"ನಾ ನಿಮ್ಮ ಅಭಿಮಾನಿ"

"ನಾ ನಿಮ್ಮ ಅಭಿಮಾನಿ"

ಚಿತ್ರ

ಏಷ್ಯ ಖಂಡದಲ್ಲೇ ಅತಿದೊಡ್ಡ ಏಕಶಿಲಾ ಪರ್ವತವನ್ನು ತನ್ನೊಡಲಲ್ಲಿ ಹೊಂದಿರುವ, ತುಮಕೂರು ಜಿಲ್ಲೆಯ ಮಧುಗಿರಿ, ನನ್ನ ಹುಟ್ಟೂರು. “ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ  ಮಧುಗಿರಿ” ಎಂಬ ಕವಿವಾಣಿಯಂತೆ ಅಲ್ಲಿಯ ನನ್ನ ಬಾಲ್ಯದ ಮರೆಯಲಾಗದ ಮಧುರ ನೆನಪುಗಳೊಂದಿಗೆ, ಇಲ್ಲಿನ, ನಮ್ಮ  ಬದುಕಿನ ಬಂಡಿ ಹುರುಪಿನಿಂದ ಸಾಗುತ್ತಿದೆ. ನಾನು ಹುಟ್ಟಿದ್ದು ಮಧುಗಿರಿಯೇ ಆದರೂ, ನನ್ನ ಯೌವ್ವನದ ಬದುಕಿನ ಭಾವನೆಗಳ ಬೇರು ನೀರುಂಡು ಬೇರೂರಿರುವುದು, ಶಿರಾದಲ್ಲಿಯೇ. ಈ ಕಾರಣಕ್ಕಾಗಿ, ನನ್ನ ಹೆಸರಿನೊಂದಿಗೆ ಶಿರಾ ಬೆಸೆದುಕೊಂಡಿದೆ. 


ನನಗೆ ಅರಿವು ಮೂಡಿದ ದಿನದಿಂದ ಡಾ.ರಾಜ್‍ಕುಮಾರ್ ಚಿತ್ರಗಳನ್ನು ನೋಡುತ್ತಲೇ ಬೆಳೆದೆ.  ಆ ಸುಂದರ ವದನ, ನಾಯಕನಿಗೆ ಇರಬೇಕಾದ ಅಂಗ ಸೌಷ್ಟವ, ಆ ಭಾಷಾ ಪ್ರಯೋಗ ನನ್ನನ್ನು ಆಕರ್ಶಿಸಿತ್ತು. ನಾನೇ ಅಲ್ಲ, ನನ್ನ ಸಹೋದರ, ಸಹೋದರಿಯರಿಗೂ ಡಾ.ರಾಜ್ ಎಂದರೆ ಚಿಕ್ಕಂದಿನಿಂದಲೂ ಬಲು ಪ್ರೀತಿ.  ಇಂದಿಗೂ ನಾವೆಲ್ಲರೂ ಡಾ.ರಾಜ್ ಅಭಿಮಾನಿಗಳೇ.


“ಆಡು ಮುಟ್ಟದ ಸೊಪ್ಪಿಲ್ಲ, ಡಾ.ರಾಜ್ ಅಭಿನಯಿಸದ ಪಾತ್ರವಿಲ್ಲ” ಎಂಬಂತೆ ಸಕಲವಿಧ ಪಾತ್ರಗಳಲ್ಲಿ ನಟಿಸಿ “ನಟಸಾರ್ವಭೌಮ” ಎಂಬ ಬಿರುದಿಗೆ ಅನ್ವರ್ಥರಾದವರು, ರಾಜ್.  ನವರಸಗಳನ್ನೂ ಅವಲೀಲೆಯಿಂದ ಕ್ಷಣಮಾತ್ರದಲ್ಲಿ ತೋರಿಸುತ್ತಿದ್ದ ಆ ಪ್ರತಿಭೆ ಇನ್ನೆಲ್ಲಿ, ಯಾರಲ್ಲಿ, ಕಾಣಲು ಸಾಧ್ಯ?  ಯಾವುದೇ ಪಾತ್ರವಾದರೂ ಸೈ, ಆ ಪಾತ್ರವೇ  ತಾವಾಗಿಬಿಡುತ್ತಿದ್ದ ಆ ತಾದಾತ್ಮ್ಯತೆ, ಸಂಭಾಷಣೆ ಎಷ್ಟೇ ಕ್ಲಿಷ್ಟವಾಗಿದ್ದರೂ ಲೀಲಾಜಾಲವಾಗಿ, ಸುಸ್ಪಷ್ಟವಾಗಿ ಒಪ್ಪಿಸುತ್ತಿದ್ದ, ಭಾಷೆಯಮೇಲಿನ ಆ ಪ್ರಭುದ್ಧತೆ, ಇನ್ನುಮುಂದೆ ಕಾಣಸಿಗುವುದಿಲ್ಲವಲ್ಲಾ ಎಂಬ ಕೊರಗನ್ನು ನೀಗಿಸುವವರು ಯಾರು?


ಕೇವಲ ತಾನು ನಟಿಸಿದ ಚಿತ್ರಗಳ ಸಂಖ್ಯೆಗಳಿಗಷ್ಟೇ ಪ್ರಾಮುಖ್ಯತೆ ಕೊಡದೆ, ಅವುಗಳ ಗುಣಮಟ್ಟದಕಡೆಯೂ ಗಮನಹರಿಸಿದ್ದ ಏಕಮೇವ ನಟ ಡಾ.ರಾಜ್.  ಕೇವಲ ಹೊಟ್ಟೆಪಾಡಿಗಾಗಿ ಅಭಿನಯವನ್ನು ವೃತ್ತಿಯಾಗಿ ಆರಿಸಿಕೊಂಡ ರಾಜ್ ರವರಿಗೆ, ಅವರ ಪುಣ್ಯವೋ ಎಂಬಂತೆ ಆರಂಭದ ದಿನದಿಂದಲೂ ಪ್ರತಿಯೊಬ್ಬ ನಿರ್ಮಾಪಕ, ನಿರ್ದೇಶಕ ನೀಡಿದ್ದು ಉತ್ತಮ ಗುಣಮಟ್ಟದ ಪಾತ್ರಗಳೇ.  ಅವರ ಬದುಕಿನುದ್ದಕ್ಕೂ, ತಮಗೆ ದೊರಕಿದ ಅವಕಾಶವನ್ನೆಂದೂ ದುರುಪಯೋಗ ಪಡಿಸಿಕೊಂಡ ಉದಾಹರಣೆ ಕಾಣಸಿಗುವುದಿಲ್ಲ.


ಡಾ.ರಾಜ್‍ರ ಬಹುತೇಕ ಚಿತ್ರಗಳು ಉತ್ತಮ ನೀತಿಭೋದನೆಯ ತಿರುಳನ್ನು ಹೊಂದಿದ್ದು, ಸಮಾಜದ ಮೇಲೆ ಉತ್ತಮ ಪರಿಣಾಮ ಬೀರಿದ ಉದಾಹರಣೆಗಳು ಅಗಣಿತವಾಗಿ ಸಿಗುತ್ತವೆ. ಇಂದು ನಾನೇನಾದರೂ, ಮಾತಾಪಿತರನ್ನು ಪ್ರೀತಿಸಿದ್ದರೆ, ಗುರುಹಿರಿಯರನ್ನು ಗೌರವಿಸುವುದು ಕಲಿತಿದ್ದರೆ, ದೈವಭಕ್ತಿ ಉಳ್ಳವನಾಗಿದ್ದರೆ, ಅಣ್ಣ-ತಮ್ಮ, ಅಕ್ಕ-ತಂಗಿ ಎಂಬ ಭ್ರಾತೃಪ್ರೇಮವನ್ನು ಹೊಂದಿದ್ದರೆ, ನಾಡು, ನುಡಿಯನ್ನು ಆದರಿಸಿ, ಪೂಜಿಸುವನಾಗಿದ್ದರೆ, ನೆರೆಯವರೆಲ್ಲರನ್ನೂ ಸಹೋದರ-ಸಹೋದರಿಯರಂತೆ ಬಾವಿಸುವವರಾಗಿದ್ದರೆ, ಉತ್ತಮ ಸ್ನೇಹಿತನ ಗುಣಲಕ್ಷಣಗಳನ್ನು ಹೊಂದಿದ್ದರೆ, ಅದಕ್ಕೆ, ಪ್ರತ್ಯಕ್ಷವಾಗೀ, ಪರೋಕ್ಷವಾಗಿ ಡಾ.ರಾಜ್‍ರ ಚಿತ್ರಗಳು ಕಾರಣ ಎಂಬುದನ್ನು, ನಿಸ್ಸಂದೇಹವಾಗಿ ಹೇಳಬಹುದಾಗಿದೆ. (ಇಂದಿನ ಪೀಳಿಗೆಯ ಬಹುತೇಕರಲ್ಲಿ ಈ ಸದ್ಗುಣಗಳು ಕಾಣಸಿಗ ದಿರುವುದು ಶೋಚನೀಯ)


ತಮ್ಮೆಲ್ಲಾ ಚಿತ್ರಗಳಲ್ಲೂ ಡಾ.ರಾಜ್ ತಮಗೆ ಸಿಕ್ಕ ಉತ್ತವೋತ್ತಮ ವೈವಿಧ್ಯಮಯ ಪಾತ್ರಗಳಲ್ಲಿ  ಜೀವಿಸಿ, ವಿಜೃಂಭಿಸಿದ್ದಾರೆ.  ಅವರ “ಗಿರಿಕನ್ಯೆ” ಚಿತ್ರದಲ್ಲಿ ದಿವಂಗತ ‘ಸಾಹಿತ್ಯ ರತ್ನ' ಚಿ.ಉದಯಶಂಕರ್ ರಚಿಸಿದ ಗೀತೆಯೊಂದರಲ್ಲಿ ಬರುವಂತೆ, “ವೊಗವು ಚೆನ್ನ, ನಗೆಯು ಚೆನ್ನ, ನಡೆಯು ಚೆನ್ನ, ನುಡಿಯು ಚೆನ್ನಾ, ಅಂತಾರೆ ನನ್ನ ನೋಡಿ ಎಲ್ಲಾ”.  ಅಕ್ಷರಸಹ ಸತ್ಯವಲ್ಲವೇ ಅದು?  ಒಬ್ಬ ವ್ಯಕ್ತಿಯನ್ನು ಅಭಿಮಾನಿಸಿ, ಆರಾಧಿಸಲು ಇದಕ್ಕಿಂತಾ ಹೆಚ್ಚಿನ ಗುಣವಿಶೇಷಣಗಳ ಅವಶ್ಯಕತೆ ಇದೆಯೇ?  ತಾವು ಅಭಿನಯಿಸಿದ ಚಿತ್ರಮಾತ್ರಗಳಿಂದಲೇ ಸಮಾಜದ ಉತ್ತಮ ಪರಿವರ್ತನೆಗೆ ಕಾರಣರಾದದ್ದು ಅವರ ನಟನಾ ವಿರಾಟ್ ಶಕ್ತಿಗೆ ದ್ಯೋತಕ.  ನನ್ನರಿವಿಗೆ ಬಂದಂತೆ ವಿಶ್ವದ ಬೇರಾವ ನಟರೂ ಇಂತಹ ಪ್ರಭಾವ ಬೀರಿರಲಾರರು.


ಕೇವಲ ತನ್ನ ಅದ್ಭುತ ನಟನಾಸಾಮರ್ಥ್ಯದಿಂದ ಮಾತ್ರ. ಒಬ್ಬ ನಟ ಇಷ್ಟೊಂದು ಅಭಿಮಾನಿ ಬಳಗವನ್ನು ಹೊಂದಲು ಸಾಧ್ಯವೇ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ, ಸಿಗುವ ಉತ್ತರ ಖಂಡಿತವಾಗಿಯೂ “ಇಲ್ಲ” ಎಂದು. ಹಾಗಿದ್ದಲ್ಲಿ ಮಾನವೀಯ ಮೌಲ್ಯ ಮೇಳೈಸಿರುವ ಸರಳ ಸಜ್ಜನ, ಸೂಪರ್ ಸ್ಟಾರ್ ರಜನಿಕಾಂತ್ಗಿಂತಾ, ಅಪ್ರತಿಮ ಕಲಾವಿದ ಕಮಲಹಾಸನ್ ಹೆಚ್ಚು ಜನಾನುರಾಗಿಯಾಗಿರಬೇಕಿತ್ತು ಅಲ್ಲವೇ? ಜನಪ್ರಿಯತೆ ಬೇರೆ, ಜನಾನುರಾಗ ಬೇರೆ.  ಡಾ.ರಾಜ್ ಜನಾನುರಾಗಿಯಾದದ್ದು ಕೇವಲ ತಮ್ಮ ಅದ್ಭುತ ನಟನಾ ಸಾಮರ್ಥ್ಯದಿಂದ ಮಾತ್ರವಲ್ಲ.  ತಮ್ಮ ಸರಳ, ಸಹೃದಯದ ಸನ್ನಡತೆಯಿಂದ.  ತಾವೆಷ್ಟೇ ಬೆಳೆದಿದ್ದರೂ, ಕನ್ನಡಿಗರ ಹೃದಯಸಿಂಹಾಸನದಲ್ಲಿ ತಮ್ಮ ಸ್ಥಾನ, ಮಾನವೆಂಥದೆಂಬ ಅರಿವಿದ್ದರೂ, ಎಂದೂ ಯಶದ ನಿಷೆಯನ್ನು ತಲೆಗೇರಿಸಿಕೊಂಡವರಲ್ಲ, ಅಹಂಕಾರದ ಹಮ್ಮು ತೋರಿದವರಲ್ಲ, ಬಿಂಕ-ಬಿಗುಮಾನಗಳಿಂದ ಬೀಗಿದವರಲ್ಲ.  ನೀವುಗಳೂ ಗಮನಿಸಿರಬಹುದು, ಡಾ.ರಾಜ್ ಯಾವುದೇ ಸನ್ಮಾನ, ಸತ್ಕಾರ, ಸಂದರ್ಶನ ಸಮಾರಂಭಗಳಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತವರಲ್ಲ. 


ಓಮ್ಮೆ, ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ “ಶ್ರೇಷ್ಟನಟ” ಪ್ರಶಸ್ತಿಯನ್ನು ಸ್ವೀಕರಿಸಲು ಡಾ.ರಾಜ್ ಬಂದಿದ್ದರು. ಅದೇ ಸಮಯಕ್ಕೆ ನಮ್ಮ ರೆಬಲ್ ಸ್ಟಾರ್ ಅಂಬರೀಷ್‌ರವರೂ ಸಹ ತಮ್ಮ ಅತ್ಯುತ್ತಮ ಖಳನಾಯಕನ ಪಾತ್ರಕ್ಕೆ ಪ್ರಶಸ್ತಿಯನ್ನು ಸ್ವೀಕರಿಸಲು ತಮ್ಮ ತಾುಯವರೊಂದಿಗೆ ಬಂದಿದ್ದರು.  ಡಾ.ರಾಜ್‌ರನ್ನು ಕಂಡ ಅಂಬರೀಷ‌ರವರ ತಾಯಿ, “ಹೋಗು, ಅವರನ್ನು ಮಾತನಾಡಿಸಿ ಅವರ ಆಶೀರ್ವಾದವನ್ನು ಪಡೆದು ಬಾ” ಎಂದು ಅಬರೀಷ್‌ರವರಿಗೆ ಹೇಳಿದ್ದರು.  ಆದರೆ, ಸಂಕೋಚವೋ, ಭಯವೋ ಅಥವಾ ವಿನಯವೋ ಒಟ್ಟಿನಲ್ಲಿ ಅಂಬರೀಷ್ ತಾಯಿಯ ಕೋರಿಕೆ ಈಡೇರಿಸಲಿಲ್ಲ.  ಆದರೆ ನಮ್ಮ “ರಾಜಣ್ಣ” ರಾಜ್ಯಪ್ರಶಸ್ತಿ ಪಡೆದ ಸಹನಟನನ್ನು ಅಭಿನಂದಿಸಲು ತಾವೇ ಬಂದರಲ್ಲದೆ, ತಾಯಿ ಮಗನನ್ನು ಅಪ್ಪಿ ಕೊಂಡಾಡಿದರು.  ರಾಜ್ಕುಮಾರ್ ಎಂದರೆ ಇದು. ಇಂದಿನ ಎಷ್ಟು ಜನ ನಟರಲ್ಲಿ ಇಂತಹ ದೊಡ್ಡಗುಣ ಇದೆ. 


ಇಂದಿನ ನಟ-ನಟಿಯರು ತಮ್ಮ ಒಂದುಚಿತ್ರ ಯಶಸ್ಸುಕಂಡರೇ ಸಾಕು, ಅವರ ನಡೆ, ಮಾತಿನ ಶೈಲಿ, ಆಂಗಿಕ ಭಾಷೆ ಕ್ಷಣಮಾತ್ರದಲ್ಲಿ ಬದಲಾಗುತ್ತವೆ.  ತಾವೊಂದು ಮಾಧ್ಯಮದ ಮುಂದೆ ಇದ್ದೇವೆ, ಜನ ನಮ್ಮನ್ನು ಗಮನಿಸುತ್ತಿದ್ದಾರೆ, ಎಂಬುದರ ಕಿಂಚಿತ್ ಅರಿವೂ ಇಲ್ಲದವರಂತೆ, ಬಾರದ ಆಂಗ್ಲ ಭಾಷೆಯನ್ನು ಬಲವಂತವಾಗಿಯಾದರೂ ಆಡಿ ತಮ್ಮ ಅಪ್ರಭುದ್ಧತೆಯನ್ನು ತೋರಿ ಅಸಹ್ಯ ಹುಟ್ಟಿಸುತ್ತಾರೆ. ಇನ್ನು ಕಚಡಾ ರಾಜಕಾರಣಿಗಳಿಗೂ ಇವರಿಗೂ ಇರುವ ವ್ಯತ್ಯಾಸವೇನು?  ತಮ್ಮ ನೆಚ್ಚಿನ ನಾಯಕ-ನಾಯಕಿಯರನ್ನೇ ಅನುಕರಿಸಿ, ಅನುಸರಿಸುವ ಅಭಿಮಾನಿಗಳಿಗೆ ಇವರು ಕೊಡುವ ಕೊಡುಗೆ ಇದೇನೇ?  ಕನ್ನಡದ ಇಂದಿನ ಪೀಳಿಗೆಯ ನಟ-ನಟಿಯರೇ ದಯವಿಟ್ಟು, ಒಮ್ಮೆ ಡಾ.ರಾಜ್‌ರ ಜೀವನ ಶೈಲಿಯನ್ನು ಕಣ್ಮುಂದೆ ತಂದುಕೊಂಡು ಆತ್ಮಾವಲೋಕನ ಮಾಡಿಕೊಳ್ಳಿ.  ತಾವು ನಟಿಸಿದ ಚಿತ್ರಗಳಲ್ಲಿ ಶೇಕಡ 95%ರಷ್ಟು ಯಶಸ್ಸನ್ನು ಹೊಂದಿದ್ದ ರಾಜ್‌ರ ನಡೆ, ನುಡಿ ನಿಮ್ಮಲ್ಲಿ ಯಾರೊಬ್ಬರಿಗೂ ಮಾದರಿಯಾಗಲಿಲ್ಲವೇ? ನಿಜಕ್ಕೂ ಇದೊಂದು ದುರಂತವೇ ಸರಿ! “ಹಿತ್ತಲ ಗಿಡ ಮದ್ದಲ್ಲ” ಅಲ್ಲವೇ? ಇನ್ನಾದರೂ ಎಚ್ಚೆತ್ತುಕೊಳ್ಳಿ.  ಇಲ್ಲದಿದ್ದರೆ ಜನ ನಿಮ್ಮನ್ನು ಮರೆತಾರು.


ಅಂದಿನಕಾಲದ ಹಿಂದಿಯ ಪ್ರಖ್ಯಾತ ತಾರೆಯರಾದ ರಾಜ್ಕುಮಾರ್ ಮತ್ತು ದಿಲೀಪ್ಕುಮಾರ್ ರವರ ಪೂರ್ವಾರ್ಧ ಮತ್ತು ಉತ್ತರಾರ್ಧಗಳನ್ನು ಸೇರಿಸಿ, ಅದಾವ ಘಳಿಗೆಯಲ್ಲಿ “ಮುತ್ತುರಾಜ್”ನನ್ನು “ರಾಜ್ಕುಮಾರ್” ಎಂದು ಹೆಸರಿಸಿದರೋ ದಿವಂಗತ ಶ್ರೀ ಹೆಚ್.ಎಲ್.ಎನ್.ಸಿಂಹರವರು.  ಅವರೆಲ್ಲರನ್ನೂ ಮೀರಿದ ನಟರಾಗಿ, ಜನಮಾನಸದಲ್ಲಿ ಅಚಲವಾಗಿ, ಮತ್ತೆಂದೂ, ಯಾರೂ ಅಳಿಸಲಾಗದಂತಹ ಹೆಗ್ಗುರುತಾಗಿ ನಿಂತುಬಿಟ್ಟರು ರಾಜ್. ಕ್ರಿ.ಶ. 1954ರಲ್ಲಿ ಹೆಚ್.ಎಲ್.ಎನ್.ಸಿಂಹರವರ ನಿದ್ರೇಶನದ “ಬೇಡರ ಕಣ್ಣಪ್ಪ” ಚಿತ್ರದೊಂದಿಗೆ ಆರಂಭವಾದ “ನಟಸಾವ್ರಭೌಮ”ರ ನಟನಾ ವೈಭವ ಪರ್ವ, ಕ್ರಿ.ಶ.  2000ದಲ್ಲಿ ಎಸ್.ನಾರಾಯಣ್ ರವರ ನಿರ್ದೇಶನದ “ಶಬ್ದವೇಧಿ” ಚಿತ್ರದೊಂದಿಗೆ ಅಂತ್ಯ ಕಂಡಿತು. ಡಾ.ರಾಜ್ ರವರ ಪ್ರತಿಭೆ ಏಕಮುಖಿಯಲ್ಲ.  ಇವರ ದೈತ್ಯ ಪ್ರತಿಭೆಗೆ ಮಾರುಹೋಗದವರೇ ಇಲ್ಲ. ಸರಿಸುಮಾರು 5 ದಶಕಗಳ ಕಾಲ ತಮ್ಮ ಅಭಿಮಾನಿ ದೇವರುಗಳನ್ನು ರಂಜಿಸಿ, 12ರ ಏಪ್ರಿಲ್, 2006ರಲ್ಲಿ ಚಿರನಿದ್ರೆಗೆ ಜಾರಿದರು. ಹಿರಿಯಣ್ಣನನ್ನು ಕಳೆದುಕೊಂಡ ಚಿತ್ರರಂಗ,  ಅನಾಥವಾುತು. 


ಪ್ರಖ್ಯಾತ ನಟ ಹಾಗೂ ತೆಮಿಳುನಾಡಿನ ಮುಖ್ಯಮಂತ್ರಿಗಳೂ ಆಗಿದ್ದ ದಿವಂಗತ ಶ್ರೀ ಎಂ.ಜಿ. ರಾಮಚಂದ್ರನ್, ದಿವಂಗತ ಶ್ರೀ ಶಿವಾಜಿಗಣೇಶನ್,  ಸರ್ವಮಾನ್ಯ  ಶ್ರೀ ಕಮಲ ಹಾಸನ್, ಕನ್ನಡದವರೇ ಆದ ಸ್ಟೈಲ್ಕಿಂಗ್ ಶ್ರೀ ರಜನೀಕಾಂತ್, ಹಿರಿಯ ಪ್ರತಿಭಾವಂತ ನಿರ್ದೇಶಕ ಬಿ.ಆರ್. ಪಂತುಲು, ತೆಲುಗಿನ ವಿಶ್ವವಿಖ್ಯಾತ ನಟನಾಸಾರ್ವಭೌಮ ಎಂದು ಬಿರುದಾಂಕಿತರು ಮತ್ತು ಆಂದ್ರಪ್ರದೇಶದ ಮುಖ್ಯಮಂತ್ರಿಗಳೂ ಆಗಿದ್ದ ದಿವಂಗತ ಶ್ರೀ ಎನ್.ಟಿ.ಆರ್. (ನಂದಮೂರಿ ತಾರಕ ರಾಮರಾವ್),    ಶ್ರೀ ಅಕ್ಕಿನೇನಿ ನಾಗೇಶ್ವರರಾವ್, ಇಂದಿನ ಸೂಪರ್ ಸ್ಟಾರ್ ಚಿರಂಜೀವಿ, ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸುವುದರಮೂಲಕ ಗಿನ್ನೀಸ್ ಧಾಖಲೆಯನ್ನು ನಿರ್ಮಿಸಿದ ನಟ ದಿವಂಗತ ಶ್ರೀ ಪ್ರೇಂನಜಿರ್, ಶ್ರೀ ಮಮ್ಮುಟ್ಟಿ, ಶ್ರೀ ವೋಹನ್ಲಾಲ್, ಹಿಂದಿಯ ಹಿರಿಯ ಖ್ಯಾತ ನಟ ದಿವಂಗತ ಶ್ರೀ ಪೃಥ್ವೀರಾಜ್ ಕಪೂರ್, ದಿವಂಗತ ಪ್ರತಿಭಾವಂತ ಸಜ್ಜನ ನಟ ಶ್ರೀ ಸಂಜೀವ್ಕುಮಾರ್, ಎವರ್ಗ್ರೀನ್ ನಂಬರ್ ಒನ್ ನಟ ಶ್ರೀ ಅಮಿತಾಬ್ ಬಚ್ಚನ್, ಶ್ರೀ ಧಮ್ರೇಂದ್ರ, ಶ್ರೀ ಜಿತೇಂದ್ರ, ಶ್ರೀಮತಿ ಹೇಮಾಮಾಲಿನಿ, ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಶ್ರೀ ಶೇಕರ್‌ ಕಪೂರ್, ಶ್ರೀ ಮಿಥುನ್ಚಕ್ರವತ್ರಿ, ಹಿರಿಯ ನಿದ್ರೇಶಕ ಶ್ರೀ ಯಶ್ಚೋಪ್ರಾ ಮುಂತಾದವರೂ ಕೂಡ ಡಾ.ರಾಜ್ರವರ ಪ್ರತಿಭಾಕೌಶಲ್ಯಕ್ಕೆ, ಸರಳ ಸೌಜನ್ಯಕ್ಕೆ, ನಿಬ್ಬೆರಗಾದವರೇ.  ಇವರಲ್ಲಿ ಕೆಲವರು, ಡಾ.ರಾಜ್ಕುಮಾರ್ರವರ ನಟನೆ ಮತ್ತು ನಡವಳಿಕೆ ತಮ್ಮಮೇಲೆ ಹೆಚ್ಚಿನ ಪ್ರಭಾವ ಬೀರಿದೆಯೆಂದು ಹೇಳಿಕೊಂಡಿದ್ದಾರೆ.


ನಾನೆಂದೂ ಡಾ.ರಾಜ್ರ ಚಿತ್ರಗಳ ಬಿಡುಗಡೆಯಂದು ಸ್ಟಾರ್್ಸ ಕಟ್ಟಲಿಲ್ಲ, ಚಿಲ್ಲರೆ ಕಾಸನ್ನು ತೆರೆಯತ್ತ ತೂರಲಿಲ್ಲ, ಆಣ್ಣಾವ್ರನ್ನು ವೊದಲಿಗೆ ತೆರೆಯಮೇಲೆ ತೋರಿಸುವಾಗ ಸೂರು ಹಾರುವಂತೆ ಕಿರುಚಲಿಲ್ಲ, ಬೇರೇ ನಟರ ಪೋಸ್ಟರ್ಸ್ ಹರಿಯಲಿಲ್ಲ, ಅವುಗಳಿಗೆ ಸಗಣಿ ಎರಚಲಿಲ್ಲ, ಅನ್ಯಭಾಷೀಕರನ್ನು ಹೀಯಾಳಿಸಲಿಲ್ಲ, ಪರಭಾಷಾನಟರನ್ನೆಂದೂ ದೂರಲಿಲ್ಲ, ಇತರ ನಾಯಕ ನಟರ ಅಭಿಮಾನಿಗಳ ಮೇಲೆ ಕೈಮಾಡಲಿಲ್ಲ, ಆದರೂ.....ನಾನು ಡಾ.ರಾಜ್‌ರ ಕಟ್ಟಾ ಅಭಿಮಾನಿ ಎಂದು ಎಧೆಯುಬ್ಬಿಸಿ ಹೆಮ್ಮೆಯಿಂದ ಹೇಳುತ್ತೇನೆ.  ತೆರೆಯಮೇಲೆ ಡಾ.ರಾಜ್ ಅತ್ತರೇ ನಾನೂ ಅತ್ತಿದ್ದೇನೆ, ನಕ್ಕರೆ ನಾನೂ ನಕ್ಕಿದ್ದೇನೆ.  ಆವರ ಚಿತ್ರಗಳು 100ದಿನ ಪ್ರದರ್ಶನ ಕಂಡಾಗ ಹಬ್ಬ ಮಾಡಿದ್ದೇನೆ.  ಚಿತ್ರ ಸೋತಾಗ ಮಮ್ಮಲ ಮರುಗಿದ್ದೇನೆ.  ಅವರಿಗೆ ಸಂದ ಪ್ರತಿಯೊಂದು ಬಿರುದು, ಸನ್ಮಾನಗಳಿಗೂ ಹಿರಿಹಿರಿ ಹಿಗ್ಗಿದ್ದೇನೆ. ಇವ ನಮ್ಮವನೆಂಬ ಜಂಬದ ನಗೆಬೀರಿದ್ದೇನೆ.  ಮನುಕುಲದ ಕಿರಾತಕನೋರ್ವ ಈ ಮುಗ್ಧ ಸಜ್ಜನನನ್ನು ಇಳಿವಯಸ್ಸಿನಲ್ಲಿ ಅಪಹರಿಸಿದಾಗ, ದೂರದರ್ಶನದಲ್ಲಿ ಅಣ್ಣಾವ್ರನ್ನ ತೋರಿಸಿದ ಪ್ರತಿಬಾರಿ ಕಣ್ಣೀರು ಸುರಿಸಿದ್ದೇನೆ. 


ಕನ್ನಡಿಗರ ಪ್ರತಿಷ್ಠೆಯನ್ನು ಹಿಮಾಲಯದೆತ್ತರಕ್ಕೆ ಕೊಂಡೊಯ್ದ ಈ ಮಹನೀಯನನ್ನು, ಕ್ರಾಂತಿಯೋಗಿ ಬಸವಣ್ಣನವರ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ವಚನದಂತೆ ಬಾಳಿ ಬದುಕಿದ ಈ ಮಾದರಿ ಪÅರುಷನನ್ನು “ಈತನೇನು ಮಾಡಿದ್ದಾನೆ”? ಎಂದು ನಮ್ಮವರೇ ಕುಹಕವಾಡುವಾಗ, ಶ್ರೀ ಪÅರಂದರ ದಾಸರ ಉತ್ಕೃಷ್ಟ ಕೃತಿ “ನಿಂದಕರಿರಬೇಕು...ಹಂದಿ ಇದ್ದರೆ ಕೇರಿ ಹೆಂಗೆ, ಶುದ್ಧಿಯೊ ಹಾಗೆ” ಎಂಬ ಪಲ್ಲವಿಯೊಂದಿಗೆ ಆರಂಭವಾಗಿ, ಚರಣವೊಂದರಲ್ಲಿ “ದುಷ್ಟ ಜನರು ಈ ಸ್ಟೃಯೊಳಿದ್ದರೆ, ಶಿಷ್ಟ ಜನರಿಗೆಲ್ಲ ಕೀತ್ರಿಗಳು” ಎಂಬುದು ನೆನಪಾಗಿ ಅವರ ಕುರಿತು ಮರುಕಪಟ್ಟಿದ್ದೇನೆ.  “ಅಣ್ಣ” ನಮ್ಮನ್ನಗಲಿದಾಗ ನಾನೇಕೆ ಇನ್ನು ಬದುಕಿರಬೇಕೆಂಬ ಕ್ಷಣಿಕ ಜಿಗುಪ್ಸೆಗೊಳಗಾಗಿದ್ದೇನೆ. 


ವಿಶ್ವದ ಹಿಂದಿನ ಅಥವಾ ಇಂದಿನ ಯಾವುದೇ ನಟರನ್ನ ತೆಗೆದುಕೊಳ್ಳಿ, ಯಾರಾದರೂ ಅವರ ಬಗ್ಗೆ ಕಟುನುಡಿಗಳನ್ನಾಡಿದಾಗ, ಮನನೋಯುವಂತೆ ವಿಮಶ್ರಿಸಿದಾಗ ತತ್ಕ್ಷಣ, ಅಷ್ಟೇ ಅಥವಾ ಅದಕ್ಕಿಂತಾ ತೀಕ್ಷ್ಣವಾಗಿ ಪ್ರತಿಕ್ರಿುಸದ ಹೊರತು, ಸುಮ್ಮನಿದ್ದ ಉದಾಹರಣೆ ಸಿಗುವುದೇ ಇಲ್ಲ.  ಆದರೆ ಡಾ.ರಾಜ್ರನ್ನು, ಅವರ ಯಶಸ್ಸನ್ನು ಕಂಡು  ಕರುಬುವವರು, ಹಿತಶತೃಗಳು, ಕುಬುದ್ದಿಯವರು ಪರೋಕ್ಷವಾಗಿ ಅವರ ಮನನೋಯುವಂತೆ ನಿಂದಿಸಿದಾಗಲೂ ಎಂದೂ ಯಾವರೀತಿಯಲ್ಲೂ ಪ್ರತಿಕ್ರಿುಸದ ಸಂಯಮಿ, ಸೌಜನ್ಯಮೂತ್ರಿ ಡಾ.ರಾಜ್. 


ಭಗವಂತ ತನ್ನ ಸ್ಟೃಯ ಅಣು ಅಣುವಿನಲ್ಲೂ ಮನುಷ್ಯ ಕಲಿಯಬೇಕಾದ ಪ್ರಮುಖ ಪಾಠವನ್ನೂ ಇಟ್ಟಿದ್ದಾನೆ. ಪಂಚಭೂತಗಳಾದಿಯಾಗಿ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ ಪ್ರತಿಯೊಂದರಲ್ಲೂ ಮನುಜ ಕಲಿಯುವುದು ಬೇಕಾದ್ಟದೆ ಎಂಬುದನ್ನೂ, ಅಧಿಕಾರವಾಗಲೀ, ಸಿರಿಸಂಪತ್ತಾಗಲೀ ಜನಾದರದಿಂದಲೇ ಲಭ್ಯ ಎಂಬುದನ್ನೂ “ಮಾನವ ಶ್ರೇಷ್ಟ” ಚಾಣಕ್ಯ ಕಂಡುಕೊಂಡ ಮತ್ತು ಅಳವಡಿಸಿಕೊಂಡ ಸತ್ಯ.  ಇದಾವುದನ್ನೂ ಡಾ.ರಾಜ್ ಓದಿ ತಿಳಿದವರಲ್ಲ.  ಈ ಎಲ್ಲಾ ಗುಣಗಳೂ ಡಾ.ರಾಜ್‌ರಿಗೆ ದೈವದತ್ತವಾಗಿ ಹುಟ್ಟಿನಿಂದಲೇ ಬಂದಿದ್ದವು. (ಮುಂದಿನ ಕಂತುಗಳಲ್ಲಿ ಇದನ್ನು ಪ್ರಾಮಾಣಿಕವಾಗಿ ಪ್ರಮಾಣೀಕರಿಸುವ ಪ್ರಯತ್ನ ಮಾಡುತ್ತೇನೆ)


ಯಾರಿಗೂ ಹೇಳದೆ, ಯಾರನ್ನೂ ಕೇಳದೆ, ನಮ್ಮ ದೇಶವನ್ನು “ಜಾತ್ಯಾತೀತ ರಾಷ್ಟ್ರ”ವೆಂದು ಘೋಸಿದರು, ಸ್ವಾರ್ಥ ರಾಜಕಾರಣಿಗಳು.  ಮತ್ತದೇ ಜನ, ತಮ್ಮ ತಮ್ಮ ಪಕ್ಷಗಳ, ಸೀಟುಗಳ ಉಳಿವಿಗಾಗಿ ಜಾತಿ-ಜಾತಿಯನ್ನು ಬೇರ್ಪಡಿಸಿ, ಧರ್ಮ-ಧರ್ಮಗಳನ್ನು ಎತ್ತಿಕಟ್ಟಿ, ಆಂಗ್ಲರ “ಒಡೆದು ಆಳು”ವ ನೀತಿಯನ್ನು ಅನುಸರಿಸಿ, ಅವರೇ ಬಲವಂತವಾಗಿ ಹೇರಿದ “ಜಾತ್ಯಾತೀತ ರಾಷ್ಟ್ರ”ದ  ಪರಿಕಲ್ಪನೆಯನ್ನೇ ಹಾಳುಗೆಡವಿದ್ದಾರೆ.  ಆದರೆ ನಮ್ಮ ರಾಜ್, ಯಾರೇ ಎಷ್ಟೇ ಆಮಿಷಗಳನ್ನು ಒಡ್ಡಿದಾಗ್ಯೂ,  ಅಂತಹ ಹೊಲಸು ರಾಜಕೀಯಕ್ಕಿಳಿಯದೆ, ಆದಿಯಿಂದಾ ಅಂತ್ಯದವರೆವಿಗೂ ಎಲ್ಲಾ ಜಾತಿ, ಧರ್ಮದವರ ನೆಚ್ಚಿನ ನಾಯಕ ನಟನಾಗಿ ಸಾರ್ಥಕ ಬದುಕನ್ನು ನೆಡೆಸಿ ಚಿರಂಜೀವಿಯಾಗಿದ್ದಾರೆ.


ಕೇವಲ ಭಕ್ತಿಗೀತೆಗಳಿಗಷ್ಟೇ ಸೀಮಿತವಾಗಿದ್ದ ನನ್ನ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ, “ನಿಮ್ಮಲ್ಲಿ ಬರೆಯುವ ಕಲೆಯಿದೆ, ಯಾವುದಾದರೂ ವಿಷಯವನ್ನು ಕುರಿತು ಬರೆುರಿ, ನಮ್ಮ ಸ್ನೇಹ ಬುಕ್ಹೌಸ್ನ ಪ್ರಕಾಶನ ಸಂಸ್ಥೆಯಿಂದಲೇ ಅದನ್ನು ಪ್ರಕಟಿಸೋಣ” ಎಂದು ನನ್ನನ್ನು ಹುರಿದುಂಬಿಸಿ, ಧೈರ್ಯ ತುಂಬಿದವರು ನನ್ನ ಗೆಳೆಯ ಹಾಗೂ ಸ್ನೇಹ ಬುಕ್ ಹೌಸ್‌ನ ಸಂಸ್ಥಾಪಕರು, ಶ್ರೀಯುತ ಪರಶಿವಪ್ಪನವರು.  ಈ ಧೈರ್ಯವೇ ಆಲೋಚನೆಗೆ ಎಡೆ ಮಾಡಿಕೊಟ್ಟಿತು. ಯಾವುದರ ಕುರಿತು ಅಥವಾ ಯಾರ ಕುರಿತು? ಎಂಬ ಪ್ರಶ್ನೆ ಎದುರಾದಾಗ, ಎದುರಿಗೆ ಮೂರ್ತೀಸ್ವರೂಪವಾಗಿ ನಿಂತವರು ಕೋಟ್ಯಾನುಕೋಟಿ ಕನ್ನಡಿಗರ ಹೃದಯ ಸಾಮ್ರಾಜ್ಯದ ಸಿಂಹಾಸನಾಧೀಶ್ವರ “ಡಾ.ರಾಜ್ಕುಮಾರ್”. 


ಈಗಾಗಲೇ ಈ ಅಜಾತಶತ್ರುವನ್ನು ಕುರಿತು ಅನುಭವೀ ಲೇಖಕರ ಹಲವಾರು ಉತ್ತಮ ಪುಸ್ತಕಗಳು ಪ್ರಕಟವಾಗಿವೆ. ಉತ್ತಮ ವಿಡಿಯೋಗಳೂ ಲಭ್ಯವಿವೆ.  ಎಲ್ಲಾ ಲೇಖಕರೂ ಡಾ.ರಾಜ್ರ ಒಳ, ಹೊರಗಿನ ಎಲ್ಲ ಮಜಲುಗಳನ್ನೂ ಅಣುಅಣುವಾಗಿ ಓದುಗರ ಮುಂದೆ ಬಿಡಿಸಿಟ್ಟಿದ್ದಾರೆ.  ಇನ್ನು ನಾನು ಬರೆಯುವುದೇನಿದೆ? ಎಂಬಪ್ರಶ್ನೆ ಮತ್ತೆ ಕಾಡಲು ಶುರುವಾಯ್ತು.  ಆಗ ನನಗೆ ಗೋಚರಿಸಿದ್ದಿದು. ಡಾ.ರಾಜ್ರೊಂದಿಗೆ ನೇರ ಹಾಗೂ ನಿಕಟ ಸಂಪಕ್ರದಲ್ಲಿದ್ದ ಹಲವಾರು ಪುಣ್ಯಪುರುಷರನ್ನು ಸಂದಶ್ರಿಸಿ, ಅವರನ್ನು ಕುರಿತು ಹಾಗೂ ಡಾ.ರಾಜ್ರೊಂದಿಗಿನ ಅವರ ಅನುಭವಾಮೃತವನ್ನೇ ಉಣಬಡಿಸುವ ತೀಮ್ರಾನಕ್ಕೆ ಬಂದೆ.  ಅಲ್ಲದೆ ಡಾ.ರಾಜ್ರ ಅಭಿಮಾನಿ ಯಾರೇ ಇರಲಿ ಅವರಲ್ಲಿನ ಅಭಿಮಾನದಲ್ಲೇನಾದರೂ ವಿಶೇಷತೆುದ್ದರೆ ಅಂತಹವರನ್ನೂ ಸಂದಶ್ರಿಸಿ ಅದನ್ನೂ ಧಾಖಲಿಸುವ ನೈಜ ಪ್ರಯತ್ನದ ಸತ್ಸಂಕಲ್ಪದೊಂದಿಗೆ, ಲೇಖನಿ ಹಿಡಿದೆ. 


ಡಾ.ರಾಜ್ರೊಂದಿಗೆ ನಟಿಸಿದ ನಟ-ನಟಿಯರ, ನಿದ್ರೇಶಕರ, ನಿಮ್ರಾಪಕರ, ಗಾಯಕರ, ಸಂಗೀತ ನಿದ್ರೇಶಕರ, ಸಹನಟರ, ಸ್ನೇಹಿತರ ಹಾಗೂ ಶ್ರೀಸಾಮಾನ್ಯ ಅಭಿಮಾನಿಯನ್ನೂ ಸಂದಶ್ರಿಸಿ ಅವರನ್ನೂ ಜಗತ್ತಿಗೆ ಪರಿಅ ಮೂಲಕ ಸರ್ವಗುಣ ಸಂಪನ್ನ, ಸಕಲಕಲಾ ಪ್ರಪೂರ್ಣ.ರಾಜ್‌ರ ಅಸಾಮಾನ್ಯ ವ್ಯಕ್ತಿತ್ವದ ಅನಾವರಣದ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ತುಂಬುಹೃದಯದ ಪ್ರೀತ್ಯಾದರ ಪ್ರೋತ್ಸಾಹವನ್ನು ಎದುರುನೋಡುತ್ತಾ....ಮತ್ತೆ ಭೇಟಿ ಮಾಡುವ ಭರವಸೆಯೊಂದಿಗೆ....


    (ವಿ.ಸೂಃ ನೀವೂ ಡಾ.ರಾಜ್‍ರ ವಿಶೇಷ ಅಭಿಮಾನಿಯಾಗಿದ್ದರೆ ನನ್ನನ್ನು ಸಂಪರ್ಕಿಸಿ.  ಈ ಸರಣಿ ವರದಿ "ಕಣ್ಣು" ಪತ್ರಿಕೆಯಲ್ಲಿ ಸುಂದರ ಪೋಟೋಗಳೊಂದಿಗೆ ಪ್ರಕಟವಾಗಲಿದೆ.)

 

 
 
:- ಎಂ.ಎಸ್.ಮುರಳಿಧರ್  ಶಿರಾ.

 
 

 

Rating
No votes yet

Comments