ನಿಮ್ಮ ಬಗ್ಗೆ ನೀವೇ ಹೆಮ್ಮೆಪಡಿ, ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ಈ ಅಭ್ಯಾಸದಿಂದ ದೂರವಿರಿ...
ಆತ್ಮವಿಶ್ವಾಸವು ಪ್ರತಿಯೊಬ್ಬರಲ್ಲೂ ಇರಬೇಕಾದ ಅತಿ ಪ್ರಮುಖ ಗುಣ. ನಮ್ಮ ಮೇಲೆಯೇ ನಮಗೆ ನಂಬಿಕೆ ಹಾಗೂ ವಿಶ್ವಾಸವಿರದ ಮೇಲೆ, ನಾವು ಬೇರೆಯವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಥವಾ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಮಾಡುವ ಕೆಲಸ ಕಾರ್ಯ ಹಾಗೂ ನಮ್ಮ ನಡವಳಿಕೆಯ ಬಗ್ಗೆ ನಾವು ಎಂದಿಗೂ ಗಟ್ಟಿ ನಿಲುವು ಹೊಂದಿರಬೇಕು. ನಮ್ಮ ನಿರ್ಧಾರಗಳು ಯಾವತ್ತೂ ನೂರು ಪ್ರತಿಶತ ಬಿಗಿಯಾಗಿರಬೇಕು. ಹೀಗಿದ್ದರೆ ಮಾತ್ರ ಎಲ್ಲವನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯ.
ಆತ್ಮವಿಶ್ವಾಸವನ್ನು ವ್ಯಾಖ್ಯಾನಿಸುವುದು ಕಷ್ಟ. ಇದನ್ನು ಒಬ್ಬರ ಸಾಮರ್ಥ್ಯ, ಗುಣ ಮತ್ತು ನಡವಳಿಕೆ, ಅವರು ಮಾತು ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ರೀತಿ ಎಂದು ಹೇಳಬಹುದು. ನಮ್ಮ ಬಗ್ಗೆ ನಾವು ಹೊಂದಿರುವ ಅಭಿಪ್ರಾಯ, ಇತರರು ನಮ್ಮನ್ನು ಹೇಗೆ ನೋಡುತ್ತಾರೆ ಎಂಬ ರೀತಿ, ನಾವು ಕೆಲಸದ ಸ್ಥಳ ಅಥವಾ ಇತರ ಸ್ಥಳಗಳಲ್ಲಿ ಹೇಗಿರುತ್ತೇವೆ ಎಂಬುದು ಸೇರಿದಂತೆ ನಮ್ಮ ಜೀವನದ ಪ್ರತಿಯೊಂದು ಅಂಶಗಳ ಮೇಲೆ ಇದು ನಿಂತಿದೆ.
ಆತ್ಮವಿಶ್ವಾಸದ ಕೊರತೆಯಿಂದಾಗಿ ನಾವು ದುರ್ಬಲಗೊಳ್ಳಬಹುದು. ಸಾಮಾಜಿಕ ಆತಂಕ ಅಥವಾ ಇತರ ಮಾನಸಿಕ ಆರೋಗ್ಯ ಪರಿಸ್ಥಿತಿಗಳು ಕೂಡಾ ನಮ್ಮ ಆತ್ಮ ವಿಶ್ವಾಸದ ಮೇಲೆ ಪ್ರಭಾವ ಬೀರಬಹುದು. ಇದು ನಮ್ಮ ಬಗ್ಗೆ ನಮಗಿರುವ ಗ್ರಹಿಕೆಯ ಮೇಲೂ ಪ್ರಭಾವ ಬೀರುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಕಂಡು ಬಂದರೆ, ಅದನ್ನು ಪತ್ತೆಹಚ್ಚಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಈ ಕೆಲವು ಪ್ರವೃತ್ತಿ ಮತ್ತು ನಡವಳಿಕೆಗಳ ಬಗ್ಗೆ ಒಮ್ಮೆ ನೋಡಿ. ಈ ಮೂಲಕ ನೀವು ನಿಮ್ಮ ಆತ್ಮವಿಶ್ವಾಸದ ಕೊರತೆಯನ್ನು ಗುರುತಿಸಬಹುದು. ಆ ಮೂಲಕ ಅದನ್ನು ವೃದ್ಧಿಸಲು ಆರೋಗ್ಯಕರ ಅಭ್ಯಾಸಗಳನ್ನು ಪ್ರಾರಂಭಿಸಬಹುದು.
ನಿಮ್ಮ ನೋಟ ಅಥವಾ ನಡವಳಿಕೆಯ ನಿರ್ಲಕ್ಷ್ಯ:
ಉತ್ತಮ ನೈರ್ಮಲ್ಯದ ಪ್ರಾಮುಖ್ಯತೆಯ ಬಗ್ಗೆ ನೀವು ಈಗಾಗಲೇ ತಿಳಿದಿರುತ್ತೀರಿ. ಹೀಗಾಗಿ ನಿಮ್ಮ ಆರೋಗ್ಯ ಮತ್ತು ಸಮಾಜದ ಮುಂದೆ ನೀವು ತೆರೆದುಕೊಳ್ಳುವ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ನೀವು ಹೇಗೆ ಕಾಣುತ್ತೀರಿ ಎಂಬುದರ ಕುರಿತು ನಿಮಗೆ ಉತ್ತಮ ಅಭಿಪ್ರಾಯ ಅಥವಾ ಆತ್ಮವಿಶ್ವಾಸವಿಲ್ಲದಿದ್ದರೆ, ನಿಮ್ಮ ಸ್ವಾಭಿಮಾನದ ಮೇಲೆ ಪ್ರಭಾವ ಬೀರುತ್ತದೆ. ಮೊದಲು ನಿಮ್ಮನ್ನು ನೀವು ಇಷ್ಟಪಡಬೇಕು. ವಿಶೇಷವಾಗಿ ಸಾಮಾಜಿಕ ಸನ್ನಿವೇಶಗಳಿಗೆ ಬಂದಾಗ, ನಿಮ್ಮನ್ನು ನೀವು ತೋರಿಸಿಕೊಳ್ಳುವ ರೀತಿ ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯಕವಾಗಿದೆ.
ನಿಮ್ಮನ್ನು ನೀವು ಇಷ್ಟಪಡಿ:
ಕನ್ನಡಿ ಮುಂದೆ ನೀವು ನಿಂತುಕೊಂಡಾಗ, ನೀವು ನಿಮ್ಮ ಬಗ್ಗೆ ಖುಷಿ ಪಡಬೇಕೇ ಹೊರತು, ನಿಮ್ಮ ಬಗ್ಗೆ ನೀವು ಅಸಹ್ಯ ಅಥವಾ ಕೀಳು ಭಾವನೆ ಹೊಂದಬಾರದು. ನೀವು ಸುಂದರವಾಗಿಯೂ ಇರಬಹುದು, ಅಥವಾ ಬಾಹ್ಯ ರೂಪದಲ್ಲಿ ತುಸು ಕುರೂಪಿಗಳೇ ಆಗಿರಬಹುದು. ಆದರೆ ನಿಮ್ಮನ್ನು ನೀವು ಯಾವತ್ತೂ ಕೀಳಾಗಿ ನೋಡಬಾರದು. ನಿಮ್ಮನ್ನು ನೀವು ಮೊದಲು ಪ್ರಶಂಸಿಸಿಕೊಳ್ಳಿ. ಹಾಗಂತ ಎಲ್ಲರೆದುರಲ್ಲ. ಕೆಲವೊಮ್ಮೆ ಸ್ವಯಂ ವಿಮರ್ಶೆಯು ನಿಮಗೆ ದುಃಖ ಅಥವಾ ಅವಮಾನವನ್ನುಂಟು ಮಾಡುತ್ತದೆ. ಆದರೆ, ಸಣ್ಣ ನ್ಯೂನತೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, ನಿಮ್ಮಲ್ಲಿರುವ ಸಕಾರಾತ್ಮಕ ಗುಣಗಳನ್ನು ನೋಡಲು ಅದೇ ಶಕ್ತಿಯನ್ನು ಹಾಕಲು ಪ್ರಯತ್ನಿಸಿ. ಆಗ ನೀವು ಮತ್ತಷ್ಟು ಬಲಿಷ್ಟರಾಗುತ್ತೀರಿ.
ನಿಮ್ಮ ಗುಣಮಟ್ಟವನ್ನು ಕಡಿಮೆಗೊಳಿಸುವುದು:
ನಿಮ್ಮ ಗುಣಮಟ್ಟ ಅಥವಾ standard ಅನ್ನು ಯಾವತ್ತೂ ಕಾಪಾಡಿಕೊಳ್ಳಿ. ನಿಮ್ಮ ಗುಣಮಟ್ಟವನ್ನು ಯಾರಾದರೂ ಕುಂದಿಸಲು ಪ್ರಯತ್ನಿಸಿದಾಗ, ಅದು ಸರಿಯಾಗಿದೆ ಎಂದು ನೀವು ಅಂದುಕೊಳ್ಳುವುದು ತಪ್ಪು. ಹಾಗೆ ನೀವು ಒಪ್ಪಿಕೊಂಡರೆ, ನಿಮ್ಮ ಅರ್ಹತೆ ಬಗ್ಗೆ ನಿಮಗೆ ಗೊಂದಲ ಅಥವಾ ಅನುಮಾನವಿದೆ ಎಂದರ್ಥ. ನಿಮ್ಮಆತ್ಮಗೌರವಕ್ಕೆ ಧಕ್ಕೆ ಬರಲು ನೀವು ಅವಕಾಶ ನೀಡಿದಿರಿ ಎಂದಾದರೆ, ನಿಮ್ಮ ಸ್ವಾಭಿಮಾನಕ್ಕೆ ನೀವೇ ಧಕ್ಕೆ ತಂದುಕೊಂಡಿರಿ ಎಂದಾಗುತ್ತದೆ. ನಿಮ್ಮ ಆತ್ಮಗೌರವ ಉಳಿಸುವ ಮೂಲಕ ಸ್ವಾಭಿಮಾನವನ್ನು ಉಳಿಸಿಕೊಳ್ಳಿ. ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಇದರೊಂದಿಗೆ ಖಂಡಿತವಾಗಿಯೂ ಹೆಚ್ಚು ಆತ್ಮವಿಶ್ವಾಸ ನಿಮ್ಮ ಮೇಲಿರುತ್ತದೆ.
-ಅರೆಯೂರು ಚಿ.ಸುರೇಶ್