಗಂಡ ತನ್ನ ಹೆಂಡತಿಯನ್ನು ಇನ್ನೂ ಜಾಸ್ತಿ ನಿರ್ಲಕ್ಷಿಸಬಹುದು. ಇತ್ತ ಈ ಅಜ್ಜಿಯನ್ನು ಮನೆಯಲ್ಲಿನ ಎಲ್ಲರೂ ಲೆಕ್ಕದಿಂದ ಹೊರಗಿಟ್ಟು ವ್ಯವಹರಿಸಬಹುದು. ಅಲ್ಲದೇ, ಎಲ್ಲದಕ್ಕೂ ಮಿಗಿಲಾಗಿ ಎರಡೂ ಕಡೆ ಜನರು ಸುಳ್ಳು ಹೇಳಲು ಆರಂಭಿಸಬಹುದು.
ಇನ್ನು ಕೆಲವೊಮ್ಮೆ ನಮ್ಮಿಂದ ಯಾವುದೋ ಅಚಾತುರ್ಯ ನಡೆದಿರುತ್ತದೆ. ಅದು ಅನ್ಯರ ಮನಸ್ಸನ್ನು ನೋಯಿಸಿರುತ್ತದೆ. ಅದನ್ನು ಅರಿತು ನಾವು ಕ್ಷಮೆ ಕೇಳಲು ಸಿದ್ಧರಾಗುತ್ತೇವೆ. ಆ ವ್ಯಕ್ತಿಯ ಮುಂದೆ "ಸಾರಿ ಕಣೋ ...ಕ್ಷಮಿಸಿ ಬಿಡೊ" ಅಥವಾ "ಸಾರಿ ಕಣ್ರೀ ನನ್ನಿಂದ ತಪ್ಪಾಯ್ತು ... ಕ್ಷಮಿಸಿ ಬಿಡಿ" ಅನ್ನುತ್ತೇವೆ. ಆದರೆ, ನಮ್ಮಲ್ಲಿ ಆಗ ಕ್ಷಮಾಯಾಚನೆಯ ಭಾವ ಸಂಪೂರ್ಣವಾಗಿ ಆವರಿಸಿರುತ್ತದೆಯೇ? ಪಶ್ಚಾತ್ತಾಪದ ಭಾವ ತುಂಬಿ, ಇನ್ನೇನು ಅಳು ಬಂದು ಬಿಡಬಹುದೇನೋ ಅನ್ನುವ ಸ್ಥಿತಿ ಇರುತ್ತದೆಯೇ? ಒಂದು ವೇಳೆ ಆ ವ್ಯಕ್ತಿ ನಮ್ಮ ಕ್ಷಮಾಯಾಚನೆಯನ್ನು ಸ್ವೀಕರಿಸದೇ ನಿರ್ಲಕ್ಷಿಸಿದರೆ ಅಥವಾ ತಿರಸ್ಕರಿಸಿದರೆ, ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ನಾವು ಇನ್ನೂ ಬೇಸರಗೊಳ್ಳುತ್ತೇವೆಯೇ? ಇಲ್ಲ, ಹಾಗಾಗುವುದೇ ಇಲ್ಲ. ಹೆಚ್ಚಿನ ಸನ್ನಿವೇಶಗಳಲ್ಲಿ ನಮಗೆ ಬೇಸರ ಆಗುವುದಿಲ್ಲ, ಕೋಪ ಬರುತ್ತದೆ. ನಾವು ಕ್ಷಮೆ ಕೇಳಿದರೂ ಆ ವ್ಯಕ್ತಿ ನಿರ್ಲಕ್ಷಿಸಿದುದನ್ನು ಕಂಡಾಗ ಸಿಡಿಯುತ್ತೇವೆ. ಮರುಕ್ಷಣವೇ ಆ ವ್ಯಕ್ತಿಯನ್ನು ಬೈಯ್ಯುವುದಕ್ಕೆ ಆರಂಭಿಸುತ್ತೇವೆ. "...ನಾನು ಸಾರಿ ಕೇಳಿದ್ದೆನಲ್ಲಾ... ಇನ್ನೇನು ನಿಂದು... " ಎಂದು ಹಾರಾಡುತ್ತೇವೆ. ಇದು ಸರಿಯೇ? ಆ ವ್ಯಕ್ತಿಯ ಪ್ರತಿಕ್ರಿಯೆ ಏನೇ ಇದ್ದರೂ, ಪಶ್ಚಾತ್ತಾಪ ಪಟ್ಟುಕೊಂಡು ಬಂದಿರುವವರು ಕೋಪಿಸಿಕೊಳ್ಳಬಾರದಲ್ಲವೇ? ನಮ್ಮ ಬೇಸರ, ಪಶ್ಚಾತ್ತಾಪ, ದುಃಖ ಇವೆಲ್ಲಾ ಇನ್ನೂ ಜಾಸ್ತಿಯಾಗಿ ನಮಗೆ ಅಳುವೇ ಬರಬೇಕಾಗಿತ್ತಲ್ಲವೇ? ಆದರೆ ಹಾಗೆ ಆಗುವುದಿಲ್ಲ ಏಕೆ? ಕ್ಷಮೆ ಕೇಳುವುದಷ್ಟೇ ಮುಖ್ಯವೇ? ಕ್ಷಮಾಯಾಚನೆಯ ಭಾವ, ಅಥವಾ ತಪ್ಪಿತಸ್ಥ, ಮನೋಭಾವ ನಮ್ಮಲ್ಲಿ ಇರಬೇಕಾದುದರ ಅಗತ್ಯವಿಲ್ಲವೇ? ಕ್ಷಮಾಯಾಚನೆಯ ಭಾವವೇ ಇಲ್ಲದವನಿಗೆ ಕ್ಷಮೆ ನೀಡುವುದು ಸೂಕ್ತವೇ?
ನಮ್ಮ ಮನದೊಳಗೆ ಯಾವ ಭಾವನೆ ಇದೆಯೋ ಅದೇ ಭಾವನೆಯನ್ನು ನಾವು ವ್ಯಕ್ತಪಡಿಸಿದರೆ, ಅದನ್ನು ಅನ್ಯರು ಅರ್ಥೈಸಿಕೊಂಡರೆ ಸಂಬಂಧಗಳು ಕೆಡದೇ ಉಳಿಯಬಹುದೇನೋ. ಸಂತೋಷವಾದಾಗ ಸಂತೋಷ, ಬೇಸರವಾದಾಗ ಬೇಸರ, ಕೋಪ ಬಂದಾಗಲಷ್ಟೇ ಕೋಪವನ್ನು ತೋರ್ಪಡಿಸಬಹುದಲ್ಲವೇ? ನಮ್ಮಲ್ಲಿ ಹೆಚ್ಚಿನವರು ಬೇಸರವನ್ನು ವ್ಯಕ್ತಪಡಿಸಲು ಅರಿತೇ ಇಲ್ಲ. ನಾವು ಬೇಸರಗೊಂಡಾಗಲೂ, ಕೋಪಗೊಂಡಾಗಲೂ ಕೋಪವನ್ನೇ ವ್ಯಕ್ತಪಡಿಸುತ್ತಿರುತ್ತೇವೆ. ಹಾಗಾದರೆ ಬೇಸರದ ಅಭಿವ್ಯಕ್ತಿ ಏಕೆ ಕಾಣೆಯಾಗಿದೆ? ಎಲ್ಲರಲ್ಲೂ ಅಸಹನೆ ಮನೆಮಾಡಿಕೊಂಡು, ಕೋಪ ಏಕೆ ತಾಂಡವವಾಡುತ್ತದೆ? ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
**********
ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ ನಿನ್ನೆ (೨೪ ಜುಲೈ ೨೦೧೧) ಪ್ರಕಟವಾಗಿರುವ ಲೇಖನ.
Comments
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
In reply to ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? by Chikku123
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
In reply to ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? by RAMAMOHANA
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
In reply to ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? by ಗಣೇಶ
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
In reply to ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? by kavinagaraj
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
In reply to ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? by partha1059
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
In reply to ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? by nagarathnavina…
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
In reply to ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? by asuhegde
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
In reply to ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? by sadesha
ಉ: ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?