ನಿನ್ನ ಕಣ್ಣ ನೋಟದಲ್ಲಿ.... ಇಂಗ್ಲಿಷ್ ಮೂಲ : THE EYES HAVE IT [ ರಸ್ಕಿನ್ ಬಾಂಡ್ ]
ನಿನ್ನ ಕಣ್ಣ ನೋಟದಲ್ಲಿ....
ಇಂಗ್ಲಿಷ್ ಮೂಲ : THE EYES HAVE IT [ ರಸ್ಕಿನ್ ಬಾಂಡ್ ]
ರೈಲಿನ ಆ ನಿರ್ಜನ ಬೋಗಿಯಲ್ಲಿ ಕುಳಿತು ಆಕಳಿಸುತ್ತಿದ್ದ ನನಗೆ ಸಕಲೇಶಪುರದಲ್ಲಿ ಬೋಗಿಯೊಳಗೆ ಅವಳ ದನಿ ಕೇಳಿದಾಗ ತುಂಬಾ ಖುಷಿಯಾಯಿತು. ಜೊತೆಗಿದ್ದವರು ಅವಳ ತಂದೆತಾಯಿ ಇರಬೇಕು ಅಂತ ಅವರ ಆತಂಕಭರಿತ ಮಾತುಗಳಿಂದಲೇ ತಿಳಿಯಿತು. ಅವಳ ತಾಯಿಯಂತೂ ಮಗಳಿಗೆ ಸೂಟ್ ಕೇಸ್ ಎಲ್ಲಿಡಬೇಕು.... ಕೈಗಳನ್ನು ಕಿಟಿಕಿಯಿಂದ ಹೊರಗಡೆ ಹಾಕಬಾರದು.... ದಾರಿ ಮಧ್ಯ ಏನೂ ತಿನ್ನಬಾರದು .....ಅವರಿವರ ಜೊತೆ ಮಾತಾನಾಡಬಾರದು.... ಹೀಗೆ ಹೇಳ್ತಾನೇ ಇದ್ದಳು. ಅಂತೂ ಕೊನೆಗೆ ರೈಲು ಚಲಿಸುತ್ತಿದ್ದಂತೆಯೇ ಅವಳನ್ನು ಬೀಳ್ಕೊಟ್ಟು ಅವರು ಇಳಿದುಹೋದರು. ಅವಳ ಧ್ವನಿಯೇ ಇಷ್ಟು ಇಂಪು . ಅವಳ ರೂಪ ಹೇಗಿರಬಹುದು ಎಂಬ ಕುತೂಹಲ ನನಗೆ . ಆದರೆ ನಾನೋ ಕುರುಡ. ಬೆಳಕು – ಕತ್ತಲೆಯ ಅಲ್ಪಜ್ಞಾನವನ್ನು ಬಿಟ್ಟರೆ ನನಗೇನೂ ತಿಳಿಯದು. ಅವಳ ಚಪ್ಪಲಿಗಳು ಚೆನ್ನಾಗಿವೆ ಅಂತ ಶಬ್ದದಿಂದಲೇ ತಿಳಿಯಿತು. ಅವಳ ಕಾಲ್ಗೆಜ್ಜೆ ಮಧುರವಾಗಿ ಸದ್ದು ಮಾಡುತ್ತಿತ್ತು. ಮುಡಿದ ಮಲ್ಲಿಗೆಹೂವಿನ ಪರಿಮಳದಿಂದ ಹಾಯ್... ಅನಿಸಲಾರಂಭಿಸಿತು.
ನನಗೆ ಇನ್ನು ತಡೆದುಕೊಳ್ಳಲಾಗಲಿಲ್ಲ. ಅಂತೂ ಧೈರ್ಯ ವಹಿಸಿ “ ನೀವು ಮೈಸೂರಿಗೆ ಹೋಗ್ತಾ ಇದೀರಾ” ಅಂತ ಕೇಳೇಬಿಟ್ಟೆ. “ ಓಹ್... ನೀವು ಇಲ್ಲಿ ಕುಳಿತಿದ್ದು ನಂಗೆ ಗೊತ್ತೇ ಆಗಲಿಲ್ಲ ನೋಡಿ” ಎಂದಳು. ಯಾಕೋ ಅವಳ ಧ್ವನಿ ನಡುಗಿದಂತೆ ಅನಿಸಿತು. ಆದರೂ ಅವಳು ಹಾಗೆಂದಿದ್ದರಿಂದ ನನಗೇನೂ ಬೇಜಾರಾಗಲಿಲ್ಲ. ಅಲ್ಲಾ... ಏನೂ ಕಾಣದವರಿಗೆ ನೋಡಲು ಏನೂ ಇರುವುದಿಲ್ಲ. ಅದಕ್ಕೇ ಎಲ್ಲವೂ ಅನುಭವಕ್ಕೆ ಬರುತ್ತದೆ . ಆದರೆ ಕಣ್ಣು ಕಾಣುವವರಿಗೆ ನೋಡಲು ಬೇಕಾದಷ್ಟು ವಿಷಯಗಳಿರುತ್ತವೆ . ಅದಕ್ಕೇ ಕಣ್ಣ ಮುಂದಿರುವುದೆಲ್ಲ ಅವರಿಗೆ ಕಾಣಲ್ಲ....
“ ನಾನು ಇಲ್ಲೇ ಪಾಂಡವಪುರದಲ್ಲಿ ಇಳೀಬೇಕು. ಚಿಕ್ಕಮ್ಮ ಬರ್ತಾರೆ ಕರಕೊಂಡು ಹೋಗೋಕೆ” ಅಂದಳು.” ಸದ್ಯ ನಾನು ಕುರುಡ ಅಂತ ಅವಳಿಗೆ ತಿಳೀಲಿಲ್ಲ. ನಾನಂತೂ ಇನ್ನು ಸುಮ್ನೆ ಇರ್ತೀನಪ್ಪಾ. ಸುಮ್ನೆ ಯಾಕೆ ಏನೇನೋ ಮಾತು” ಅಂದುಕೊಂಡು ಸುಮ್ಮನಾದೆ. “ ನೀವೆಲ್ಲಿಗೆ ಹೊರಟಿದ್ದೀರಿ” ಎಂದಳವಳು. ನಾನು ಸುಮ್ನೆ ಇರಬೇಕು ಅಂದುಕೊಂಡಿದ್ದು ಮರೆತೇ ಹೋಯ್ತು. “ ನಾನು ಮೈಸೂರಲ್ಲಿ ಇಳಿದು ಊಟಿಗೆ ಹೋಗಬೇಕು” ಅಂದೆ. ಅವಳು “ ಓಹ್... ಎಂಥಾ ಸುಂದರವಾದ ಜಾಗ ಅಲ್ವೇ ಅದು. ನನಗೂ ಅಲ್ಲಿಗೆ ಹೋಗಬೇಕು ಅನ್ನೋ ಆಸೆ. ಅಲ್ಲಿನ ಹೂಗಳು, ಪರ್ವತಗಳು ಎಂಥಾ ಚಂದ” ಅಂದಳು. ನಾನು ತಕ್ಷಣ “ ಹೌದು.. ಹೌದು.. ಅಲ್ಲಿಗೆ ಜೂನ್ ನಲ್ಲಿ ಹೋದರೆ ಒಳ್ಳೆಯದು. ಟೂರಿಸ್ಟ್ ಗಳೂ ಜಾಸ್ತಿ ಇರಲ್ಲ. ದಾರಿ ತುಂಬ ಬಣ್ಣ ಬಣ್ಣದ ಹೂಗಳು, ಆಗಾಗ ಮಳೆ ... ಹಾಗೇ ಬೆಂಕಿ ಕಾಯಿಸ್ಕೊಂಡು ತಾಜಾ ಕಾಫಿ ಕುಡೀತಾ ಇದ್ರೆ ಎಷ್ಟು ಮಜಾ ಗೊತ್ತಾ” ಅಂದೆ . ಅವಳು ಏನೂ ಹೇಳಲಿಲ್ಲ.
ನಾನು ಯಾವೂರಪ್ಪ ಇದು ಅಂತ ನನ್ಗೆ ನಾನೇ ಹೇಳ್ಕೊಂಡ್ರೆ ಅವಳು “ ನನ್ನನ್ನೇನ್ರೀ ಕೇಳೋದು ನೀವು? ನೀವೇ ಹೊರಗಡೆ ನೋಡಿ .... ಗೊತ್ತಾಗತ್ತೆ” ಅಂದಳು. ಅಬ್ಬಾ ಸದ್ಯ ... ಅವಳಿಗೆ ನನ್ನ ವಿಷಯ ಗೊತ್ತಾಗಲಿಲ್ಲ ಅಂತ ಸಮಾಧಾನವಾಯ್ತು. ಹಾಗೇ ಕೈ ತಡಕಾಡಿ ಕಿಟಿಕಿ ಹತ್ರ ಮುಖ ತಂದೆ. ಏನೂ ಕಾಣದಿದ್ರೂ ತಂಗಾಳಿ ಬೀಸಿ ಹಾಯಿನೆಸಿತು.ಮಣ್ಣಿನ ವಾಸನೆಯಿಂದ ಯಾವುದೋ ಕಾಡಲ್ಲಿ ರೈಲು ಹೋಗ್ತಾ ಇರುವ ಹಾಗೆ ಅನಿಸಿತು. ಅವಳ ಮೌನ ಮುರೀಬೇಕು ಅಂದೊಕೊಂಡು “ ನೀವು ತುಂಬಾ ಲಕ್ಷಣವಾಗಿದೀರಾ” ಅಂದೆ. ಸ್ವಲ್ಪ ಜಾಸ್ತಿ ಧೈರ್ಯ ವಹಿಸಿದ್ನೇನೋ ಅನಿಸಿದರೂ ಇದರಲ್ಲೇನೂ ಭಯವಿಲ್ಲ.... ಹುಡುಗಿಯರಿಗೆ ಅವರ ಮುಖವನ್ನು ಹೊಗಳಿದರೆ ಸಂತೋಷವಾಗದೇ ಇರುತ್ಯೇ ಅಂತ ಸಮಾಧಾನಪಟ್ಟುಕೊಂಡೆ. ಅವಳು “ನನ್ನ ಮುಖ ಸುಂದರವಾಗಿದೆ ಅಂತ ಕೇಳಿ ಕೇಳಿ ಬೇಜಾರಾಗಿತ್ತು ನೋಡಿ... ನೀವೊಬ್ಬರೇ ನನ್ನನ್ನು ಲಕ್ಷಣವಾಗಿದೀರಾ... ಅಂದವರು….. ಸರಿ ನಾನು ಇಳಿಯೋ ಜಾಗ ಬಂತು ಅನ್ಸುತ್ತೆ. ನಂಗೆ ಈ ರೈಲಲ್ಲಿ ಪ್ರಯಾಣ ಮಾಡೋದು ಅಂದ್ರೆ ತುಂಬಾ ಬೇಜಾರು. ಸದ್ಯ ಬೇಗ ಇಳಿದರೆ ಸಾಕಪ್ಪಾ.....ಸಿಗೋಣ್ವಾ ಮತ್ತೆ ” ಅಂದವಳೇ ಸಾಮಾನನ್ನು ಎತ್ತಿಕೊಳ್ಳಲಾರಂಭಿಸಿದಳು.
ನಾನು ನಿರ್ಲಿಪ್ತನಂತೆ ಇರಬೇಕು ಅಂದುಕೊಂಡರೂ ದು:ಖದ ಅಲೆಯೊಂದು ಒಡಲಾಳದಿಂದ ಬಂದಂತೆ ಅನಿಸಿ ಗಂಟಲುಬ್ಬಿ ಬಂತು. ನನ್ನ ಜೀವನ ಹೀಗೇನೇ ಬರಡು. ಅವಳು ಇನ್ನೇನು ಇಳೀತಾಳೆ.... ನನ್ನನ್ನು ಮರೀತಾಳೆ...ಆದರೆ ಅವಳ ಧ್ವನಿ ನನ್ನ ಜೊತೆ ಜೀವಮಾನವಿಡೀ ಇರುತ್ತದೆ ಅಷ್ಟೇ..... ರೈಲಿನ ವೇಗ ಕಡಿಮೆಯಾಯಿತು. ಇಂಜಿನ್ನಿನ ಕಟಕಟ ಶಬ್ದದೊಡನೆ ಗಾಡಿ ನಿಂತಿತು. ಯಾರೋ ಹೆಂಗಸಿನ ಧ್ವನಿ…...ಹೊರಗಿನಿಂದ ಏನೇನೋ ಶಬ್ದಗಳು.... ಮಗುವಿನ ಅಳು.... ಅವಳು ನನ್ನನ್ನು ದಾಟಿ ಬಾಗಿಲ ಬಳಿ ಹೋದಳು. ಅವಳ ಕೂದಲ ಸೋಪಿನ ಪರಿಮಳ ಮೂಗಿಗೆ ಅಡರಿತು. ಅವಳು ಜಡೆ ಹಾಕಿರಬಹುದಾ... ಕೂದಲು ಬಿಟ್ಟಿರಬಹುದಾ... ಕೂದಲನ್ನು ಮೇಲೆ ಎತ್ತಿ ಕಟ್ಟಿ ಬನ್ ಹಾಕಿರಬಹುದಾ.... ಅಥವಾ ಬಾಬ್ ಕಟ್ ಇರಬಹುದಾ... ನನ್ನ ಮನಸ್ಸು ಮರ್ಕಟನಂತಾಯಿತು. ಕಾಫಿ ಟೀ ಮಾರುವವರ ಗಲಾಟೆ ಶುರುವಾಯಿತು. ಬಾಗಿಲ ಬಳಿ ಏನೇನೋ ಶಬ್ದಗಳು. ಯಾರೋ ಸಾರಿ.... ಅಂದಂತೆ ಕೇಳಿಸಿತು. ರೈಲು ಹೊರಡುತ್ತಿದ್ದಂತೆಯೇ ಬಾಗಿಲು ಧಪ್... ಅಂತ ಮುಚ್ಚಿತು.
ಯಾರೋ ಗಂಡಸರು ಒಳಗಡೆ ಬಂದರು. ಅಯ್ಯೋ ... ಮತ್ತೆ ನನ್ನ ನಾಟಕ ಶುರುಮಾಡಬೇಕಲ್ಲಪ್ಪ ... ಅಂದುಕೊಂಡು ನನ್ನ ಜಾಗದಲ್ಲಿ ಗಂಭೀರವಾಗಿ ಕೂತೆ. ಆತ ಕುಚೋದ್ಯದ ದನಿಯಲ್ಲಿ “ಪಾಪ ... ಅಂಥ ಸುಂದರವಾದ ಹುಡುಗಿ ಇಳಿದು ನಾನು ಬಂದದ್ದು ನಿಮಗೆ ಬೇಜಾರಾಯ್ತೇನೋ” ಅಂದ. ನಾನು “ಹ್ಞು... ಹುಡುಗಿ ಲಕ್ಷಣವಾಗಿದ್ಲು... ಉದ್ದ ಜಡೆನೂ ಇತ್ತಲ್ವಾ” ಅಂತ ಅಳುಕುತ್ತಲೇ ಕೇಳಿದೆ. ಆತ ಬೇಸರದಿಂದ “ ಅಯ್ಯೋ ಜಡೆ ಎಲ್ಲಾ ಯಾರ್ರೀ ನೋಡ್ತಾರೆ? ನಾನಂತೂ ಅವಳು ರೈಲಿನಿಂದ ಇಳೀತಿರಬೇಕಾದ್ರೆ ಅವಳ ಕಣ್ಣುಗಳನ್ನೇ ನೋಡ್ತಾ ಇದ್ದೆ.ಅಂಥಾ ಸುಂದರವಾದ ಕಣ್ಣುಗಳು... ಆದರೆ ದೃಷ್ಟಿನೇ ಇಲ್ಲಾ ನೋಡಿ. ಆಕೆ ಪೂರ್ತಿ ಕುರುಡಿ.... ನಿಮಗೆ ಗೊತ್ತಾಗ್ಲಿಲ್ವಾ....” ಅಂದವನೇ ಯಾವುದೋ ಹಾಡು ಗುನುಗುನಿಸುತ್ತಾ ತನ್ನ ಸಾಮಾನುಗಳನ್ನು ಜೋಡಿಸಲಾರಂಭಿಸಿದ.
Comments
ಉ: ನಿನ್ನ ಕಣ್ಣ ನೋಟದಲ್ಲಿ.... ಇಂಗ್ಲಿಷ್ ಮೂಲ : THE EYES...
ಬಹಳ ಚೆನ್ನಾಗಿದೆ.
ಉ: ನಿನ್ನ ಕಣ್ಣ ನೋಟದಲ್ಲಿ.... ಇಂಗ್ಲಿಷ್ ಮೂಲ : THE EYES...
ಮನ ಕಲಕುವ ಕಥೆ.