ನಾನು ನಾನಾಗಿಲ್ಲ!! - ಕಲ್ಪನೆಯ ಕಥೆ

ನಾನು ನಾನಾಗಿಲ್ಲ!! - ಕಲ್ಪನೆಯ ಕಥೆ

ನಾನು ನಾನಾಗಿಲ್ಲ!!....ಹೌದು ನಾನು ನಾನಾಗಿಲ್ಲ!!..


ಹಾಗೆಂದುಕೊಳ್ಳುತ್ತಲೇ ಏದುಸಿರು ಬಿಡುತ್ತಾ ಬೆಟ್ಟವನ್ನು ಏರುತ್ತಿದ್ದೆ. ಬಹಳ ದಿನದಿಂದ ಬಾರದ ಮಳೆ ಎಲ್ಲ ಒಟ್ಟಿಗೆ ಸೇರಿ ಇಂದೇ ಸುರಿಯುವುದೇನೋ ಎನ್ನುವಷ್ಟು ಕಡು ಕಪ್ಪಾದ ಮೇಘಗಳು ಆಗಸದಲ್ಲಿ ಜಮಾಯಿಸಿದ್ದವು. ಗಂಟೆ ಇನ್ನೂ ಸಂಜೆ ನಾಲ್ಕು ಗಂಟೆ.ಆದರೆ ಆ ಕಪ್ಪು ಮೇಘಗಳಿಂದ ಏಳು ಗಂಟೆಯ ಕತ್ತಲಾದಂತೆ ಆಗಿತ್ತು. 


ಅಂದು ಬುಧವಾರವಾದ್ದರಿಂದ ಹೆಚ್ಚು ಜನ ಬೆಟ್ಟದಲ್ಲಿ ಇರಲಿಲ್ಲ. ಇನ್ನೇನು ಸ್ವಲ್ಪ ದೂರ ಹತ್ತಿದರೆ ಬೆಟ್ಟದ ತುದಿ ತಲುಪುತ್ತೇನೆ....ಆಮೇಲೆ....


ನಾನು ನಾನಾಗಿಲ್ಲ!!....ಹೌದು ನಾನು ನಾನಾಗಿಲ್ಲ!!..


ಇತ್ತೀಚಿಗೆ....ಇತ್ತೀಚಿಗೆ ಅಂದರೆ ತೀರ ಇತ್ತೀಚಿಗೆ ಅಂತಲ್ಲ....ಇತ್ತೀಚಿಗೆ ಒಂದು ಒಂದೂವರೆ ವರ್ಷದಿಂದ ನನಗೆ ಈ ಅನುಮಾನ ಕಾಡುತ್ತಿದೆ.


ಪ್ರತಿ ಬಾರಿ ಕನ್ನಡಿ ಮುಂದೆ ನಿಂತಾಗ ಕನ್ನಡಿಯಲ್ಲಿನ ಪ್ರತಿಬಿಂಬ ನನ್ನನ್ನು ನೋಡಿ ಕೇಕೆ ಹಾಕಿ ನಕ್ಕು ನೀನು ನೀನಾಗಿಲ್ಲ ಎಂದು ಕ್ಯಾಕರಿಸಿ ಉಗಿದಂತಾಗುತ್ತಿದೆ. ಮುಂಚೆ ನಾನು ಕನ್ನಡಿಯ ಮುಂದೆ ನಿಂತಾಗ ನನ್ನ ಪ್ರತಿಬಿಂಬ ನನ್ನನ್ನು ನೋಡಿ ಬಹಳ ಹೆಮ್ಮೆ ಪಡುತ್ತಿತ್ತು. ನೀನು ನಿನ್ನ ಅಸ್ತಿತ್ವ ಉಳಿಸಿಕೊಂಡಿದ್ದೀಯ...ನೀನು ನೀನಾಗೆ ಇದ್ದೀಯ..ಯಾರದೋ ಮಾತಿಗೋ, ಇನ್ಯಾರದೋ ಒತ್ತಡಕ್ಕೋ ಮತ್ಯಾರದೋ ಅಹಮಿಕೆಗೆ ನೀನು ಶರಣಾಗಿಲ್ಲ ಎಂದು ನನ್ನನ್ನು ನೋಡಿ ಪ್ರಶಂಶಿಸುತ್ತಿತ್ತು. ಆದರೆ ಈಗೀಗ ಕನ್ನಡಿಯ ಮುಂದೆ ನಿಲ್ಲಬೇಕೆಂದರೆ ಅಸಹ್ಯ ಎನಿಸುತ್ತಿದೆ. 


ಇದಕ್ಕೆಲ್ಲ ಕಾರಣ...ಅಂಥಹ ತಲೆ ಹೋಗುವ ಕಾರಣವೇನೂ ಆಗಿರಲಿಲ್ಲ....ಆದರೆ ತಲೆ ನೋವು ಬರಿಸುವಂಥ ಕಾರಣ ಅದೇ ಆಗುತ್ತದೆಂದು ನಂತರ ಗೊತ್ತಾಯಿತು...


ಈಗ ಸರಿಯಾಗಿ ಒಂದೂವರೆ ವರ್ಷದ ಹಿಂದೆ ನನಗೆ...ಅದು ಆಗಿತ್ತು...ಅದು ಅಂದರೆ "ಮದುವೆ" ಆಯಿತು...ಅಲ್ಲಿಗೆ ಮುಗಿಯಿತು ನೋಡಿ...ನನ್ನ ಸ್ವತಂತ್ರ...


ಮದುವೆಗೆ ಮುಂಚೆ ಮದುವೆ ಎಂಬ ಮೂರಕ್ಷರದ ಮೋಹಕ್ಕೆ ವಿಪರೀತವಾಗಿ ಆಕರ್ಷಿತನಾಗಿ ಅಪ್ಪ ಅಮ್ಮನ ಮನಸು ನೋಯಿಸಬಾರದೆಂದು...ನಾನು ಯಾವ ಹುಡುಗಿಯನ್ನೂ ಇಷ್ಟ ಪಡದಿದ್ದ ಕಾರಣ...ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆ ಆದೆ...


ಅಬ್ಬಾ ಎಂಥ ಹುಡುಗಿ!!!....ಎಂಥ ಚೆಲುವು....ಇವಳಾದರೂ ನನ್ನ ಹೆಂಡತಿ ಆಗಬಾರದಿತ್ತ....ಎಂದು ಬೆಟ್ಟ ಇಳಿಯುತ್ತಿದ್ದ ಚೆಲುವೆಯನ್ನು ನೋಡಿ ಎನಿಸಿತು..


ಅಷ್ಟರಲ್ಲಿ ಸಣ್ಣಗೆ ಮಳೆ ಹನಿ ಶುರುವಾಗಿ ಅಷ್ಟರಲ್ಲೇ ನಿಂತು ಹೋಯಿತು....ಛೆ...ನನಗೆ ಈ ಗತಿ ಬರಬಾರದಿತ್ತು...ಇನ್ನು ಸ್ವಲ್ಪ ದೂರ ಹತ್ತಿದರೆ ಬೆಟ್ಟದ ತುದಿ..


ಮದುವೆ ಆಗಿ ಒಂದೆರೆಡು ದಿನ ಎಲ್ಲವೂ ಚೆನ್ನಾಗಿತ್ತು. ಆಗಲೂ ಕನ್ನಡಿ ನನ್ನನ್ನು ನೋಡಿ ಅಣಕಿಸುತ್ತಿರಲಿಲ್ಲ. ಹೊಸ ಮದುವೆ, ಹೊಸ ಹೆಂಡತಿ, ಹೊಸ ನೆಂಟರು, ಹೊಸ ಊರುಗಳು ಎಂದುಕೊಂಡು ಅಲ್ಲಿ ಇಲ್ಲಿ, ಸುತ್ತಿದ್ದು, ನೆಂಟರ ಮನೆಗಳಿಗೆ ಸುತ್ತಿದ್ದು, ಅವರ ಮನೆಗಳಲ್ಲಿ ನನಗೆ ಇಷ್ಟವಿಲ್ಲದಿದ್ದರೂ ಅವರು ಕೊಟ್ಟಿದ್ದನ್ನು...ಮನಸು ಕಹಿ ಮಾಡಿಕೊಂಡು..ಮುಖದಲ್ಲಿ ಸಿಹಿ ನಗೆ ತೋರುತ್ತ ಉಂಡಿದ್ದೂ ಆಯಿತು.


ಮದುವೆ ಇಷ್ಟು ಸುಮಧುರವಾಗಿತ್ತು ಎಂದುಕೊಳ್ಳುವಷ್ಟರಲ್ಲಿ ಶುರುವಾಯಿತು ನೋಡಿ....


ಯಾಕೋ ಇವತ್ತು ಬೆಟ್ಟ ತುಂಬಾ ಎತ್ತರ ಎನಿಸುತ್ತಿದೆ, ಮತ್ತು ಹತ್ತಲು ಬಹಳ ಕಷ್ಟ ಎನಿಸುತ್ತಿದೆ....ಬಹಳ ದಿನಗಳ ಮೇಲೆ ಹತ್ತಿದರೆ ಹೀಗೆ ಎನಿಸುವುದೇನೋ.....ಮುಂಚೆ ಎಲ್ಲ ಗೆಳೆಯರೊಡನೆ ಹೆಚ್ಚು ಸಮಯ ಕಳೆಯುತ್ತಿದ್ದದ್ದು ಇದೆ ಬೆಟ್ಟದಲ್ಲಿ...ಕಾಲೇಜಿಗೆ ಹೋಗುವ ಸಮಯದಲ್ಲಿ ಕ್ಲಾಸಿಗೆ ಬಂಕ್ ಮಾಡಿ ಸಮಯ ಕಳೆಯಲು ಬರುತ್ತಿದ್ದದ್ದು ಇದೆ ಬೆಟ್ಟಕ್ಕೆ. ಕದ್ದು ಮುಚ್ಚಿ ಸಿಗರೇಟ್ ಸೇದುವುದು, ಆಗೊಮ್ಮೆ ಈಗೊಮ್ಮೆ ಬೀರ್ ಕುಡಿಯುವುದು, ಹುಡುಗಿಯರನ್ನು ಪಟಾಯಿಸುವುದು, ಇನ್ನೂ ಬೇಸರವಾದಾಗ ಮೇಲಿದ್ದ ಮಂಟಪದಲ್ಲಿ ಸೂರ್ಯಾಸ್ತಮಾನವನ್ನು ನೋಡಿ ಅಲ್ಲೇ ಇದ್ದ ಮಂಟಪದಲಿ ಮಲಗಿ ಬೆಳಿಗ್ಗೆ ಎದ್ದು ಬರುತ್ತಿದ್ದೆ. ಆದರೆ ಇಂದು ಈ ಪರಿಸ್ಥಿತಿಯಲ್ಲಿ ಬೆಟ್ಟ ಹತ್ತಬೇಕೆಂದು ಕನಸಿನಲ್ಲೂ ಎಣಿಸಿರಲಿಲ್ಲ....ಈಗ ಸ್ನೇಹಿತರು ಕರೆ ಮಾಡುವುದನ್ನೇ ಬಿಟ್ಟಿದ್ದಾರೆ.


ಅದೆಲ್ಲಕ್ಕೂ ಬ್ರೇಕ್ ಬಿದ್ದಿದ್ದು ಮದುವೆ ಆದ ಮೇಲೆಯೇ...ನಾನೇನೂ ಈಗಲೂ ಬೆಟ್ಟದ ಮೇಲೆ ಹೋಗಿ ಸಿಗರೇಟ್ ಸೇದಬೇಕು, ಬೀರ್ ಕುಡಿಯಬೇಕು ಎನ್ನುತ್ತಿಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ಗೆಳೆಯರನ್ನು ಭೇಟಿ ಮಾಡಲು ಹೋಗಬೇಕೆಂದರೆ ಹೆಂಡತಿಯ ಅನುಮತಿ ಕೇಳಬೇಕು....ಒಂದು ವೇಳೆ ಅನುಮತಿ ಸಿಕ್ಕಿ ಆಚೆ ಹೋದರೆ ಅಲ್ಲಿ ಇದ್ದಷ್ಟು ಹೊತ್ತೂ ಫೋನ್ ಮಾಡಿ ಯಾವಾಗ ಬರುತ್ತೀರಾ? ಇನ್ನೂ ಎಷ್ಟು ಹೊತ್ತು? ನೀವು ನನ್ನ ಜೊತೆ ಸಮಯ ಕಳೆಯುವುದಿಲ್ಲ? ನಾನು ಸದಾ ಒಂಟಿಯಾಗಿರಬೇಕು...ಅದೂ ಇದೂ ಎಂದು ಎಲ್ಲೋ ಇರುವ ಗಂಗಾ ಕಾವೇರಿಯನ್ನು ತಮ್ಮೊಳಗೆ ಆಹ್ವಾನಿಸಿಕೊಂಡು ಅವುಗಳನ್ನು ತಮ್ಮ ನಯನಗಳಲ್ಲಿ ತುಂಬಿಕೊಂಡು ಎರಡು ಅದ್ಭುತವಾದ ಜಲಪಾತವನ್ನು ಸೃಷ್ಟಿ ಮಾಡುತ್ತಿದ್ದಳು. ಆ ಜಲಪಾತದಲ್ಲಿ ಮೀಯಲು ಆಗದೆ ನಾನು ಒದ್ದಾಡಬೇಕಿತ್ತು.


ಮುಂಚಿನಿಂದಲೂ ನನಗೆ ಸಿನೆಮಾ, ಟೀವಿ ಎಂದರೆ ತುಂಬಾ ಆಸಕ್ತಿ. ಬಿಡುವಿನ ಸಮಯದಲ್ಲೆಲ್ಲಾ ಅದರಲ್ಲಿ ಸಮಯ ಕಳೆಯುತ್ತಿದ್ದೆ. ಮದುವೆಯಾದ ಮೇಲೆ ಅದೇನೋ ಗೊತ್ತಿಲ್ಲ ಟೀವಿ ಹಾಗು ಸಿನೆಮಾಗೆ ನನ್ನ ಮೇಲೆ ದ್ವೇಷ ಬಂದುಬಿಟ್ಟಿದೆ. ನನ್ನ ಕಡೆ ತಿರುಗಿಯೂ ನೋಡುವುದಿಲ್ಲ ಎನ್ನುತ್ತಾರೆ.


ತಿರುಗಿ ಏನಾದರೂ ಮಾತನಾಡೋಣ ಎಂದರೆ ಆ ಜಲಪಾತಗಳು ಹುಟ್ಟು ಹಾಕು ಭಯ ನನ್ನನ್ನು ಕಟ್ಟಿ ಹಾಕಿಬಿಡುತ್ತದೆ. ಎಷ್ಟೋ ಬಾರಿ ಏನಾದರೂ ಕಟುವಾಗಿ ನಿರ್ಧಾರ ತೆಗೆದುಕೊಳ್ಳೋಣ ಎಂದುಕೊಳ್ಳುತ್ತೇನೆ.ಆದರೆ ಪ್ರತಿಬಾರಿ ವಿಫಲವಾಗುತ್ತೇನೆ.


ಅಷ್ಟರಲ್ಲಿ ಬೆಟ್ಟದ ತುದಿ ತಲುಪಿದೆ...ಗಾಳಿ ಜೋರಾಗಿ....ದಪ್ಪದಪ್ಪದ ಮಳೆಹನಿ ಬೀಳಲು ಶುರುವಾಯಿತು...ಮೇಘಗಳ ಕಪ್ಪು ಬಣ್ಣ ಎಲ್ಲೆಡೆ ಆವರಿಸಿಕೊಳ್ಳುತ್ತಿತ್ತು.


ಇಂದೂ ಸಹ ಒಂದು ನಿರ್ಧಾರ ಮಾಡಿಕೊಂಡಿದ್ದೆ...ಆದರೆ..ಅಷ್ಟರಲ್ಲಿ ಫೋನ್ ರಿಂಗಾಯಿತು.


ರೀ....ಎಲ್ರಿ ಇದ್ದೀರಾ....ಇಲ್ಲೇ ಕಣೆ ಬೆಟ್ಟದ ತುದಿಯಲ್ಲಿ....ರೀ ನಾವು ಇಲ್ಲಿ ಮಂಟಪದ ಬಳಿ ಬಂದಿದ್ದೇವೆ ಇಲ್ಲೇ ಬಂದು ಬಿಡಿ....ಸರಿ ಆಯಿತು...


ಹೌದು ಇಂದೂ ಸಹ ನಿರ್ಧಾರ ಮಾಡಿದ್ದೆ...ಅವಳನ್ನು ಬೆಟ್ಟದ ಮೇಲಿನಿಂದ ಕರೆದುಕೊಂಡು ಬರಲು ನಾನು ಹೋಗಬಾರದು ಎಂದು....ಆದರೂ ಯಾಕೋ ಮನಸು ಒಪ್ಪಲಿಲ್ಲ??!!!...ಯಾಕೆಂದರೆ ನಾನು ಅವಳನ್ನು ಅಷ್ಟು ಪ್ರೀತಿಸುತ್ತೇನೆ.


ಇಂದು ಅವಳ ಸ್ನೇಹಿತರು ಊರಿನಿಂದ ಬಂದಿದ್ದರು..ಬೆಟ್ಟ ನೋಡಲೆಂದು ಹೋಗಿದ್ದರು...ಹೋಗುವ ಮುಂಚೆ ನನಗೆ ಫೋನ್ ಮಾಡಿ ರೀ...ಇಂದು ಆಫೀಸಿನಿಂದ ಸ್ವಲ್ಪ ಬೇಗ ಹೊರಟು ಕಾರ್ ತೆಗೆದುಕೊಂಡು ಬೆಟ್ಟದ ಬಳಿ ಬಂದುಬಿಡಿ. ಒಟ್ಟಿಗೆ ಹೋಗೋಣ ಎಂದಿದ್ದಳು. ಅದರ ಸಲುವಾಗಿ ಬೇಗನೆ ಹೊರಟು ಬೆಟ್ಟ ಹತ್ತಿಕೊಂಡು ಮೇಲೆ ಬಂದಿದ್ದೆ...


ಮಂಟಪದ ಬಳಿ ಬಂದು ಅವಳ ಪಕ್ಕದಲ್ಲಿ ಬಂದು ನಿಂತಾಗ...ಏನ್ರೀ ಇಷ್ಟು ಲೇಟು...ಬೆಟ್ಟ ಇಳಿಯುತ್ತಿದ್ದ ಹುಡುಗಿಯರನ್ನು ನೋಡಿಕೊಂಡು ಬರುತ್ತಿದ್ದಿರ?


ಛೆ ಛೆ...ಎಲ್ಲಾದರೂ ಉಂಟಾ...ಮದುವೆಯಾದ ಮೇಲೆ ನಿನ್ನ ಬಿಟ್ಟು ಇನ್ಯಾರನ್ನೂ ಕಣ್ಣೆತ್ತಿ ನೋಡಿಲ್ಲ....ಬೇಗ ಹೊರಡೋಣ ಮಳೆ ಜೋರಾಗುತ್ತದೆ ಎಂದು ಅಲ್ಲಿಂದ ಹೊರಟೆವು....


ಹೇ,,,ಒಂದು ನಿಮಿಷ....ನನ್ನ ಹೆಂಡತಿ ಹೆಸರು ಹೇಳಲಿಲ್ಲ ಅಲ್ಲವೇ....ಅವಳ ಹೆಸರು "ಕಲ್ಪನ".

Rating
No votes yet

Comments

Submitted by sathishnasa Thu, 09/27/2012 - 15:55

ಕಥಾ ನಾಯಕ ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳು ಬೆಟ್ಟ ಹತ್ತುತ್ತಿದ್ದಾನೆ ಅಂದು ಕೊಂಡೆ ಆದರೆ ಕಡೆಯಲ್ಲಿ ಒಳ್ಳೆ ಡೋಸ್ ಕೊಟ್ಟಿದ್ದೀರಿ
...ಸತೀಶ್

Submitted by partha1059 Thu, 09/27/2012 - 18:38

ಜಯಂತ್ ಈಚೆಗೆ ನಿಮ್ಮ ಕತೆಗಳಲ್ಲಿ ಶೈಲಿಯಲ್ಲಿ ಇದ್ದಕ್ಕಿದಂತೆ ಬದಲಾವಣೆ ಕಾಣಿಸಿದೆ, ಹಾಗೆ ಪ್ರತಿಕತೆಗು ಆ ಬದಲಾವಣೆ ಕಾದುಕೊಳ್ಳಿ
ಅಭಿನಂದನೆಗಳೊಡನೆ

ಪಾರ್ಥಸಾರಥಿ

Submitted by Jayanth Ramachar Fri, 09/28/2012 - 07:39

In reply to by partha1059

ಪಾರ್ಥಸಾರಥಿಯವರೇ, ಹೌದು ಏಕತಾನತೆಯಿಂದ ನನಗೂ ಬೇಸರ ಬಂದಿತ್ತು. ಹಾಗಾಗಿ ವಿಭಿನ್ನವಾಗಿ ಪ್ರಯತ್ನಿಸುತ್ತಿದ್ದೇನೆ. ನಿಮಗೆಲ್ಲರಿಗೂ ಅದು ಮೆಚ್ಚುಗೆಯಾದರೆ ಅದೇ ಸಾರ್ಥಕ. ಧನ್ಯವಾದಗಳು