** ನರಬಾರಿ **

** ನರಬಾರಿ **

ಮುಂಬೈಯಲ್ಲಿ ನಡೆಯುತ್ತಿರುವ ನರಬಾರಿಯ ನೋಡಿದ ನನ್ನೊಳಗೆ ಏಳುತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಾರದಾಗ ಈ ಕವನ....

ನರಬಾರಿ ನರಬಾರಿ
ಎಲ್ಲೆಲ್ಲು ನೆತ್ತರೋಕುಳಿ
ರಕ್ಕಸರ ನೆತ್ತರ ಡಾವ
ಮುಕ್ಕುತಿದೆ ಮುಗುದರ ಜೀವ
ಯಾರು ಹೊಣೆ ಯಾರು ಹೊಣೆ
ಈ ಜೀವ ಹರಣಕೆ
ಶಂಡ ಕುತಂತ್ರಿ ರಾಜಕಾರಣಿಗಳೋ
ಹಣದ ಪಿಚಾಚಿಗಳೋ
ದರ್ಮ ಉನ್ಮತ್ತರೋ
ಓ ದೇವರ ದೇವ
ಯಾಕೆ ಈ ಹುಚ್ಚಾಟ
ಯಾಕೆ ಈ ರಕ್ಕಸರ ಅಟ್ಟಹಾಸ?

ಬಂದೂಕಿನ ನಳಿಕಯಲಿ
ಗುಂಡು ಸಾವಾಗಿ ಸಿಡಿಯುತಿದೆ
ಮದ್ದು ಬಾಂಬುಗಳು
ಚಟಚಟನೆ ಸಿಡಿದು
ಕರಕಲಾಗುತ್ತಿವೆ ಮಯ್ಗಳು
ಹಸುಳೆಗಳು ಚೀರುತ್ತಿವೆ
ಕೆಂಪು ನೆತ್ತರು ಚಿಮ್ಮುತ್ತಿದೆ
ರುಂಡ ಮುಂಡ ಕಯ್ಕಾಲು
ತುಂಡು ತುಂಡಾಗುತ್ತಿವೆ
ಓ ದೇವರ ದೇವ
ಯಾಕೆ ಈ ಹುಚ್ಚಾಟ
ಯಾಕೆ ಈ ರಕ್ಕಸರ ಅಟ್ಟಹಾಸ?

ಬದುಕಿನ ನೊಚ್ಚ ಹಸನ
ಕನಸು ಕಾಣುವ ವಯಸ್ಸಿನ
ಹದಿಹರೆಯದ ಕಯ್ಯಲ್ಲಿ
ಸಿಡಿ ಮದ್ದು ಗುಂಡು
ಬಂದೂಕು ಬಾಂಬುಗಳ
ವಿಲೇವಾರಿ ನಡೆದಿದೆ
ನೆತ್ತರ ಓಕುಳಿಯಾಡುವ
ನಶೆ ನೆತ್ತಿಯೇರಿ ಕೂತಿದೆ
ಯಾರು ಹೊಣೆ ಯಾರು ಹೊಣೆ?
ನರಬಾರಿ ನಡೆಸುವ
ಈ ತಿಳಿಗೇಡಿಗಳ ಹುಚ್ಚಾಟಕೆ?

ಅಲ್ಲನೊ ಅಲ್ಲಮನೋ?
ಶಾಂತಿಗಾರ ಏಸುವೋ?
ವಿಶ್ಣುವೋ ಶಂಕರನೋ?
ಬರಿ ಹತ್ತಾರು ಕಯ್ಗಳಲಿ
ಸೆರೆಯಾಗಿ ಬಡಸಿರಿಯ
ಗೆಂಟನ್ನು ಬೆಳಸಿದ
ಹಣ ಪಿಚಾಚಿ ಲಕ್ಶ್ಮಿಯೋ
ಮನ ಮಯ್ಗಳಲಿ
ಬಣಗಳ ನಂಜೇರಿಸಿ
ಬಂಡ ಬದುಕಿನ ಬೇಳೆ
ಬೇಯಿಸಿಕೊಳ್ಳುವ
ಪೀಡ ರಾಜಕಾರಿಣಿಗಳೋ?
ಯಾರು ಹೊಣೆ ಯಾರು ಹೊಣೆ?
ನಾಡಿನಲ್ಲೆಲ್ಲ ನಡೆಯುವ
ನರಬಾರಿಗೆ ಯಾರು ಹೊಣೆ?

ಪದ ತಿಳಿವು

ಡಾವ-ದಾಹ
ನರಬಾರಿ-ನರಬಲಿ
ಗೆಂಟು-ಭೇದ

Rating
No votes yet