ನಾನು ಯಾವ ಕಾಲದಲ್ಲಿ ಇದ್ದೇನೆ...!?

ನಾನು ಯಾವ ಕಾಲದಲ್ಲಿ ಇದ್ದೇನೆ...!?

ಕೆಲವೊಂದು ಅಭ್ಯಾಸಗಳು ಬಾಲ್ಯದಿಂದಲೇ ಬರಬೇಕು. ಓದುವುದು, ಬರೆಯುವುದು, ಸಂಗೀತ, ನೃತ್ಯ, ಆಟೋಟಗಳ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಇದ್ದರೆ ಚೆನ್ನ. ನಡುವೆ ಅವನ್ನು ರೂಢಿಸಿಕೊಳ್ಳುವುದು ಕಷ್ಟ.

ಆದರೆ, ಇವತ್ತು ಅವಶ್ಯವಾದ ಹಲವಾರು ಸಂಗತಿಗಳು ನನಗೆ ಬಾಲ್ಯದಲ್ಲಿ ಬರಲಿಲ್ಲ. ಅಂತಹ ವಾತಾವರಣವೂ ಇದ್ದಿಲ್ಲ. ಯಾರಿಗೂ ಅವು ಮುಂದೆ ಬೇಕಾಗಬಹುದು ಎಂಬ ಯೋಚನೆಯಿದ್ದಿಲ್ಲ. ಅದಕ್ಕೆ ಅವಕಾಶವೂ ಇರಲಿಲ್ಲ. ನಮ್ಮ ಪಾಡಿಗೆ ನಾವು ಬೆಳೆದೆವು. ಹೆಣ್ಣುಮಕ್ಕಳಿಗೆ ಒಂದು ಡಿಗ್ರಿ ಮಾಡಿಸಿದರೆ ಆಯಿತು ಎಂಬ ಧೋರಣೆ ಮನೆಯಲ್ಲಿ. ಅದರಾಚೆ ಯೋಚಿಸುವ ಪುರಸೊತ್ತೂ ಅವರಿಗೆ ಇರಲಿಲ್ಲ. ಅದನ್ನು ಕೇಳಿ ಪಡೆಯುವ ಬುದ್ಧಿಯೂ ನಮಗೆ ಇರಲಿಲ್ಲ.

ಹೀಗಾಗಿ ಉದ್ದಕ್ಕೆ ಓದಿದೆವು. ಏನು ಓದಿದೆವು ಎಂಬುದು ಈಗ ನೆನಪಿನಲ್ಲಿ ಇಲ್ಲ. ನೆನಪಿನಲ್ಲಿ ಉಳಿದಿರುವುದು ಈಗ ಉಪಯೋಗಕ್ಕೆ ಬರುತ್ತಿಲ್ಲ. ನಮ್ಮ ಡಿಗ್ರಿ ಕೈಯಲ್ಲಿ ಇಟ್ಟುಕೊಂಡು ಜಗತ್ತನ್ನು ಎದುರಿಸುವುದು ಆಗುವುದಿಲ್ಲ. ಎಷ್ಟೊಂದು ಹೊಸ ವಿಷಯಗಳನ್ನು ಕಲಿಯಬೇಕು ಎಂಬುದು ಗೊತ್ತಾಗುತ್ತ ಹೋದಂತೆ, ಮುಂಚೆಯೇ ಇವನ್ನು ಒಂಚೂರು ಕಲಿತಿದ್ದರೆ ಚೆನ್ನಾಗಿತ್ತು ಎಂದು ಹಳಹಳಿಸುತ್ತೇನೆ.

ನನ್ನ ಮಗಳು ಒಳ್ಳೆಯ ಮನೆಗೆ ಹೋದರೆ ಸಾಕು ಎಂಬ ಧೋರಣೆ ಅಪ್ಪ-ಅವ್ವನದು. ಅವರು ಬೆಳೆದು ಬಂದಿದ್ದೇ ಹಾಗೆ. ಅದರಾಚೆ ಯೋಚಿಸುವ ಸೌಲಭ್ಯವಾಗಲಿ, ದೂರದೃಷ್ಟಿಯಾಗಲಿ ಅವರಿಗೆ ಇರಲಿಲ್ಲ. ತಮ್ಮ ಮಿತಿಯೊಳಗೆ ಸಾಧ್ಯವಾದ ಅತಿ ಹೆಚ್ಚಿನದನ್ನು ಅವರು ನಮಗೆ ಕೊಡಿಸಿದ್ದಾರೆ. ತಮ್ಮ ಅಭಿರುಚಿಗೆ ತಕ್ಕಂತೆ ಬೆಳೆಸಿದ್ದಾರೆ. ಆದರೆ, ಅವುಗಳಿಂದ ನಮಗೆ ಏನು ಉಪಯೋಗವಾಗುತ್ತದೆ ಎಂಬುದನ್ನು ಅವರು ಯೋಚಿಸಲಿಲ್ಲ. ಹೀಗಾಗಿ, ಬಿಎ ಮಾಡಿದೆ. ಆಸಕ್ತಿ ಇತ್ತು ಎಂದು ಒಂಚೂರು ಸಂಗೀತ ಕಲಿತೆ. ಅಷ್ಟರಲ್ಲಿ ಮದುವೆಯಾಯಿತು. ಮುಂದೆ ಗಂಡ ನೋಡಿಕೊಳ್ಳುತ್ತಾನೆ ಎಂಬುದು ತಂದೆತಾಯಿಗಳ ವಿಚಾರ.

ಆದರೆ, ಇಷ್ಟರಿಂದಲೇ ಬದುಕು ಎದುರಿಸಲು ಆದೀತಾ? ಹಾಗಾಗುವುದಿಲ್ಲ ಎಂಬುದು ನನ್ನ ಅನುಭವ.

ಮದುವೆಯಾದಾಗ ಜೀವನ ಹೇಗೆ ಸಾಗಿಸಬೇಕು ಎಂಬುದು ಸ್ವಲ್ಪವೂ ಗೊತ್ತಿದ್ದಿಲ್ಲ. ಕ್ರಮೇಣ ತನ್ನಷ್ಟಕ್ಕೆ ತಾನೇ ತಿಳಿಯುತ್ತ ಹೋಗುತ್ತದೆ ಎಂಬ ವಾತಾವರಣದಲ್ಲಿ ಬೆಳೆದವಳು ನಾನು. ಮೊದಮೊದಲು ಸಮಸ್ಯೆಯಾಗಿದ್ದಿಲ್ಲ. ಕ್ರಮೇಣ ಒಂದೊಂದೇ ರೂಢಿಯಾದವು. ಯಾವಾಗ ಗೌರಿ ಹುಟ್ಟಿದಳೋ, ಆಗ ಕೊಂಚ ಹೆಚ್ಚಿನ ಜವಾಬ್ದಾರಿ ಬಂದಿತು. ಎಷ್ಟೋ ವಿಷಯಗಳು ಗೊತ್ತೇ ಇಲ್ಲ ಎಂಬುದು ಗೊತ್ತಾಗತೊಡಗಿತು.

ಗೌರಿಗೆ ಬೆಳವಣಿಗೆ ಸಮಸ್ಯೆ ಇರುವುದು ಗೊತ್ತಾದಾಗ ಜಗತ್ತೇ ಕಳಚಿಕೊಂಡು ಬಿದ್ದಿತ್ತು. ನಮ್ಮನೆಯಲ್ಲಿ ಯಾರಿಗೂ ಇಂಥ ಪರಿಸ್ಥಿತಿಯನ್ನು ನಿಭಾಯಿಸಿ ಗೊತ್ತಿದ್ದಿಲ್ಲ. ಅವರದು ಸರಳ ಬದುಕು. ಅಲ್ಲಿ ದೊಡ್ಡಮಟ್ಟದ ಏರಿಳಿತಗಳು ಇರಲಿಲ್ಲ. ಯಾವುದೋ ಒಂದು ನೌಕರಿ ಇದ್ದರೆ ಸಾಕು, ಎಂಥದೋ ಒಂದು ಮನೆ ಇದ್ದರಾಯಿತು, ಒಂದಿಷ್ಟು ಸೌಲಭ್ಯಗಳು ಇದ್ದರಾಯಿತು ಎಂಬ ಮನೋಭಾವದಲ್ಲಿ ಬೆಳೆದವಳಿಗೆ ಗೌರಿಯ ಸಮಸ್ಯೆ ಒಂದು ದೊಡ್ಡ ಆಘಾತ.

ಈ ತಯಾರಿ, ಈ ಮನೋಭಾವ ನನ್ನನ್ನು ಬೆಳೆಸುವುದಿಲ್ಲ ಎಂಬುದು ಕ್ರಮೇಣ ಗೊತ್ತಾಗುತ್ತ ಹೋಯಿತು. ಎಷ್ಟೊಂದು ಕಲಿಯುವುದು ಇದೆಯಲ್ಲ ಎಂಬುದು ತಿಳಿಯುತ್ತ ಹೋಯಿತು. ಇಂಗ್ಲಿಷ್ ಕಲಿಯಬೇಕು, ಬರವಣಿಗೆ ಕಲಿಯಬೇಕು, ಮಕ್ಕಳ ಬಗ್ಗೆ ತಿಳಿದುಕೊಳ್ಳಬೇಕು, ಬುದ್ಧಿಮಾಂದ್ಯತೆ ಬಗ್ಗೆ ಗೊತ್ತು ಮಾಡಿಕೊಳ್ಳಬೇಕು, ಒಂಚೂರು ತಂತ್ರಜ್ಞಾನ ಕಲಿಯಬೇಕು, ಹೊಸ ಹೊಸ ಪರಿಕರಗಳ ಬಗ್ಗೆ ತಿಳಿಯಬೇಕು, ಹೊಸ ವಾತಾವರಣ, ಜನ, ಮನಸ್ಸು, ಭಾವನೆಗಳು, ಭಾಷೆ- ಅಬ್ಬಬ್ಬಾ ಎಷ್ಟೊಂದು ವಿಷಯಗಳ ಬಗ್ಗೆ ನನಗೆ ಗೊತ್ತೇ ಇಲ್ಲ ಎಂಬುದು ಗೊತ್ತಾಗುತ್ತ ಹೋಯಿತು.

ಆಗೆಲ್ಲ ತುಂಬ ಹಿಂಸೆಯಾಯಿತು. ನಗುನಗುತ್ತ ಕಲಿಯುವ ಸಮಯ ವ್ಯರ್ಥವಾಗಿ ಹೋಗಿತ್ತು. ಈಗ ಅನಿವಾರ್ಯತೆಗೆ, ಅದೂ ಅರ್ಜೆಂಟಾಗಿ ಕಲಿಯುವ ಅವಶ್ಯಕತೆ ಬಂದಾಗ ನಿಜಕ್ಕೂ ಕಷ್ಟ ಪಡಬೇಕಾಯಿತು.

ಪುಣ್ಯಕ್ಕೆ ಚಿಕ್ಕವಳಿದ್ದಾಗ ಹಟ ಹಿಡಿದು ಸೈಕಲ್ ಕಲಿತಿದ್ದೆ. ಅಪ್ಪ ಮೊಪೆಡ್ ತಂದಾಗ, ಆಗೀಗ ಹಟ ಹಿಡಿದು ಅದನ್ನೂ ಓಡಿಸುವುದನ್ನು ರೂಢಿ ಮಾಡಿಕೊಂಡಿದ್ದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಿದಾಗ ಗೌರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದು ತುಂಬ ಸಹಾಯ ಮಾಡಿತು. ಇವರು ಮನೆಯಲ್ಲಿ ಇಲ್ಲದಾಗ, ಸ್ಕೂಟಿ ಮೇಲೆ ಗೌರಿಯನ್ನು ನಾನೇ ಕರೆದುಕೊಂಡು ಹೋಗಲು ಇದರಿಂದ ಸಾಧ್ಯವಾಯಿತು.

ಆದರೆ, ಬಹಳಷ್ಟು ವಿಷಯಗಳು ಇಷ್ಟು ಸರಳವಾಗಿರಲಿಲ್ಲ. ಇಂಗ್ಲಿಷ್ ಸ್ವಲ್ಪ ಅರ್ಥವಾಗುತ್ತಿತ್ತಾದರೂ ಮಾತನಾಡಲು ಬರುತ್ತಿರಲಿಲ್ಲ. ಬೆಂಗಳೂರಿಗೆ ಬಂದಾಗ ಯಾರಾದರೂ ಇಂಗ್ಲಿಷ್‌ನಲ್ಲಿ ಮಾತನಾಡಿದಾಗ ತಡವರಿಸುವಂತಾಗುತ್ತಿತ್ತು. ಇಂಗ್ಲಿಷ್ ಸುದ್ದಿ ಬೇಗ ಅರ್ಥವಾಗುತ್ತಿರಲಿಲ್ಲ. ಪೇಪರ್ ಓದಿದಾಗ ತಿಳಿಯುತ್ತಿದ್ದುದಕ್ಕಿಂತ ಗೊಂದಲವೇ ಹೆಚ್ಚಾಗಿರುತ್ತಿತ್ತು. ಹೊಸ ಉಪಕರಣಗಳ ಬಳಕೆ ಬೇಗ ರೂಢಿಯಾಗುತ್ತಿರಲಿಲ್ಲ. ಪ್ರತಿಯೊಂದನ್ನೂ ವ್ಯವಧಾನದಿಂದ ತಿಳಿದುಕೊಳ್ಳಲು ಸಮಯದ ಕೊರತೆ. ಎಲ್ಲವೂ ತಕ್ಷಣ ಗೊತ್ತಾಗಬೇಕಾದ ಅನಿವಾರ್ಯತೆ.

ಆಗೆಲ್ಲ ಅನಿಸುತ್ತದೆ: ಚಿಕ್ಕಂದಿನಿಂದಲೇ ಇಂತಹ ಕೆಲವು ವಿಷಯಗಳನ್ನು ಕಲಿಸಿದ್ದರೆ ಎಷ್ಟೊಂದು ಸಹಾಯವಾಗುತ್ತಿತ್ತಲ್ಲ ಎಂದು. ಸೈಕಲ್ ಕಲಿತಿದ್ದರಿಂದ ಸ್ಕೂಟಿ ಓಡಿಸುವುದು ಸರಾಗವಾಯಿತು. ಅದೇ ರೀತಿ, ಹೊಸದನ್ನು ಕಲಿಯುವಂಥ ಮನೋಭಾವ ಇದ್ದಿದ್ದರೆ, ಅದನ್ನು ಮನೆಯಲ್ಲಿ ಬೆಳೆಸಿದ್ದರೆ ಸಮಸ್ಯೆಗಳು ಇಷ್ಟೊಂದು ಕಾಡುತ್ತಿರಲಿಲ್ಲ. ಓದುವುದು, ಬರೆಯುವುದು, ಸಂಗೀತ, ನೃತ್ಯ, ವಾಹನ ಚಾಲನೆ, ಭಾಷೆಗಳು, ಜನರೊಂದಿಗೆ ವ್ಯವಹರಿಸುವುದು- ಇವನ್ನೆಲ್ಲ ಒಂಚೂರು ಕಲಿತಿದ್ದರೆ, ಕ್ರಮೇಣ ಕಲಿಯುವ ಆಸಕ್ತಿಯಾದರೂ ಗಟ್ಟಿಯಾಗಿರುತ್ತಿತ್ತು ಎಂದು ಅನಿಸುತ್ತದೆ.

ಎಲ್ಲವನ್ನೂ ಮುಂಚೆಯೇ ಊಹಿಸಿಕೊಂಡು ಸಿದ್ಧರಾಗುವುದು ಎಲ್ಲ ಸಮಯದಲ್ಲಿ ಸಾಧ್ಯವಾಗಲಿಕ್ಕಿಲ್ಲ. ನಾನು ಬೆಳೆದು ಬಂದ ವಾತಾವರಣ ಅದಕ್ಕೆ ಪೂರಕವೂ ಆಗಿರಲಿಲ್ಲ. ಆದರೆ, ಅವತ್ತೇ ಒಂದು ಪುಟ್ಟ ಬೀಜ ಬಿತ್ತಿದ್ದರೂ ಸಾಕಿತ್ತು, ಇವತ್ತು ಅದು ಮರವಾಗಿ ಬೆಳೆದಿರುತ್ತಿತ್ತೋ ಏನೋ.

ಈಗ ತಡವಾಗಿದೆ ನಿಜ. ಹಾಗಂತ ನಿರಾಶಳಾಗಿಲ್ಲ. ಇಂದಾದರೂ ಆ ಕೆಲಸ ಮಾಡಲು ನಾನು ಮುಂದಾಗಬೇಕಿದೆ. ಎರಡು ಮಕ್ಕಳಾದ ನಂತರ ಕಲಿಯುವಿಕೆ ನಿಂತು ಹೋಗುವುದಿಲ್ಲವಲ್ಲ?

ಹಾಗಂದುಕೊಂಡೇ ನಿಧಾನವಾಗಿ ಇಂಗ್ಲಿಷ್ ಕಲಿಯಲು ಯತ್ನಿಸುತ್ತಿದ್ದೇನೆ. ಅಟ್ಟದ ಮೇಲಿಟ್ಟ ಹಾರ್ಮೋನಿಯಮ್ ಕೆಳಗಿಳಿಸಿ, ಮರೆತೇಹೋದಂತಿದ್ದ ರಾಗಗಳನ್ನು ಮತ್ತೆ ರೂಢಿಸಿಕೊಳ್ಳಲು ಯತ್ನಿಸುತ್ತಿದ್ದೇನೆ. ಗೌರಿಯ ಸಮಸ್ಯೆಗೆ ಇಂಟರ್‍ನೆಟ್‌ನಲ್ಲಿ ಏನಾದರೂ ಗೊತ್ತಾಗುತ್ತದೆಯೇ ಎಂದು ಹುಡುಕುತ್ತಿದ್ದೇನೆ. ಮಕ್ಕಳು ಮಲಗಿದಾಗ ಓದಲು ಪ್ರಾರಂಭಿಸಿದ್ದೇನೆ. ಕಲಿಕೆ ತುಂಬ ನಿಧಾನವಾಗಿದೆ ನಿಜ. ಆದರೆ, ಪ್ರಾರಂಭವಾದರೂ ಆಗಿದೆ. ಅದೇ ಸಂತೋಷ.

ನನ್ನ ಮಕ್ಕಳಿಗಾದರೂ ನಾನು ಇವನ್ನೆಲ್ಲ ಕಲಿಸಬೇಕಲ್ಲ? ಅದಕ್ಕಾಗಿಯಾದರೂ ಕಲಿಯಬೇಕಿದೆ. ಹೀಗಾಗಿ ನಾನು ಮತ್ತೆ ವಿದ್ಯಾರ್ಥಿನಿಯಾಗಿದ್ದೇನೆ. ಒಂದೇ ವ್ಯತ್ಯಾಸವೆಂದರೆ, ಆಗ ನಾನು ಬರೀ ವಿದ್ಯಾರ್ಥಿನಿಯಾಗಿದ್ದೆ. ಈಗ ಎರಡು ಮಕ್ಕಳ ತಾಯಾಗಿರುವ ವಿದ್ಯಾರ್ಥಿನಿ.

ಇದೂ ಒಂಥರಾ ಕಲಿಕೆಯೇ.

- ರೇಖಾ ಚಾಮರಾಜ

Rating
No votes yet

Comments