ನಾನು ಓದಿದ ಎರಡು ಪರಭಾಷೆಯ ಕಿರುಕಾದಂಬರಿಗಳು

ನಾನು ಓದಿದ ಎರಡು ಪರಭಾಷೆಯ ಕಿರುಕಾದಂಬರಿಗಳು

ಇವೆರಡೂ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳು . ಎಲ್ಲ ಭಾರತೀಯ ಭಾಷೆಗಳಿಂದ ಆಯ್ದ ಒಳ್ಳೆಯ ಪುಸ್ತಕಗಳನ್ನು ಇತರ ಎಲ್ಲ ಭಾಷೆಗಳಿಗೆ ಅನುವಾದ ಮಾಡಿಸಿ ಪ್ರಕಟಿಸುತ್ತಾರೆ.
ಒಂದು 'ಬಿಳಿಯ ಲಕೋಟೆ'. ಬೆಂಗಾಲಿ ಭಾಷೆಯದು . ಮತಿನಂದಿ ಅನ್ನೋರು ಬರೆದದ್ದು . ರಮಾ ಅನ್ನೋರು ಅನುವಾದ ಮಾಡಿರೋದು . ಅನುವಾದವೂ , ಕತೆಯೂ ಚೆನ್ನಾಗಿವೆ. ಕತೆ ಏನಪ್ಪಾ ಅಂದ್ರೆ ...
ಅತುಲ್ ಅನ್ನೋನು ಇಪ್ಪತ್ತೈದು ವರ್ಷಗಳಿಂದ ನೌಕರಿ ಮಾಡ್ತಿದ್ದಾನೆ . ಯಾರೊಂದಿಗೂ ಹೆಚ್ಚು ಬೆರೆಯೋದಿಲ್ಲ . ಮಾತು ಆಡೋದಿಲ್ಲ . ಕಚೇರಿಯಲ್ಲೂ ಅಷ್ಟೇ ,ಮನೆಯಲ್ಲೂ ಅಷ್ಟೇ . ಇಪ್ಪತ್ತೈದೂ ವರ್ಷ ತಿಂಗಳು ತಿಂಗಳೂ ತಪ್ಪದೇ ಮೊದಲನೇ ತಾರೀಕಿಗೆ ಒಬ್ಬ ಸರಿಯಾಗಿ ನಾಲ್ಕೂವರೆ ಗಂಟೆಗೆ ಒಬ್ಬ ಇವನ ಹತ್ತಿರ ಬರ್ತಾನೆ. ಅವನು ಬರ್ತಿದ್ದ ಹಾಗೇ ಹೆಚ್ಚು ಮಾತುಕತೆಗೆ ಅವಕಾಶ ಕೊಡದ ಹಾಗೇ ಒಂದು ಬಿಳಿಯ ಲಕೋಟೆ ಅವನಿಗೆ ಕೊಟ್ಟು ಕಳಿಸ್ತಿರ್ತಾನೆ . ಯಾಕೆ ? ಒಂದು ರಹಸ್ಯ ಇದೆ. ಅದು ಇವನಿಗೆ ಮಾತ್ರ ಗೊತ್ತು. ಹೆಂಡತಿಗೂ ಗೊತ್ತಿತ್ತು . ಆದರೆ ಅವಳು ಈಗಿಲ್ಲ . ಇವನು ತನ್ನ ನಿಜವ್ಯಕ್ತಿತ್ವವನ್ನೇ ಮರೆಮಾಚಿಕೊಂಡು ತನ್ನದೇ ಆದ ಒಂದು ಚಿಪ್ಪಿನೊಳಗಡೆ ಅವಿತುಕೊಂಡಿದ್ದಾನೆ . ಅದನ್ನು ಒಡೆದುಕೊಂಡು ಅವನು ಹೊರಬರುವುದು ಯಾವಾಗ ? ಆ ರಹಸ್ಯವಾದರೂ ಏನು ?
ಒಂದು ದಿನ ಆತನ ಗೆಳೆಯನ ಮಗಳು , ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕೋರ್ಟಿನಲ್ಲಿ ಆಪಾದಿತರನ್ನ ಗುರುತಿಸಬೇಕಾಗಿರೋಳು , ಅದಕ್ಕೆ ಅವರಿಂದ ಆಮಿಷ ಮತ್ತು ಬೆದರಿಕೆ ಗೆ ಒಳಗಾಗಿರೋಳು ಇವನ ಸಂಪರ್ಕಕ್ಕೆ ಬಂದು ಇವನ ಈ ಚಿಪ್ಪಿನಲ್ಲಿ ಬಿರುಕು ಮೂಡಿಸಿದ್ದಾಳೆ . ಅವಳ ಸಮಸ್ಯೆ ಇವನಲ್ಲಿ ಧೈರ್ಯ ಮೂಡಿಸುತ್ತದೆ .
ಕುತೂಹಲಕರವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿ ನಮ್ಮನ್ನು ನಮ್ಮ ಕತೆಯ ನಾಯಕ ಏನಾದರೂ ಹೀರೋಗಿರಿಯನ್ನು ತೋರುವನೇ ಎಂದು ಎದಿರುನೋಡುವಂತೆ ಮಾಡುತ್ತವೆ. ಕೊನೆಯಲ್ಲಿ ಕತೆ ಅವಸರದಲ್ಲಿ ಮುಗಿದಂತೆನಿಸಿದರೂ , ನಾವು ನಿರೀಕ್ಷಿಸಿದ ಸಾಹಸಕೃತ್ಯ ಅವನಿಂದ ಆಗುವುದಕ್ಕೆ ಅವಕಾಶವಿಲ್ಲವಾದರೂ ಅವನ ತಳಮಳ, ಅವನ ಚಿಪ್ಪನ್ನು ಒಡೆದುಕೊಂಡು ಹೊರಬರುವ ಕ್ರಿಯೆ ಒಳ್ಳೆಯ ಓದನ್ನಾಗಿಸಿದೆ.

ಇನ್ನೊಂದು ಪುಸ್ತಕ - ಮುಕ್ತಿಬೋಧ ಅನ್ನೋ ಹಿಂದಿ ಕಾದಂಬರಿ . ಯಾರೋ ರಾಜಕಾರಣಿ ಏಕೋ ತನ್ನ ಜಾಗಕ್ಕೆ ರಾಜೀನಾಮೆ ಕೊಡೋ ಯೋಚ್ನೆ ಮಾಡ್ತಿದ್ದಾನೆ . ಯಾಕಂತ ಕೊನೆಗೂ ಗೊತ್ತಾಗ್ಲಿಲ್ಲ . ತನ್ನ ತೀರ್ಮಾನ ಬದಲಿಸ್ತಾನೆ ; ಅದೂ ಯಾಕೇಂತ ಗೊತ್ತಾಗ್ಲಿಲ್ಲ . ಅನುವಾದ ಸರಿಯಾಗೇ ಇದೆ. ಬಹುಶ: ಮೂಲವೇ ಸರಿ ಇರಲಿಕ್ಕಿಲ್ಲ . ಅಥವಾ ನನ್ನೊಳಗೇ ಏನೋ ಮಿಷ್ಟೀಕು ಇರಬೇಕು ! ಬಹುಶ: ಅದೇ ಸರಿ ! ವಿಶಿಷ್ಟ ಲೇಖಕರಂತೆ . ಹತ್ತು ಹಲವು ಪುರಸ್ಕಾರ ಬಡೆದಿದ್ದಾರಂತೆ . ತಳಬುಡ ತಿಳಿಯಲಿಲ್ಲ . ಏನೊಂದು ವಿಶೇಷವೂ ತೋರಲಿಲ್ಲ . ಮತ್ತೆ ದರ ಬಗ್ಗೆ ಯಾಕೆ ಇಲ್ಲಿ ಬರೆದಿದೀನಿ ಅಂದ್ರಾ ? ತಗೊಂಡ ತಪ್ಪಿಗೆ ಓದಿ ಮುಗಿಸಿ ಒಂದೆರಡು ಸಾಲು ಬರೆದು ಲಾಜಿಕಲ್ ಕೊನೆ ಆದ ವಿಲೇವಾರಿ ಮಾಡ್ತಿದ್ದೀನಿ !!

ಅಂದ ಹಾಗೆ ಈ ಚಿಪ್ಪಿನಲ್ಲಿ ಇರೋದು ಅಂದ್ರೇನು ? ಅದನ್ನು ಒಡಕೊಂಡು ಹೊರಬರೋದು ಅಂದ್ರೆ ಏನು ? ಇದೆಲ್ಲ ಬಿಹೇವಿಯರಿಯಲ್ ಸೈನ್ಸ್ ನಲ್ಲಿ ಬರುತ್ತಾ ? ಇದನ್ನ ಬೇರೆಲ್ಲೋ ಕೇಳಿದ್ದೀನಿ. ನಿಮಗೆ ಹೆಚ್ಚು ಗೊತ್ತಿದ್ರೆ ದಯವಿಟ್ಟು ತಿಳಿಸಿ .

Rating
No votes yet